ಕನ್ನಡ ಸುದ್ದಿ  /  ಕರ್ನಾಟಕ  /  Chikkamagaluru News: ಚಿಕ್ಕಮಗಳೂರಿನಲ್ಲಿ ಅರಣ್ಯ ಸಿಬ್ಬಂದಿಯೇ ಹುಲಿ ಬೇಟೆಗಾರ, ಹುಲಿ ದೇಹದ ಭಾಗ ವಶ !

Chikkamagaluru News: ಚಿಕ್ಕಮಗಳೂರಿನಲ್ಲಿ ಅರಣ್ಯ ಸಿಬ್ಬಂದಿಯೇ ಹುಲಿ ಬೇಟೆಗಾರ, ಹುಲಿ ದೇಹದ ಭಾಗ ವಶ !

ಕಾಡು ಕಾಯಬೇಕಾದ ಸಿಬ್ಬಂದಿಯೇ ಹುಲಿ ಹತ್ಯೆಯಲ್ಲಿ ಭಾಗಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ನಡೆದಿದೆ.

ಮೂಡಿಗೆರೆ ತಾಲ್ಲೂಕಿನಲ್ಲಿ ಹುಲಿ ಹತ್ಯೆ ಮಾಡಲಾಗಿದೆ.
ಮೂಡಿಗೆರೆ ತಾಲ್ಲೂಕಿನಲ್ಲಿ ಹುಲಿ ಹತ್ಯೆ ಮಾಡಲಾಗಿದೆ.

ಚಿಕ್ಕಮಗಳೂರು: ಅರಣ್ಯ ಸಿಬ್ಬಂದಿಯ ಸಹಕಾರದಿಂದ ಹುಲಿ ಬೇಟೆಯಾಡಿ ದೇಹದ ಭಾಗಗಳನ್ನು ಇರಿಸಿಕೊಂಡಿದ್ದ ಇಬ್ಬರನ್ನು ಚಿಕ್ಕಮಗಳೂರು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಘಟನೆಯಲ್ಲಿ ಪ್ರಮುಖ ಆರೋಪಿಯಾಗಿರುವ ಅರಣ್ಯ ಸಿಬ್ಬಂದಿ ತಲೆ ಮರೆಸಿಕೊಂಡಿದ್ದು ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಎರಡು ತಿಂಗಳ ಹಿಂದೆಯೇ ಚಿಕ್ಕಮಗಳೂರು ಅರಣ್ಯ ವಿಭಾಗದಲ್ಲಿ ಘಟನೆ ನಡೆದಿದ್ದರೂ ಈಗ ಅದು ಬೆಳಕಿಗೆ ಬಂದಿದೆ. ಅದರಲ್ಲಿ ಅರಣ್ಯ ಸಿಬ್ಬಂದಿಯೂ ಇದ್ದ. ಹುಲಿ ಬೇಟೆಗೆ ಸಹಕಾರ ನೀಡಿದ್ದ ಎನ್ನುವ ಮಾಹಿತಿ ಬಯಲಾಗಿದೆ. ಆತನ ವಿರುದ್ದವೂ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಿದ್ದು, ಅರಣ್ಯ ಇಲಾಖೆ ಮೂಡಿಗೆರೆ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೆಂಜಿಗೆ ಅರಣ್ಯ ಬೀಟ್‌ನಲ್ಲಿ ಎರಡು ತಿಂಗಳ ಹಿಂದೆ ಭಾರೀ ಗಾತ್ರದ ಗಂಡು ಹುಲಿಯನ್ನು ಬೇಟೆಯಾಡಲಾಗಿತ್ತು. ಕೊಪ್ಪ ತಾಲ್ಲೂಕಿನ ಗಡಿ ಭಾಗದಲ್ಲಿ ಬರುವ ಈ ಪ್ರದೇಶದಲ್ಲಿ ಹುಲಿ ಸಂಚಾರ ಅಧಿಕವಾಗಿದೆ ಎನ್ನುವ ಕಾರಣದಿಂದ ಆದನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಲಾಗಿತ್ತು. ಇದಾದ ನಂತರ ಹುಲಿ ಪದೇ ಪದೇ ಕಾಣಿಸಿಕೊಂಡಿದ್ದರಿಂದ ಹುಲಿಯನ್ನು ಕೊಲ್ಲುವ ನಿರ್ಧಾರವನ್ನು ಕೊಪ್ಪದ ದೀಕ್ಷೀತ್‌, ಕುಂಡ್ರೆ ಗ್ರಾಮದ ಸತೀಶ್‌ ಹಾಗೂ ಅರಣ್ಯ ಸಿಬ್ಬಂದಿ ಸುರೇಶ್‌ ನಿರ್ಧರಿಸಿದ್ದರು.ಹುಲಿಯನ್ನು ಕೊಂದು ಹಾಕಲು ಸುರೇಶ್‌ ಎಲ್ಲ ರೀತಿಯಲ್ಲಿ ಸಹಕಾರ ನೀಡಿದ್ದ. ಕೆಲವು ದಿನಗಳ ಹಿಂದೆ ಅರಣ್ಯ ಇಲಾಖೆಗೆ ದೊರೆತ ಮಾಹಿತಿ ಮೇರೆಗೆ ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ ಬಾಬು ಅವರು ಎಸಿಎಫ್‌ ಡಿ.ರಘು ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದರು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ದೀಕ್ಷಿತ್‌ ಎಂಬಾತನನ್ನು ಬಂಧಿಸಿದ್ದರು. 

