ಕನ್ನಡ ಸುದ್ದಿ  /  ಕರ್ನಾಟಕ  /  Karnataka Election: ಕರ್ನಾಟಕ ಚುನಾವಣೆ; ಇಂದಿನಿಂದ ನೋಂದಾಯಿತ ವಿಶೇಷ ಚೇತನರು, 80 ವರ್ಷ ಮೇಲ್ಪಟ್ಟ ಹಿರಿಯರಿಂದ ಮತದಾನ

Karnataka Election: ಕರ್ನಾಟಕ ಚುನಾವಣೆ; ಇಂದಿನಿಂದ ನೋಂದಾಯಿತ ವಿಶೇಷ ಚೇತನರು, 80 ವರ್ಷ ಮೇಲ್ಪಟ್ಟ ಹಿರಿಯರಿಂದ ಮತದಾನ

ರಾಜ್ಯದಲ್ಲಿ ಇಂದಿನಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ನೋಂದಾಯಿತ ವಿಶೇಷ ಚೇತನರು, 80 ವರ್ಷ ಮೇಲ್ಪಟ್ಟ ಹಿರಿಯರು ಹಾಗೂ ಪತ್ರಕರ್ತರು ಇಂದು ತಾವು ಇರುವ ಸ್ಥಳದಿಂದಲೇ ಮತದಾನ ಮಾಡಲಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟ ಹಿರಿಯರು ಹಾಗೂ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ.(ಸಾಂದರ್ಭಿಕ ಚಿತ್ರ)
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟ ಹಿರಿಯರು ಹಾಗೂ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ.(ಸಾಂದರ್ಭಿಕ ಚಿತ್ರ)

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ (Central Election Commission) ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections) ಮನೆಯಲ್ಲಿಂದಲೇ ಮತದಾನ (Vote from Home) ಮಾಡುವುದಕ್ಕೆ ಅವಕಾಶ ನೀಡಿದ್ದು, ಇಂದು ನೋಂದಾಯಿತ ವಿಶೇಷ ಚೇತನರು(Specially Disabled Persons), 80 ವರ್ಷ ಮೇಲ್ಪಟ್ಟ ವೃದ್ಧರು (Seniors Above 80 Years) ಹಾಗೂ ಪತ್ರಕರ್ತರು (Journalists) ಮತದಾನ (Voting) ಮಾಡುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಈ ಬಾರಿಯ ಹೊಸ ಪ್ರಯೋಗ ಇದಾಗಿದೆ. 80 ವರ್ಷಕ್ಕೂ ಮೇಲ್ಪಟ್ಟವರು ಮತ್ತು ವಿಶೇಷ ಚೇತನರು ಮನೆಯಿಂದಲೇ ಮತದಾನ ಮಾಡಲು ಬಯಸಿದಲ್ಲಿ ಅವರಿಗೆ ಮನೆಗಳಿಂದಲೂ ಮತದಾನ ಮಾಡುವ ಸೌಲಭ್ಯವನ್ನು ಒದಗಿಸಲಾಗಿದೆ.

ಫಾರ್ಮ್ 12 ಡಿ ಮೂಲಕ ಅವಕಾಶ ನೀಡಲಾಗಿದೆ. ಅಧಿಸೂಚನೆಯ ಐದು ದಿನಗಳ ನಂತರ ಅತಿ ಹಿರಿಯರು ಅಥವಾ ವಿಶೇಷ ಚೇತನ ಮತದಾರರು ಮನೆಯಿಂದಲೇ ಮತದಾನಕ್ಕೆ ಅವಕಾಶ ಮಾಡಿಕೊಳಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಈ ಹಿಂದೆ ತಿಳಿಸಿದ್ದರು.

ರಾಜ್ಯದಲ್ಲಿ 80 ವರ್ಷಕ್ಕೂ ಮೇಲ್ಪಟ್ಟವರು 12.15 ಲಕ್ಷ ಜನ ಮತದಾರರು ಇದ್ದಾರೆ. ಈ ಹಿಂದೆ 2018ರಲ್ಲಿ ಹಿರಿಯ ಮತದಾರರ ಸಂಖ್ಯೆ 9.17 ಲಕ್ಷ ಇತ್ತು. ಇದರಲ್ಲಿ ಶೇ.32.5ರಷ್ಟು ಏರಿಕೆ ಕಂಡಿದೆ. ಜೊತೆಗೆ ವಿಶೇಷಚೇತನರ ಮತದಾರರ ಸಂಖ್ಯೆ 5.55 ಲಕ್ಷ ಇದ್ದು, 2018ರಲ್ಲಿ ಇವರ ಸಂಖ್ಯೆ 2.15 ಲಕ್ಷ ಮಾತ್ರ ಇತ್ತು.

