ಕನ್ನಡ ಸುದ್ದಿ  /  ಕರ್ನಾಟಕ  /  ಕ್ರಿಸ್‌ಮಸ್ ಆಚರಣೆ, ಪ್ರವೇಶ ಶುಲ್ಕ ವಿರೋಧಿಸಿ ಬೆಂಗಳೂರಿನ ಮಾಲ್‌ವೊಂದರ ಬಳಿ ಗಲಾಟೆ; ಮತ್ತೆ ಪೊಲೀಸರ ಅತಿಥಿಯಾದ ಪುನೀತ್ ಕೆರೆಹಳ್ಳಿ

ಕ್ರಿಸ್‌ಮಸ್ ಆಚರಣೆ, ಪ್ರವೇಶ ಶುಲ್ಕ ವಿರೋಧಿಸಿ ಬೆಂಗಳೂರಿನ ಮಾಲ್‌ವೊಂದರ ಬಳಿ ಗಲಾಟೆ; ಮತ್ತೆ ಪೊಲೀಸರ ಅತಿಥಿಯಾದ ಪುನೀತ್ ಕೆರೆಹಳ್ಳಿ

ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಮಾಲ್‌ ಆಫ್‌ ಏಷ್ಯಾದಲ್ಲಿ ಕ್ರಿಸ್‌ಮಸ್‌ ಟ್ರೀ ಇರಿಸಿರುವುದು ಹಾಗೂ ಪ್ರವೇಶ ಶುಲ್ಕಕ್ಕೆ ಸಂಬಂಧಿಸಿ ಗಲಾಟೆ ನಡೆಸಿರುವ ಹಿಂದೂ ಕಾರ್ಯಕರ್ತ ಪುನೀತ್‌ ಕೆರೆಹಳ್ಳಿಯನ್ನು ಬಂಧಿಸಲಾಗಿದೆ.

ಮಾಲ್‌ ಆಫ್‌ ಏಷ್ಯಾ (ಎಡಚಿತ್ರ) ಪುನೀತ್‌ ಕೆರೆಹಳ್ಳಿ (ಬಲಚಿತ್ರ)
ಮಾಲ್‌ ಆಫ್‌ ಏಷ್ಯಾ (ಎಡಚಿತ್ರ) ಪುನೀತ್‌ ಕೆರೆಹಳ್ಳಿ (ಬಲಚಿತ್ರ)

ಬೆಂಗಳೂರು: ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ಹೊಸದಾಗಿ ಆರಂಭಗೊಂಡಿರುವ ಮಾಲ್‌ವೊಂದಕ್ಕೆ ತೆರಳಿ ಗಲಾಟೆ ಮಾಡಿದ ಕಾರಣಕ್ಕೆ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ಪ್ರಕರಣ ದಾಖಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಬಳ್ಳಾರಿ ರಸ್ತೆಯ ಬ್ಯಾಟರಾಯನಪುರದಲ್ಲಿರುವ ಫೀನಿಕ್ಸ್ ಮಾಲ್ ಆಫ್ ಏಷ್ಯಾಗೆ ತೆರಳಿ

ಕ್ರಿಸ್‌ಮಸ್ ಟ್ರೀ ಇರಿಸಿರುವುದರ ವಿರುದ್ಧ ಹಾಗೂ ದುಬಾರಿ ಪ್ರವೇಶ ಶುಲ್ಕದ ವಿಚಾರವಾಗಿ ಹಿಂದೂ ಕಾರ್ಯಕರ್ತ, ರಾಷ್ಟ್ರ ರಕ್ಷಣಾ ಪಡೆಯ ಅಧ್ಯಕ್ಷ ಪುನೀತ್ ಕೆರೆಹಳ್ಳಿ ವಾದ ವಿವಾದ ನಡೆಸಿದ್ದಾರೆ.

ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಮಾಲ್‌ನಲ್ಲಿ ವಿಶೇಷ ಅಲಂಕಾರ ಮಾಡಲಾಗಿದ್ದು, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿದ್ದು, ಅಂದು ಮಾಲ್‌ಗೆ ವಿಶೇಷ ಅಲಂಕಾರ ಮಾಡಬೇಕು. ಮಾಲ್ ಮುಂಭಾಗದಲ್ಲಿ ರಾಮ ಮಂದಿರದ ಪ್ರತಿಕೃತಿಯನ್ನು ಸ್ಥಾಪಿಸಬೇಕು. ಇಲ್ಲವಾದಲ್ಲಿ ಸುಮ್ಮನೇ ಬಿಡುವುದಿಲ್ಲ ಎಂದು ಪುನೀತ್ ಮತ್ತು ಆತನ ಸಂಗಡಿಗರು ಬೆದರಿಕೆ ಒಡ್ಡಿದ್ದಾರೆ. ಜೊತೆಗೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ.

ಪ್ರವೇಶ ಶುಲ್ಕಕ್ಕೆ ವಿರೋಧ

ಮಾಲ್‌ ಪ್ರವೇಶಕ್ಕೆ 200 ರೂ. ಶುಲ್ಕ ನಿಗದಿಪಡಿಸಲಾಗಿದೆ. ಇದರ ವಿರುದ್ಧವೂ ಪುನೀತ್‌ ಹಾಗೂ ಸಂಗಡಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಮಾಲ್‌ ನಿರ್ಮಿಸಲಾಗಿದೆ. ಜನರಿಂದ ಅಕ್ರಮವಾಗಿ ರೂ. 200 ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದು ಅಕ್ರಮ ಮತ್ತು ಕಾನೂನು ಬಾಹಿರ ಎಂದು ಪುನೀತ್‌ ಆಕ್ರೋಶ್ ಹೊರ ಹಾಕಿದ್ದರು.