ಆತ ನೀಡಿದ ಮಾಹಿತಿ ಮೇರೆಗೆ ಸತೀಶ್‌ ನನ್ನು ವಶಕ್ಕೆ ಪಡೆದಿದ್ದರು. ಆನಂತರ ಹುಲಿ ದೇಹದ ಭಾಗಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಹುಲಿ ದೇಹದ ಭಾಗ ಸಂಪೂರ್ಣವಾಗಿ ದೊರೆತಿದ್ದರಿಂದ ಇದು ಮಾರಾಟಕ್ಕೆ ನಡೆದ ಬೇಟೆಯಲ್ಲಿ ಎನ್ನುವುದು ಬಯಲಾಗಿತ್ತು. ಇಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ ಅರಣ್ಯ ಇಲಾಖೆಯಲ್ಲಿ ಹಂಗಾಮಿ ನೌಕರರಾಗಿರುವ, ಅರಣ್ಯ ರಕ್ಷಕ ಸುರೇಶ್‌ ಕೂಡ ಇರುವುದು ಬಯಲಾಗಿತ್ತು. ಆತನ ಸಹಕಾರದಿಂದಲೇ ನಾವು ಹುಲಿ ಬೇಟೆಯಾಡಿ ಸಾಗಿಸಿದ್ದೆವು ಎಂದು ಹೇಳಿಕೆ ನೀಡಿದಾಗ ಇಲಾಖೆ ಸಿಬ್ಬಂದಿಯ ಸಹಕಾರ ಇದೆ ಎನ್ನುವುದು ಬಯಲಾಗಿತ್ತು.

ಈ ಹಿನ್ನೆಲೆಯಲ್ಲಿ ಸುರೇಶ್‌ ವಿರುದ್ದವೂ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ಮೊಕದ್ದಮೆ ದಾಖಲಿಸಲಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸುತ್ತಿದ್ದಂತೆ ತಲೆ ಮರೆಸಿಕೊಂಡಿದ್ದಾನೆ ಎಂದು ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ ಬಾಬು ತಿಳಿಸಿದ್ದಾರೆ.

ಘಟನೆ ಕುರಿತು ತನಿಖೆ ನಡೆದಿದೆ. ಮೇಲ್ನೋಟಕ್ಕೆ ಇದು ಹಣಕ್ಕಾಗಿ ನಡೆದ ಬೇಟೆಯಲ್ಲ ಎನ್ನುವುದು ಗೊತ್ತಾಗಿದೆ. ಮನೆಯ ಬಳಿ ಹುಲಿ ಬರುತ್ತಿದ್ದರಿಂದ ಭಯದಿಂದ ಸಾಯಿಸಿದೆವು ಎನ್ನುವ ಹೇಳಿಕೆ ನೀಡಿದ್ದಾರೆ. ಆದರೂ ಇಲಾಖೆಯ ಕೆಲವರ ಮೇಲಿನ ದ್ವೇಷಕ್ಕೆ ಸುರೇಶ್‌ ಹುಲಿ ಬೇಟೆಗೆ ಪ್ರಚೋದನೆ ನೀಡಿರುವ ಕುರಿತು ಅನುಮಾನಗಳಿದ್ದು. ಈ ಆಯಾಮದಲ್ಲೂ ತನಿಖೆ ನಡೆದಿದೆ ಎನ್ನುವುದು ಅವರ ವಿವರಣೆ.

ಈಗಾಗಲೇ ಇಬ್ಬರನ್ನು ಬಂಧಿಸಲಾಗಿದ್ದು, ಅವರ ಜೈಲು ಪಾಲಾಗಿದ್ಧಾರೆ. ಇಡೀ ಘಟನೆಯಲ್ಲಿ ಇನ್ನೂ ಹಲವರು ಇರುವ ಬಗ್ಗೆಯೂ ತನಿಖೆ ನಡೆದಿದೆ. ಸುರೇಶ್‌ ಸಿಕ್ಕರೆ ಮತ್ಯಾರು ಹುಲಿ ಬೇಟೆಯಾಡಿದ ಪ್ರಕರಣದಲ್ಲಿ ಇದ್ದಾರೆ ಎಂಬುದು ತಿಳಿಯಲಿದೆ.

ಹಂಗಾಮಿ ನೌಕರರಾಗಿರುವ ಸುರೇಶ್‌ ನನ್ನು ಈಗಾಗಲೇ ಕೆಲಸದಿಂದ ವಜಾಗೊಳಿಸಲಾಗಿದೆ. ಹುಲಿ ಅತಿ ಪ್ರಮುಖ ಪ್ರಾಣಿಯಾಗಿರುವುದರಿಂದ ಬೇಟೆ ನಿಷಿದ್ಧ. ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ಜಾಮೀನು ಕೂಡ ಸಿಗುವುದಿಲ್ಲ. ಬಂಧಿತರು ಕನಿಷ್ಠ ಏಳು ವರ್ಷವಾದರೂ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿಗೆ ವನ್ಯಜೀವಿಗಳ ಹಿತ ಕಾಯಲೆಂದೇ ನೇಮಿಸಿಕೊಳ್ಳಲಾಗುತ್ತವೆ. ಅವರೇ ಈ ರೀತಿ ಬೇಟೆಗೆ ಕುಮ್ಮಕ್ಕು ನೀಡಿ ಭಾಗಿಯಾಗಿರುವುದು ಬೇಸರದಾಯಕ. ಮೊದಲೇ ಹುಲಿ ಅಳಿವಂಚಿನಲ್ಲಿರುವ ಪ್ರಾಣಿ. ಅದನ್ನು ಕೊಂದಿರುವ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಪರಿಸರ ಹೋರಾಟಗಾರ ಹಾಗೂ ವನ್ಯಜೀವಿ ತಜ್ಞ ಜೋಸೆಫ್‌ ಹೂವರ್‌ ಒತ್ತಾಯಿಸುತ್ತಾರೆ.

 

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

 

 

IPL_Entry_Point