Bangalore Tomato Price: ಬೆಂಗಳೂರಿನಲ್ಲಿ ಕೆಜಿ ಟೊಮೆಟೊ 100ರ ಗಡಿಯಲ್ಲಿ; ಇತರೆ ತರಕಾರಿಗಳ ಬೆಲೆಯಲ್ಲೂ ಏರಿಕೆ
ಬೆಂಗಳೂರು ಮಾರುಕಟ್ಟೆಯಲ್ಲಿ ಕಳೆದೊಂದು ವಾರದಿಂದ ತರಕಾರಿಗಳ ಬೆಲೆ ಏರಿಕೆಯಾಗುತ್ತಲೇ ಇದ್ದು, 35 ರೂಪಾಯಿ ಇದ್ದ ಕೆಜಿ ಟೊಮೆಟೊ ಬೆಲೆ ಇದೀಗ 100 ಗಡಿಗೆ ಬಂದು ನಿಂತಿದೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ತರಕಾರಿಗಳ ಬೆಲೆ (Vegetable Prices) ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇರುವುದು ಮಧ್ಯಮ ವರ್ಗದ ಜನರಿಗೆ ದೊಡ್ಡ ಆಘಾತ ನೀಡಿದಂತಾಗಿದೆ.
ಅಡುಗೆಯಲ್ಲಿ ಹೆಚ್ಚು ಬಳಕೆಯಾಗುವ ಟೊಮೆಟೊ ಬೆಲೆ (Tomato Price) ವಾರದಿಂದ ಹೆಚ್ಚಾಗುತ್ತಿದ್ದು, ಇಂದು (ಜೂನ್ 26, ಸೋಮವಾರ) ಕೆಜಿ ಟೊಮೆಟೊ ಬೆಲೆ 80 ರಿಂದ 90 ರೂಪಾಯಿಗೆ ಮಾರಾಟವಾಗುತ್ತಿದ್ದು, 100ರ ಗಡಿ ದಾಟುವ ಸಾಧ್ಯತೆ ಇದೆ.
ಟೊಮೆಟೊ ಬೆಲೆ ಏರಿಕೆಗೆ ಇದೇ ಕಾರಣ:
ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಟೊಮೆಟೊ ಪೂರೈಕೆಯಾಗದಿರುವುದೇ ಬೆಲೆ ಹೆಚ್ಚಾಗುತ್ತಿರುವುದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ಹಿಂದೆ ಟೊಮೆಟೊ ಬೆಳೆದು ಬೆಲೆ ಸರಿಯಾದ ಬೆಲೆ ಸಿಗದೆ ಕೈ ಸುಟ್ಟುಕೊಂಡಿದ್ದ ಹಲವು ರೈತರು ಟೊಮೆಟೊ ಬೆಳೆಯ ಸಹವಾಸವೇ ಬೇಡ ಅಂತ ಸಣ್ಣ ಪುಟ್ಟ ಚಿಲ್ಲರೆ ಬೆಳೆಗಳ ಮೊರೆ ಹೋಗಿದ್ದಾರೆ. ಇದು ಕೂಡ ಬೆಲೆ ಏರಿಕೆಗೆ ಕಾರಣ ಇರಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಏಷ್ಯಾದಲ್ಲಿ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ಎನಿಸಿರುವ ಕೋಲಾರದ ಮಾರುಕಟ್ಟೆಯಲ್ಲಿ 15 ಕೆಜಿಯ ಟೊಮೆಟೊದ ಒಂದು ಕ್ರೇಟ್ ನಿನ್ನೆ 1,300 ರೂಪಾಯಿವರೆಗೆ ಮಾರಾಟವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇನ್ನೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ಪಾದನೆ ಕಡಿಮೆಯಾಗಿರುವುದರಿಂದ ಟೊಮೆಟೊ ಬೆಲೆ ಏರಿಕೆಯಾಗುತ್ತಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಬೀನ್ಸ್ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದರಿಂದ ಈ ಬಾರಿ ಬೀನ್ಸ್ ಬೆಳೆ ಜಾಸ್ತಿ ಇದೆ. ಮುಂಗಾರು ಸರಿಯಾಗಿ ಬಾರದ ಕಾರಣ ಶೇಕಡಾ 30 ರಷ್ಟು ಬೆಲೆ ನಾಶವಾಗಿದೆ. ಇದರಿಂದಾಗಿ ಈ ಬಾರಿ ಬೆಲೆ ಇನ್ನೂ ಹೆಚ್ಚಾಗಬಹುದು ಎಂದು ಕೋಲಾರದ ರೈತರೊಬ್ಬರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಟೊಮೆಟೊ ಬೆಲೆ 80 ರಿಂದ 90 ರೂಪಾಯಿ ಇದ್ದರೆ, ಚಾಮರಾಜನಗರದಲ್ಲಿ 50, ಚಿಕ್ಕಬಳ್ಳಾಪುರ 75, ಚಿಕ್ಕಮಗಳೂರು 40, ಕೋಲಾರದಲ್ಲಿ 70, ರಾಮನಗರ 75 ಹಾಗೂ ಶಿವಮೊಗ್ಗ ಮಾರುಕಟ್ಟೆಯಲ್ಲಿ 60 ರೂಪಾಯಿ ಇದೆ.
