ಕನ್ನಡ ಸುದ್ದಿ  /  ಕರ್ನಾಟಕ  /  Bengaluru Cyber Crime: ಷೇರು ಹೂಡಿಕೆ ಹೆಸರಿನಲ್ಲಿ 5 ಕೋಟಿ ರೂಪಾಯಿ ಕಳೆದುಕೊಂಡ ಬೆಂಗಳೂರು ನಿವಾಸಿ; ಸೈಬರ್ ಕ್ರೈಂ ಠಾಣೆಗೆ ದೂರು

Bengaluru Cyber Crime: ಷೇರು ಹೂಡಿಕೆ ಹೆಸರಿನಲ್ಲಿ 5 ಕೋಟಿ ರೂಪಾಯಿ ಕಳೆದುಕೊಂಡ ಬೆಂಗಳೂರು ನಿವಾಸಿ; ಸೈಬರ್ ಕ್ರೈಂ ಠಾಣೆಗೆ ದೂರು

ಡಿಜಿಟಲ್ ವಹಿವಾಟಿನ ಅಪರಾಧ ಕೃತ್ಯಗಳು ಹೆಚ್ಚಾಗುತ್ತಲೇ ಇದ್ದು, ಬೆಂಗಳೂರಿನ ನಿವಾಸಿಯೊಬ್ಬರು ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ ಬರೋಬ್ಬರಿ 5 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. (ವರದಿ: ಎಚ್ ಮಾರುತಿ)

 ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಹೇಳಿದ ವ್ಯಕ್ತಿಗಳ ಮಾತು ನಂಬಿದ ಬೆಂಗಳೂರು ನಿವಾಸಿಯೊಬ್ಬರು ಬರೋಬ್ಬರಿ 5.18 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಹೇಳಿದ ವ್ಯಕ್ತಿಗಳ ಮಾತು ನಂಬಿದ ಬೆಂಗಳೂರು ನಿವಾಸಿಯೊಬ್ಬರು ಬರೋಬ್ಬರಿ 5.18 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.

ಬೆಂಗಳೂರು: ಆನ್‌ಲೈನ್ ವಂಚನೆ (Online Fraud) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಜನಸಾಮಾನ್ಯರಿಂದ ದೊಡ್ಡ ಶ್ರೀಮಂತರ ವರೆಗೆ ಎಲ್ಲಾ ವರ್ಗದವರನ್ನು ಸೈಬರ್ ಕ್ರಿಮಿನಲ್‌ಗಳು ವಂಚಿಸುತ್ತಿದ್ದಾರೆ. ಕೋಟಿಗಳ ಲೆಕ್ಕದಲ್ಲಿ ವಂಚನೆ ಪ್ರಕರಣಗಳು ಬಯಲಾಗುತ್ತಿವೆ. ಜನರು ಕೂಡ ದುರಾಸೆ ಹಾಗೂ ಆಮಿಷಗಳಿಗೆ ಒಳಗಾಗಿ ಲಕ್ಷ, ಕೋಟಿಗಳಲ್ಲಿ ಹಣವನ್ನು ಕಳೆದು ಕೊಳ್ಳುತ್ತಲೇ ಇದ್ದಾರೆ. ಬೆಂಗಳೂರಿನ ನಿವಾಸಿಯೊಬ್ಬರು ದುಪ್ಪಟ್ಟು ಲಾಭದ ಆಸೆಗೆ ಬಿದ್ದು ಬರೊಬ್ಬರಿ 5.18 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಬೆಂಗಳೂರಿನ ನಿವಾಸಿಯೊಬ್ಬರಿಗೆ ಆನ್‌ಲೈನ್ ವಂಚಕರು ಷೇರು ವ್ಯವಹಾರದಲ್ಲಿ ಹಣ ಹೂಡಿದರೆ ದುಪ್ಪಟ್ಟು ಲಾಭ ಗಳಿಸಬಹುದೆಂದು ಆಸೆ ಹುಟ್ಟಿಸಿದ್ದಾರೆ. ಇದನ್ನು ನಂಬಿಕೊಂಡು ವ್ಯಕ್ತಿ ಹೂಡಿಕೆ ಮಾಡಲು ಒಪ್ಪಿಕೊಂಡಿದ್ದಾರೆ. ಇವರಿಂದ ಹಂತಹಂತವಾಗಿ 5.18 ಕೋಟಿ ರೂಪಾಯಿ ಪಡೆದು ವಂಚಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಂಚನೆ ಸಂಬಂಧ ವ್ಯಕ್ತಿ ನಗರದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ದೂರು ನೀಡಿರುವ ವ್ಯಕ್ತಿಯ ಮೊಬೈಲ್‌ಗೆ ವಾಟ್ಸಾಪ್‌ ಮೂಲಕ ಕೆಲವು ದಿನಗಳ ಹಿಂದೆ ಷೇರು ವ್ಯವಹಾರದಲ್ಲಿ ಹಣ ತೊಡಗಿಸಿ, ದುಪ್ಪಟ್ಟು ಲಾಭಗಳಿಸಿ ಎಂಬ ಸಂದೇಶವೊಂದು ಬಂದಿರುತ್ತದೆ. ಹಣ ಹೂಡಿಕೆಯ ಲಿಂಕ್ ಅನ್ನೂ ಕಳುಹಿಸಿ ನೋಂದಣಿ ಮಾಡಿಕೊಳ್ಳುವಂತೆ ಹೇಳಿರುತ್ತಾರೆ.

