ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bengaluru Karaga: ಭಾವೈಕ್ಯತೆಯ ಸಂಕೇತ ಕರಗ ಮಹೋತ್ಸವಕ್ಕೆ ಇಂದು ತೆರೆ; ದ್ರೌಪದಿಯನ್ನು ಆರಾಧಿಸುವ ಕರಗದಲ್ಲಿ ವೀರ ಕುಮಾರರ ಪಾತ್ರವೇನು?

Bengaluru Karaga: ಭಾವೈಕ್ಯತೆಯ ಸಂಕೇತ ಕರಗ ಮಹೋತ್ಸವಕ್ಕೆ ಇಂದು ತೆರೆ; ದ್ರೌಪದಿಯನ್ನು ಆರಾಧಿಸುವ ಕರಗದಲ್ಲಿ ವೀರ ಕುಮಾರರ ಪಾತ್ರವೇನು?

Bengaluru Karaga: ಬೆಂಗಳೂರು ಕರಗ ಮಹೋತ್ಸವಕ್ಕೆ ಸುಮಾರು 8ನೇ ಶತಮಾನಗಳಷ್ಟು ಐತಿಹ್ಯವಿದೆ. ಕರಗದಲ್ಲಿ ವೀರ ಕುಮಾರರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಕರಗ ಉತ್ಸವವು ಮಸ್ತಾನ್ ಸಾಬ್ ದರ್ಗಾಕ್ಕೆ ಕೂಡಾ ತೆರಳುವುದರಿಂದ ಹಿಂದೂ ಮುಸ್ಲಿಂ ಎಂಬ ತಾರತಮ್ಯವಿಲ್ಲದೆ ಈ ಉತ್ಸವದಲ್ಲಿ ಎಲ್ಲರೂ ಭಾಗಿಯಾಗುತ್ತಾರೆ. ಏ 23ಕ್ಕೆ ಕರಗ ಉತ್ಸವಕ್ಕೆ ತೆರೆ ಬೀಳಲಿದೆ.

ಬೆಂಗಳೂರು ಕರಗ ಉತ್ಸವಕ್ಕೆ ತೆರೆ
ಬೆಂಗಳೂರು ಕರಗ ಉತ್ಸವಕ್ಕೆ ತೆರೆ (PC: ManjulaShobha @ManjuShobha1981, Bhavana @N_Bhavana_)

ಬೆಂಗಳೂರು ಕರಗ ಉತ್ಸವಕ್ಕೆ ಇಂದು ತೆರೆ ಬೀಳಲಿದೆ. ಏಪ್ರಿಲ್‌ 15 ರಿಂದ ಆರಂಭವಾದ ಕರಗ ಉತ್ಸವ ಸುಮಾರು 1 ವಾರದ ಕಾಲ ಅದ್ಧೂರಿಯಾಗಿ ಜರುಗಿದೆ. ಉತ್ಸವ ನೋಡಲು ದೂರದೂರುಗಳಿಗೆ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಕರಗ ಉತ್ಸವದ ಅಂಗವಾಗಿ ಬೆಂಗಳೂರಿನ ವಿವಿಧೆಡೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸುಮಾರು 8 ಶತಮಾನಗಳಷ್ಟು ಇತಿಹಾಸವನ್ನ ಹೊಂದಿರುವ ಕರಗವನ್ನು ಆದಿ ಶಕ್ತಿ ಸ್ವರೂಪಿಣಿ ದ್ರೌಪದಿ ಆರಾಧನೆಗಾಗಿ ಮೀಸಲಿಡಲಾಗಿದೆ. ಪ್ರತಿ ವರ್ಷ ಚೈತ್ರ ಶುದ್ಧ ಸಪ್ತಮಿಯ ದಿನದಿಂದ ಉತ್ಸವ ಆರಂಭವಾಗಲಿದ್ದು ಧರ್ಮರಾಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ನೆರವೇರುತ್ತದೆ. ಕರಗ ಉತ್ಸವದಲ್ಲಿ ಹಿಂದೂ ಮುಸ್ಲಿಂ ಎಂಬ ತಾರತಮ್ಯ ಇಲ್ಲದೆ ಎಲ್ಲರೂ ಒಟ್ಟಾಗಿ ಸೇರಿ ಆಚರಿಸುತ್ತಾರೆ. ಕರಗ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ.

