ಕನ್ನಡ ಸುದ್ದಿ  /  ಕರ್ನಾಟಕ  /  Dakshina Kannada Politics: ಯಾರನ್ನು ನಿಲ್ಲಿಸಿದರೂ ಗೆಲ್ಲಿಸ್ತೇವೆ ಎಂಬ ದಾರ್ಷ್ಟ್ಯ ಬೇಡ; ನಳಿನ್‌ ಕುಮಾರ್ ವಿರುದ್ಧ ಕಾರ್ಯಕರ್ತರ ಆಕ್ರೋಶ

Dakshina Kannada Politics: ಯಾರನ್ನು ನಿಲ್ಲಿಸಿದರೂ ಗೆಲ್ಲಿಸ್ತೇವೆ ಎಂಬ ದಾರ್ಷ್ಟ್ಯ ಬೇಡ; ನಳಿನ್‌ ಕುಮಾರ್ ವಿರುದ್ಧ ಕಾರ್ಯಕರ್ತರ ಆಕ್ರೋಶ

Dakshina Kannada Politics: ಹಿಂದುತ್ವ ಉಳೀಬೇಕಾ ಬೇಡವಾ? ಯಾರನ್ನು ನಿಲ್ಲಿಸಿದರೂ ಗೆಲ್ಲಿಸ್ತೇವೆ ಎಂಬ ಭಾವನೆ ಇದ್ದರೆ ಅದನ್ನು ಬಿಟ್ಟುಬಿಡಿ ಎಂದು ಬಿಜೆಪಿ ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪುತ್ತೂರು ಪಾಲಿಟಿಕ್ಸ್‌ನ ಒಂದು ಕಿರು ವಿಶ್ಲೇಷಣೆ ಇಲ್ಲಿದೆ.

ಪುತ್ತೂರಿನ ಹಾಲ್‌ ಒಂದರಲ್ಲಿ ಸೇರಿದ ಅರುಣ್‌ ಕುಮಾರ್‌ ಪುತ್ತಿಲ ಅವರನ್ನು ಬೆಂಬಲಿಸಿ ಸೇರಿದ್ದ ಕಾರ್ಯಕರ್ತರು
ಪುತ್ತೂರಿನ ಹಾಲ್‌ ಒಂದರಲ್ಲಿ ಸೇರಿದ ಅರುಣ್‌ ಕುಮಾರ್‌ ಪುತ್ತಿಲ ಅವರನ್ನು ಬೆಂಬಲಿಸಿ ಸೇರಿದ್ದ ಕಾರ್ಯಕರ್ತರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಸಲ 8 ಕ್ಷೇತ್ರಗಳ ಪೈಕಿ 7ರಲ್ಲಿ ಗೆದ್ದ ಬಿಜೆಪಿ, ಇದೇನಿದ್ದರೂ ತನ್ನ ಅಟ್ಟುಂಬೊಲ ಎಂಬ ಭಾವನೆಯನ್ನು ಬೆಳೆಸಿಕೊಂಡಿದೆ ಎಂದು ಬಿಜೆಪಿ ಕಾರ್ಯಕರ್ತರೇ ಹೇಳತೊಡಗಿದ್ದಾರೆ. 2047ರ ಟಾರ್ಗೆಟ್‌ ಇಟ್ಟುಕೊಂಡು ಪಿಎಫ್‌ಐ, ಎಸ್‌ಡಿಪಿಐನವರು ಅವರದ್ದೇ ಸಾಮ್ರಾಜ್ಯ ಕಟ್ಟಲು ಹೊರಟಿದ್ದಾರೆ. ಇಲ್ಲಿ ಹಿಂದುತ್ವ ಉಳೀಬೇಕಾ ಬೇಡವಾ ಎಂಬ ಪ್ರಶ್ನೆ ಕಾರ್ಯಕರ್ತರ ನಡುವೆ ಹರಿದಾಡಿದೆ.

