ಕನ್ನಡ ಸುದ್ದಿ  /  Entertainment  /  Sandalwood News Kenda Official Motion Poster Released Gantumoote Teams New Attempt Kenda Kannada Movie Mnk

Kenda: ಕೆಂಡ ಚಿತ್ರದ ಮೂಲಕ ಕಂಬ್ಯಾಕ್ ಮಾಡಿದ ಗಂಟುಮೂಟೆ ತಂಡ; ಆಸ್ಕರ್‌ ಪ್ರಶಸ್ತಿ ಪಡೆದ ಸಾಕ್ಷ್ಯಚಿತ್ರದ ತಂತ್ರಜ್ಞನೂ ಈ ಚಿತ್ರದಲ್ಲೊಬ್ಬರು

ವಿಮರ್ಶೆ ದೃಷ್ಟಿಯಿಂದ ಮೆಚ್ಚುಗೆ ಪಡೆದಿದ್ದ ಗಂಟುಮೂಟೆ ಸಿನಿಮಾದ ತಂಡವೀಗ ಹೊಸ ಸಿನಿಮಾ ಮೂಲಕ ಆಗಮಿಸಿದೆ. ಹೊಸಬರನ್ನೇ ಆಯ್ಕೆ ಮಾಡಿಕೊಂಡು ಕೆಂಡ ಅನ್ನೋ ಸಿನಿಮಾ ಮಾಡಿದೆ. ಇತ್ತೀಚೆಗಷ್ಟೇ ಆ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ ಆಗಿದೆ.

Kenda: ಕೆಂಡ ಚಿತ್ರದ ಮೂಲಕ ಕಂಬ್ಯಾಕ್ ಮಾಡಿದ ಗಂಟುಮೂಟೆ ತಂಡ; ಆಸ್ಕರ್‌ ಪ್ರಶಸ್ತಿ ಪಡೆದ ಸಾಕ್ಷ್ಯಚಿತ್ರದ ತಂತ್ರಜ್ಞನೂ ಈ ಚಿತ್ರದಲ್ಲೊಬ್ಬರು
Kenda: ಕೆಂಡ ಚಿತ್ರದ ಮೂಲಕ ಕಂಬ್ಯಾಕ್ ಮಾಡಿದ ಗಂಟುಮೂಟೆ ತಂಡ; ಆಸ್ಕರ್‌ ಪ್ರಶಸ್ತಿ ಪಡೆದ ಸಾಕ್ಷ್ಯಚಿತ್ರದ ತಂತ್ರಜ್ಞನೂ ಈ ಚಿತ್ರದಲ್ಲೊಬ್ಬರು

Kenda Motion Poster: ಮತ್ತೊಂದು ಭಿನ್ನ ಕಥಾನಕದ ಚಿತ್ರ ಕನ್ನಡದ ಸಿನಿಮಾ ಪ್ರೇಮಿಗಳ ಮುಂದೆ ಬರಲು ಸಜ್ಜಾಗಿ ನಿಂತಿದೆ ಗಂಟುಮೂಟೆ ತಂಡ. ಯಾವುದೇ ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಮುಗಿಸಿಕೊಂಡಿದ್ದ ಕೆಂಡ ಎಂಬ ಸಿನಿಮಾವೀಗ ಮೋಷನ್ ಪೋಸ್ಟರ್ ಮೂಲಕ ಸದ್ದು ಮಾಡುತ್ತಿದೆ. ಈ ಹಿಂದೆ `ಗಂಟುಮೂಟೆ’ ಎಂಬ ವಿಶಿಷ್ಟ ಸಿನಿಮಾ ಕೊಟ್ಟಿದ್ದ ತಂಡವೀಗ ಕೆಂಡದ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಿದೆ. ಆ ಚಿತ್ರದ ನಿರ್ಮಾಣದಲ್ಲಿ ಭಾಗಿಯಾಗಿ ಛಾಯಾಗ್ರಾಹಕರಾಗಿದ್ದ ಸಹದೇವ್ ಕೆಲವಡಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಏನಿದು ಕೆಂಡ?

ಬೆಂಗಳೂರಿನಂಥಾ ಮಹಾ ನಗರಿಯಲ್ಲಿ ನಾನಾ ನಿರಾಸೆಗೊಳಗಾದ ಯುವ ಸಮೂಹ, ರಾಜಕೀಯ, ಅಪರಾಧ ಸೇರಿದಂತೆ ಒಂದಷ್ಟು ಸಾಮಾಜಿಕ ಅಂಶಗಳನ್ನಿಟ್ಟುಕೊಂಡು ಈ ಚಿತ್ರ ತಯಾರುಗೊಂಡಿದೆ. ಫೌಂಡ್ರಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಹೇಗೆ ಈ ವ್ಯವಸ್ಥೆಯ ವಿಷ ವ್ಯೂಹಕ್ಕೆ ಸಿಲುಕುತ್ತಾನೆ, ಆತನನ್ನು ಪಟ್ಟಭದ್ರರು ಹೇಗೆಲ್ಲ ಬಳಸಿಕೊಳ್ಳುತ್ತಾರೆ, ಆ ಕ್ಷಣದೊಂದು ನಿರ್ಧಾರ ಆತನ ಬದುಕನ್ನು ಯಾವ ದಿಕ್ಕಿನತ್ತ ಮುನ್ನಡೆಸುತ್ತೆ ಎಂಬಿತ್ಯಾದಿ ಕುತೂಹಲಕರ ತಿರುವುಗಳೊಂದಿಗೆ ಕೆಂಡ ಕಳೆಗಟ್ಟಿಕೊಂಡಿದೆಯಂತೆ.

