ಕನ್ನಡ ಸುದ್ದಿ  /  Karnataka  /  Karnataka Congress Reaction On Attack On Residence Of Bs Yediyurappa

Congress Tweet: ಘರ್ಷಣೆಯ ಬೀಜ ಬಿತ್ತುವುದು ಶಿವಮೊಗ್ಗದಲ್ಲೇ ಏಕೆ? ಬಿಎಸ್​ವೈ ಮನೆ ಮೇಲಿನ ದಾಳಿ "ಸಂತೋಷ ಕೂಟ"ದ ಕೈವಾಡ ಎಂದ ಕಾಂಗ್ರೆಸ್​

ಯಡಿಯೂರಪ್ಪ ಅವರ ಮನೆಯ ಮೇಲಿನ ದಾಳಿಯ ಹಿಂದೆ ಬಿಜೆಪಿಯ "ಸಂತೋಷ ಕೂಟ"ದ ಕೈವಾಡ ಇರುವುದು ನಿಶ್ಚಿತ ಎಂದು ರಾಜ್ಯ ಕಾಂಗ್ರೆಸ್​ ಹೇಳಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಒಳಮೀಸಲಾತಿ ಕುರಿತ ಎಜೆ ಸದಾಶಿವ ಸಮಿತಿಯ ವರದಿಯನ್ನು ಜಾರಿಗೊಳಿಸಲು ಕೇಂದ್ರಕ್ಕೆ ಶಿಫಾರಸು ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬಂಜಾರ ಸಮುದಾಯದವರು ನಿನ್ನೆ (ಮಾ.27) ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ಮಾಡಿ ಪ್ರತಿಭಟನೆ ನಡೆಸಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾಂಗ್ರೆಸ್​, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಲ್ಲ, ಸರ್ಕಾರದ ನಿರ್ಧಾರಗಳಲ್ಲಿ ಅವರ ಪಾತ್ರವಿಲ್ಲ. ಆದರೂ ಸರ್ಕಾರದ ಅವಾಂತರಕ್ಕೆ ಬಿಎಸ್​ವೈ ಮನೆ ಮೇಲೆ ದಾಳಿ ಆಗಿದ್ದೇಕೆ? ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದ್ದೇಕೆ ಎನ್ನುವುದೇ ಯಕ್ಷಪ್ರಶ್ನೆ. ಯಡಿಯೂರಪ್ಪ ಅವರ ಮನೆಯ ಮೇಲಿನ ದಾಳಿಯ ಹಿಂದೆ ಬಿಜೆಪಿಯ "ಸಂತೋಷ ಕೂಟ"ದ ಕೈವಾಡ ಇರುವುದು ನಿಶ್ಚಿತ ಎಂದು ಹೇಳಿದೆ.

ತನ್ನ ತವರಿನಲ್ಲಿ, ಅದರಲ್ಲೂ ಮಾಜಿ ಸಿಎಂ ಮನೆ ಬಳಿ ಕಾನೂನು ಸುವ್ಯವಸ್ಥೆ ಕಾಪಾಡಲಾಗದ ಆರಗ ಜ್ಞಾನೇಂದ್ರ ಅವರದ್ದು ಹೊಣೆಗೇಡಿತನವೋ ಅಥವಾ "ಸಂತೋಷ ಕೂಟ"ವನ್ನು ಮೆಚ್ಚಿಸುವ ಷಡ್ಯಂತ್ರವೋ? ಎಂದು ಕಾಂಗ್ರೆಸ್​ ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟ್​ ಮಾಡಿದೆ.

ಈ ಮೂಲಕ ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್​ವೈ ಬಣ ಹಾಗೂ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್​ ಸಂತೋಷ್​ ಬಣದ ಬಗ್ಗೆ ಮತ್ತೆ ಕಾಂಗ್ರೆಸ್​ ಪರೋಕ್ಷವಾಗಿ ಮಾತನಾಡಿದೆ.

