ಇಲ್ಲಿನ ಹೀರೋ ನಿಮ್ಮಗಳ ಪ್ರತಿಬಿಂಬ, UI ಸಿನಿಮಾ ಮೂಲಕ ಕೋಟ್ಯಂತರ ಹೀರೋ ಸೃಷ್ಟಿ ಮಾಡುವ ಪ್ರಯತ್ನ; ಉಪೇಂದ್ರ
ಕನ್ನಡ ಸುದ್ದಿ  /  ಮನರಂಜನೆ  /  ಇಲ್ಲಿನ ಹೀರೋ ನಿಮ್ಮಗಳ ಪ್ರತಿಬಿಂಬ, Ui ಸಿನಿಮಾ ಮೂಲಕ ಕೋಟ್ಯಂತರ ಹೀರೋ ಸೃಷ್ಟಿ ಮಾಡುವ ಪ್ರಯತ್ನ; ಉಪೇಂದ್ರ

ಇಲ್ಲಿನ ಹೀರೋ ನಿಮ್ಮಗಳ ಪ್ರತಿಬಿಂಬ, UI ಸಿನಿಮಾ ಮೂಲಕ ಕೋಟ್ಯಂತರ ಹೀರೋ ಸೃಷ್ಟಿ ಮಾಡುವ ಪ್ರಯತ್ನ; ಉಪೇಂದ್ರ

‘UI’ ಚಿತ್ರದ ವಾರ್ನರ್ ಬಿಡುಗಡೆಯಾಗಿದೆ. ಇದರ ಮೂಲಕ ಚಿತ್ರದಲ್ಲಿ ಏನು ಹೇಳುವುದಕ್ಕೆ ಹೊರಟಿದ್ದೇನೆ ಎಂಬುದನ್ನು ಉಪೇಂದ್ರ ಸೂಕ್ಷ್ಮವಾಗಿ ತೋರಿಸಿದ್ದಾರೆ. ‘ಸೂಪರ್’ನಲ್ಲಿ 2030ರ ವೇಳೆ ಹೇಗಿರುತ್ತದೆ ಎಂದು ಹೇಳಿದ್ದರು. ಈಗ ‘UI’ನಲ್ಲಿ ಅವರು 2040ರಲ್ಲಿ ಪರಿಸ್ಥಿತಿ ಏನಾಗಬಹುದು ಎಂದು ತೋರಿಸುವ ಯತ್ನ ಮಾಡಿದ್ದಾರೆ. ಹಾಗಾದರೆ, ‘UI’, ‘ಸೂಪರ್’ನ ಮುಂದುವರೆದ ಭಾಗವಾ?

ಇಲ್ಲಿನ ಹೀರೋ ನಿಮ್ಮಗಳ ಪ್ರತಿಬಿಂಬ, UI ಸಿನಿಮಾ ಮೂಲಕ ಕೋಟ್ಯಂತರ ಹೀರೋ ಸೃಷ್ಟಿ ಮಾಡುವ ಪ್ರಯತ್ನ; ಉಪೇಂದ್ರ
ಇಲ್ಲಿನ ಹೀರೋ ನಿಮ್ಮಗಳ ಪ್ರತಿಬಿಂಬ, UI ಸಿನಿಮಾ ಮೂಲಕ ಕೋಟ್ಯಂತರ ಹೀರೋ ಸೃಷ್ಟಿ ಮಾಡುವ ಪ್ರಯತ್ನ; ಉಪೇಂದ್ರ