ಟ್ರೆಂಡಿಂಗ್​ ಸುದ್ದಿ

ಬಿಜೆಪಿಯ ಮೊದಲ ಪಟ್ಟಿಯಲ್ಲಿ ಪುತ್ತೂರು ಕ್ಷೇತ್ರದ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಎಂದು ಘೋಷಣೆ ಆಯತು. ಕೂಡಲೇ ಪಕ್ಷದ ಕಾರ್ಯಕರ್ತರ ನಡುವೆ ಹೊಗೆಯಾಡುತ್ತಿದ್ದ ಆಕ್ರೋಶ ಮತ್ತೆ ಭುಗಿಲೆದ್ದಿದೆ. ಕಾರಣ ಅಭ್ಯರ್ಥಿ ಆಯ್ಕೆ ವಿಚಾರ. ಪುತ್ತೂರು ಕ್ಷೇತ್ರಕ್ಕೆ ಸಂಭಾವ್ಯ ಅಭ್ಯರ್ಥಿ ಎಂದು ಹರಿದಾಡುತ್ತಿದ್ದ ಹೆಸರುಗಳು ಇಷ್ಟು - ಹಿಂದು ಸಂಘಟನೆಗಳಲ್ಲಿ ಮುಂಚೂಣಿಯಲ್ಲಿದ್ದು ಕೆಲಸ ಮಾಡುತ್ತಿದ್ದ ಅರುಣ್‌ ಕುಮರ್‌ ಪುತ್ತಿಲ, ಸುಳ್ಯ ಕ್ಷೇತ್ರದ ಬಿಜೆಪಿ ಮಾಜಿ ಅಧ್ಯಕ್ಷ ಹರೀಶ್‌ ಕಂಜಿಪಿಲಿ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಆಶಾ ತಿಮ್ಮಪ್ಪ ಗೌಡ, ಕಿಶೋರ್‌ ಕುಮಾರ್‌ ಬೊಟ್ಯಾಡಿ, ಯತೀಶ್‌ ಆರವಾರ ಅವರ ಹೆಸರು ಓಡಾಡಿತ್ತು. ಕೊನೆಗೆ ಅರುಣ್‌ ಕುಮಾರ್‌ ಪುತ್ತಿಲ, ಆಶಾ ತಿಮ್ಮಪ್ಪ ಗೌಡ, ಹರೀಶ್‌ ಕಂಜಿಪಿಲಿ ಹೆಸರು ಅಂತಿಮವಾಗಿತ್ತು.

ಈ ಪೈಕಿ ಅರುಣ್‌ ಕುಮಾರ್‌ ಪುತ್ತಿಲಗೆ ಟಿಕೆಟ್‌ ನೀಡಬೇಕು ಎಂದು ಯಡಿಯೂರಪ್ಪ ಶಿಫಾರಸು ಮಾಡಿದರೆ, ಆಶಾ ತಿಮ್ಮಪ್ಪ ಗೌಡ ಅವರಿಗೆ ತಪ್ಪಿದರೆ ಹರೀಶ್‌ ಕಂಜಿಪಿಲಿಗೆ ನೀಡಬೇಕು ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಶಿಫಾರಸು ಮಾಡಿದ್ದರು. ಇದರಂತೆ, ಈಗ ಪುತ್ತೂರಿನಲ್ಲಿ ಬಿಜೆಪಿ ಕಣಕ್ಕೆ ಇಳಿಸಿರುವ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ. ವಯಸ್ಸು 60ರ ಮೇಲ್ಪಟ್ಟು. ಇದು ಬಹುತೇಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಅದು ನಿನ್ನೆ ಸಂಜೆ ಅರುಣ್‌ ಕುಮಾರ್‌ ಪುತ್ತಿಲರ ಹಿತೈಷಿಗಳ ತುರ್ತು ಸಭೆಯ ಮೂಲಕ ವ್ಯಕ್ತವಾಗಿದೆ. ಪುತ್ತೂರಿನ ಕೋಟೆಚಾ ಸಭಾಂಗಣ ಭರ್ತಿಯಾಗಿದ್ದು, ಬಂದವರೆಲ್ಲರೂ ಬಿಜೆಪಿ ವರಿಷ್ಠರ ನಡವಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿರುವುದು ಕಂಡುಬಂತು. ಹಿಂದುತ್ವ ಉಳೀಬೇಕಾ ಬೇಡವಾ? ಯಾರನ್ನು ನಿಲ್ಲಿಸಿದರೂ ಗೆಲ್ಲಿಸ್ತೇವೆ ಎಂಬ ಭಾವನೆ ಇದ್ದರೆ ಅದನ್ನು ಬಿಟ್ಟುಬಿಡಿ ಎಂದು ಬಿಜೆಪಿ ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ. ಅಲ್ಲದೆ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರೆ ಗೆಲ್ಲಿಸುವ ಹೊಣೆಗಾರಿಕೆ ನಮ್ಮದು ಎಂದು ಹಿಂದು ಸಂಘಟನೆ ಕಾರ್ಯಕರ್ತರು, ಈ ಸಭೆಯ ಸಂದರ್ಭದಲ್ಲಿ ಹೇಳಿದ್ದಾರೆ.