ಮೀಸಲಾತಿ ವಿಚಾರದಲ್ಲಿ ಅಪಪ್ರಚಾರ ನಡೆಸಿ ವಿರೋಧ ಪಕ್ಷದ ನಾಯಕರು ರಾಜಕೀಯ ಬೇಳೆ ಬೇಯಿಸಲು ಹೊರಟಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದರು. ಚುನಾವಣೆಯ ಹೊಸ್ತಿಲಲ್ಲಿ, ಕಾಂಗ್ರೆಸ್ ನಾಯಕರು, ಪರಿಶಿಷ್ಠ ಜಾತಿ ಪಂಗಡಗಳ ಮಧ್ಯೆ ಒಡಕು ಮೂಡಿಸಲು ಯತ್ನಿಸುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ, ಯಾವುದೇ ಕ್ರಮಕ್ಕೆ ಮುಂದಾಗದೆ, ನ್ಯಾಯ ಒದಗಿಸಲು ವಿಫಲರಾದ, ವಿರೋಧಿ ಪಕ್ಷದ ನಾಯಕರು, ಒಳ ಮೀಸಲಾತಿ ವಿಷಯಕ್ಕೆ ಸಂಬಂಧಿಸಿ ದಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್​, ಗೃಹಸಚಿವರ ತವರು ಜಿಲ್ಲೆಯಲ್ಲಿ ಮಾಜಿ ಸಿಎಂ ಮನೆಗೆ ರಕ್ಷಣೆ ಇಲ್ಲವೆಂದರೆ ಏನರ್ಥ. ಗುಪ್ತಚರ ಇಲಾಖೆ ಯಾವ ಬಿಲದಲ್ಲಿ ಗೆಣಸನ್ನು ಹುಡುಕುತ್ತಿತ್ತು? ಆರಗ ಜ್ಞಾನೇಂದ್ರ ಅವರೇ?

ಇದು ಕಾನೂನು ಸುವ್ಯವಸ್ಥೆಯ ವೈಫಲ್ಯವೇ ಅಥವಾ ಷಡ್ಯಂತ್ರವೇ? ಮೀಸಲಾತಿ ಅವಾಂತರಕ್ಕೆ ಹೊಣೆಗಾರರಲ್ಲದ ಬಿಎಸ್​ವೈ ಅವರ ಮನೆ ಮೇಲೆ ದಾಳಿ ಮಾಡಿದ್ದು ಯಾರ "ಸಂತೋಷ"ದ ಕಾರಣಕ್ಕೆ? ಎಂದು ಪ್ರಶ್ನಿಸಿದೆ.

ಶಿವಮೊಗ್ಗದಲ್ಲೇ ಏಕೆ?

ಕಾನೂನು ಸುವ್ಯವಸ್ಥೆ ಉಲ್ಲಂಘನೆಯ ಪ್ರಕರಣಗಳು, ಗಲಭೆ, ಘರ್ಷಣೆಗಳೆಲ್ಲದರ ಬೀಜ ಬಿತ್ತುವುದು ಗೃಹ ಸಚಿವರ ತವರು ಜಿಲ್ಲೆ ಶಿವಮೊಗ್ಗದಲ್ಲೇ ಏಕೆ? ಎಂದು ಪ್ರಶ್ನಿಸಿದೆ. ಬಿಜೆಪಿಯ ನಕಲಿ ಚುನಾವಣಾ ತಂತ್ರಗಳು ತಿರುಗುಬಾಣವಾಗಿ ಬಿಜೆಪಿಯನ್ನೇ ಅಟ್ಟಾಡಿಸುತ್ತಿದೆ! ಬಂಜಾರಾ ಸೇರಿದಂತೆ ಹಲವು ಸಮುದಾಯಗಳು ಸರ್ಕಾರದ ವಿರುದ್ದ ಸಿಡಿದು ನಿಲ್ಲುವ ಮೂಲಕ ಬಿಜೆಪಿಯ ಅವನತಿಗೆ ಮುನ್ನುಡಿ ಬರೆಯುವುದು ನಿಶ್ಚಿತ. ಬಸವರಾಜ ಬೊಮ್ಮಾಯಿ ಅವರೇ, ಸಾಧನೆ, ಯೋಜನೆ ತೋರಿಸದೆ, ಮೂಗಿಗೆ ತುಪ್ಪ ಸವರುವ ರಾಜಕಾರಣವನ್ನು ಜನತೆ ತಿರಸ್ಕರಿಸಿದ್ದಾರೆ ಎಂದು ಕಾಂಗ್ರೆಸ್​ ಹೇಳಿದೆ.

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತ ಎಜೆ ಸದಾಶಿವ ಸಮಿತಿಯ ವರದಿಯನ್ನು ಜಾರಿಗೊಳಿಸಲು ಕೇಂದ್ರಕ್ಕೆ ಶಿಫಾರಸು ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬಂಜಾರ ಸಮುದಾಯದವರು ನಿನ್ನೆ (ಮಾ.27) ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಶಿಕಾರಿಪುರದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರ 'ಮೈತ್ರಿ' ನಿವಾಸದ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ, ಮುತ್ತಿಗೆ ಹಾಕಲು ಯತ್ನಿಸಿದ್ದರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಶಿಕಾರಿಪುರ ಪಟ್ಟಣದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

IPL_Entry_Point