ರಾಜ್ಯದಲ್ಲಿ ಒಟ್ಟು ಜನಸಂಖ್ಯೆ 6.1 ಕೋಟಿ ಜನರಿದ್ದಾರೆ. ಇದರಲ್ಲಿ ಮಹಿಳೆಯರು 3.01 ಕೋಟಿ ಹಾಗೂ ಪುರುಷರು 3.01 ಕೋಟಿ ಇದ್ದಾರೆ. ಈ ಪೈಕಿ ಒಟ್ಟಾರೆ 5.21 ಕೋಟಿ ಮತದಾರರು ಇದ್ದು, 2.62 ಕೋಟಿ ಪುರುಷ ಮತದಾರರು, 2.59 ಕೋಟಿ ಮಹಿಳೆಯರು ಮತದಾನದ ಹಕ್ಕು ಹೊಂದಿದ್ದಾರೆ. 42,756 ತೃತೀಯ ಲಿಂಗಿಗಳು ಇದ್ದು, 41,312 ಜನರು ಮತದಾನಕ್ಕಾಗಿ ನೋಂದಣಿ ಮಾಡಿಕೊಂಡಿದ್ದಾರೆ.

ಭಾರತ ಚುನಾವಣಾ ಆಯೋಗವು ಮೇ 10 ರಂದು ರಾಜ್ಯ ವಿಧಾನ ಸಭೆ ಸಾರ್ವತ್ರಿಕ ಚುನಾವಣೆಯ ಪ್ರಕ್ರಿಯೆಯಲ್ಲಿ ಮತದಾನಕ್ಕೆ ನಿಗದಿಪಡಿಸಿದೆ. ಅಂದು ರಾಜ್ಯಾದ್ಯಂತ ಎಲ್ಲಾ ಕಾರ್ಖಾನೆಗಳು, ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 1951ರ ಪ್ರಜಾ ಪ್ರತಿನಿಧಿ ಕಾಯ್ದೆ, ಸೆಕ್ಷನ್ 135(ಬಿ) ಅಡಿ ಹಾಗೂ ಕೈಗಾರಿಕಾ ಸಂಸ್ಥೆಗಳ ಕಾಯ್ದೆ-1963 ಕಲಂ 3(ಎ) ಅನ್ವಯ ಅರ್ಹ ಮತದಾರರಿಗೆ ವೇತನ ಸಹಿತ ರಜೆ ಘೋಷಿಸಲಾಗಿದೆ.

ಸಂವಿಧಾನಾತ್ಮಕ ಹಕ್ಕಾದ ಮತವನ್ನು ಚಲಾಯಿಸುವುದಕ್ಕಾಗಿ ಎಲ್ಲಾ ಮಾಲೀಕರು ನಿಯೋಜಕರು ಮತದಾನಕ್ಕೆ ಅನುವು ಮಾಡಿ ಕೊಡಬೇಕಾಗಿದೆ. ಆದ್ದರಿಂದ ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯ ಎಲ್ಲಾ ಕಾರ್ಖಾನೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಈ ದಿನದಂದು ಕಾಯ್ದೆಯನ್ವಯ ಅರ್ಹ ಕಾರ್ಮಿಕರು ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ರಜೆ ನೀಡುವಂತೆ ತಿಳಿಸಲಾಗಿದೆ.

ತಪ್ಪಿದಲ್ಲಿ ಸಂಬಂಧಪಟ್ಟ ಸಂಸ್ಥೆ / ನಿಯೋಜಕರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದೆಂದು ಕಾರ್ಮಿಕ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ಮಾಡುತ್ತಿದ್ದು, ಆರೋಪ, ಪ್ರತ್ಯಾರೋಪಗಳ ಮೂಲಕ ಪ್ರತಿಸ್ಪರ್ಧಿಗಳ ಶಕ್ತಿಯನ್ನು ಕುಂದಿಸುವ ಪ್ರಯತ್ನ ಮಾಡುತ್ತಿವೆ.

IPL_Entry_Point