UI Movie Warner: UI ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘UI’, ಡಿ. 20ರಂದು ಪ್ಯಾನ್‍ ಇಂಡಿಯಾ ಚಿತ್ರವಾಗಿ ಐದು ಭಾಷೆಗಳಲ್ಲಿ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದ ಮೂಲಕ ಕೋಟ್ಯಂತರ ಹೀರೋಗಳನ್ನು ಸೃಷ್ಟಿ ಮಾಡುವ ಪ್ರಯತ್ನ ಮಾಡುತ್ತಿರುವುದಾಗಿ ಉಪ್ಪಿ ಹೇಳಿಕೊಂಡಿದ್ದಾರೆ. ಇಂದು ಬೆಳಿಗ್ಗೆ ‘UI’ ಚಿತ್ರದ ವಾರ್ನರ್ ಬಿಡುಗಡೆಯಾಗಿದೆ. ಇದರ ಮೂಲಕ ಚಿತ್ರದಲ್ಲಿ ಏನು ಹೇಳುವುದಕ್ಕೆ ಹೊರಟಿದ್ದೇನೆ ಎಂಬುದನ್ನು ಉಪೇಂದ್ರ ಸೂಕ್ಷ್ಮವಾಗಿ ತೋರಿಸಿದ್ದಾರೆ. ‘ಸೂಪರ್’ ಚಿತ್ರದಲ್ಲಿ ಉಪೇಂದ್ರ 2030ರಲ್ಲಿ ಹೇಗಿರುತ್ತದೆ ಎಂದು ಹೇಳುವ ಪ್ರಯತ್ನ ಮಾಡಿದ್ದರು. ಈಗ ‘UI’ನಲ್ಲಿ ಅವರು 2040ರಲ್ಲಿ ಪರಿಸ್ಥಿತಿ ಏನಾಗಬಹುದು ಎಂದು ತೋರಿಸುವ ಯತ್ನ ಮಾಡಿದ್ದಾರೆ. ಹಾಗಾದರೆ, ‘UI’, ‘ಸೂಪರ್’ನ ಮುಂದುವರೆದ ಭಾಗವಾ?

ಈ ಪ್ರಶ್ನೆಗೆ ಉತ್ತರಿಸುವ ಅವರು, ‘ಇದು ಕಂಟಿನ್ಯುಟಿ ಅಲ್ಲ. 2040ರ ಹೊತ್ತಿಗೆ ಏನಾಗಬಹುದು ಎಂದು ಸಾಂಕೇತಿಕವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ. ಇಡೀ ಚಿತ್ರದಲ್ಲಿ ರೂಪಕಗಳು ಜಾಸ್ತಿ ಇರುತ್ತದೆ. ಇದೊಂದು ಪಕ್ಕಾ ಮನರಂಜನೆಯ ಸಿನಿಮಾ. ಅದರ ಜೊತೆಗೆ ಹಲವು ವಿಷಯಗಳನ್ನ ಹೇಳುವ ಪ್ರಯತ್ನ ಮಾಡಲಾಗಿದೆ. ಅದನ್ನು ಹೇಗೆ ಅರ್ಥೈಸುತ್ತಾರೆ ಎಂಬುದನ್ನು ಅವರವರ ಮೇಲೆ ಬಿಟ್ಟಿದ್ದು. ಟೀಸರ್ ನೋಡಿ ಒಬ್ಬೊಬ್ಬರು ಒಂದೊಂದು ವಿಷಷಯ ಹೇಳುತ್ತಿದ್ದಾರೆ. ಸಿನಿಮಾದಲ್ಲಿ ಹಲವು ವಿಷಯಗಳಿವೆ. ಅದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

ಈ ಹೀರೋ ನಿಮ್ಮಗಳ ಪ್ರತಿಬಿಂಬ

ಈ ಚಿತ್ರದ ಮೂಲಕ ಪ್ರತಿಯೊಬ್ಬರೂ ತಮ್ಮನ್ನು ತಾವು ನೋಡಿಕೊಳ್ಳುತ್ತಾರೆ ಎನ್ನುವ ಉಪೇಂದ್ರ. ‘ಇದು ನನ್ನೊಬ್ಬನ ದೃಷ್ಟಿಕೋನವಷ್ಟೇ ಅಲ್ಲ. ಎಲ್ಲರೂ ದೃಷ್ಟಿಕೋನವೂ ಆಗಬೇಕು. ಒಬ್ಬ ಹೀರೋನ ಕತೆ ಮಾಡಿದರೆ ಅವನೊಬ್ಬನ ಕಥೆಯಾಗಿರುತ್ತದೆ. ಇಲ್ಲಿ ಪ್ರತಿಯೊಬ್ಬರೂ ಅವರನ್ನು ಆ ಪಾತ್ರದಲ್ಲಿ ನೋಡಿಕೊಳ್ಳಬೇಕು. ಈ ಚಿತ್ರದ ಮೂಲಕ ಕೋಟ್ಯಂತರ ಹೀರೋ ಸೃಷ್ಟಿ ಮಾಡುವ ಪ್ರಯತ್ನ ನನ್ನದು. ಇದು ಒಬ್ಬ ಹೀರೋನ ಕಥೆಯಾದರೂ, ನಮ್ಮನಿಮ್ಮೆಲ್ಲರ ಕಥೆ ಆಗಿರುತ್ತದೆ. ಒಂದು ಮನರಂಜನಾತ್ಮಕ ಕಥೆಯ ಜೊತೆಗೆ ಇನ್ನೊಂಧು ಲೇಯರ್ ಸಹ ಇರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳೋದು ಕಷ್ಟ. ಅರ್ಥವಾದರೆ 10 ಜನಕ್ಕೆ ಹೇಳುತ್ತಾರೆ’ ಎಂದರು.

