ಕನ್ನಡ ಸುದ್ದಿ  /  ಕರ್ನಾಟಕ  /  Amit Shah: ಕರ್ನಾಟಕ ಚುನಾವಣೆ; ರಾಹುಲ್ ಬಳಿಕ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಸರದಿ; ಮಂಗಳೂರಿನಲ್ಲಿಂದು ಬೃಹತ್ ರೋಡ್ ಶೋ

Amit Shah: ಕರ್ನಾಟಕ ಚುನಾವಣೆ; ರಾಹುಲ್ ಬಳಿಕ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಸರದಿ; ಮಂಗಳೂರಿನಲ್ಲಿಂದು ಬೃಹತ್ ರೋಡ್ ಶೋ

ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಅವರು ಮಂಗಳೂರಿನಲ್ಲಿಂದು ಬೃಹತ್ ರೋಡ್ ಶೋ ಮೂಲಕ ಶಕ್ತಿ ಪ್ರದರ್ಶನ ನಡೆಸಲಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ (PTI)
ಕೇಂದ್ರ ಗೃಹ ಸಚಿವ ಅಮಿತ್ ಶಾ (PTI)

ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ (Udupi) ಜಿಲ್ಲೆಗಳಲ್ಲಿ ಚುನಾವಣಾ ಕಾವು ಏರತೊಡಗಿದ್ದು, ರಾಜಕೀಯ ಪಕ್ಷಗಳ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಕೆಲ ದಿನಗಳಿಂದ ಕಾಂಗ್ರೆಸ್‌ನ ವರಿಷ್ಠ ರಾಹುಲ್ ಗಾಂಧಿ (Rahul Gandhi) ತಿರುಗಾಟ ನಡೆಸಿ ಮತಯಾಚನೆ ಮಾಡಿದ್ದಾರೆ. ಇದೀಗ ಬಿಜೆಪಿ (BJP) ಚುನಾವಣೆಯ ಚಾಣಕ್ಯ ಅಮಿತ್ ಶಾ (Amit Shah) ಅವರ ಎಂಟ್ರಿಯಾಗುತ್ತಿದೆ.

ಇಂದು (ಏ.29, ಶನಿವಾರ) ಸಂಜೆ ಮಂಗಳೂರಿಗೆ ಅಮಿತ್ ಶಾ ಆಗಮಿಸುತ್ತಿದ್ದು, ಬೃಹತ್ ರೋಡ್ ಶೋ ನಡೆಸಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಇದರ ಭಾಗವಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಮಂಗಳೂರಿನಲ್ಲಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.

ನಗರದ ಪುರಭವನ ಸಮೀಪದ ಕ್ಲಾಕ್ ಟವರ್ನಿಂದ ಕೊಡಿಯಾಲಬೈಲಿನ ಮಂಜೇಶ್ವರ ಗೋವಿಂದ ಪೈ ಸರ್ಕಲ್ ವರೆಗೆ ರೋಡ್ ಶೋ ನಡೆಯಲಿದ್ದು, ಸಾವಿರಾರು ಮಂದಿ ಕಾರ್ಯಕರ್ತರು, ಬೆಂಬಲಿಗರು ಭಾಗವಹಿಸುವ ನಿರೀಕ್ಷೆಯಿದೆ. ಸಂಜೆ 5ರಿಂದ ರೋಡ್ ಶೋ ಪ್ರಾರಂಭವಾಗಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಅಮಿತ್ ಶಾ ಅವರ ರೋಡ್ ಶೋ ಕರಾವಳಿ ಭಾಗದಲ್ಲಿ ಭಾರೀ ಸಂಚಲನ ಸೃಷ್ಟಿಸಲಿದೆ. ಆ ಮೂಲಕ ಚುನಾವಣೆಯ ಕಾವು ಇನ್ನಷ್ಟು ಹೆಚ್ಚಿಸಲಿದ್ದಾರೆ ಎಂಬ ನಿರೀಕ್ಷೆ ಬಿಜೆಪಿಯದ್ದು.

ಇಂದು ಬೆಳಗ್ಗೆ 10.30ಕ್ಕೆ ಮಡಿಕೇರಿಯಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಆ ಬಳಿಕ ಅಂದರೆ 2 ಗಂಟೆಗೆ ಉಡುಪಿಯ ಕಟಪಾಡಿಯಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಬೈಂದೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಸಂಜೆ ಮಂಗಳೂರಿಗೆ ಆಗಮಿಸಿ ರೋಡ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ.

