ಕನ್ನಡ ಸುದ್ದಿ  /  Karnataka  /  Congress Senior Leader P Chidambaram Questioned Bjp On Bajrang Dal Issue Karnataka Election News In Kannada Rst

Karnataka Election 2023: ಬಜರಂಗ ದಳವನ್ನು ಬಜರಂಗ ಬಲಿ ಜೊತೆ ಸಮೀಕರಣ ಮಾಡಿದ್ದು ಹೇಗೆ? ಬಿಜೆಪಿಯನ್ನು ಪ್ರಶ್ನಿಸಿದ ಪಿ ಚಿದಂಬರಂ

ಬಜರಂಗ ದಳವನ್ನು ಬಜರಂಗ ಬಲಿ ಜೊತೆ ಸಮೀಕರಣ ಮಾಡಿದ್ದು ಹೇಗೆ ಎಂದು ಪ್ರಶ್ನಿಸಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ. ಚಿದಂಬರಂ ʼನಮ್ಮ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ನಿಷೇಧ ಮಾಡುತ್ತೇವೆ ಎಂದು ಹೇಳಿಲ್ಲ. ದ್ವೇಷ ಪ್ರಚೋದನೆಯಲ್ಲಿ ತೊಡಗಿರುವ ಸಂಘಟನೆಗಳಿಗೆ ಕಾನೂನಿನ ಅಡಿಯಲ್ಲಿ ನಿರ್ಣಾಯಕ ಕ್ರಮ' ಕೈಗೊಳ್ಳಲಾಗುವುದು ಎಂದಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಡಿಕೆ ಶಿವಕುಮಾರ್‌ ಜೊತೆ ಪಿ ಚಿದಂಬರಂ (ಸಾಂದರ್ಭಿಕ ಚಿತ್ರ)
ಡಿಕೆ ಶಿವಕುಮಾರ್‌ ಜೊತೆ ಪಿ ಚಿದಂಬರಂ (ಸಾಂದರ್ಭಿಕ ಚಿತ್ರ) (PTI)

ನವದೆಹಲಿ: ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಚುನಾವಣಾ ಕಾವು ಜೋರಾಗಿಯೇ ಇದೆ. ಅಬ್ಬರದ ಪ್ರಚಾರ ಕಾರ್ಯದ ನಡುವೆ ಪ್ರತಿಪಕ್ಷಗಳ ವಾಗ್ದಾಳಿ ಭರವು ಹೆಚ್ಚಿದೆ.

ಈ ನಡುವೆ ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿನ ಬಜರಂಗ ದಳ ನಿಷೇಧ ಪ್ರಸ್ತಾಪನೆಯ ಗದ್ದಲವೂ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸದ್ದು ಮಾಡುತ್ತಿದೆ. ಈ ಬಗ್ಗೆ ಕಾಂಗ್ರೆಸ್‌ ನಾಯಕರು ಸ್ಪಷ್ಟನೆ ನೀಡುತ್ತಲೇ ಇದ್ದರು, ಬಿಜೆಪಿ ಈ ವಿಷಯವನ್ನು ಎಳೆಯುತ್ತಿದೆ.

ಬಜರಂಗ ದಳ ನಿಷೇಧಕ್ಕೆ ಸಂಬಂಧಿಸಿ ಪ್ರಣಾಳಿಕೆಯ ಬಗ್ಗೆ ಮಾತನಾಡಿದ ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ. ಚಿದಂಬರಂ ʼನಮ್ಮ ಪಕ್ಷದ ಕರ್ನಾಟಕ ಚುನಾವಣಾ ಪ್ರಣಾಳಿಕೆಯಲ್ಲಿ ಸಂಘಟನೆಯನ್ನು ನಿಷೇಧ ಮಾಡಲಾಗುವುದು ಎಂದು ಹೇಳಿಲ್ಲ. ಆದರೆ ದ್ವೇಷ ಪ್ರಚೋದನೆಯಲ್ಲಿ ತೊಡಗಿರುವ ಎಲ್ಲಾ ಸಂಘಟನೆಗಳಿಗೆ ಎಚ್ಚರಿಕೆಯಾಗಿ ಕಾನೂನಿನ ಅಡಿಯಲ್ಲಿ 'ನಿರ್ಣಾಯಕ ಕ್ರಮ' ಕೈಗೊಳ್ಳಲಾಗುವುದುʼ ಎಂದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಬಜರಂದ ದಳ ಬಜರಂದ ಬಲಿ ಸಮೀಕರಣವು ಮಾಂತ್ರಿಕ ರೂಪಾಂತರ

ಬಜರಂಗ ದಳ ನಿಷೇಧಕ್ಕೆ ಸಂಬಂಧಿಸಿ ಬಿಜೆಪಿಯ ಟೇಕೆಗಳ ಬಗ್ಗೆ ವಾಗ್ದಾಳಿ ನಡೆಸಿದ ಅವರು ಬಜರಂಗದಳವನ್ನು ಬಜರಂಗ ಬಲಿಯೊಂದಿಗೆ ಸಮೀಕರಿಸಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಅಲ್ಲದೆ, ʼಈ ಮಾಂತ್ರಿಕ ರೂಪಾಂತರವನ್ನು ಬಿಜೆಪಿ ಹೇಗೆ ವಿವರಿಸುತ್ತದೆʼ ಎಂದೂ ಕೇಳಿದ್ದಾರೆ.

ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ರಾಜ್ಯದ ಜನರು ಬುದ್ಧಿವಂತಿಕೆಯಿಂದ ಅಭ್ಯರ್ಥಿ ಹಾಗೂ ಪಕ್ಷವನ್ನು ಆಯ್ಕೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಚಿದಂಬರಂ, ʼಕರ್ನಾಟಕವು ಉದಾರ, ಪ್ರಜಾಪ್ರಭುತ್ವ, ಬಹುವಚನ, ಸಹಿಷ್ಣುತೆಯ ಮಾದರಿ ರಾಜ್ಯ. ಅಲ್ಲದೆ ಇದು ಪ್ರಗತಿಶೀಲ, ಬಹುಸಂಖ್ಯಾತ, ಅಸಹಿಷ್ಣು ಮತ್ತು ಪ್ರತಿಗಾಮಿ ಸ್ಥಿತಿ ಹೊಂದಿರುವ ರಾಜ್ಯ ಎಂದೂ ಕರೆದಿದ್ದಾರೆ.

ʼಪ್ರಜಾಪ್ರಭುತ್ವ ಮತ್ತು ಉಜ್ವಲ ಭವಿಷ್ಯಕ್ಕಾಗಿ ಕರ್ನಾಟಕದಲ್ಲಿ ಬಿಜೆಪಿ ಗೆಲುವವನ್ನು ತಡೆಯಬೇಕು, ಜೊತೆಗೆ ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿನ ಕಾಂಗ್ರೆಸ್‌ ಗೆಲುವು ಬೇರೆ ರಾಜ್ಯದಲ್ಲ ಗೆಲ್ಲಲ್ಲು ಮಾದರಿಯಾಗಬೇಕು ಎಂದಿದ್ದಾರೆ.

ಬಿಜೆಪಿಯ ಚುನಾವಣಾ ಪ್ರಸ್ತಾಪಗಳನ್ನು ಜನ ತಿರಸ್ಕರಿಸುತ್ತಾರೆ

ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಅನುಷ್ಠಾನದ ಬಗ್ಗೆ ಬಿಜೆಪಿ ಪಕ್ಷವು ಭರವಸೆ ನೀಡಿರುವ ಬಗ್ಗೆ ಉತ್ತರಿಸಿದ ಮಾಜಿ ಗೃಹ ಸಚಿವ ಚಿದಂಬರಂ, ಇವೆರಡೂ ಸಮಾಜವನ್ನು ವಿಭಜಿಸುವ ಮತ್ತು ಸಾಮಾಜಿಕ ಸಂಘರ್ಷವನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿರುವ ಸಮಸ್ಯೆಗಳಾಗಿವೆ ಎಂದಿದ್ದಾರೆ.

ʼಕೆಲವು ಉತ್ತರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಏನಾಯಿತು ಎಂಬುದರ ಅನುಭವ ನಮಗಿದೆ. ಕರ್ನಾಟಕದ ಜನರು ಪಾಠವನ್ನು ಗ್ರಹಿಸಿದ್ದಾರೆ ಮತ್ತು ಬಿಜೆಪಿಯ ಈ ಚುನಾವಣಾ ಪ್ರಸ್ತಾಪಗಳನ್ನು ಅಥವಾ ಭರವಸೆಗಳನ್ನು ತಿರಸ್ಕರಿಸುತ್ತಾರೆ ಎಂಬುದು ನನ್ನ ಅನಿಸಿಕೆ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ ಚಿದಂಬರಂ.

ಬಜರಂಗ ದಳವನ್ನು ನಿಷೇಧಿಸುತ್ತೇವೆ ಎಂದಿಲ್ಲ

ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಬಜರಂಗ ದಳ ನಿಷೇಧ ಪ್ರಸ್ತಾಪವು ಬಿಜೆಪಿಗೆ ಆಹಾರವಾಗಿದೆ, ಈ ಪ್ರಸ್ತಾಪದಿಂದ ಕಾಂಗ್ರೆಸ್‌ ಮತಗಳ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಚಿದಂಬರಂ ʼನಾವು ಬಜರಂಗದಳವನ್ನು ನಿಷೇಧಿಸುತ್ತೇವೆʼ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿಲ್ಲ ಎಂದಿದ್ದಾರೆ.

