Chamaranagar News: ಮರಿ ಇದ್ದರೂ ಮಮಕಾರ ತೋರದೇ ತಾಯಿ ಜಿಂಕೆ ಕೊಂದ ಇಬ್ಬರು ಬೇಟೆಗಾರರ ಸೆರೆ
ಚಾಮರಾಜನಗರ ಜಿಲ್ಲೆಯಲ್ಲಿ ಇಬ್ಬರು ಬೇಟೆಗಾರರನ್ನು ಬಂಧಿಸಲಾಗಿದೆ. ಮರಿಯೊಂದಿಗೆ ಇದ್ದ ತಾಯಿ ಜಿಂಕೆ ಕೊಂದು ಸಾಗಿಸಲು ಮುಂದಾಗಿದ್ದವರನ್ನು ಹಿಡಿದು ಜೈಲಿಗೆ ಅಟ್ಟಲಾಗಿದೆ.

ಚಾಮರಾಜನಗರ: ಅವರು ಬೇಟೆಗಾಗಿ ಕಾಡಿಗೆ ನುಗ್ಗಿದ್ದರು. ಏನನ್ನಾದರೂ ಬೇಟೆಯಾಡಿಕೊಂಡು ಹೋಗಬೇಕು ಎನ್ನುವ ಸಿದ್ದತೆಯೊಂದಿಗೆ ಆಯುಧಗಳಿಂದಿಗೆ ಬಂದಿದ್ದರು. ಕಾಡಿಗೆ ನುಗ್ಗಿದಾಗ ಅವರಿಗೆ ಕಂಡಿದ್ದು ಸುಂದರ ಜಿಂಕೆ. ಅದರ ಜತೆಗೆ ಪುಟ್ಟ ಕಂದಮ್ಮ. ಎರಡೂ ಜತೆಯಲ್ಲಿಯೇ ಇದ್ದವು. ಆ ಮೂವರು ಬೇಟೆಗಾರರಿಗೆ ಬೇಟೆಯಾಡಬೇಕಾಗಿತ್ತಷ್ಟೆ. ಮರಿಯ ಮುಖವನ್ನು ನೋಡದೇ ತಾಯಿ ಜಿಂಕೆಯನ್ನು ಉರುಳು ಹಾಕಿದರು. ಜಿಂಕೆ ಸಾಯುವುದನ್ನೇ ಕಾಯುತ್ತಿದ್ದರು. ಕೆಲ ಹೊತ್ತಿನಲ್ಲಿಯೇ ಹಸಿವಿನಿಂದ ಮರಿ ಸತ್ತಿತ್ತು. ಕೊನೆಗೆ ತಾಯಿ ಜಿಂಕೆಯೂ ಸತ್ತು ಹೋಗಿತ್ತು. ಅದನ್ನು ಹೊತ್ತುಕೊಂಡು ಹೋಗಬೇಕು ಎನ್ನುವಾಗ ಅರಣ್ಯ ಸಿಬ್ಬಂದಿ ಬಂದಿದ್ದರಿಂದ ಇಬ್ಬರು ಸಿಕ್ಕಿಬಿದ್ದರು. ಇನ್ನೊಬ್ಬ ಪರಾರಿಯಾದ.
ಇಂತಹ ಅಮಾನವೀಯ ಘಟನೆ ನಡೆದಿರುವುದು ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಹುಲಿಧಾಮದಲ್ಲಿ. ಕ್ಯಾತೇ ದೇವರಗುಡಿ ವಲಯ ವ್ಯಾಪ್ತಿಯ ಅದೇ ಶಾಖೆಯ ಅಯ್ಯನಪುರ ಗಸ್ತಿನ ಮುಂಡಿಗೆ ಕುಳಿ ಕೆರೆ ಪಕ್ಕದ ಹೊಸಕೆರೆ ಕಾಲುದಾರಿಯಲ್ಲಿ.
ಇದನ್ನೂ ಓದಿರಿ: ಮೈಸೂರು ಮತಗಟ್ಟೆಗಳು ಆಕರ್ಷಕ, ವಿಷಯ ವೈವಿಧ್ಯ; ಹೀಗಿವೆ ಬೂತ್ ನೋಟ
ಈಗ ಬೇಸಿಗೆಯಾಗಿರುವುದರಿಂದ ಜಿಂಕೆಗಳು ಕೆರೆಗೆ ನೀರು ಕುಡಿಯಲೆಂದು ಬಂದೇ ಬರುತ್ತವೆ. ಇದರ ಮಾಹಿತಿ ಇದ್ದ ಚಾಮರಾಜನಗರ ತಾಲ್ಲೂಕು ಕಾಳಿಕಾಂಬ ಕಾಲೋನಿನ ಮಹದೇವೇಗೌಡ, ಚಂದಕವಾಡಿ ಗ್ರಾಮದ ಮುಬಾರಕ್ ಆಲಿ ಹಾಗೂ ಅದೇ ಗ್ರಾಮದ ಇರ್ಫಾನ್ ಎಂಬುವವರು ಮಂಗಳವಾರ ಮುಂಡಿಗೆ ಕುಳಿ ಕೆರೆ ಬಳಿ ಕಾದಿದ್ದರು. ಮರಿಯೊಂದಿಗೆ ಜಿಂಕೆ ಬಂದಿತ್ತು.
