ಕನ್ನಡ ಸುದ್ದಿ  /  ಜೀವನಶೈಲಿ  /  Bird Flu: ಮತ್ತೆ ಆವರಿಸಿದೆ ಹಕ್ಕಿ ಜ್ವರದ ಭೀತಿ, ಈ ಸಮಯದಲ್ಲಿ ಹಾಲು-ಮೊಟ್ಟೆ ಸೇವಿಸಬಹುದೇ? ಈ ಬಗ್ಗೆ ತಜ್ಞರು ಏನಂತಾರೆ ನೋಡಿ

Bird flu: ಮತ್ತೆ ಆವರಿಸಿದೆ ಹಕ್ಕಿ ಜ್ವರದ ಭೀತಿ, ಈ ಸಮಯದಲ್ಲಿ ಹಾಲು-ಮೊಟ್ಟೆ ಸೇವಿಸಬಹುದೇ? ಈ ಬಗ್ಗೆ ತಜ್ಞರು ಏನಂತಾರೆ ನೋಡಿ

ಕೊರೋನಾ ಭೀತಿ ಕಡಿಮೆಯಾಗಿ, ಇದೀಗ ಹಕ್ಕಿ ಜ್ವರದ ಭೀತಿ ಕಾಣಿಸಿಕೊಂಡಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ. ಅಮೆರಿಕದಲ್ಲಿ ಈ ವೈರಸ್ ಪತ್ತೆಯಾಗಿದ್ದು, ತೀವ್ರ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. ಹಸುವಿನ ಹಾಲಿನಲ್ಲಿ ಹಕ್ಕಿ ಜ್ವರ ವೈರಸ್ ಪತ್ತೆಯಾಗಿದ್ದು, ಹಾಲು, ಮೊಟ್ಟೆ ಸೇವಿಸಬಹುದೇ ಎಂಬ ಗೊಂದಲ ನಿಮ್ಮಲ್ಲಿದ್ದರೆ ಇಲ್ಲಿದೆ ತಜ್ಞರ ಉತ್ತರ. (ಬರಹ: ಪ್ರಿಯಾಂಕ ಗೌಡ)

ಮತ್ತೆ ಆವರಿಸಿದೆ ಹಕ್ಕಿ ಜ್ವರದ ಭೀತಿ, ಈ ಸಮಯದಲ್ಲಿ ಹಾಲು-ಮೊಟ್ಟೆ ಸೇವಿಸಬಹುದೇ?
ಮತ್ತೆ ಆವರಿಸಿದೆ ಹಕ್ಕಿ ಜ್ವರದ ಭೀತಿ, ಈ ಸಮಯದಲ್ಲಿ ಹಾಲು-ಮೊಟ್ಟೆ ಸೇವಿಸಬಹುದೇ?

ಜಗತ್ತನ್ನೇ ಕಾಡಿದ್ದ ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ಭೀತಿ ಕಡಿಮೆಯಾಗಿದೆ. ಇದೀಗ H5N1 ಎಂದೂ ಕರೆಯಲ್ಪಡುವ ಪಕ್ಷಿ ಜ್ವರದ ಭೀತಿ ಆವರಿಸಿದೆ. ಪ್ರಪಂಚದ ಕೆಲವು ದೇಶಗಳಲ್ಲಿ ಹಕ್ಕಿ ಜ್ವರ ಕಾಣಿಸಿದೆ. ಮಾತ್ರವಲ್ಲ ನಮ್ಮ ನೆರೆ ರಾಜ್ಯ ಕೇರಳದಲ್ಲೂ ಹಕ್ಕಿ ಜ್ವರದ ಭೀತಿ ಆವರಿಸಿದ್ದು, ಗಡಿ ಜಿಲ್ಲೆಗಳಲ್ಲಿ ಎಚ್ಚರ ವಹಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಹಸುವಿನ ಹಾಲಿನಲ್ಲಿ ಈ ವೈರಸ್ ಪತ್ತೆಯಾಗಿದ್ದು, ಮೊಟ್ಟೆ, ಹಾಲು, ಕೋಳಿ ಮಾಂಸ ಸೇವಿಸುವ ಮುನ್ನ ಕಾಳಜಿ ವಹಿಸುವುವುದು ಅಗತ್ಯ. ಹಾಲಿನಲ್ಲಿ ಹಕ್ಕಿ ಜ್ವರ ವೈರಸ್ ಪತ್ತೆಯಾಗಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದ್ದು, ಎಚ್ಚರಿಕೆ ನೀಡಿದೆ.