ಮೊನ್ನೆ ತಾನೇ ಬಿಡುಗಡೆಯಾಗಿರುವ ಕೆಂಡ ಚಿತ್ರದ ಮೋಷನ್ ಪೋಸ್ಟರ್ ಈಗ ನಾನಾ ಥರದಲ್ಲಿ ಚರ್ಚೆಗೆ ಕಾರಣವಾಗಿದೆ. ಆ ಮೂಲಕ ಪ್ರೇಕ್ಷಕರನ್ನು ಸೆಳೆಯುವುದರೊಂದಿಗೆ ಆರಂಭಿಕ ಗೆಲುವನ್ನೂ ಪಡೆದುಕೊಂಡಿದೆ. ಶೀರ್ಷಿಕೆಯಲ್ಲಿಯೇ ರಗಡ್ ಫೀಲ್ ಹೊಂದಿರುವ ಈ ಸಿನಿಮಾವನ್ನು ರೂಪಾ ರಾವ್ ಮತ್ತು ಸಹದೇವ್ ಜೊತೆಗೂಡಿ, ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ಗಂಟುಮೂಟೆ ಕೂಡಾ ಈ ನಿರ್ಮಾಣ ಸಂಸ್ಥೆಯಿಂದಲೇ ರೂಪುಗೊಂಡಿತ್ತು.

ಸಹದೇವ್‌ಗೆ ರೂಪಾ ಸಾಥ್

ಇದೊಂದು ಈ ದಿನಮಾನದ ಮಟ್ಟಿಗೆ ವಿಭಿನ್ನ ಚಿತ್ರವಾಗಲಿದೆ ಎಂಬಂತಹ ತುಂಬು ಭರವಸೆ ಚಿತ್ರತಂಡದಲ್ಲಿದೆ. ವಿದೇಶಗಳಲ್ಲಿ ಸಿನಿಮಾ ಬಗ್ಗೆ ಅಧ್ಯಯನ ನಡೆಸಿ ಬಂದು, ತನ್ನ ಮಾತೃ ಭಾಷೆಯಲ್ಲಿಯೇ ಸಿನಿಮಾ ಮಾಡಬೇಕೆಂಬ ಬಯಕೆ ಹೊಂದಿದ್ದವರು ಸಹದೇವ್ ಕೆಲವಡಿ. ಅದರ ಆರಂಭಿಕ ಹೆಜ್ಜೆಯಾಗಿ ರೂಪಾ ರಾವ್ ಅವರ ಜೊತೆಗೂಡಿ ನಿರ್ಮಾಣ ಸಂಸ್ಥೆಗೆ ಚಾಲನೆ ನೀಡಿದ್ದರು. ಇದೀಗ ಅವರೇ ಕೆಂಡದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.‌

ಗಂಟುಮೂಟೆ ತಂಡದ ಹೊಸ ಪ್ರಯೋಗ

ಗಂಟುಮೂಟೆಯಂಥಾ ಚೆಂದದ ಸಿನಿಮಾ ಕೊಟ್ಟಿದ್ದ ತಂಡವೇ ಕೆಂಡದ ಸಾರಥ್ಯ ವಹಿಸಿರೋದರಿಂದಾಗಿ, ಈ ಚಿತ್ರ ಒಂದಷ್ಟು ಕುತೂಹಲ ಮೂಡಿಸಿದೆ. ಯುವ ಸಮೂಹದ ಕನಸು, ನಿರಾಸೆ, ತವಕ ತಲ್ಲಣಗಳನ್ನು ಹೊಂದಿರುವ ಈ ಚಿತ್ರ ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕಾರ್ಯವೂ ಅಂತಿಮ ಘಟ್ಟದಲ್ಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯ ದಿನಾಂಕ ಅನೌನ್ಸ್ ಆಗಲಿದೆ.

ತಾರಾಗಣದಲ್ಲಿ ಹೊಸಬರ ಪಾಲೇ ಹೆಚ್ಚು

ವಿಶೇಷವೆಂದರೆ, ತಾರಾಗಣವೆಲ್ಲ ಹೊಸಬರಿಂದಲೇ ತುಂಬಿಕೊಂಡಿದೆ. ರಂಗಭೂಮಿ ಪ್ರತಿಭೆಗಳಿಲ್ಲಿ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ರವೀಂದ್ರನ್, ಗೋಪಾಲ್ ಕೃಷ್ಣ ದೇಶಪಾಂಡೆ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ಕಥೆಯೊಂದಿಗೇ ಹೊಸೆದುಕೊಂಡಂತಹ ಎರಡು ಹಾಡುಗಳಿಗೆ ಖುದ್ದು ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಲಿಫೆಂಟ್ ವಿಸ್ಪರ್ಸ್ ಚಿತ್ರದ ಭಾಗವಾಗಿದ್ದ ಶ್ರೇಯಾಂಕ್ ನಂಜಪ್ಪ ಕೆಂಡ ಚಿತ್ರಕ್ಕೆ ಶಬ್ಧ ಸಂಯೋಜನೆ ಮಾಡಿದ್ದಾರೆ.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಮನರಂಜನೆ, ಬಿಗ್‌ಬಾಸ್ ಕನ್ನಡ 10 ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, ಹಿಂದೂಸ್ತಾನ್ ಟೈಮ್ಸ್ ಕನ್ನಡ ,ನೋಡಿ.