ದ್ರೌಪದಿಯ ಆರಾಧನೆಗೆ ಮೀಸಲಾದ ಕರಗ

ಒಮ್ಮೆ ದ್ರುಪದರಾಜನು ಪುತ್ರಕಾಮೇಷ್ಠಿ ಯಾಗವನ್ನು ಆಚರಿಸುತ್ತಾನೆ. ಇದರ ಫಲವಾಗಿ ದ್ರೌಪದಿಯು ಜನಿಸುತ್ತಾಳೆ. ಬೆಳೆದು ದೊಡ್ಡವಾದ ನಂತರ ಸ್ವಯಂವರದಲ್ಲಿ ಅರ್ಜುನನನ್ನು ವರಿಸುತ್ತಾಳೆ. ಆದರೆ ಕುಂತಿಯ ತಪ್ಪು ಗ್ರಹಿಕೆ ಮತ್ತು ಯೋಚಿಸದೇ ಆಡುವ ಮಾತಿನಿಂದ ಐವರೂ ಪಾಂಡವರನ್ನು ವರಿಸಬೇಕಾಗುತ್ತದೆ. ಈ ದ್ರೌಪದಿಯೇ ವಹ್ನಿಕುಲ ಕ್ಷತ್ರಿಯರ ಕುಲದೇವತೆ. ಕರಗ ಉತ್ಸವದಲ್ಲಿ ದ್ರೌಪದಿಯನ್ನು ಆರಾಧಿಸಲಾಗುತ್ತದೆ. ಕರಗ ಹೊರುವುದನ್ನು ಜಾನಪದ ಕಲೆ ಎಂದು ಕೆಲವರು ಹೇಳಿದರೂ, ಕರಗ ಹೊರುವವರ ವಿಧಿ ವಿಧಾನಗಳು ಮೈನವಿರೇಳಿಸುತ್ತವೆ. ದೈವಾನುಗ್ರಹ ಇಲ್ಲದೇ ಹೋದಲ್ಲಿ ಇದು ಸಾಧ್ಯವಾಗುವುದೇ ಇಲ್ಲ. ಬೆಂಗಳೂರಿನ ಕರಗಕ್ಕೆ ತನ್ನದೇ ಆದ ವಿಶೇಷತೆ ಇದೆ. ಉತ್ಸವವವು ತಿಗಳರ ಪೇಟೆ, ಬಳೇಪೇಟೆ, ಚಿಕ್ಕಪೇಟೆ, ಮೆಜೆಸ್ಟಿಕ್ ನಲ್ಲಿರುವ ಅಣ್ಣಮ್ಮ ಮುಂತಾದ ದೇವಸ್ಥಾನಗಳಿಗೆ ಬೇಟಿ ನೀಡುತ್ತದೆ. ಭಾವೈಕ್ಯದ ಸಂಕೇತವಾಗಿ ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳಿ ನಂತರ ನಗರದ ಪ್ರದಕ್ಷಿಣೆಗೆ ತೆರಳುತ್ತಾರೆ. ಈ ಕರಗದ ಬಗ್ಗೆ ಮಹಾಭಾರತಕ್ಕೆ ಸಂಬಂಧಿಸಿದ ಕಥೆಯೊಂದಿದೆ.