ಹಕ್ಕಿ ಜ್ವರ ಮೊದಲು ಕಾಣಿಸಿದ್ದು ಈ ದೇಶದಲ್ಲಿ 

ಈ ವೈರಸ್ ಮೊದಲಿಗೆ 1996ರಲ್ಲಿ ಚೀನಾದಲ್ಲಿ ಪತ್ತೆಯಾಗಿದ್ದು, ನಂತರ ಜಗತ್ತಿನಾದ್ಯಂತ ಹರಡಿತು. ಇತ್ತೀಚಿನ ವರ್ಷಗಳಲ್ಲಿ ಪಕ್ಷಿಗಳು ಮತ್ತು ಸಸ್ತನಿಗಳಲ್ಲಿ ಈ ರೋಗದಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಹಕ್ಕಿ ಜ್ವರವು ಸೋಂಕಿತ ಪಕ್ಷಿಗಳು ಅಥವಾ ಅವುಗಳ ಹಿಕ್ಕೆಗಳ ನೇರ ಸಂಪರ್ಕದ ಮೂಲಕ ಹರಡುತ್ತದೆ. ಇಲ್ಲಿಯವರೆಗೆ ಮನುಷ್ಯನಿಂದ ಮನುಷ್ಯನಿಗೆ ಹರಡಿರುವ ಯಾವುದೇ ಪುರಾವೆಗಳಿಲ್ಲ.

ಸಾಮಾನ್ಯವಾಗಿ ಸರಿಯಾಗಿ ಬೇಯಿಸಿದ ಮೊಟ್ಟೆಗಳು ಅಥವಾ ಪಾಶ್ಚರೀಕರಿಸಿದ (ಶುದ್ಧೀಕರಿಸಿದ) ಹಾಲಿನ ಸೇವನೆಯಿಂದ ವೈರಸ್ ಹರಡುವುದಿಲ್ಲ. ಯಾವುದೇ ಸೋಂಕಿನ ಸಂಭವನೀಯ ಅಪಾಯವನ್ನು ಕಡಿಮೆ ಮಾಡಲು ಉತ್ತಮ ನೈರ್ಮಲ್ಯವನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ ಎಂದು ಹೈದರಾಬಾದ್ ಮೂಲದ ವೈದ್ಯರಾದ ಡಾ. ರಾಹುಲ್ ಅಗರ್ವಾಲ್ ಹಿಂದೂಸ್ತಾನ್‌ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಹಕ್ಕಿ ಜ್ವರ ಎಂದಾಕ್ಷಣ ಜನ ಹಾಲು, ಮೊಟ್ಟೆ ಮುಂತಾದವುಗಳನ್ನು ತಿನ್ನಲು ಭಯಪಡುತ್ತಾರೆ. ಪ್ರಾಥಮಿಕವಾಗಿ ಹಕ್ಕಿ ಜ್ವರ ಅವುಗಳ ಲಾಲಾರಸ, ಮಲ ಮತ್ತು ಉಸಿರಾಟದ ಸ್ರವಿಸುವಿಕೆಯ ಮೂಲಕ ಪಕ್ಷಿಗಳ ನಡುವೆ ಹರಡುತ್ತದೆ. ನಂತರ ಇದು ಮನುಷ್ಯರಿಗೆ ಹಾಗೂ ಇತರೆ ಸಸ್ತನಿಗಳಿಗೆ ಹರಡುತ್ತದೆ.

ಅಮೆರಿಕದಲ್ಲಿ ಈ ವೈರಸ್ ಪತ್ತೆಯಾಗಿದ್ದು, ಪಶುಗಳು ಮತ್ತು ಕೋಳಿಗಳಲ್ಲಿ ವೇಗವಾಗಿ ಜ್ವರ ಹರಡುತ್ತಿದೆ. ಅಮೆರಿಕದಲ್ಲಿರುವ ಎಂಟು ಪ್ರಾಂತ್ಯಗಳ 29 ಫಾರ್ಮ್‌ಗಳಲ್ಲಿ ಸಾಕಿರುವ ಹಸು ಮತ್ತು ಕೋಳಿಗಳಲ್ಲಿ ವೈರಸ್ ಹರಡಿದೆ ಎಂಬುದು ತಿಳಿದು ಬಂದಿದ್ದು, ತೀವ್ರ ಆತಂಕ ಮೂಡಿಸಿದೆ.

