BMTC Free Travel for Women: ಗುಡ್‌ನ್ಯೂಸ್, ನಾಳೆ ಬೆಂಗಳೂರು ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ
ಮಹಿಳಾ ದಿನದ ಅಂಗವಾಗಿ ಬಿಎಂಟಿಸಿ ಬಸ್‌ನಲ್ಲಿ ಮಾರ್ಚ್ 8ರಂದು ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ.
ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಪ್ರತಿನಿತ್ಯ ಬಸ್‌ನಲ್ಲಿ ಸಂಚಾರಿಸುವ ಮಹಿಳೆಯರಿಗೆ ಮಹಿಳಾ ದಿನದ ಪ್ರಯುಕ್ತ ನಾಳೆ (ಮಾರ್ಚ್ 8) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಉಚಿತ ಪ್ರಯಾಣದ ಅವಕಾಶ ನೀಡಿದೆ. ಈಗಾಗಲೇ ಮಾಸಿಕ ಬಸ್ ಪಡೆದಿರುವ ಮಹಿಳೆಯರಿಗೆ ಇದರಿಂದ ಏನು ಲಾಭವಿಲ್ಲ. ದಿನನಿತ್ಯ ಟಿಕೆಟ್ ಪಡೆದು ಸಂಚರಿಸುವ ಮಹಿಳೆಯರಿಗೆ ಈ ಕೊಡುಗೆಯಿಂದ ಹಣ ಉಳಿತಾಯವಾಗಲಿದೆ.
ಮಹಿಳಾ ದಿನದ ಅಂಗವಾಗಿ ಬಿಎಂಟಿಸಿ ಬಸ್‌ನಲ್ಲಿ ಮಾರ್ಚ್ 8ರಂದು ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದು, ಈ ಕುರಿತು ಕರ್ನಾಟಕ ರಾಜ್ಯ ಸರಕಾರವು ಆದೇಶ ಹೊರಡಿಸಿದೆ. ಸಾಮಾನ್ಯ ಬಸ್ ಮಾತ್ರವಲ್ಲದೆ ವಜ್ರ, ವಾಯುವಜ್ರ ಸೇರಿದಂತೆ ಬಿಎಂಟಿಸಿಯ ಎಲ್ಲಾ ಬಸ್‌ಗಳಲ್ಲಿಯೂ ನಾಳೆ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಪ್ರತಿನಿತ್ಯ ಮಹಿಳೆಯರು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸುತ್ತಾರೆ. ಅವರಿಗೆ ಮಹಿಳಾ ದಿನದ ಪ್ರಯುಕ್ತ ಬಿಎಂಟಿಸಿ ಈ ಕೊಡುಗೆ ನೀಡಿದೆ.
ಈ ರೀತಿ ಉಚಿತ ಕೊಡುಗೆಯನ್ನು ಬಿಎಂಟಿಸಿ ನೀಡುವುದು ಇದೇ ಮೊದಲಲ್ಲ. ಕಳೆದ ವರ್ಷ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನದ ಪ್ರಯುಕ್ತ ಬೆಂಗಳೂರಿನಲ್ಲಿ ಎಲ್ಲಾ ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣಿಸಲು ಬಿಎಂಟಿಸಿ ಅವಕಾಶ ನೀಡಿತ್ತು.
ನಾಳೆ ಒಂದು ದಿನ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವುದರಿಂದ ಬಿಎಂಟಿಸಿಗೆ ಹಲವು ಲಕ್ಷ ರೂ. ನಷ್ಟವಾದರೂ, ಈ ನಷ್ಟವನ್ನು ಸಂಸ್ಥೆಯೇ ಭರಿಸಲಿದೆ ಎಂದು ಬಿಎಂಟಿಸಿ ತಿಳಿಸಿದೆ.
"ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾರ್ಚ್ 8 ರಂದು ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಲು ನಾವು ಸಂತೋಷಪಡುತ್ತೇವೆ. ಮಹಿಳೆಯರು ಸಾರ್ವಜನಿಕ ಸಾರಿಗೆ ಬಳಸುವುದನ್ನು ಉತ್ತೇಜಿಸಲು ಇದರಿಂದ ಸಾಧ್ಯವಾಗಲಿದೆ ಎನ್ನುವುದು ನಮ್ಮ ನಂಬಿಕೆ. ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗೆ ನಾವು ಬದ್ಧರಾಗಿದ್ದೇವೆ" ಎಂದು ಬಿಎಂಟಿಸಿ ಅಧ್ಯಕ್ಷರಾದ ನಂದೀಶ್ ರೆಡ್ಡಿ ಹೇಳಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 48 ಘಟಕಗಳನ್ನು, 50 ಬಸ್ ನಿಲ್ದಾಣಗಳನ್ನು ಹೊಂದಿದೆ. ಸುಮಾರು 6,600 ಬಸ್‌ಗಳಿದ್ದು, ಪ್ರತಿನಿತ್ಯ ಹತ್ತು ಲಕ್ಷ ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸುತ್ತದೆ. ನಿತ್ಯ ಸುಮಾರು 29 ಲಕ್ಷ ಪ್ರಯಾಣಿಕರು ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ.
ಇದೇ ಮೊದಲ ಬಾರಿಗೆ ವಾಯುಪಡೆಯ ಕ್ಷಿಪಣಿ ದಳ ಮುನ್ನಡೆಸಲು ಮಹಿಳಾ ಅಧಿಕಾರಿ ನೇಮಕ
ಭಾರತದ ರಕ್ಷಣಾ ಪಡೆಯ ಪ್ರಮುಖ ಹುದ್ದೆಗಳಲ್ಲಿ ಮಹಿಳಾ ಅಧಿಕಾರಿಗಳಿಗೆ ಇತ್ತೀಚೆಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದ್ದು, ಪುರುಷ ಸಹವರ್ತಿಗಳಿಗೆ ಸರಿಸಮಾನದ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿದೆ. ಮಹಿಳಾ ದಿನಕ್ಕೆ ಕ್ಷಣಗಣನೆ ಆರಂಭವಾದ ಈ ಹೊತ್ತಿನಲ್ಲಿ ವಾಯುಪಡೆಯ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಯುದ್ಧಪಡೆಯ ಮುಂಚೂಣಿ ಪಡೆಗೆ ಮಹಿಳಾ ಅಧಿಕಾರಿಯೊಬ್ಬರನ್ನು ನೇಮಕ ಮಾಡಲಾಗಿದೆ. ಈ ಕುರಿತ ವರದಿ ಇಲ್ಲಿದೆ.
ಮಹಿಳಾ ದಿನದ ಇತಿಹಾಸ ಹಾಗೂ ಮಹತ್ವದ ಬಗ್ಗೆ ಗೊತ್ತೆ?
ಪ್ರತಿ ವರ್ಷ ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ದಿನವನ್ನು ಆಚರಿಸುತ್ತೇವೆ. ಆದರೆ ಮಹಿಳಾದಿನದ ಆರಂಭದ ಹಿಂದಿನ ಇತಿಹಾಸವೇನು, ಈ ಆಚರಣೆಯ ಮಹತ್ವವೇನು? ಪ್ರತಿ ವರ್ಷ ಒಂದೊಂದು ಪರಿಕಲ್ಪನೆಯಲ್ಲಿ ಮಹಿಳಾ ದಿನವನ್ನು ಆಚರಿಸುವುದು ಯಾಕೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ವಿಭಾಗ