A ಸಿನಿಮಾ ವೇಳೆಯ ನಂಬಿಕೆ ಈಗಲೂ ಇದೆ..

ಪ್ರೇಕ್ಷಕರು ಯಾವತ್ತೂ ನಮಗಿಂತ ಮೇಲಿರುತ್ತಾರೆ ಎಂದ ಉಪೇಂದ್ರ, ‘ಚಿತ್ರದಲ್ಲಿ ಸಾಕಷ್ಟು ಸರ್ಪ್ರೈಸ್‍ಗಳಿವೆ. ಅದು ಜನರಿಗೆ ಅರ್ಥವಾಗುತ್ತದೆ, ಇಷ್ಟವಾಗುತ್ತದೆ ಎಂಬ ನಂಬಿಕೆಯೂ ಇದೆ. ನಾವು ಏನೇ ಮಾಡಿದರೂ ಪ್ರೇಕ್ಷಕರಿಗಿಂತ ಮೇಲೆ ಹೋಗುವುದು ಕಷ್ಟ. ನಾವು 10 ಹೆಜ್ಜೆ ಮೇಲಿದ್ದರೆ, ಪ್ರೇಕ್ಷಕರು 15 ಹೆಜ್ಜೆ ಮುಂದಿರುತ್ತಾರೆ. ಅವರು ಮುಗ್ಧರಾಗಿ ಸಿನಿಮಾ ನೋಡುತ್ತಾರೆ. ನಾನು ‘ಎ’ ಸಿನಿಮಾ ಮಾಡಿದಾಗ, ಚಿತ್ರ ನೋಡಿ ಗಾಂಧಿನಗರದ ಎಲ್ಲರೂ ಡಬ್ಬ ಸಿನಿಮಾ ಎಂದರು. ನರ್ತಕಿ ಚಿತ್ರಮಂದಿರದ ಗೇಟ್‍ಕೀಪರ್ ಸಹ ಚಿತ್ರ ಚೆನ್ನಾಗಿಲ್ಲ ಎಂದರು. ಸೆನ್ಸಾರ್ ಅಧಿಕಾರಿ, ಚಿತ್ರ unfit for release ಎಂದರು. ಪ್ರಮಾಣಪತ್ರವನ್ನೇ ಕೊಡುವುದಿಲ್ಲ ಎಂದರು. ಚಿತ್ರದ ಫೈನಾನ್ಶಿಯರ್ ಸಹ ಚಿತ್ರ ಚೆನ್ನಾಗಿಲ್ಲ, ದುಡ್ಡು ಕೊಡಲ್ಲ ಎಂದರು. ಆದರೆ, ನಿರ್ಮಾಪಕ ಜಗನ್ನಾಥ್‍ ಮಾತ್ರ ಚೆನ್ನಾಗಿದೆ, ಬೇಸರ ಆಗುವುದಿಲ್ಲ ಎಂದಿದ್ದರು. ಪ್ರತಿಬಾರಿ ನೋಡಿದಾಗಲೂ ಬೇರೆ ತರಹ ಕಾಣುತ್ತದೆ ಎಂದಿದ್ದರು. ಜನ ಮಾತ್ರ ಅರ್ಥ ಮಾಡಿಕೊಂಡು ಗೆಲ್ಲಿಸಿದರು. ಆ ನಂಬಿಕೆ ಇವತ್ತಿಗೂ ಇದೆ. ನಾನು ಚಿತ್ರವನ್ನು ಸಂಕೀರ್ಣಗೊಳಿಸಬೇಕು ಎಂದು ಹಾಗೆ ಮಾಡುವುದಿಲ್ಲ. ಏನೋ ಹೇಳಬೇಕು ಎಂದು ಹೇಳುತ್ತೇನೆ. ಅದು ಜಟಿಲವಾಗುತ್ತದೆ’ ಎಂದರು.

ವಾರ್ನರ್‌ ಬಳಿಕ ಬೇರೆ ಏನೂ ಬರಲ್ಲ..

