ಕನ್ನಡ ಸುದ್ದಿ  /  ಕರ್ನಾಟಕ  /  Jagadish Shettar: ಬಿಜೆಪಿ ಬಿಟ್ಟು ಬೀಗರ ತೆಕ್ಕೆಗೆ ಜಾರಿದ ಜಗದೀಶ್‌ ಶೆಟ್ಟರ್‌; ರಾಜಕಾರಣದಲ್ಲಿ ವೈವಾಹಿಕ ಸಂಬಂಧಗಳಿಗೂ ಪ್ರಾಮುಖ್ಯತೆ

Jagadish Shettar: ಬಿಜೆಪಿ ಬಿಟ್ಟು ಬೀಗರ ತೆಕ್ಕೆಗೆ ಜಾರಿದ ಜಗದೀಶ್‌ ಶೆಟ್ಟರ್‌; ರಾಜಕಾರಣದಲ್ಲಿ ವೈವಾಹಿಕ ಸಂಬಂಧಗಳಿಗೂ ಪ್ರಾಮುಖ್ಯತೆ

Jagadish Shettar: ಶ್ಯಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ಗಮನಿಸಿ ಹೇಳುವುದಾದರೆ, ವೈವಾಹಿಕ ಸಂಬಂಧ ರಾಜಕಾರಣದ ಅನಿವಾರ್ಯ ಪರಿಸ್ಥಿತಿಯಲ್ಲಿ ಹೇಗೆ ಕೆಲಸ ಮಾಡುತ್ತವೆ ಎಂಬುದಕ್ಕೆ ಒಂದು ನಿದರ್ಶನ ಎಂದು ಪರಿಗಣಿಸಬಹುದೇನೊ.. ಜಗದೀಶ್‌ ಶೆಟ್ಟರ್‌ ನಡೆಯನ್ನು ಅವಲೋಕಿಸುವುದಕ್ಕೆ ಈ ಹಿನ್ನೆಲೆ ಒಂದು ನಿಮಿತ್ತ.

ಜಗದೀಶ್‌ ಶೆಟ್ಟರ್‌ (ಸಂಗ್ರಹ ಚಿತ್ರ)
ಜಗದೀಶ್‌ ಶೆಟ್ಟರ್‌ (ಸಂಗ್ರಹ ಚಿತ್ರ) (Twitter)

ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ನಮ್ಮ ಬೀಗರು. ಅವರು ಬಂದರೆ ಅವರಿಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದ ಟಿಕೆಟ್‌ ಫಿಕ್ಸ್.‌ ಅವರ ಜತೆಗೆ ನಮ್ಮ ಮಗ ಮಾತುಕತೆ ನಡೆಸಿದ್ದಾನೆ ಎಂದು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಶ್ಯಾಮನೂರು ಶಿವಶಂಕರಪ್ಪ ಹೇಳಿದ್ದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಶ್ಯಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ಗಮನಿಸಿ ಹೇಳುವುದಾದರೆ, ವೈವಾಹಿಕ ಸಂಬಂಧ ರಾಜಕಾರಣದ ಅನಿವಾರ್ಯ ಪರಿಸ್ಥಿತಿಯಲ್ಲಿ ಹೇಗೆ ಕೆಲಸ ಮಾಡುತ್ತವೆ ಎಂಬುದಕ್ಕೆ ಒಂದು ನಿದರ್ಶನ ಎಂದು ಪರಿಗಣಿಸಬಹುದೇನೊ.. ಜಗದೀಶ್‌ ಶೆಟ್ಟರ್‌ ನಡೆಯನ್ನು ಅವಲೋಕಿಸುವುದಕ್ಕೆ ಈ ಹಿನ್ನೆಲೆ ಒಂದು ನಿಮಿತ್ತ.

