ಕನ್ನಡ ಸುದ್ದಿ  /  Karnataka  /  Lok Sabha Election 2024 Ec Issues Notification For 1st Phase In Karnataka Ls Polls Voting Date Time Table Dets Mrt

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ; ಮೊದಲನೇ ಹಂತದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಇಂದು ಶುರು

ಭಾರತದಲ್ಲಿ ಲೋಕಸಭಾ ಚುನಾವಣೆಯ ವೇಳಾಪಟ್ಟಿ (Karnataka Lok Sabha Elections 2024 Schedule) ಪ್ರಕಾರ ಇಂದು 2ನೇ ಹಂತದ ಅಧಿಸೂಚನೆ ಪ್ರಕಟವಾಗಿದೆ. ಕರ್ನಾಟಕದಲ್ಲಿ 1ನೇ ಹಂತದ ಚುನಾವಣೆ ಇದಾಗಿದ್ದು, ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ. ಈ ಹಂತದಲ್ಲಿ 14 ಕ್ಷೇತ್ರಗಳಿಗೆ ಏ.26 ರಂದು ಮತದಾನ ನಡೆಯಲಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಕರ್ನಾಟಕದ ಎರಡು ಹಂತದ ಚುನಾವಣೆ ದಿನಾಂಕದ ನಕ್ಷೆ (ಎಡ ಚಿತ್ರ); ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ (ಬಲ ಚಿತ್ರ). ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆಗೆ ಇಂದು ಅಧಿಸೂಚನೆ ಪ್ರಕಟವಾಗಿದ್ದು, ನಾಮಪತ್ರಿಕೆ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.
ಕರ್ನಾಟಕದ ಎರಡು ಹಂತದ ಚುನಾವಣೆ ದಿನಾಂಕದ ನಕ್ಷೆ (ಎಡ ಚಿತ್ರ); ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ (ಬಲ ಚಿತ್ರ). ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆಗೆ ಇಂದು ಅಧಿಸೂಚನೆ ಪ್ರಕಟವಾಗಿದ್ದು, ನಾಮಪತ್ರಿಕೆ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.

ಬೆಂಗಳೂರು: ಲೋಕಸಭಾ ಚುನಾವಣೆಯ ವೇಳಾಪಟ್ಟಿ (Karnataka Lok Sabha Elections 2024 Schedule) ಪ್ರಕಾರ ಇದು ಎರಡನೇ ಹಂತದ ಚುನಾವಣಾ ಪ್ರಕ್ರಿಯೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಇದೇ ಹಂತದಲ್ಲಿ ನಡೆಯಲಿದೆ. ಇದರ ಅಧಿಸೂಚನೆ ಮತ್ತು ನಾಮಪತ್ರ ಸಲ್ಲಿಕೆ ಇಂದು (ಮಾರ್ಚ್ 28) ಶುರುವಾಗುತ್ತಿದೆ.

ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆ ಇದಾಗಿದೆ. ರಾಜ್ಯದ 28 ಕ್ಷೇತ್ರಗಳ ಪೈಕಿ ಎರಡು ಹಂತದಲ್ಲಿ ಚುನಾವಣೆ ನಡೆಸುವುದಾಗಿ ಈಗಾಗಲೇ ಭಾರತದ ಚುನಾವಣಾ ಆಯೋಗ ಈಗಾಗಲೇ ಘೋ‍ಷಿಸಿತ್ತು. ಇಂದು ಪ್ರಕಟವಾಗಿರುವ ಅಧಿಸೂಚನೆ ಪ್ರಕಾರ, ನಾಮಪತ್ರ ಸಲ್ಲಿಕೆಗೆ ಏಪ್ರಿಲ್‌ 4 ಕೊನೆ ದಿನ. ಏಪ್ರಿಲ್ 5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 8ರಂದು ನಾಮಪತ್ರ (ಉಮೇದುವಾರಿಕೆ) ವಾಪಸ್‌ ಪಡೆಯಲು ಕೊನೆಯ ದಿನ. ಏಪ್ರಿಲ್ 26ಕ್ಕೆ ಮತದಾನ ನಡೆಯಲಿದೆ.