ಟೀಸರ್ ಆಯ್ತು, ವಾರ್ನರ್ ಆಯ್ತು, ಟ್ರೇಲರ್ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಟ್ರೇಲರ್, ಟೀಸರ್ ಬೇಡ ಅಂತಲೇ ವಾರ್ನರ್ ಬಿಟ್ಟಿದ್ದು. ನನಗೆ ಚಿತ್ರ ಬಿಡುಗಡೆಗೂ ಮೊದಲು ಚಿತ್ರದ ಯಾವ ದೃಶ್ಯವನ್ನೂ ತೋರಿಸಬಾರದು ಎಂದಾಸೆ. ಆದರೆ, ರೀಚ್‍ ಆಗಬೇಕು ಎಂದರೆ ಎಲ್ಲ ಬಿಡಬೇಕು. ನಿರ್ದೇಶಕನಾಗಿ, ಮುಂದಿನ ಚಿತರದಲ್ಲಿ ಒಂದು ವಿಷ್ಯುಯಲ್‍ ಸಹ ತೋರಿಸದೆ, ಹಿಟ್ ಮಾಡಿ ತೋರಿಸಬೇಕು ಎಂಬುದು ನನ್ನಾಸೆ. ಎಲ್ಲರೂ ಟೀಸರ್, ಟ್ರೇಲರ್ ತೋರಿಸಿ ಇದೊಂದು ಟ್ರೆಂಡ್‍ ಆಗಿದೆ. ಮದುವೆ ಮನೆ ಊಟದಲ್ಲಿ ಎಲ್ಲವೂ ಚೂರುಚೂರು ಬಡಿಸುವ ಹಾಗೆ, ಎಲ್ಲವನ್ನೂ ಟ್ರೇಲರ್‍ನಲ್ಲಿ ತೋರಿಸಲಾಗುತ್ತದೆ. ಅದು ಸರಿಯೋ, ತಪ್ಪೋ ಗೊತ್ತಿಲ್ಲ. ಆದರೆ, ಟ್ರೆಂಡ್‍ ಆಗಿದೆ. ಅದನ್ನು ಒಡೆದೂ ಬೇರೇನೋ ಮಾಡಬಹುದು. ಅದನ್ನು ಈ ಚಿತ್ರದಲ್ಲಿ ಪ್ರಯತ್ನ ಮಾಡಿದ್ದೀವಿ. ಹಲವು ವಿಷಯಗಳನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ಕೆಲವು ವಿಷಯಗಳನ್ನು ಮಾತ್ರ ತೋರಿಸಿದ್ದೇವೆ. ಚಿತ್ರ ಬಿಡುಗಡೆಯಾಗುತ್ತದೋ ಇಲ್ಲವೋ ಎಂಬ ಗೊಂದಲ ಇತ್ತು. ಅದನ್ನು ನಿವಾರಿಸೋಕೆ ಈ ವಾರ್ನರ್ ಬಿಡಬೇಕಾಯ್ತು. ಇನ್ನೇನು ತೋರಿಸುವುದಿಲ್ಲ. ಎಲ್ಲವನ್ನೂ ಸಿನಿಮಾದಲ್ಲೇ ನೋಡಿ’ ಎಂದರು.

‘UI’ ಚಿತ್ರಕ್ಕೆ ಉಪೇಂದ್ರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿ, ನಾಯಕರಾಗಿಯೂ ಕಾಣಿಸಿಕೊಂಡಿದ್ದಾರೆ. ಅವರಿಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದು, ಮಿಕ್ಕಂತೆ ರವಿಶಂಕರ್, ಅಚ್ಯುತ್‍ ಕುಮಾರ್, ಸಾಧು ಕೋಕಿಲ ಮುಂತಾದವರು ನಟಿಸಿದ್ದಾರೆ. ಈ ಚಿತ್ರವನ್ನು ಲಹರಿ ಫಿಲಂಸ್ ಮತ್ತು ವೀನಸ್‍ ಎಂಟರ್‍ಟೈನರ್ಸ್‍ ಸಂಸ್ಥೆಗಳಡಿ ಜಿ. ಮನೋಹರನ್‍ ಮತ್ತು ಶ್ರೀಕಾಂತ್‍ ಕೆ.ಪಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

ವರದಿ: ಚೇತನ್‌ ನಾಡಿಗೇರ್

Whats_app_banner