ರಾಜಕಾರಣದಲ್ಲಿ ಪ್ರತಿಯೊಂದೂ ಲೆಕ್ಕಾಚಾರದ ನಡೆ. ಎಡವಿದರೆ ಏಳಿಗೆಗೆ ಇಲ್ಲ ಎಡೆ. ಸಂಘಪರಿವಾರದ ನೆಲೆಗಟ್ಟಿನಲ್ಲಿ ಬೆಳೆದುಬಂದವರು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್.‌ ಹೀಗಾಗಿಯೇ ಅವರು ಬಿಜೆಪಿಯಿಂದ ಆರು ಬಾರಿ ಶಾಸಕರಾದರು. ವಿಧಾನ ಸಭೆಯ ಸ್ಪೀಕರ್‌, ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನ ಹೊಣೆಗಾರಿಕೆಯನ್ನು ನಿರ್ವಹಿಸುವುದಕ್ಕೆ ಸಾಧ್ಯವಾಯಿತು. ಹೆಚ್ಚೇಕೆ, ಅವರ ʻಮೃದು ನಿಲುವುʼ ಅವರನ್ನು ಸಂಕಷ್ಟಮಯ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಗಾದಿಯ ಮೇಲೆ ಕೂರಿಸಿತು.

ಬಾಗಲಕೋಟೆ ಜಿಲ್ಲೆ (ಈ ಹಿಂದಿನ ಬಿಜಾಪುರ ಜಿಲ್ಲೆ)ಯ ಬಾದಾಮಿ ತಾಲೂಕಿನ ಕೆರೂರು ಗ್ರಾಮದಲ್ಲಿ 1955ರ ಡಿ.17ರಂದು ಶೆಟ್ಟರ್‌ ಜನಿಸಿದರು. ಅವರ ತಂದೆ ಎಸ್‌.ಎಸ್.ಶೆಟ್ಟರ್‌ ಮತ್ತು ತಾಯಿ ಬಸವಣ್ಣೆಮ್ಮ. ಎಸ್‌.ಎಸ್‌.ಶೆಟ್ಟರ್‌ ಜನಸಂಘದ ಹಿರಿಯ ಕಾರ್ಯಕರ್ತರು. ಹುಬ್ಬಳ್ಳಿ-ಧಾರವಾಡ ನಗರಪಾಲಿಕೆಗೆ 5 ಸಲ ಆಯ್ಕೆಯಾದವರು. ಪಾಲಿಕೆಯಲ್ಲಿ ಜನಸಂಘದ ಮೊದಲ ಮೇಯರ್‌ ಎಂಬ ಕೀರ್ತಿಗೆ ಭಾಜನರು. ಇನ್ನು ಜಗದೀಶ್‌ ಶೆಟ್ಟರ್‌ ಅವರ ಅಂಕಲ್‌ ಸದಾಶಿವ ಶೆಟ್ಟರ್‌ ದಕ್ಷಿಣ ಭಾರತದಲ್ಲಿ, ಕರ್ನಾಟಕದಲ್ಲಿ ವಿಧಾನಸಭೆಗೆ ಹುಬ್ಬಳ್ಳಿಯಿಂದ 1967ರಲ್ಲಿ ಆಯ್ಕೆಯಾದ ಜನಸಂಘದ ಮೊದಲ ನಾಯಕ.

ಜಗದೀಶ ಶೆಟ್ಟರ್‌ ಬಿಕಾಂ, ಎಲ್‌ಎಲ್‌ಬಿ ಪದವೀಧರರು. ಹುಬ್ಬಳ್ಳಿಯಲ್ಲಿ ಎರಡು ದಶಕ ಕಾಲ ವಕೀಲಿಕೆ ಮಾಡಿದವರು. ಪತ್ನಿ ಶಿಲ್ಪಾ, ಪ್ರಶಾಂತ್‌ ಮತ್ತು ಸಂಕಲ್ಪ ಇಬ್ಬರು ಪುತ್ರರು. ಲಿಂಗಾಯತ ಸಮುದಾಯದ ಬಣಜಿಗ ಉಪ ಜಾತಿಗೆ ಸೇರಿದವರು.

