Karnataka assembly election 2023: ಪಂಚರತ್ನ ರಥಯಾತ್ರೆಯಲ್ಲಿ ಜೆಡಿಎಸ್ ಸೇರಿದ 42 ಕಾಂಗ್ರೆಸ್ ಮುಖಂಡರು
ಇಂದು ಕೋಲಾರ ಜಿಲ್ಲೆಯ ಮುಳಬಾಗಿಲು ವಿಧಾನಸಭೆ ಕ್ಷೇತ್ರದ 42ಕ್ಕೂ ಹೆಚ್ಚು ಪ್ರಮುಖ ನಾಯಕರು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಬಾದಾಮಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷ ಬದಲಾವಣೆ ಚಟುವಟಿಕೆಗಳೂ ಬಿರುಸು ಪಡೆದಿವೆ. ಇಂದು ಕೋಲಾರ ಜಿಲ್ಲೆಯ ಮುಳಬಾಗಿಲು ವಿಧಾನಸಭೆ ಕ್ಷೇತ್ರದ 42ಕ್ಕೂ ಹೆಚ್ಚು ಪ್ರಮುಖ ನಾಯಕರು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪಂಚರತ್ನ ರಥಯಾತ್ರೆ ನಡೆಸುತ್ತಿರುವ ವೇಳೆ ಮುಳಬಾಗಿಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರ ನೇತೃತ್ವದಲ್ಲಿ ಗುಳೇದಗುಡ್ಡಕ್ಕೆ ಆಗಮಿಸಿದ ಎಲ್ಲ ನಾಯಕರು ಪಕ್ಷಕ್ಕೆ ಸೇರಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರು ಎಲ್ಲ ಮುಖಂಡರಿಗೆ ಪಕ್ಷದ ಶಾಲು ಹಾಕಿ, ಬಾವುಟ ನೀಡಿ ಪಕ್ಷಕ್ಕೆ ಬರ ಮಾಡಿಕೊಂಡಿದ್ದಾರೆ.
ಮುಳಬಾಗಿಲು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೀಶ್, ಮುಖಂಡರಾದ ಪುಟ್ಟೇಗೌಡ, ಆನಂದ್, ಸಿ.ಗೋಪಿ, ಗಂಗರಾಜು, ಕೆ.ಗೋಪಾಲ್, ರಾಮಚಂದ್ರ, ರೆಡ್ಡಪ್ಪ, ಸುಬ್ರಮಣಿ, ಸುನೀಲ್, ಸಿ ಕೆ ಎನ್ ನಾಗರಾಜು , ರಮೇಶ್, ವಿ ಕೃಷ್ಣಪ್ಪ, ಚಂದ್ರಪ್ಪ, ಚಂದ್ರಶೇಖರ, ಪ್ರಕಾಶ್ ಸೇರಿದಂತೆ 42ಕ್ಕೂ ಹೆಚ್ಚು ನಾಯಕರು ಪಕ್ಷದ ಸಿದ್ಧಾಂತ, ನಾಯಕತ್ವ ಒಪ್ಪಿ ಜೆಡಿಎಸ್ ಸೇರಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ನಮ್ಮ ಪಕ್ಷಕ್ಕೆ ಬಂದಿರುವ ಎಲ್ಲಾ ನಾಯಕರನ್ನು ಸಂತೋಷದಿಂದ ಬರ ಮಾಡಿಕೊಂಡಿದ್ದೇನೆ. ಸಮೃದ್ಧಿ ಮಂಜುನಾಥ್ ಅವರ ನೇತೃತ್ವದಲ್ಲಿ ಎಲ್ಲರೂ ಪಕ್ಷ ಸಂಘಟನೆ ಮಾಡಲಿ, ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ಈ ಬೃಹತ್ ಸೇರ್ಪಡೆಯಿಂದ ಮುಳಬಾಗಿಲು ಸೇರಿ ಕೋಲಾರ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಕ್ಷ ಸೇರಿದ ನಂತರ ಮಾತನಾಡಿದ ಮುಳಬಾಗಿಲಿನ ಮುಖಂಡರು, ಕಾಂಗ್ರೆಸ್ ಪಕ್ಷದಲ್ಲಿ ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು. ಕ್ಷೇತ್ರದಲ್ಲಿ ಆ ಪಕ್ಷಕ್ಕೆ ಗೊತ್ತು ಗುರಿ ಇಲ್ಲದ ಪರಿಸ್ಥಿತಿ ಇದೆ. ಭವಿಷ್ಯ ಇಲ್ಲದ ಪಕ್ಷಕ್ಕೆ ನಾವು ವಿದಾಯ ಹೇಳಿ ಪ್ರಬಲ ನಾಯಕತ್ವದ ಜೆಡಿಎಸ್ ಪಕ್ಷಕ್ಕೆ ಸೇರಿದ್ದೇವೆ ಎಂದು ಹೇಳಿದ್ದಾರೆ.
ಮುಳಬಾಗಿಲಿನಿಂದ ಗುಳೇದಗುಡ್ಡಕ್ಕೆ ಬಂದ ನಮ್ಮನ್ನು ಕುಮಾರಸ್ವಾಮಿ ಅವರು ಅತ್ಯಂತ ಪ್ರೀತಿ ವಿಶ್ವಾಸದಿಂದ ಬರಮಾಡಿಕೊಂಡರು. ಅವರ ನಾಯಕತ್ವದಲ್ಲಿ ಅಚಲ ನಿಷ್ಠೆ ಇಟ್ಟು ಜೆಡಿಎಸ್ ಸೇರಿದ್ದೇವೆ ಎಂದು ಅವರು ಹೇಳಿದ್ದಾರೆ.
ಮುಳಬಾಗಿಲು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರುವವರ ಸಂಖ್ಯೆ ಹೆಚ್ಚಾಗಿದೆ. ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ನಿಷ್ಠೆ ಇಟ್ಟು ಅನೇಕ ನಾಯಕರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ತೊರೆದು ಜೆಡಿಎಸ್ ಸೇರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಾಯಕರು ನಮ್ಮ ಪಕ್ಷ ಸೇರುತ್ತಾರೆ ಎಂದು ಸಮೃದ್ಧಿ ಮಂಜುನಾಥ್ ತಿಳಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಗೌಡ, ಬಾದಾಮಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹನುಮಂತಪ್ಪ ಮಾವಿನಮರದ ಮುಂತಾದವರು ಇದ್ದರು.