ಮೊಟ್ಟೆ ಮತ್ತು ಹಾಲಿನಿಂದ ಸೋಂಕು ಹರಡುವುದೇ?

ಕೆಲವು ಅಪರೂಪದ ಮಾನವ ಸೋಂಕುಗಳು ಸಂಭವಿಸಿದರೂ, ಇವುಗಳು ಸಾಮಾನ್ಯವಾಗಿ ಸೋಂಕಿತ ಪಕ್ಷಿಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದುವುದರಿಂದ ಮಾತ್ರ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಲಿನಲ್ಲಿ ಈ ವೈರಸ್ ಪತ್ತೆಯಾಗಿರುವುದರಿಂದ ಮೊಟ್ಟೆ ಹಾಗೂ ಹಾಲನ್ನು ಸೇವಿಸಬಹುದೇ ಎಂಬುದು ಬಹುತೇಕರ ಪ್ರಶ್ನೆಯಾಗಿದೆ.

ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಸಮಯದಲ್ಲಿ ಮೊಟ್ಟೆಗಳು ಕಟ್ಟುನಿಟ್ಟಾದ ನಿಯಮಗಳು ಮತ್ತು ನೈರ್ಮಲ್ಯ ಪ್ರೋಟೊಕಾಲ್‌ಗಳನ್ನು ಅನುಸರಿಸಲಾಗುತ್ತದೆ. ಇದು ಮಾಲಿನ್ಯದ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ನೀವು ಮನೆಯಲ್ಲಿ ಅವುಗಳನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದೇ ಬಹಳ ಮುಖ್ಯವಾಗಿದೆ. ಅದನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಅದರ ಹಳದಿ ಅಂಶ ಕೂಡ ಹಸಿಯಾಗಿರಬಾರದು. ಅಲ್ಲದೆ, ಯಾವಾಗಲೂ ನಿಮ್ಮ ಕೈಗಳನ್ನು ತೊಳೆಯುತ್ತಿರಿ.

ಹಾಲಿನ ಸುರಕ್ಷತೆಯು ಪಾಶ್ಚರೀಕರಣದ ಮೇಲೆ ಅವಲಂಬಿತವಾಗಿರುತ್ತದೆ. ಇದು ಪಕ್ಷಿ ಜ್ವರ ಸೇರಿದಂತೆ ವೈರಸ್‌ಗಳನ್ನು ನಾಶಪಡಿಸುತ್ತದೆ. ವಾಸ್ತವವಾಗಿ ವಾಣಿಜ್ಯಿಕವಾಗಿ ಲಭ್ಯವಿರುವ ಎಲ್ಲಾ ಹಾಲು ಕೂಡ ಈ ಪ್ರಕ್ರಿಯೆಗೆ ಒಳಗಾಗುತ್ತದೆ. ಹೀಗಾಗಿ ಪಾಶ್ಚರೀಕರಿಸಿದ (ಶುದ್ಧೀಕರಿಸಿದ) ಹಾಲು ಬಳಕೆಗೆ ಸುರಕ್ಷಿತವಾಗಿದೆ.

ಹಕ್ಕಿ ಜ್ವರ ಮತ್ತು ನಿಮ್ಮ ಆಹಾರದ ಬಗ್ಗೆ ಕಾಳಜಿ ಹೊಂದಿದ್ದರೆ, ಸುರಕ್ಷಿತ ನಿರ್ವಹಣೆ, ನೈರ್ಮಲ್ಯವನ್ನು ಕಾಪಾಡಿಕೊಳ್ಳಿ. ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ ಸೇವಿಸಿ. ಪಾಶ್ಚರೀಕರಿಸಿದ ಡೈರಿ ಉತ್ಪನ್ನಗಳನ್ನೇ ಹೆಚ್ಚು ಬಳಸಿ. ಬಹಳ ನೆನಪಿಟ್ಟುಕೊಳ್ಳಬೇಕಾದ ವಿಷಯವೇನೆಂದರೆ, ಮೊಟ್ಟೆ ಮತ್ತು ಹಾಲಿನಿಂದ ಹಕ್ಕಿಜ್ವರ ಬರುವ ಅಪಾಯ ತೀರಾ ಕಡಿಮೆ. ನೈರ್ಮಲ್ಯ ಮತ್ತು ಆಹಾರ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೆ ಯಾವುದೇ ಅಪಾಯವಿಲ್ಲ.

ವಿಭಾಗ