ಇವಿಷ್ಟು ಜಗದೀಶ್‌ ಶೆಟ್ಟರ್‌ ಅವರ ಕೌಟುಂಬಿಕ ಮತ್ತು ರಾಜಕಾರಣಕ್ಕೆ ಬುನಾದಿಗೆ ಸಂಬಂಧಿಸಿದ ಕಿರು ಹಿನ್ನೆಲೆ. ಸಂಘ ಪರಿವಾರ, ಜನಸಂಘ, ಬಿಜೆಪಿಯ ಭದ್ರ ಬುನಾದಿ ಹೊಂದಿ ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ ಸೇರಿದ್ದು ಬಹುತೇಕರ ಹುಬ್ಬೇರುವಂತೆ ಮಾಡಿದೆ.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ಸಂಘಪರಿವಾರ, ಪಕ್ಷದ ಕಾರ್ಯಕರ್ತರ ನಡುವೆ ಉತ್ತಮ ಸಂಪರ್ಕ, ಒಡನಾಟ ಇಟ್ಟುಕೊಂಡಿದ್ದವರು ಜಗದೀಶ ಶೆಟ್ಟರ್‌. ಈ ನಡುವೆ, 2014 -15ರಲ್ಲಿ ಜಗದೀಶ್‌ ಶೆಟ್ಟರ್‌ ಅವರ ಪುತ್ರ ಪ್ರಶಾಂತ್‌ ಅವರು ಅಂದು ಸಚಿವರಾಗಿದ್ದ ಶ್ಯಾಮನೂರು ಶಿವಶಂಕರಪ್ಪ ಅವರ ಮೊಮ್ಮಗಳು ಅಂಚಲ್‌ ಅವರನ್ನು ವಿವಾಹವಾದರು. ಈ ಸಮಾರಂಭವು ಪಕ್ಷಾತೀತ ಕಾರ್ಯಕ್ರಮವಾಗಿ ಸಾಕಷ್ಟು ಗಮನಸೆಳೆದಿತ್ತು.

ಕಾಂಗ್ರೆಸ್‌ ಪಕ್ಷ ಲಿಂಗಾಯತ ಮತ ಬ್ಯಾಂಕ್‌ ಗಟ್ಟಿ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದು, ಇದಕ್ಕೆ ಶ್ಯಾಮನೂರು ಶಿವಶಂಕರಪ್ಪ ಅವರನ್ನೇ ಮುಂದುಮಾಡಿತು. ಏಳನೇ ಬಾರಿಗೆ ಟಿಕೆಟ್‌ ಸಿಗದೆ ಹತಾಶರಾದ ಜಗದೀಶ್‌ ಶೆಟ್ಟರ್‌ ಮನಸ್ಸು ಸ್ಪಂದಿಸಿದ್ದು ʻಬಿಜೆಪಿಯ ವರಿಷ್ಠರಿಗೋ, ಸಂಘ ಪರಿವಾರದ ವರಿಷ್ಠರಿಗೋ ಅಲ್ಲʼ; ಬೀಗರಾದ ಕಾಂಗ್ರೆಸ್‌ ನಾಯಕ ಶ್ಯಾಮನೂರು ಅವರಿಗೆ! ಅದಕ್ಕೆ ಶೆಟ್ಟರ್‌ ಕರಗಿದರು. ಅಂದ ಹಾಗೆ ಶೆಟ್ಟರ್‌ ಮತ್ತೊಬ್ಬ ಪುತ್ರ ಸಂಕಲ್ಪ್‌ ಅವರ ವಿವಾಹ ದಿವಂಗತ ಸುರೇಶ್‌ ಅಂಗಡಿ ಅವರ ಪುತ್ರಿ ಜತೆಗೆ ಆಗಿದೆ.

ವೈವಾಹಿಕ ಸಂಬಂಧ ಬೀರಿದ ಪರಿಣಾಮ ಇದು ಎಂದು ವಿಶ್ಲೇಷಿಸುವುದಕ್ಕೆ ಅಡ್ಡಿ ಇಲ್ಲ ಅಲ್ವ…

IPL_Entry_Point