ಶ್ರೀಕೃಷ್ಣನ ಸಹಾಯದಿಂದ ಪಾಂಡವರು ಕುರುಕ್ಷೇತ್ರ ಯುದ್ದದಲ್ಲಿ ಜಯ ಗಳಿಸುತ್ತಾರೆ. ಎಲ್ಲವೂ ಮುಗಿದ ನಂತರ ಪಾಂಡವರು ಸ್ವರ್ಗಾರೋಹಣ ಮಾಡುವ ಸಂದರ್ಭ ಬರುತ್ತದೆ. ಆದರೆ ದ್ರೌಪದಿಯು ಮೂರ್ಛಿತಳಾಗಿ ಬಿದ್ದಿರುತ್ತಾಳೆ. ಇದನ್ನು ಗಮನಿಸದೇ ಪಾಂಡವರು ಸ್ವರ್ಗದ ಕಡೆ ನಡೆಯುತ್ತಾರೆ. ದ್ರೌಪದಿ ಎಚ್ಚರವಾದಾಗ ಆಕೆಯ ಮುಂದೆ ತಿಮಿರಾಸುರ ಎಂಬ ರಾಕ್ಷಸನೊಬ್ಬ ನಿಂತಿರುತ್ತಾನೆ. ಆ ಕ್ಷಣದಲ್ಲಿ ದ್ರೌಪದಿಯು ಆದಿಶಕ್ತಿಯ ರೂಪವನ್ನು ತೋರುತ್ತಾಳೆ. ತಿಮರಾಸುರನನ್ನು ಸದೆ ಬಡಿಯಲು ತಲೆಯಿಂದ ಯಜಮಾನ, ಹಣೆಯಿಂದ ಗಣಾಚಾರಿ, ಕಿವಿಗಳಿಂದ ಗೌಡರು, ಬಾಯಿಯಿಂದ ಗಂಟೆ ಪೂಜಾರಿ, ಹೆಗಲಿನಿಂದ ವೀರಕುಮಾರರನ್ನು ಸೃಷ್ಟಿಸುತ್ತಾಳೆ. ಎಲ್ಲರೊಂದಿಗೆ ನಿಂತು ತಿಮರಾಸುರನನ್ನು ಎದುರಿಸಿ ಗೆಲುವು ಸಾಧಿಸುತ್ತಾಳೆ. ನಂತರ ದ್ರೌಪದಿಯು ಕೈಲಾಸಕ್ಕೆ ತೆರಳುತ್ತಾಳೆ. ತಮ್ಮನ್ನು ಸೃಷ್ಟಿಸಿದ ತಾಯಿ ದ್ರೌಪದಿಯು ಕೈಲಾಸಕ್ಕೆ ತೆರಳದಂತೆ ತಡೆಯಲು ವೀರಕುಮಾರರು ತಮ್ಮಲ್ಲಿರುವ ಕತ್ತಿಯಿಂದ ತಮ್ಮ ಮೈಯನ್ನು ತಿವಿದುಕೊಂಡು ತಮ್ಮನ್ನು ಬಿಟ್ಟು ಹೋಗದಂತೆ ಮನವಿ ಮಾಡುತ್ತಾರೆ. ಇಂದಿಗೂ ವೀರ ಕುಮಾರರು ಅಲಗು ಸೇವೆ ಎಂಬ ಹೆಸರಿನಿಂದ ಇದನ್ನು ಆಚರಿಸುತ್ತಾರೆ.