ನಷ್ಟವಾಗುತ್ತಿದ್ದರೂ ವಂಚರ ಮಾತನ್ನು ನಂಬಿ ಮತ್ತೆ ಮತ್ತೆ ಹೂಡಿಕೆ

ಈ ಮೆಸೇಜ್ ನಂಬಿದ ದೂರುದಾರ ಲಾಭದ ಆಸೆಯಿಂದ ಹೆಸರು, ಆಧಾರ್, ಪ್ಯಾನ್ ನಂಬರ್ ಮತ್ತಿತರ ದಾಖಲೆಗಳನ್ನು ಹಂಚಿಕೊಂಡು ನೋಂದಣಿ ಮಾಡಿಕೊಂಡಿದ್ದರು. ಆರೋಪಿಗಳಿಗೆ ಇಷ್ಟು ಸಾಕಾಗಿತ್ತು. ದುಪ್ಪಟ್ಟು ಲಾಭ ನೀಡುವ ಷೇರುಗಳನ್ನು ಖರೀದಿಸುವಂತೆ ಮತ್ತೊಂದು ಸಂದೇಶ ಕಳುಹಿಸುತ್ತಾರೆ. ಈ ಸಂದೇಶವನ್ನು ನಂಬಿದ್ದ ದೂರುದಾರ ಹಲವಾರು ಷೇರುಗಳನ್ನು ಖರೀದಿಸುತ್ತಾರೆ. ಆದರೆ ಯಾವುದೇ ಲಾಭ ಬಂದಿರಲಿಲ್ಲ. ಮತ್ತಷ್ಟು ಷೇರುಗಳನ್ನು ಖರೀದಿಸಿದರೆ ಒಟ್ಟಿಗೆ ಹೆಚ್ಚಿನ ಲಾಭ ಸಿಗಲಿದೆ ಎಂದು ಆರೋಪಿಗಳು ಪುಸಲಾಯಿಸುತ್ತಾರೆ. ದೂರುದಾರ ಅದನ್ನೂ ನಂಬಿ ಮತ್ತಷ್ಟು ಷೇರುಗಳನ್ನು ಖರೀದಿಸುತ್ತಾರೆ.

ಆಗಲೂ ಲಾಭ ಬಂದಿರಲಿಲ್ಲ. ಮತ್ತಷ್ಟು ಹಣ ಹೂಡಿಕೆ ಮಾಡಿದರೆ ಷೇರಿನ ಮೊತ್ತ ಮತ್ತು ಲಾಭಾಂಶವನ್ನು ಹಿಂತಿರುಗಿಸುವುದಾಗಿ ಭರವಸೆ ನೀಡುತ್ತಾರೆ. ಈ ಮಾತನ್ನು ನಂಬಿದ ದೂರುದಾರ ಮಹಾಶಯ ಹಂತ ಹಂತವಾಗಿ 5.18 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಾ ಹೋಗುತ್ತಾರೆ. ಆರೋಪಿಗಳು ಮತ್ತೆ ಹೂಡಿಕೆ ಮಾಡುವಂತೆ ಕೇಳಿದಾಗ ದೂರುದಾರ ಅನುಮಾನಗೊಂಡು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದುರಾಸೆಗೆ ಬಿದ್ದ ದೂರುದಾರ ಚಿನ್ನಾಭರಣಗಳನ್ನು ಮಾರಿದ್ದಾರೆ. ವಿವಿಧ ಮೂಲಗಳಿಂದ ಸಾಲ ಮಾಡಿ ಹೂಡಿಕೆ ಮಾಡಿ 5 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. (ವರದಿ: ಎಚ್ ಮಾರುತಿ)

IPL_Entry_Point