Bengaluru Crime: ಬೆಂಗಳೂರು ಕಮ್ಮನಹಳ್ಳಿಯ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ 35 ವರ್ಷದ ರೌಡಿಯೊಬ್ಬನ ಭೀಕರ ಹತ್ಯೆ
ಬೆಂಗಳೂರಿನ ಸರ್ವೀಸ್ ಅಪಾರ್ಟ್ ಮೆಂಟ್ ವೊಂದರಲ್ಲಿ ರೌಡಿಯೊಬ್ಬನ ಭೀಕರ ಹತ್ಯೆಯಾಗಿದೆ. ಪರಿಚಿತರೇ ಈ ಕೃತ್ಯವೆಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ, ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಅಪ್ಪಾಜಿಗೌಡ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. (ವರದಿ - ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಸರ್ವೀಸ್ ಅಪಾರ್ಟ್‌ಮೆಂಟ್ ಒಂದರಲ್ಲಿ ರೌಡಿಯೊಬ್ಬನನ್ನು ಹತ್ಯೆ ಮಾಡಲಾಗಿದೆ. ಪರಿಚಯ ಇರುವವರೇ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತ ರೌಡಿಯನ್ನು ದಿನೇಶ್ ಎಂದು ಗುರುತಿಸಲಾಗಿದೆ. ದಿನೇಶ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೌಡಿ ದಿನೇಶ್ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಬುಧವಾರ ಕಮ್ಮನಹಳ್ಳಿಯ ಸರ್ವೀಸ್ ಅಪಾರ್ಟ್‌ಮೆಂಟ್‌ಗೆ ಆಗಮಿಸಿದ್ದ. ಈತನನ್ನು ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳ ತಂಡ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ದಿನೇಶ್ ಅಲ್ಲೇ ಅಪಾರ್ಟ್‌ಮೆಂಟ್‌ನಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಸೋಫಾ ಮೇಲೆ ಕುಳಿತಿದ್ದಾಗ ದಿನೇಶ್‌ನನ್ನು ಹತ್ಯೆ ಮಾಡಲಾಗಿದೆ.
ದಿನೇಶ್ ಮತ್ತು ಸಹಚರರು ಈ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಕೊಠಡಿಯನ್ನು ಒಂದು ದಿನದ ಮಟ್ಟಿಗೆ ಬಾಡಿಗೆ ಪಡೆಯಲು ಆಗಮಿಸಿದ್ದರು. ಸ್ವಾಗತ ಕಚೇರಿಯಲ್ಲಿ ದಿನೇಶ್ ಸೋಫಾ ಮೇಲೆ ಕುಳಿತಿದ್ದ. ಈತನ ಇಬ್ಬರು ಸಹಚರರು ಹಣ ಪಾವತಿಸಲು ಕೌಂಟರ್ ಬಳಿ ತೆರಳಿದ್ದರು. ಇವರ ಬಳಿ ನಗದು ಹಣ ಇರಲಿಲ್ಲ. ಅಪಾರ್ಟ್ ಮೆಂಟ್ ಸಿಬ್ಬಂದಿ ಆನ್ ಲೈನ್ ಪಾವತಿಗೆ ಒಪ್ಪದೆ ನಗದನ್ನು ಮಾತ್ರ ಪಡೆಯುವುದಾಗಿ ತಿಳಿಸಿದ್ದರು. ಆಗ ಈತನ ಸಹಚರರು ಎಟಿಎಂಗೆ ಹಣ ತರಲು ಹೋಗಿದ್ದರು. ಇದೇ ಸಂದರ್ಭಕ್ಕೆ ಹೊಂಚು ಹಾಕಿ ಕಾಯುತ್ತಿದ್ದ ಏಳು ಮಂದಿ ದುಷ್ಕರ್ಮಿಗಳು ಸರ್ವೀಸ್ ಅಪಾರ್ಟ್‌ಮೆಂಟ್ ಒಳಗೆ ನುಗ್ಗಿ ದಿನೇಶನನ್ನು ಕೊಚ್ಚಿ ಕೊಲೆ ಮಾಡಿ ತಪ್ಪಿಸಿಕೊಂಡು ಹೋಗಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಪೂರ್ವ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತ, ಡಿಸಿಪಿ ಕುಲದೀಪ್ ಕುಮಾರ್ ಜೈನ್ ಮತ್ತು ಬಾಣಸವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಅಪ್ಪಾಜಿಗೌಡ ವಿರುದ್ಧದ ಪ್ರಕರಣ ರದ್ದುಗೊಳಿಸಲು ಒಪ್ಪದ ಹೈಕೋರ್ಟ್
ಕಾಲೇಜು ಅಭಿವೃದ್ಧಿಗೆ ಎಂದು ವಿದ್ಯಾರ್ಥಿನಿಯೊಬ್ಬರಿಂದ ಹಣ ಸಂಗ್ರಹಿಸಿ ಸ್ವಂತಕ್ಕೆ ಬಳಸಿಕೊಂಡ ಆರೋಪ ಎದುರಿಸುತ್ತಿರುವ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಾ.ಅಪ್ಪಾಜಿಗೌಡ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣವನ್ನು ರದ್ದುಪಡಿಸುವಂತೆ ಅಪ್ಪಾಜಿಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕ ಸದಸ್ಯ ಪೀಠವು, "ಅರ್ಜಿದಾರ ಅಪ್ಪಾಜಿಗೌಡ ಅವರ ಮೇಲಿನ ಆರೋಪಗಳು ಸುಳ್ಳು ಎಂದು ವಾದಿಸಲು ಅಗತ್ಯ ಸಾಕ್ಷ್ಯಗಳಿಲ್ಲ. ಪೊಲೀಸರು ಈಗಾಗಲೇ ತನಿಖೆ ನಡೆಸಿದ್ದಾರೆ. ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದ್ದಾರೆ. ಆದ್ದರಿಂದ ಇವರ ಮೇಲೆ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.
ಒಕ್ಕಲಿಗರ ಸಂಘದ ಮೆಡಿಕಲ್ ಕಾಲೇಜಿನಲ್ಲಿ ಸಾಕ್ಷಿ ಎಂಬ ವಿದ್ಯಾರ್ಥಿನಿ ಎಂಬಿಬಿಎಸ್ ಪದವಿ ವ್ಯಾಸಂಗ ಮಾಡುವುದಕ್ಕೆ ಸೇರ್ಪಡೆಯಾಗಿದ್ದರು. ಆ ಸಂದರ್ಭದಲ್ಲಿ ಅಧ್ಯಕ್ಷರಾಗಿದ್ದ ಅಪ್ಪಾಜಿಗೌಡ ಅವರು ಕಾಲೇಜು ಅಭಿವೃದ್ಧಿಗೆ ಎಂದು 50 ಲಕ್ಷ ರೂಪಾಯಿಯನ್ನು ಇವರಿಂದ ಪಡೆದಿದ್ದರು. ಈ ಹಣವನ್ನು ಅವರು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರು ದಾಖಲಾಗಿತ್ತು. ಅಪ್ಪಾಜಿ ಗೌಡ ವಿರುದ್ಧ 2021ರಲ್ಲಿ ಒಕ್ಕಲಿಗರ ಸಂಘದ ಅಧಿಕಾರಿಗಳು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
(ವರದಿ - ಎಚ್.ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