Dwarakish ಪತ್ನಿ ಅಂಬುಜಾ ಮೃತಪಟ್ಟ ದಿನದಂದೇ ಕೊನೆಯುಸಿರೆಳೆದ ದ್ವಾರಕೀಶ್; ಪತ್ನಿಯ ಒಪ್ಪಿಗೆ ಪಡೆದೇ ಎರಡನೇ ವಿವಾಹವಾಗಿದ್ರು
Dwarakish Wife: ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ನಿಧನರಾಗಿದ್ದಾರೆ. ಕಾಕಾತಾಳೀಯ ಎಂಬಂತೆ ಮೂರು ವರ್ಷಗಳ ಹಿಂದೆ ಇದೇ ದಿನಾಂಕ (ಏಪ್ರಿಲ್ 16)ದಂದು ಇವರ ಪತ್ನಿ ದೈವಾದೀನರಾಗಿದ್ದರು. ತಾನು ಪತ್ನಿಯ ಒಪ್ಪಿಗೆ ಪಡೆದೇ ಶೈಲಜಾರನ್ನು ವಿವಾಹವಾಗಿದ್ದೆ ಎಂದು ಹಿಂದೊಮ್ಮೆ ದ್ವಾರಕೀಶ್ ಹೇಳಿದ್ದರು.
ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ನಿಧನಕ್ಕೆ ಸಂಬಂಧಪಟ್ಟಂತೆ ಒಂದು ಕಾಕಾತಾಳೀಯ ಅಂಶ ಬಹಿರಂಗಗೊಂಡಿದೆ. ತಮ್ಮ ಪತ್ನಿ ದೈವಾದೀನರಾದ ದಿನದಂದೇ ದ್ವಾರಕೀಶ್ ಮೃತಪಟ್ಟಿದ್ದಾರೆ. ದ್ವಾರಕೀಶ್ ಪತ್ನಿ ಅಂಬುಜಾ ಅವರು 2021ರ ಏಪ್ರಿಲ್ 16ರಂದು ಮೃತಪಟ್ಟಿದ್ದರು. ಇದಾಗಿ ಮೂರು ವರ್ಷಗಳ ಬಳಿಕ ಇದೇ ದಿನಾಂಕದಂದು ದ್ವಾರಕೀಶ್ ಮೃತಪಟ್ಟಿದ್ದಾರೆ.
ದ್ವಾರಕೀಶ್ ಮತ್ತು ಅಂಬುಜಾ ಅವರ ವಿವಾಹ 1967ರಲ್ಲಿ ನಡೆದಿತ್ತು. ಮೂರು ವರ್ಷದ ಹಿಂದೆ ಅಂಬುಜಾ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಇದೀಗ ಪತ್ನಿ ಮೃತಪಟ್ಟ ದಿನದಂದೇ ದ್ವಾರಕೀಶ್ ಮೃತಪಟ್ಟ ಘಟನೆಯು ಅಚ್ಚರಿ ತಂದಿದೆ. ಶ್ಯಾಮರಾವ್ ಮತ್ತು ಜಯಮ್ಮರ ಪುತ್ರ ದ್ವಾರಕೀಶ್ ಅವರು ಚಿತ್ರರಂಗಕ್ಕೆ ಆಗಮಿಸಲು ಸೋದರ ಮಾವ ಹುಣಸೂರು ಕೃಷ್ಣಮೂರ್ತಿ ಕಾರಣವಾಗಿದ್ದರು.
ದ್ವಾರಕೀಶ್‌ಗೆ ಶೈಲಜಾ ಎಂಬ ಇನ್ನೊಬ್ಬರು ಪತ್ನಿಯೂ ಇದ್ದಾರೆ. "ನಾನು ಅಂಬುಜಾ ಮತ್ತು ಶೈಲಾಜಾ ಜತೆಜತೆಗೆ ಇದ್ದೇನೆ. ನನ್ನ ಜೀವನ ಹೀಗೆಯೇ ಸಾಗುತ್ತಿದೆ" ಎಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ದ್ವಾರಕೀಶ್ ಹೇಳಿದ್ದರು. "ನಾನು ಜೀವನದಲ್ಲಿ ಎರಡು ಸಲ ಲವ್ ಮಾಡಿದೆ. ಎರಡು ಸಲ ಮದುವೆಯಾದೆ" ಎಂದು ಅವರು ಹೇಳಿದ್ದರು.
"ನನಗೆ ಐವತ್ತೊಂದು ವರ್ಷವಾಗಿತ್ತು. ಆಗ ಒಂದು ಹೆಣ್ಣನ್ನು ಭೇಟಿಯಾದೆ. ಶೈಲಜಾರನ್ನು ಭೇಟಿಯಾದೆ. ಆಕೆಯ ಕೈ ಹಿಡಿದೆ. ಈ ನನ್ನ ನಿರ್ಧಾರವನ್ನು ನನ್ನ ಪತ್ನಿ ಅಂಬುಜಾ ತುಂಬಾ ಸ್ಪೋರ್ಟಿವ್ ಆಗಿ ತೆಗೆದುಕೊಂಡಿದ್ದರು" ಎಂದು ವೀಕೆಂಡ್ ವಿದ್ ರಮೇಶ್ ಕಾರ್ಯಕ್ರಮದಲ್ಲಿ ದ್ವಾರಕೀಶ್ ನೆನಪಿಸಿಕೊಂಡಿದ್ದರು.