ಇವರಿಗೆ ಉತ್ತರಿಸಲು ಆಡಳಿತ ಮಂಡಳಿಯ ಯಾರೊಬ್ಬರೂ ಬಾರದೆ ಇದ್ದಾಗ ಪುನೀತ್ ಮತ್ತು ಸಂಗಡಿಗರು ಘೋಷಣೆ ಕೂಗಲು ಆರಂಭಿಸಿದ್ದಾರೆ. ಪ್ರವೇಶ ದ್ವಾರದಲ್ಲಿದ್ದ ಭದ್ರತಾ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಸಿದ್ದಾರೆ. ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು ಎಂದು ತಿಳಿದು ಬಂದಿದೆ.

ಪರಿಸ್ಥಿತಿ ಕೈ ಮೀರುವ ಮುನ್ನ ಸ್ಥಳಕ್ಕೆ ಆಗಮಿಸಿದ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿಗಳು ಪುನೀತ್ ಹಾಗೂ ಇತರರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.

ಪುನೀತ್ ಕೆರೆಹಳ್ಳಿ ಹಾಗೂ ಇತರ ಐವರ ವಿರುದ್ಧ ಕೊಡಿಗೇಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಡಿ. 23ರಂದು ಮಧ್ಯಾಹ್ನ ನಡೆದಿರುವ ಈ ಗಲಾಟೆ ಸಂಬಂಧ ಏಷ್ಯಾ ಮಾಲ್‌ ಭದ್ರತಾ ವಿಭಾಗದ ವ್ಯವಸ್ಥಾಪಕ ಸ್ಟೀಫನ್ ವಿಕ್ಟರ್ ದೂರು ನೀಡಿದ್ದಾರೆ. ಪುನೀತ್ ಕೆರೆಹಳ್ಳಿ ಹಾಗೂ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪುನೀತ್ ಕೆರೆಹಳ್ಳಿ ಹಾಗೂ ಇತರರು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಬಂದು, ಜೀವ ಬೆದರಿಕೆಯೊಡ್ಡಿದ್ದಾರೆ. ಸಾರ್ವಜನಿಕರನ್ನು ಧಾರ್ಮಿಕವಾಗಿ ಪ್ರಚೋದಿಸಿದ್ದಾರೆ ಮತ್ತು ಮಾಲ್ ಪ್ರವೇಶಿಸುತ್ತಿದ್ದ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದಾರೆ ಎಂದು ಸ್ಟೀಫನ್ ವಿಕ್ಟರ್ ದೂರಿನಲ್ಲಿ ತಿಳಿಸಿದ್ದಾರೆ.

ಯಾರು ಈ ಪುನೀತ್ ಕೆರೆಹಳ್ಳಿ?

ಕಳೆದ ಮಾರ್ಚ್ 31ರಂದು ಮಂಡ್ಯದ ಕಡೆಯಿಂದ ಬರುತ್ತಿದ್ದ ಜಾನುವಾರು ಸಾಗಣೆ ವಾಹನವೊಂದನ್ನು ಸಾತನೂರು ಪೊಲೀಸ್‌ ಠಾಣೆ ಸಮೀಪ ಅಡ್ಡಗಟ್ಟಿದ್ದ ಪುನೀತ್‌ ಕೆರೆಹಳ್ಳಿ ಹಾಗೂ ಆತನ ಸಹಚರರು ವಾಹನದಲ್ಲಿದ್ದ ಇದ್ರೀಶ್ ಪಾಷಾ ಮೇಲೆ ಹಲ್ಲೆ ನಡೆಸಿದ್ದರು. ಏಪ್ರಿಲ್ 1ರಂದು ಬೆಳಗ್ಗೆ ಘಟನಾ ಸ್ಥಳದಿಂದ ಅಂದರೆ ಪೊಲೀಸ್‌ ಠಾಣೆಯಿಂದ 100 ಮೀಟರ್‌ ದೂರದಲ್ಲಿ ಶವವಾಗಿ ಪತ್ತೆಯಾಗಿದ್ದರು.

ಪುನೀತ್‌ ಮತ್ತು ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ಪಾಷಾ ಅವರ ಸಹೋದರ ಯೂನುಸ್‌ ಪಾಷಾ ದೂರು ನೀಡಿದ್ದರು. ದೂರು ದಾಖಲಾದ ನಂತರ ಪುನೀತ್ ಕೆರೆಹಳ್ಳಿ ಮತ್ತು ಉಳಿದ ಆರೋಪಿಗಳು ಪರಾರಿಯಾಗಿದ್ದರು. ಏಪ್ರಿಲ್ 5ರಂದು ಆರೋಪಿಗಳನ್ನು ರಾಜಸ್ಥಾನದ ಬನ್ಸವಾರಾ ಬಳಿ ರಾಮನಗರ ಪೊಲೀಸರು ಬಂಧಿಸಿದ್ದರು.

ಆಗಸ್ಟ್‌ನಲ್ಲಿ ಈತನ ವಿರುದ್ಧ ಗೂಂಡಾ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಸಾಕ್ಷ್ಯಗಳ ಕೊರತೆಯಿಂದ ಪ್ರಕರಣ ರದ್ದಾಗಿತ್ತು.

ಪುನೀತ್ ವಿರುದ್ದ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಾಸನ ಜಿಲ್ಲೆಯ 32 ವರ್ಷದ ಪುನೀತ್ ಕೆರೆಹಳ್ಳಿ ಬೆಂಗಳೂರು ನಿವಾಸಿಯಾಗಿದ್ದು, ಹಿಂದೂ ಕಾರ್ಯಕರ್ತ ಎಂದು ಗುರುತಿಸಿ ಕೊಂಡಿದ್ದಾನೆ.

IPL_Entry_Point