ಕರಗ ಉತ್ಸವದಲ್ಲಿ ಪ್ರಮುಖ ಪಾತ್ರ ವಹಿಸುವ ವೀರ ಕುಮಾರರು

ದ್ರೌಪದಿಯು ವೀರಕುಮಾರರನ್ನು ಕುರಿತು, ಇಂದಿನಿಂದ ಪ್ರತಿ ವರ್ಷವೂ ಭೂಲೋಕಕ್ಕೆ ಆಗಮಿಸಿ ಇಲ್ಲಿಯೇ ನೆಲೆಸುವೆನೆಂದು ಹೇಳುತ್ತಾಳೆ. ಅಂದಿನಿಂದ ಪ್ರತಿ ವರ್ಷದ ಚೈತ್ರಮಾಸದ ಹುಣ್ಣಿಮೆಯಂದು ಬೆಂಗಳೂರಿನಲ್ಲಿ ಕರಗ ಆಚರಣೆ ನಡೆಯುತ್ತದೆ. ಹಲವು ದಿನಗಳು ಇದಕ್ಕೆ ಸಂಬಂಧಿಸಿದ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತವೆ. ಕರಗ ಹೊತ್ತವರು ತಮ್ಮ ಸಂತೋಷದಿಂದ ನೃತ್ಯ ಮಾಡುತ್ತಾ ಬರುವುದನ್ನು ನೋಡಲು ಎರಡು ಕಣ್ಣು ಸಾಲದು. ಇದರಲ್ಲಿ ವೀರಕುಮಾರರ ಪಾತ್ರ ಅತಿ ಮುಖ್ಯವಾಗುತ್ತದೆ. ಕಗರದ ಜೊತೆಯಲ್ಲಿಯೇ ನಡ್ಲೆಯುವ ಅವರು ಡೀ ಡಿಕ್ ಎಂಬ ಸ್ವರವನ್ನು ಉಚ್ಚರಿಸುತ್ತಾ ಅಲಗು ಸೇವೆ ಮಾಡುತ್ತಾ ಮುನ್ನಡೆಯುತ್ತಾರೆ. ಬೆಂಗಳೂರಿನಲ್ಲಿ ಕರಗದ ದೇವಾಲಯವು ಕೃಷ್ಣರಾಜೇಂದ್ರ ಮಾರುಕಟ್ಟೆ ಮತ್ತು ಟೌನ್ ಹಾಲ್ ನಡುವೆ ಇದೆ. ಈ ದೇವಾಲಯ ನಿರ್ಮಿಸಲು ಮುಮ್ಮಡಿ ಕೃಷ್ಣರಾಜ ಒಡೆಯರು ಸಹಾಯ ಮಾಡಿದ್ದಾರೆ. ಇದನ್ನು ಧರ್ಮರಾಯನ ದೇವಸ್ಥಾನ ಎಂದು ಕರೆಯುತ್ತಾರೆ.

ಧರ್ಮರಾಯನ ದೇವಾಲಯದಲ್ಲಿ ಯುಗಾದಿ ಹಬ್ಬದಿಂದಲೇ ಕರಗದ ತಯಾರಿ ಆರಂಭವಾಗುತ್ತದೆ. ಹಸಿ ಕರಗ ಸಹ ಮುಖ್ಯ ಆಕರ್ಷಣೆ ಆಗಲಿದೆ. ಈ ದೇವಾಲಯದಲ್ಲಿ ಶ್ರೀಕೃಷ್ಣ, ಅರ್ಜುನ ಮುಂತಾದವರ ವಿಗ್ರಹಗಳಿದ್ದು, ಅವುಗಳಲ್ಲಿ ಜೀವಂತಿಕೆ ಎದ್ದು ಕಾಣುತ್ತದೆ. ಇಲ್ಲಿ ನಡೆಯುವ ಕರಗದ ಒಂದು ತಿಂಗಳ ನಂತರ ದೇವನಹಳ್ಳಿಯಲ್ಲಿ ದ್ರೌಪದಿಯ ಕರಗ ಆರಂಭವಾಗುತ್ತದೆ. ಈ ಎರಡು ಕಾರ್ಯಕ್ರಮಗಳ ನಡುವೆ ವಿಶೇಷವಾದ ಸಂಬಂಧವೂ ಇದೆ.

ಈ ಕರಗವು ದೇವಾಲಯದ ಗೋಪುರವನ್ನು ಹೋಲುವುದು ವಿಶೇಷವಾಗಿದೆ. ದೇವಾಲಯದ ಗೋಪುರದಲ್ಲಿ ವಿಶೇಷವಾದ ಶಕ್ತಿ ಇರುತ್ತದೆ. ಇದನ್ನು ಆಧರಿಸಿ ಆಧುನಿಕ ಕಾಲದಲ್ಲಿ ಪಿರಮಿಡ್ ಸಂಸ್ಕೃತಿ ಆಚರಣೆಗೆ ಬಂದಿದೆ. ಈ ಪಿರಮಿಡ್‌ ಆಕೃತಿಯನ್ನು ಮನೆಗೆ ತಂದು ವಾಸ್ತು ಪ್ರಕಾರ ಇರಿಸಿಕೊಂಡಲ್ಲಿ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಉತ್ತಮ ಆರೋಗ್ಯ ದೊರೆಯುತ್ತದೆ, ಮನೆಯಲ್ಲಿ ಸುಖ ಸಂತೋಷ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).