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಮೊದಲ ಹಂತದ ವೇಳಾಪಟ್ಟಿ

ಅಧಿಸೂಚನೆ ಪ್ರಕಟ - ಮಾರ್ಚ್‌ 28 (ಇಂದು)

ನಾಮಪತ್ರ ಸಲ್ಲಿಕೆಗೆ ಕೊನೇ ದಿನ - ಏಪ್ರಿಲ್ 4

ನಾಮಪತ್ರ ಪರಿಶೀಲನೆ - ಏಪ್ರಿಲ್ 5

ನಾಮಪತ್ರ ಹಿಂಪಡೆಯಲು ಕೊನೆದಿನ - ಏಪ್ರಿಲ್ 8

ಮತದಾನ ದಿನಾಂಕ - ಏಪ್ರಿಲ್ 26

ಮತ ಎಣಿಕೆ ದಿನ/ ಫಲಿತಾಂಶ - ಜೂನ್ 4

ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ - 14

ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿರುವ ಕ್ಷೇತ್ರಗಳೆಂದರೆ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು, ದಕ್ಷಿಣ ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ ಮತ್ತು ಕೋಲಾರ.

ಚಿತ್ರದುರ್ಗ, ಚಾಮರಾಜನಗರ ಮತ್ತು ಕೋಲಾರ ಎಸ್ ಸಿ ವರ್ಗದ ಮೀಸಲು ಕ್ಷೇತ್ರಗಳಾಗಿವೆ. ರಾಜ್ಯದ ಎಲ್ಲ 28 ಕ್ಷೇತ್ರಗಳಿಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಅಭ್ಯರ್ಥಿಗಳನ್ನು ಪ್ರಕಟಿಸಿದ್ದರೆ ಕಾಂಗ್ರೆಸ್ ಬಾಕಿ ಉಳಿಸಿಕೊಂಡಿದೆ.

ಲೋಕಸಭಾ ಚುನಾವಣೆ 2024; ಚುನಾವಣಾ ನಿಯಮಗಳು ಪ್ರಕಟ

ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿರುವ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ಮತ್ತು ಉಮೇದುವಾರರು ಅನುಸರಿಸಬೇಕಾದ ಚುನಾವಣಾ ನಿಯಮಗಳನ್ನು ಪ್ರಕಟಿಸಿದ್ದು, ಕಡ್ಡಾಯವಾಗಿ ಪಾಲಿಸಬೇಕಿದೆ. ಚುನಾವಣೆ ಘೋಷಣೆಯಾದ ಮಾರ್ಚ್ 16 ರಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ.

ಮಾರ್ಚ್ 28 ರಿಂದ ಅಂದರೆ ಇಂದಿನಿಂದ ಏಪ್ರಿಲ್ 4 ರವರೆಗೆ ರಜಾ ದಿನಗಳನ್ನು ಹೊರತುಪಡಿಸಿ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರಗಳನ್ನು ಸಲ್ಲಿಸಬೇಕಾಗಿರುತ್ತದೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ.

ಸಾಮಾನ್ಯ ವರ್ಗದ ಅಭ್ಯರ್ಥಿಗಳು 25,000 ರೂಪಾಯಿ ಮತ್ತು ಎಸ್ ಸಿ ಮತ್ತು ಎಸ್ ಟಿ ಅಭ್ಯರ್ಥಿಗಳು 12,500 ರೂಪಾಯಿ ಠೇವಣಿ ಇರಿಸಬೇಕಾಗುತ್ತದೆ.

ನಾಮಪತ್ರಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿ ಪ್ರವೇಶಿಸಲು ಅಭ್ಯರ್ಥಿಯೂ ಸೇರಿ 5 ಮಂದಿಗೆ ಮಾತ್ರ ಅನುಮತಿ ನೀಡಲಾಗುತ್ತದೆ.

