Lok Sabha Elections 2024: ಕರ್ನಾಟಕದಲ್ಲಿ 2ನೇ ಹಂತದ ನಾಮಪತ್ರ ಸಲ್ಲಿಕೆ ಪೂರ್ಣ: 14 ಕ್ಷೇತ್ರದಲ್ಲಿ 337 ಅಭ್ಯರ್ಥಿಗಳು ಉಮೇದುವಾರಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  Lok Sabha Elections 2024: ಕರ್ನಾಟಕದಲ್ಲಿ 2ನೇ ಹಂತದ ನಾಮಪತ್ರ ಸಲ್ಲಿಕೆ ಪೂರ್ಣ: 14 ಕ್ಷೇತ್ರದಲ್ಲಿ 337 ಅಭ್ಯರ್ಥಿಗಳು ಉಮೇದುವಾರಿಕೆ

Lok Sabha Elections 2024: ಕರ್ನಾಟಕದಲ್ಲಿ 2ನೇ ಹಂತದ ನಾಮಪತ್ರ ಸಲ್ಲಿಕೆ ಪೂರ್ಣ: 14 ಕ್ಷೇತ್ರದಲ್ಲಿ 337 ಅಭ್ಯರ್ಥಿಗಳು ಉಮೇದುವಾರಿಕೆ

ಕರ್ನಾಟಕದಲ್ಲಿ ಎರಡನೇ ಹಂತದ ನಾಮಪತ್ರ ಸಲ್ಲಿಕೆ ಪೂರ್ಣಗೊಂಡಿದ್ದು, 14 ಕ್ಷೇತ್ರಗಳಿಂದ ಒಟ್ಟು 337 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಏಪ್ರಿಲ್ 22ರ ಸೋಮವಾರ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. (ವರದಿ: ಎಚ್ ಮಾರುತಿ)

ಕರ್ನಾಟಕದಲ್ಲಿ 2ನೇ ಹಂತದ ನಾಮಪತ್ರ ಸಲ್ಲಿಕೆ ಪೂರ್ಣಗೊಂಡಿದ್ದು, 14 ಲೋಕಸಭಾ ಕ್ಷೇತ್ರಗಳಲ್ಲಿ 337 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.
ಕರ್ನಾಟಕದಲ್ಲಿ 2ನೇ ಹಂತದ ನಾಮಪತ್ರ ಸಲ್ಲಿಕೆ ಪೂರ್ಣಗೊಂಡಿದ್ದು, 14 ಲೋಕಸಭಾ ಕ್ಷೇತ್ರಗಳಲ್ಲಿ 337 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.

ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಕಾವು ಬಿಸಿಲ ನಡುವೆಯೇ ದಿನದಿಂದ ದಿನಕ್ಕೆ ಭರ್ಜರಿ ಕಾವು ಪಡೆದುಕೊಳ್ಳುತ್ತಿದೆ. ರಾಜಕೀಯ ಪಕ್ಷಗಳ ನಾಯಕರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ಮೂಲಕ ಕರ್ನಾಟಕದಲ್ಲಿ (Karnataka Lok Sabha Elections 2024) ಹೆಚ್ಚಿನ ಸೀಟುಗಳನ್ನು ಗೆಲ್ಲಲು ನಾನಾ ರೀತಿಯ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಇದರ ನಡುವೆ ರಾಜ್ಯದಲ್ಲಿನ ಎರಡನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಪೂರ್ಣಗೊಂಡಿದೆ. ಎರಡನೇ ಹಂತದ ಚುನಾವಣೆ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸುವ ಕಾರ್ಯ ಶುಕ್ರವಾರ (ಏಪ್ರಿಲ್ 19) ಮುಕ್ತಾಯಗೊಂಡಿದೆ. 14 ಲೋಕಸಭೆ ಕ್ಷೇತ್ರಗಳಿಗೆ ಒಟ್ಟು 337 ಅಭ್ಯರ್ಥಿಗಳು 503 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಇವರಲ್ಲಿ 309 ಪುರುಷರು ಹಾಗೂ 28 ಮಹಿಳೆಯರು ಸೇರಿದ್ದಾರೆ.

ಏಪ್ರಿಲ್ 20 ಶನಿವಾರ ನಾಮಪತ್ರಗಳ ಪರಿಶೀಲನೆ ನಡೆದಿದ್ದು, ಏಪ್ರಿಲ್ 22ರ ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 40 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರೆ ಬಳ್ಳಾರಿಯಲ್ಲಿ ಅತಿ ಕಡಿಮೆ ಅಂದರೆ 11 ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಎರಡನೇ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳ ಪ್ರಮುಖ ಅಭ್ಯರ್ಥಿಗಳು.