ದಿವಂಗತ ದ್ವಾರಕೀಶ್‌ಗೆ ಸಂತೋಷ್, ಯೋಗೀಶ್, ಗಿರೀಶ್, ಸುಕೀಶ್, ಅಭಿಲಾಷ್ ಎಂಬ ಐವರು ಪುತ್ರರಿದ್ದಾರೆ. ಇವರಲ್ಲಿ ಇಬ್ಬರು ಚಿತ್ರರಂಗದ ನಂಟು ಹೊಂದಿದ್ದಾರೆ. ಉಳಿದವರು ಬೇರೆಬೇರೆ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದ್ವಾರಕೀಶ್ ಮಕ್ಕಳಲ್ಲಿ ಯೋಗಿ ಮತ್ತು ಗಿರಿ ಸಿನಿಮಾ ಕ್ಷೇತ್ರದ ನಂಟು ಹೊಂದಿದ್ದಾರೆ.
ಇವರಲ್ಲಿ ಯೋಗೇಶ್ ದ್ವಾರಕೀಶ್ ಅವರು ಬಹುತೇಕರಿಗೆ ಚಿರಪರಿಚಿತ ಹೆಸರು. ಚಾರುಲತಾ ಎಂಬ ಸಿನಿಮಾದ ನಿರ್ಮಾಪಕರಾಗಿದ್ದರು. ಆಯುಷ್ಮಾನ್ ಭವ, ಅಮ್ಮ ಐ ಲವ್ ಯು ಮುಂತಾದ ಸಿನಿಮಾಗಳಿಂದಾಗಿ ಯೋಗೇಶ್ ಬಹುತೇಕರಿಗೆ ಪರಿಚಯ ಇರುವ ಹೆಸರಾಗಿದೆ. ದ್ವಾರಕೀಶ್ ಇನ್ನೊಬ್ಬ ಪುತ್ರ ಗಿರೀಶ್‌ಗೂ ಸಿನಿಮಾ ಕ್ಷೇತ್ರದ ನಂಟಿದೆ. ಮಜ್ನು ಎಂಬ ಸಿನಿಮಾದಲ್ಲಿ ಇವರು ನಟಿಸಿದ್ದಾರೆ. ಗಿರೀಶ್ ಚೆನ್ನೈನಲ್ಲಿದ್ದು, ತಮಿಳು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.
ದ್ವಾರಕೀಶ್ ಮತ್ತೊಬ್ಬ ಪುತ್ರ ಅಭಿಲಾಷ್ ಕೂಡ ಹೃದಯ ಕಳ್ಳರು ಎಂಬ ಸಿನಿಮಾದಲ್ಲಿ ನಟಿಸಿದ್ದರು. ಯೋಗಿ ಅವರು ತಮ್ಮ ತಂದೆಯ ಪ್ರೊಡಕ್ಷನ್ ಹೌಸ್ ದ್ವಾರಕೀಶ್ ಚಿತ್ರವನ್ನು ನೋಡಿಕೊಳ್ಳುತ್ತಿದ್ದಾರೆ. ಸಂತೋಷ್ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ದ್ವಾರಕೀಶ್ ಅವರ ಇನ್ನೊಬ್ಬ ಪುತ್ರ ಅಭಿಲಾಷ್ ಐಟಿ ಉದ್ಯೋಗಿ.
ಕನ್ನಡದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಇಂದು (ಏಪ್ರಿಲ್ 16) ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ದ್ವಾರಕೀಶ್ ಅವರು ಕೊನೆಯದಾಗಿ "ದ್ವಾರಕೀಶ್ ಚಿತ್ರ ನಿರ್ಮಾಣ ಸಂಸ್ಥೆ" ಮೂಲಕ ಶಿವರಾಜ್‌ಕುಮಾರ್ ನಟಿಸಿದ್ದ ಆಯುಷ್ಮಾನ್ ಭವ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ಆದಾಯ ತಂದಿರಲಿಲ್ಲ.
ದ್ವಾರಕೀಶ್ ಅವರು ತನ್ನ 24ನೇ ವಯಸ್ಸಿನಲ್ಲಿ ನಿರ್ಮಾಪಕರಾಗಿದ್ದರು. ಮಮತೆಯ ಬಂಧನ ಎಂಬ ಸಿನಿಮಾದ ಸಹ ನಿರ್ಮಾಪಕರಾಗಿದ್ದರು.ಇದಾದ ಬಳಿಕ 1969ರಲ್ಲಿ ಡಾ. ರಾಜ್‌ಕುಮಾರ್ ಮತ್ತು ಭಾರತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಮೇಯರ್ ಮುತ್ತಣ್ಣ ಎಂಬ ಸಿನಿಮಾವನ್ನು ಸ್ವತಂತ್ರವಾಗಿ ಮಾಡಿದರು. ಈ ಮೂಲಕ ಪೂರ್ಣ ಪ್ರಮಾಣದ ನಿರ್ಮಾಪಕರಾಗಿ ಹೊರಹೊಮ್ಮಿದ್ದರು. ಡ್ಯಾನ್ಸ್ ರಾಜಾ ಡ್ಯಾನ್ಸ್, ನೀ ಬರೆದ ಕಾದಂಬರಿ, ಶೃತಿ, ಶೃತಿ ಹಾಕಿದ ಹೆಜ್ಜೆ, ರಾಯರು ಬಂದರು ಮಾವನ ಮನೆಗೆ, ಕಿಲಾಡಿಗಳು ಸೇರಿದಂತೆ ಹಲವು ಸಿನಿಮಾಗಳಿಗೆ ದ್ವಾರಕೀಶ್ ಆಕ್ಷನ್ ಕಟ್ ಹೇಳಿದ್ದಾರೆ.