ಜಿಲ್ಲಾಧಿಕಾರಿಗಳ ಆವರಣದ ಸುತ್ತ ಸೆಕ್ಷನ್ 144 ಜಾರಿಗೊಳಿಸಿ ನಿಷೇಧಾಜ್ಞೆ ಹೊರಡಿಸಲಾಗುತ್ತದೆ. ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಅಭ್ಯರ್ಥಿಗಳ ವಾಹನ ಸೇರಿದಂತೆ 3ವಾಹನಗಳಿಗೆ ಮಾತ್ರ ಕಚೇರಿಯ 100 ಮೀಟರ್ ವರೆಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ.

ನಾಮಪತ್ರ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯ ದಿನಾಂಕಕ್ಕೆ ಮುನ್ನ ಚುನಾವಣಾ ವೆಚ್ಚಗಳ ಸಂಬಂಧ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಬೇಕಾಗಿರುತ್ತದೆ. ಈ ಬ್ಯಾಂಕ್ ಖಾತೆಯ ಮಾಹಿತಿಯನ್ನು ಅವರು ನಾಮಪತ್ರದಲ್ಲಿ ನಮೂದಿಸಬೇಕಾಗಿರುತ್ತದೆ. ಪ್ರಸಕ್ತ ಸಾಲಿನದ್ದೂ ಸೇರಿದಂತೆ ಹಿಂದಿನ 5 ವರ್ಷಗಳವರೆಗಿನ ಆದಾಯ ತೆರಿಗೆ ವಿವರಗಳನ್ನು ಸಲ್ಲಿಸಬೇಕಾಗಿರುತ್ತದೆ.

ಗುರುವಾರ ಪ್ರಶಸ್ತ ದಿನ ಎಂದು ಭಾವಿಸಿರುವ ಅನೇಕ ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಸಲು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಉದಾಹರಣೆಗೆ ಬೆಂಗಳೂರು ಗ್ರಾಮಂತರ ಕ್ಷೇತ್ರದ ಅಭ್ಯರ್ಥಿ ಡಿಕೆ. ಸುರೇಶ್ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

55.65 ಕೋಟಿ ರೂಪಾಯಿ ಮೌಲ್ಯದ ನಗ, ನಗದು ವಶ

ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಮಾರ್ಚ್ 16 ರಿಂದ ಇದುವರೆಗೂ 55.65 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 19.69 ಕೋಟಿ ರೂ. ನಗದು, 26.19 ಕೋಟಿ ರೂ. ಮೌಲ್ಯದ ಮದ್ಯ, 88.37 ಲಕ್ಷ ರೂ. ಮೌಲ್ಯದ ಮಾದಕ ವಸ್ತು ಮತ್ತು 65.43 ಲಕ್ಷ ರೂ. ಮೌಲ್ಯದ ಉಚಿತ ಕೊಡುಗೆಗಳು ಸೇರಿವೆ.

2019ರ ಚುನಾವಣೆ ಸಂದರ್ಭದಲ್ಲಿ (ಮಾರ್ಚ್ 10ರಿಂದ ಮಾರ್ಚ್ 24ರವರೆಗೆ) ವಶಪಡಿಸಿಕೊಂಡ ವಸ್ತುಗಳಿಗೆ ಹೋಲಿಸಿದರೆ 2024ರ ಮಾರ್ಚ್ 16 ರಿಂದ ಮಾರ್ಚ್ 26ರವರೆಗೆ ವಶಪಡಿಸಿಕೊಂಡ ವಸ್ತುಗಳಲ್ಲಿ ಶೇ.110ರಷ್ಟು ಏರಿಕೆಯಾಗಿದೆ. 2019ರ ಚುನಾವಣೆ ಸಂದರ್ಭದಲ್ಲಿ ಮಾರ್ಚ್ 10 ರಿಂದ ಮಾರ್ಚ್ 24ರವರೆಗೆ 26.54 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದರೆ 2024 ರ ಮಾರ್ಚ್ 16 ರಿಂದ ಮಾರ್ಚ್ 26 ರವರೆಗೆ 55.76 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ.

(ವರದಿ- ಎಚ್.ಮಾರುತಿ, ಬೆಂಗಳೂರು)

------------------------------------------------

IPL_Entry_Point