ಕುತೂಹಲ ಮೂಡಿಸಿರುವ ಅಭ್ಯರ್ಥಿಗಳು ಇವರು

ಶಿವಮೊಗ್ಗದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ, ಧಾರವಾಡ ಕ್ಷೇತ್ರದಲ್ಲಿ ದಿಂಗಾಲೇಶ್ವರ ಸ್ವಾಮೀಜಿ, ದಾವಣಗೆರೆಯಲ್ಲಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಜಿ.ಬಿ. ವಿಜಯ್‌ ಕುಮಾರ್‌, ನಾಮಪತ್ರ ಸಲ್ಲಿಸಿ ಕುತೂಹಲ ಮೂಡಿಸಿದ್ದಾರೆ. ಎರಡನೇ ಹಂತದಲ್ಲಿ ದಾವಣಗೆರೆ, ಶಿವಮೊಗ್ಗ, ರಾಯಚೂರು, ಬಳ್ಳಾರಿ, ಕೊಪ್ಪಳ, ಬೀದರ್, ವಿಜಯಪುರ, ಬಾಗಲಕೋಟೆ, ಕಲಬುರಗಿ, ಧಾರವಾಡ, ಬೆಳಗಾವಿ, ಚಿಕ್ಕೋಡಿ, ಹಾವೇರಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ಮೇ 7ರಂದು ಲೋಕಸಭೆ ಚುನಾವಣೆ ನಡೆಯಲಿದೆ.

ಚಿಕ್ಕೋಡಿಯಲ್ಲಿ 20 ಅಭ್ಯರ್ಥಿಗಳು 27 ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬೆಳಗಾವಿಯಲ್ಲಿ 21 ಅಭ್ಯರ್ಥಿಗಳು 30 ನಾಮಪತ್ರ, ಬಾಗಲಕೋಟೆಯಲ್ಲಿ 26 ಅಭ್ಯರ್ಥಿಗಳು 35 ನಾಮಪತ್ರ, ಬಿಜಾಪುರದಲ್ಲಿ 21 ಅಭ್ಯರ್ಥಿಗಳು 35 ನಾಮಪತ್ರ, ಗುಲ್ಬರ್ಗದಲ್ಲಿ 23 ಅಭ್ಯರ್ಥಿಗಳು 36 ನಾಮಪತ್ರ, ರಾಯಚೂರು ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು 21 ನಾಮಪತ್ರ, ಬೀದರ್ ನಲ್ಲಿ 34 ಅಭ್ಯರ್ಥಿಗಳು 41 ನಾಮಪತ್ರ, ಕೊಪ್ಪಳದಲ್ಲಿ 27 ಅಭ್ಯರ್ಥಿಗಳು 40 ನಾಮಪತ್ರ, ಬಳ್ಳಾರಿಯಲ್ಲಿ 11 ಅಭ್ಯರ್ಥಿಗಳು 19 ನಾಮಪತ್ರ, ಕೊಪ್ಪಳದಲ್ಲಿ 27 ಅಭ್ಯರ್ಥಿಗಳು 40 ನಾಮಪತ್ರ, ಹಾವೇರಿಯಲ್ಲಿ 26 ಅಭ್ಯರ್ಥಿಗಳು 47 ನಾಮಪತ್ರ, ಧಾರವಾಡದಲ್ಲಿ 29 ಅಭ್ಯರ್ಥಿಗಳು 44 ನಾಮಪತ್ರ, ಉತ್ತರ ಕನ್ನಡದಲ್ಲಿ 19 ಅಭ್ಯರ್ಥಿಗಳು 36 ನಾಮಪತ್ರ, ದಾವಣಗೆರೆಯಲ್ಲಿ 40 ಅಭ್ಯರ್ಥಿಗಳು 54 ನಾಮಪತ್ರ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 27 ಅಭ್ಯರ್ಥಿಗಳು 38 ನಾಮಪತ್ರ ಸಲ್ಲಿಸಿದ್ದಾರೆ.

ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೂ ನಾಮಪತ್ರ ಸಲ್ಲಿಕೆ ಅವಧಿ ಶುಕ್ರವಾರ ಮುಕ್ತಾಯಗೊಂಡಿದ್ದು, 7 ಮಂದಿ ಒಟ್ಟು 13 ನಾಮಪತ್ರ ಸಲ್ಲಿಸಿದ್ದಾರೆ. ಈ ಮಧ್ಯೆ ತುಮಕೂರು ಜಿಲ್ಲೆ ಗುಬ್ಬಿಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿಕೆ ಸುರೇಶ್ ವಿರುದ್ಧ ವೈಯಕ್ತಿಕ ಆರೋಪ ಮಾಡಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ವರಿಷ್ಠ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಚುನಾವಣಾ ಆಯೋಗ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. (ವರದಿ: ಎಚ್ ಮಾರುತಿ)

Whats_app_banner