ಇತರೆ ತರಕಾರಿ ಬೆಲೆ ಹೇಗಿದೆ?: ಪ್ರಸ್ತುತ ಬೀನ್ಸ್ 110 ರೂಪಾಯಿ, ಕ್ಯಾರೆಟ್ 90 ರೂಪಾಯಿ, ನವಿಲುಕೋಸು 70 ರೂ., ಮೂಲಂಗಿ 49 ರೂ., ನುಗ್ಗೆಕಾಯಿ 100 ರೂ., ಬೀಟ್‌ರೂಟ್ 50 ರೂ., ಹಸಿಮೆಣಸಿನಕಾಯಿ 115 ರೂ., ಬೆಂಡೆಕಾಯಿ 55 ರೂಪಾಯಿಗೆ ಇದೆ.
ತರಕಾರಿ ಬೆಲೆ ಏರಿಕೆಗೆ ಮಾಜಿ ಸಿಎಂ ಎಚ್‌ಡಿಕೆ ಕಿಡಿ: ಆಹಾರ ಪದಾರ್ಥಗಳ ಬೆಲೆ ನಿರಂತರವಾಗಿ ಏರಿಕೆ ಆಗುತ್ತಿದ್ದರೂ ಅದಕ್ಕೆ ನಿಯಂತ್ರಣ ಹಾಕದ ರಾಜ್ಯ ಕಾಂಗ್ರೆಸ್ ಸರಕಾರ ಮೇಲೆ ಟೀಕಾಪ್ರಹಾರ ನಡೆಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು, ಈ ಸರಕಾರ ಬರಗೆಟ್ಟ ಈ ಹೊತ್ತಿನಲ್ಲಿ ಅಂಬರದ ಮೇಲೆ ಕೂತು ಸ್ವಯಂವರ ಮಾಡಿಕೊಳ್ಳುತ್ತಿರುವ ಮತಿಗೆಟ್ಟ ವರನಂತೆ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ವರದಿಯನ್ನು ಉಲ್ಲೇಖಸಿ ಸರಣಿ ಟ್ವೀಟ್ ಮಾಡಿರುವ ಅವರು, ಐದು ಗ್ಯಾರಂಟಿಗಳಿಂದ ಜನೋದ್ಧಾರ ಗ್ಯಾರಂಟಿ ಎಂದು ಹಸಿಸುಳ್ಳು ಹೇಳಿದ್ದ ರಾಜ್ಯ ಕಾಂಗ್ರೆಸ್ ಸರಕಾರ ಬರಗೆಟ್ಟ ಈ ಹೊತ್ತಿನಲ್ಲಿ ಅಂಬರದ ಮೇಲೆ ಕೂತು ಸ್ವಯಂವರ ಮಾಡಿಕೊಳ್ಳುತ್ತಿರುವ ಮತಗೆಟ್ಟ ವರನಂತೆ ವರ್ತಿಸುತ್ತಿದೆ. ಬೆಲೆ ಏರಿಕೆ ಹೊಡೆತಕ್ಕೆ ಜನ ತತ್ತರಿಸುತ್ತಿರುವುದು ಅದರ ಕಣ್ಣಿಗೆ ಕಾಣುತ್ತಿಲ್ಲ ಎಂದಿರುವ ಅವರು, ' ಜನರಿಗೆ ಬೆಲೆ ಏರಿಕೆ ಗ್ಯಾರಂಟಿ ' ಎಂದು ಹ್ಯಾಷ್ ಟ್ಯಾಗ್ ಮಾಡಿದ್ದಾರೆ.