ಪುತ್ತಿಲರಿಗೆ ನಿನ್ನೆ ವ್ಯಕ್ತವಾದ ಬೆಂಬಲ ಪ್ರತಿಕ್ರಿಯೆಯೋ ಅಥವಾ ಪ್ರತಿಸ್ಪಂದನೆಯೋ...

ನಿನ್ನೆಯದ್ದು ಪ್ರತಿಕ್ರಿಯೆ ಅಲ್ಲ, ಪ್ರತಿಸ್ಪಂದನೆ ಎಂಬುದನ್ನು ನಿರೂಪಿಸುವುದಕ್ಕೆ ಇತ್ತೀಚಿನ ವರ್ಷಗಳ ಕೆಲವು ವಿದ್ಯಮಾನಗಳನ್ನು ಉಲ್ಲೇಖಿಸಬಹುದು ಎನ್ನುತ್ತಾರೆ ಕೆಲವು ಕಾರ್ಯಕರ್ತರು.

ಪ್ರವೀಣ್‌ ನೆಟ್ಟಾರು ಹತ್ಯೆ ಆದ ಸಂದರ್ಭದಲ್ಲಿ ಏನಾಯಿತು? ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿ ಪ್ರತಿಭಟಿಸಿದ್ದನ್ನು ಪಕ್ಷದ ವರಿಷ್ಠರು ಮರೆಯಲು ಸಾಧ್ಯ ಇದೆಯೇ? ನಳಿನ್‌ ಕುಮಾರ್‌ ಕಟೀಲು ಪ್ರವೀಣ್‌ ಕುಮಾರ್‌ ಮನೆಗೆ ಬಂದಾಗ ಕಾರ್ಯಕರ್ತರ ಆಕ್ರೋಶವನ್ನು ತೀವ್ರವಾಗಿಯೇ ಎದುರಿಸಿದ್ದರು. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹಳಷ್ಟು ಪ್ರಭಾವಿ, ಅವರಾಡಿದ ಮಾತೇ ಅಂತಿಮ ಎಂಬಂತಿದ್ದ ಕಲ್ಲಡ್ಕ ಪ್ರಭಾಕರ ಭಟ್ಟರ ಮಾತಿಗೂ ಕಾರ್ಯಕರ್ತರು ಮಣೆಹಾಕದೇ ವರ್ತಿಸಿದ್ದು ಈಗ ಇತಿಹಾಸದ ಪುಟ ಸೇರಿರಬಹುದು. ಆದರೆ, ಅದಕ್ಕೆ ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಕೆಲವು ನಾಯಕರು ತೋರಿದ ವರ್ತನೆ ಕಾರಣ ಎಂಬುದನ್ನು ಯಾರೂ ಮರೆಯುವುದಿಲ್ಲ ಎಂಬುದು ನಿನ್ನೆಯ ಸಭೆಯಲ್ಲಿ ಭಾಗವಹಿಸಿದ್ದ ಕೆಲವು ಕಾರ್ಯಕರ್ತರ ವಾದ.