ʼದಯವಿಟ್ಟು ಎರಡು ವಾಕ್ಯಗಳನ್ನು ಮತ್ತೊಮ್ಮೆ ಓದಿ, ಎರಡು ಸಂಘಟನೆಗಳು ಅತಿರೇಕದ ಭಾಷೆಯನ್ನು ಬಳಸುವ ಮತ್ತು ತೀವ್ರವಾದ ಕ್ರಮಗಳಲ್ಲಿ ತೊಡಗಿರುವ ಬಗ್ಗೆ ಉಲ್ಲೇಖವಿದೆ. ದ್ವೇಷ ಪ್ರಚೋದನೆಯಲ್ಲಿ ತೊಡಗುವ ಎಲ್ಲಾ ಸಂಘಟನೆಗಳಿಗೆ ಕಾಂಗ್ರೆಸ್ ಎಚ್ಚರಿಕೆ ನೀಡಿದೆ. ಕಾಂಗ್ರೆಸ್ ಕಾನೂನು ಅಡಿಯಲ್ಲಿ 'ನಿರ್ಣಾಯಕ ಕ್ರಮ' ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದೆ. ಜೊತೆಗೆ, ಕಾನೂನಿನ ಅಡಿಯಲ್ಲಿ, ಸಂಘಟನೆಯನ್ನು ನಿಷೇಧಿಸುವುದು ನ್ಯಾಯಾಂಗ ಪ್ರಕ್ರಿಯೆಯಾಗಿದೆ. ಬಜರಂಗದಳವು ಹೇಗೆ ಬಜರಂಗಬಲಿ ಆಯಿತು ಎಂದು ನಾನು ಆಶ್ಚರ್ಯ ಪಡುತ್ತೇನೆ! ದಯವಿಟ್ಟು ಮಾಂತ್ರಿಕ ರೂಪಾಂತರವನ್ನು ವಿವರಿಸುವಿರಾ?ʼ ಎಂದು ಬಿಜೆಪಿಗೆ ಸವಾಲು ಎಸೆದಿದ್ದಾರೆ.

ಕರ್ನಾಟಕ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಜಾತಿ ಅಥವಾ ಧರ್ಮದ ಆಧಾರದ ಮೇಲೆ ಸಮುದಾಯಗಳ ನಡುವೆ ದ್ವೇಷವನ್ನು ಹರಡುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ದೃಢ ಮತ್ತು ನಿರ್ಣಾಯಕ ಕ್ರಮ ತೆಗೆದುಕೊಳ್ಳಲು ಬದ್ಧವಾಗಿದೆ ಎಂದು ಹೇಳಿದೆ.

"ಕಾನೂನು ಮತ್ತು ಸಂವಿಧಾನವು ಪವಿತ್ರವಾಗಿದೆ. ಬಜರಂಗದಳ, ಪಿಎಫ್‌ಐ ಅಥವಾ ಇತರ ಸಮುದಾಯಗಳ ನಡುವೆ ದ್ವೇಷ ಹರಡುವ ವ್ಯಕ್ತಿಗಳು ಮತ್ತು ಸಂಘಟನೆಗಳಿಂದ ಉಲ್ಲಂಘಿಸಲಾಗುವುದಿಲ್ಲ ಎಂದು ನಾವು ನಂಬುತ್ತೇವೆ. ಆ ಕಾರಣಕ್ಕೆ ಅಂತಹ ಯಾವುದೇ ಸಂಘಟನೆಗಳಿಗೆ ನಿಷೇಧ ಹೇರುವುದು ಸೇರಿದಂತೆ ಕಾನೂನಿನ ಪ್ರಕಾರ ನಿರ್ಣಾಯಕ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದೆವು, ಅವನ್ನು ಬೇರೆ ಅರ್ಥದಲ್ಲಿ ಪ್ರಚಾರ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್‌ನ ಸ್ಟಾರ್‌ ಪ್ರಚಾರಕರಾಗಿರುವ ಚಿದಂಬರಂ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ನಡುವೆ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆದಿದ್ದು, ಇದು ಕಾಂಗ್ರೆಸ್‌ಗೆ ತೊಂದರೆ ಉಂಟು ಮಾಡಬಹುದು ಎಂಬ ಮಾಧ್ಯಮ ವರದಿಗಳ ಬಗ್ಗೆ ಮಾತನಾಡಿದ ಅವರು ಡಿಕೆಶಿ ಹಾಗೂ ಸಿದ್ದರಾಮಯ್ಯ ಇಬ್ಬರೂ ಕಾಂಗ್ರೆಸ್‌ನ ಹಿರಿಯ ಮತ್ತು ಜವಾಬ್ದಾರಿಯುತ ನಾಯಕರು ಎಂದು ಹೇಳಿದರು.

ʼಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯಗಳನ್ನು ಬಿತ್ತಲು ಮಾಧ್ಯಮಗಳಿಗೆ ಕೆಲವು ಶಕ್ತಿಗಳು ಉತ್ತೇಜನ ನೀಡುತ್ತವೆʼ ಎಂದು ದೂರಿದ್ದಾರೆ.

224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ಮೇ 10 ರಂದು ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

IPL_Entry_Point