Crime News: 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ರೌಡಿ ಅಜೀಜ್ ಆಸೀಫ್ ಬಂಧನ, ಶಿವಾಜಿ ನಗರದಲ್ಲಿ ಮತ್ತೊಬ್ಬ ರೌಡಿಶೀಟರ್ ವಶಕ್ಕೆ
33 ವರ್ಷದ ರೌಡಿ ಆಸೀಫ್ 2015ರಿಂದಲೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ. ಕಳ್ಳತನ, ಸುಲಿಗೆ ಸೇರಿದಂತೆ 42 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದ.
ಬೆಂಗಳೂರು: ತನ್ನ ವಿರುದ್ಧ ದಾಖಲಾಗಿದ್ದ ಹಲವು ಪ್ರಕರಣಗಳ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರೌಡಿ ಅಜೀಜ್ ಆಸೀಫ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಾಣಸವಾಡಿ ಠಾಣೆಯ ರೌಡಿ ಪಟ್ಟಿಯಲ್ಲಿ ಈತನ ಹೆಸರಿದೆ. 33 ವರ್ಷದ ರೌಡಿ ಆಸೀಫ್ 2015ರಿಂದಲೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ. ಕಳ್ಳತನ, ಸುಲಿಗೆ ಸೇರಿದಂತೆ 42 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದ. ಕೆಲವು ಪ್ರಕರಣಗಳಲ್ಲಿ ಜೈಲಿಗೂ ಹೋಗಿಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಾಧ ಪ್ರಕರಣಗಳಲ್ಲಿ ಜಾಮೀನು ಪಡೆದು ಜೈಲಿನಿಂದ ತಲೆಮರೆಸಿಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ. ನ್ಯಾಯಾಲಯದ ವಿಚಾರಣೆಗೂ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದ. ಆದ್ದರಿಂದ ಈತನ ಬಂಧನಕ್ಕೆ ವಾರಂಟ್ ಜಾರಿಯಾಗಿತ್ತು. ಕೊನೆಗೂ ಈತನನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ರೌಡಿ ಅಜೀಜ್ ಆಸೀಫ್‌ನಿಂದ 1 ಮಾಂಗಲ್ಯ ಸರ, 4 ಚಿನ್ನದ ಸರ ಮತ್ತು 12 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಇನ್ನೂ ಹೆಚ್ಚಿನ ಅಪರಾಧ ಮತ್ತು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಅನುಮಾನವಿದೆ ಎಂದು ಪೊಲೀಸರು ಹೇಳಿದ್ದಾರೆ.
ಬೆದರಿಸಿ ಸುಲಿಗೆ ಮಾಡುತ್ತಿದ್ದ ರೌಡಿ ಸೈಯದ್ ಅರೆಸ್ಟ್
ಸಾರ್ವಜನಿಕರಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ ಸುಲಿಗೆ ಮಾಡುತ್ತಿದ್ದ ಆರೋಪದಡಿಯಲ್ಲಿ ರೌಡಿ ಸೈಯದ್ ಮಾಜಾರ್ ಅಲಿಯಾಸ್ ಬಚ್ಚಾನನ್ನು ಶಿವಾಜಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 30 ವರ್ಷದ ಬಚ್ಚಾ ಶಿವಾಜಿ ನಗರದ ನಿವಾಸಿಯಾಗಿದ್ದು ಕೊಲೆ, ಜೀವ ಬೆದರಿಕೆ, ದರೋಡೆ, ಕೊಲೆ ಯತ್ನ ಗಲಭೆ ದೊಂಬಿ ಸೇರಿದಂತೆ 17 ಪ್ರಕರಣಗಳು ಈತನ ಮೇಲಿವೆ. ಕೆಲವು ಪ್ರಕರಣಗಳಲ್ಲಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಶಿವಾಜಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೆಲವು ವ್ಯಾಪಾರಿಗಳಿಗೆ ಈತ ಮಾರಕಾಸ್ತ್ರಗಳಿಂದ ಹೆದರಿಸಿದ್ದ. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈತನ ಬೆದರಿಕೆ ಕುರಿತು ಮಾಹಿತಿ ಸಂಗ್ರಹಿಸಿ ಬೆದರಿಕೆ ಹಾಕುತ್ತಿದ್ದ ಸ್ಥಳದಲ್ಲೇ ರೌಡಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದ್ವಿಚಕ್ರ ವಾಹನ ಕದಿಯುತ್ತಿದ್ದ ಡೆಲಿವರಿ ಬಾಯ್ ಬಂಧನ
ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮನೆಗಳ ಮುಂದೆ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದಡಿ ದೀಪಕ್ ಅಲಿಯಾಸ್ ದೀಪು ಎಂಬುವವನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. 23 ವರ್ಷದ ಆರೋಪಿ ದೀಪು, ಅಪರಾಧ ಹಿನ್ನೆಲೆ ಹೊಂದಿದ್ದು, ಕೆಲವು ಪ್ರಕರಣಗಳಲ್ಲಿ ಜೈಲಿಗೂ ಹೋಗಿದ್ದಾನೆ. ಇತ್ತೀಚೆಗೆ ಮತ್ತೊಂದು ಕಳವು ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದು ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ. ಆದರೂ ವಾಹನ ಕದಿಯುವ ಚಾಳಿಯನ್ನು ಬಿಟ್ಟಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮನೆ ಮನೆಗೆ ಫುಡ್ ಡೆಲಿವರಿ ಮಾಡುತ್ತಲೇ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿರುವ ಸ್ಥಳಗಳನ್ನು ಗುರುತಿಸಿಕೊಳ್ಳುತ್ತಿದ್ದ. ನಂತರ ಹ್ಯಾಂಡಲ್ ಲಾಕ್ ಮುರಿದು ದ್ವಿಚಕ್ರ ವಾಹನವನ್ನು ಕದ್ದೊಯ್ಯುತ್ತಿದ್ದ.ಒಂದೆರಡು ದಿನಗಳ ನಂತರ ಇದು ತನ್ನದೇ ವಾಹನವೆಂದು ಸುಳ್ಳು ಹೇಳಿ ಮಾರಾಟ ಮಾಡುತ್ತಿದ್ದ.
ಈತನ ಮೇಲೆ ಪರಪ್ಪನ ಅಗ್ರಹಾರ, ಜೆ.ಪಿ.ನಗರ, ಕೋಣನಕುಂಟೆ ಮತ್ತು ಹೆಣ್ಣೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಾಹನ ಕದ್ದಿರುವ ಆರೋಪಗಳಿವೆ. ಇತ್ತೀಚೆಗೆ ಬೈಯಪ್ಪನಹಳ್ಳಿ ಹತ್ತಿರದ ಜಿ.ಎಂ. ಪಾಳ್ಯದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕದ್ದ ದೂರು ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡಾಗ ಆರೋಪಿ ದೀಪು ಸಿಕ್ಕಿ ಹಾಕಿಕೊಂಡಿದ್ದ. ಈತನಿಂದ 3 ಲಕ್ಷ ರೂ. ಮೌಲ್ಯದ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.