ಪುತ್ತೂರು ಕ್ಷೇತ್ರದಲ್ಲಿ ಅಣ್ಣಾಮಲೈ ಕ್ಯಾಂಪೇನ್

ಬಿಜೆಪಿಗೆ ಸೆಡ್ಡು ಹೊಡೆದು ಕಣಕ್ಕಿಳಿದಿರುವ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ನಿನ್ನೆ (ಏ.28, ಶುಕ್ರವಾರ) ಮಹಿಳಾ ಸಮಾವೇಶ ನಡೆಸಿ ನೂರಾರು ಕಾರ್ಯಕರ್ತರನ್ನು ಒಟ್ಟು ಸೇರಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ವರ್ಸಸ್ ಪಕ್ಷೇತರ ಜಟಾಪಟಿ ಶುರುವಾಗಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ಪ್ರಮುಖ ನಾಯಕರನ್ನೇ ಪುತ್ತೂರಿಗೆ ಕರೆಸುವ ಯೋಚನೆ ಮಾಡಿದ್ದು, ನಾವು ಕಾಂಗ್ರೆಸ್ ಗಷ್ಟೇ ಸ್ಪರ್ಧಿಗಳು ಎಂದು ಮೇಲ್ನೋಟಕ್ಕೆ ಹೇಳಿಕೊಂಡರೂ ಪಕ್ಷೇತರ ಅಭ್ಯರ್ಥಿಯ ಹವಾವನ್ನು ತಣ್ಣಗಾಗಿಸುವ ಪ್ರಯತ್ನವನ್ನು ನಾನಾ ರೀತಿಯಲ್ಲಿ ಮಾಡುತ್ತಿದೆ.

ಅದರ ಭಾಗವಾಗಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕರ್ನಾಟಕ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಅವರು ಇಂದು (ಏ.29, ಶನಿವಾರ) ಬೆಳಗ್ಗೆ 11 ಗಂಟೆಗೆ ಪುತ್ತೂರಿನಲ್ಲಿ ಹಾಗೂ ಸಂಜೆ 6 ಗಂಟೆಗೆ ವಿಟ್ಲದಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಅಣ್ಣಾಮಲೈ ಭಾಷಣಕ್ಕೆ ಸಾವಿರಾರು ಜನರು ಬರಲಿದ್ದಾರೆ ಎಂಬ ನಿರೀಕ್ಷೆ ಬಿಜೆಪಿಯದ್ದು.

ಕಾಂಗ್ರೆಸ್‌ನ ಮಹಾನಾಯಕ ರಾಹುಲ್ ಗಾಂಧಿ ಮಂಗಳೂರಿನಲ್ಲೇ ಸರ್ಕಾರ ಬಂದರೆ ಜಾರಿಗೊಳಿಸುವ 5ನೇ ಗ್ಯಾರಂಟಿ ಘೋಷಣೆ ಮಾಡಿ ಸಂಚಲನ ಸೃಷ್ಟಿಸಿದ್ದರು. ಉಡುಪಿಯಲ್ಲಿ ಮೀನುಗಾರರೊಂದಿಗೆ ಸಂವಾದ ನಡೆಸಿದ್ದಾರೆ. ಡಿಕೆ ಶಿವಕುಮಾರ್ ಕೊಲ್ಲೂರಿನಲ್ಲಿ ಹವನ ನಡೆಸಿ, ಮುಂದಿನ ಸಿಎಂ ಆಗುವ ಕುರಿತು ಪ್ರಾರ್ಥನೆ ಕೂಡ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಡಿಕೆ ಶಿವಕುಮಾರ್ ಮಾತ್ರವಲ್ಲದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ವಿವಿಧೆಡೆ ಪ್ರಚಾರ ಸಭೆಗಳನ್ನು ನಡೆಸಿ ಬಿಜೆಪಿ, ಮೋದಿ, ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಬ್ಬರದ ಪ್ರಚಾರದ ಬಳಿಕ ಇದೀಗ ಕೇಸರಿ ನಾಯಕರ ಹವಾ ಶುರುವಾಗಿದೆ. (ವರದಿ-ಹರೀಶ್ ಮಾಂಬಾಡಿ)

IPL_Entry_Point