ಆದರೆ, ಅರುಣ್‌ ಕುಮಾರ್‌ ಪುತ್ತಿಲ ಇನ್ನೂ ತಮ್ಮ ನಿರ್ಧಾರವನ್ನು ತಿಳಿಸಿಲ್ಲ. ಎರಡು ದಿನಗಳ ಒಳಗೆ ಸ್ಪರ್ಧೆ ಕುರಿತ ನಿರ್ಧಾರ ಪ್ರಕಟಿಸುವುದಾಗಿ ಸಭೆಯಲ್ಲಿ ಹೇಳಿದ್ದಾರೆ. ಹಿಂದು ಸಂಘಟನೆಗಳ ಕಾರ್ಯಕರ್ತರು, ಬಿಜೆಪಿಯ ತಳಮಟ್ಟದ ಕಾರ್ಯಕರ್ತರೂ ಆಗಿರುವ ಕಾರಣ ಈ ಆಕ್ರೋಶವನ್ನು ಸಂಘ ಪರಿವಾರದ ಪ್ರಮುಖರು ತಣಿಸಿದರೆ ಅರುಣ್‌ ಕುಮಾರ್‌ ಪುತ್ತಿಲರ ಸ್ಪರ್ಧೆ ನಡೆಯದು. ಆಗ ನಿನ್ನೆ ನಡೆದ ತುರ್ತು ಸಭೆಯನ್ನು ಆ ಕ್ಷಣದ ಪ್ರತಿಕ್ರಿಯೆ ಎಂದು ಪರಿಗಣಿಸಬೇಕಾಗುತ್ತದೆ. ಅದಲ್ಲದೇ, ಅದು ಅರುಣ್‌ ಕುಮಾರ್‌ ಪುತ್ತಿಲರಿಗೆ ಕಳೆದ ಬಾರಿಯಂತೆ ಈ ಸಲವೂ ಟಿಕೆಟ್‌ ತಪ್ಪಿದ್ದಕ್ಕೆ ಕಾರ್ಯಕರ್ತರು ಪ್ರತಿಸ್ಪಂದಿಸಿದ್ದು ಎಂದಾದರೆ ಬಿಜೆಪಿ ವರಿಷ್ಠರು, ಸಂಘ ಪರಿವಾರದ ಪ್ರಮುಖರು ಚಿಂತಿಸಬೇಕಾಗುತ್ತದೆ.

ಅರುಣ್‌ ಕುಮಾರ್‌ ಪುತ್ತಿಲ ತಮ್ಮ ರಾಜಕೀಯ ಭವಿಷ್ಯದ ಬಗ್ಗೆಯೂ ಆಲೋಚಿಸುತ್ತಿರುವ ಕಾರಣ ಎರಡನೇ ಬಾರಿಗೆ ಟಿಕೆಟ್‌ ವಂಚಿತರಾದರೂ ಆಶಾವಾದಿಯಾಗಿದ್ದಾರೆ. ಈಗ ಪಕ್ಷೇತರರಾಗಿ ಕಣಕ್ಕೆ ಇಳಿದರೆ ಪಕ್ಷ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಂಡು ರಾಜಕೀಯ ಭವಿಷ್ಯ ಮರೆಯಬೇಕಾಗುತ್ತದೆ ಎಂಬ ಕಳವಳವೂ ಇರುವ ಕಾರಣ ಲೆಕ್ಕಾಚಾರದ ಹೆಜ್ಜೆಯನ್ನು ಅವರು ಇಡುತ್ತಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

IPL_Entry_Point