ಜಿಂಕೆ ಬರುವ ಮಾರ್ಗದಲ್ಲಿಯೇ ಅವರು ಉರುಳನ್ನು ಹಾಕಿದ್ದರು. ಅದನ್ನು ದಾಟಿಕೊಂಡು ಬರುವಾಗ ಜಿಂಕೆ ಅದರಡಿ ಸಿಲುಕಿಕೊಂಡಿತ್ತು. ತಪ್ಪಿಸಿಕೊಳ್ಳಲು ಪ್ರಯತ್ನಿಸಿತ್ತು. ಮರಿ ಇರುವುದನ್ನು ಗಮನಿಸಿದ್ದರೂ ತಾಯಿ ಸಾಯಲೆಂದು ಕಾಯ್ದುಕೊಂಡು ಕುಳಿತಿದ್ದರು ಜಿಂಕೆ ಮರಿ ಹಸಿವಿನಿಂದ ಮೃತಪಟ್ಟರೆ ತಾಯಿ ಕೂಡ ಅಸುನೀಗಿತ್ತು.
ಕತ್ತಿಗೆ ಬಿದ್ದ ಭಾರೀ ಗಾತ್ರದ ಉರುಳು ಅದರ ಜೀವ ತೆಗೆದಿತ್ತು. ಜಿಂಕೆ ಬೇಟೆಯಾಡಿದವರು ಅದನ್ನು ಸಾಗಿಸಲು ಬೇಕಾದ ಸಿದ್ದತೆ ಮಾಡಿಕೊಳ್ಳುತ್ತಿದ್ದರು. ಇದೇ ವೇಳೆ ಗಸ್ತಿಲ್ಲಿನಲ್ಲಿದ್ದ ಕೆ.ಗುಡಿ ವಲಯದ ಉಪ ವಲಯ ಅರಣ್ಯಾಧಿಕಾರಿ ಸಿ.ಸುಂದರ್ ಹಾಗೂ ಸಿಬ್ಬಂದಿ ಜಿಂಕೆ ತಾಯಿ ಹಾಗೂ ಮರಿ ಮೃತಪಟ್ಟಿದ್ದನ್ನು ಗಮನಿಸಿದರು.
ಬೇಟೆಗಾರರು ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದಾಗ ಸಿಬ್ಬಂದಿ ಇಬ್ಬರನ್ನು ಹಿಡಿದಿದ್ದರು. ಮಹದೇವೇಗೌಡ ಹಾಗೂ ಮುಬಾರಕ್ ಆಲಿ ಸಿಕ್ಕಿಬಿದ್ದಿದ್ದು. ಇರ್ಫಾನ್ ಎಂಬಾತ ಪರಾರಿಯಾಗಿದ್ದಾನೆ. ಇಬ್ಬರನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿದಾಗ, ಮಾಂಸ ಮಾರಾಟಕ್ಕಾಗಿ ಹತ್ಯೆಮಾಡಿದ್ದಾಗಿ ಹೇಳಿಕೊಂಡಿದ್ಧಾರೆ. ಮರಿ ಇದ್ದುದನ್ನು ಗಮನಿಸಿದರೂ ಕಟುಕರಾದ ಇಬ್ಬರನ್ನು ಕೇಳಿದರೆ ಏನೂ ಹೇಳದೇ ಸುಮ್ಮನಾಗಿದ್ದಾರೆ.
ತಲೆ ಮರೆಸಿಕೊಂಡಿರುವ ಇನ್ನೊಬ್ಬನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಕೆ.ಗುಡಿ ವಲಯ ಅರಣ್ಯಾಧಿಕಾರಿ ವಿನೋದ್ ಗೌಡ ಹೇಳಿದ್ದಾರೆ.
ಅವರು ಬಳಸಿದ್ದ ಡಿಸ್ಕವರ್ ಬಜಾಜ್ ವಾಹನ, ಕತ್ತಿ, ಚೂರಿ, ಪ್ಲಾಸ್ಟಿಕ್ ಚೀಲ,. ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂವರ ವಿರುದ್ದವೂ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com)
