ಕನ್ನಡ ಸುದ್ದಿ  /  ಕರ್ನಾಟಕ  /  Voting Day: ಕರ್ನಾಟಕದಲ್ಲಿ ಮೊದಲನೇ ಹಂತದ ಮತದಾನಕ್ಕೆ ಸಕಲ ಸಿದ್ದತೆ, ಗೊಂದಲವಿದ್ದರೆ ಇಲ್ಲಿ ಕರೆ ಮಾಡಿ

Voting Day: ಕರ್ನಾಟಕದಲ್ಲಿ ಮೊದಲನೇ ಹಂತದ ಮತದಾನಕ್ಕೆ ಸಕಲ ಸಿದ್ದತೆ, ಗೊಂದಲವಿದ್ದರೆ ಇಲ್ಲಿ ಕರೆ ಮಾಡಿ

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಕರ್ನಾಟಕದಲ್ಲಿ ಶುಕ್ರವಾರ. ಇದಕ್ಕಾಗಿ ಬಹುತೇಕ ಸಿದ್ದತೆ ಅಂತಿಮಗೊಂಡಿದ್ದು, ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ.

ಕರ್ನಾಟಕದಲ್ಲಿ ಶುಕ್ರವಾರ ಮತದಾನದ ಸಮಯ,
ಕರ್ನಾಟಕದಲ್ಲಿ ಶುಕ್ರವಾರ ಮತದಾನದ ಸಮಯ,

ಬೆಂಗಳೂರು: ಭಾರತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲೂ ಮತದಾನದ ಸಮಯ. ಎರಡು ಹಂತಗಳಲ್ಲಿ ಚುನಾವಣೆ ವೇಳಾಪಟ್ಟಿಯನ್ನು ಈಗಾಗಲೇ ಚುನಾವಣಾ ಆಯೋಗ ಪ್ರಕಟಿಸಿದ್ದು, ಅದರಂತೆ ಮೊದಲ ಹಂತದಲ್ಲಿ ಬೆಂಗಳೂರು ನಗರವೂ ಸೇರಿದಂತೆ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಶುಕ್ರವಾರ ಬೆಳಿಗ್ಗೆ7 ರಿಂದ ಸಂಜೆ 6ವರೆಗೂ ಇರಲಿದೆ. ಬೆಂಗಳೂರು ನಗರದ ದಕ್ಷಿಣ, ಉತ್ತರ,ಕೇಂದ್ರ ಹಾಗೂ ಗ್ರಾಮೀಣ, ಚಿಕ್ಕಬಳ್ಳಾಪುರ. ಕೋಲಾರ, ತುಮಕೂರು, ಚಿತ್ರದುರ್ಗ, ಉಡುಪಿ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಒಟ್ಟು 2.88 ಕೋಟಿಯಷ್ಟು ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಈಗಾಗಲೇ ಮತದಾನಕ್ಕಾಗಿ ಚುನಾವಣೆ ಸಿಬ್ಬಂದಿ ಗುರುವಾರ ಸಂಜೆಯೇ ಆಯಾ ಮತಗಟ್ಟೆಗೆ ತೆರಳಿ ಸಿದ್ದತೆ ಮುಗಿಸಿಕೊಂಡರು.

ಟ್ರೆಂಡಿಂಗ್​ ಸುದ್ದಿ

ಎಲ್ಲಿ ಎಷ್ಟು ಅಭ್ಯರ್ಥಿಗಳು

ಮೈಸೂರುಕೊಡಗು ಕ್ಷೇತ್ರದಲ್ಲಿ18 ಅಭ್ಯರ್ಥಿಗಳು, ಚಾಮರಾಜನಗರ (ಎಸ್ ಸಿ) ಕ್ಷೇತ್ರದಲ್ಲಿ14, ಮಂಡ್ಯದಲ್ಲಿ14 , ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ10 ಅಭ್ಯರ್ಥಿಗಳು , ತುಮಕೂರು ಕ್ಷೇತ್ರದಲ್ಲಿ18 , ಹಾಸನ ಕ್ಷೇತ್ರದಲ್ಲಿ15, ದಕ್ಷಿಣ ಕನ್ನಡದಲ್ಲಿ9 , ಚಿತ್ರದುರ್ಗ (ಎಸ್ ಸಿ)ದಲ್ಲಿ 20 ಅಭ್ಯರ್ಥಿಗಳು , ಬೆಂಗಳೂರು ಗ್ರಾಮಾಂತರದಲ್ಲಿ 15, ಬೆಂಗಳೂರು ಉತ್ತರದಲ್ಲಿ21, ಬೆಂಗಳೂರು ದಕ್ಷಿಣದಲ್ಲಿ 22, ಬೆಂಗಳೂರು ಕೇಂದ್ರದಲ್ಲಿ 24, ಚಿಕ್ಕಬಳ್ಳಾಪುರದಲ್ಲಿ ಅತ್ಯಧಿಕ 29, ಕೋಲಾರ (ಎಸ್ ಸಿ) ಕ್ಷೇತ್ರದಲ್ಲಿ 18 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.

ಮತದಾರರು ಎಷ್ಟು

14 ಕ್ಷೇತ್ರಗಳಲ್ಲಿ 2.88,19,342 ಅರ್ಹ ಮತದಾರರು ಇದ್ದಾರೆ. ಇವರಲ್ಲಿ 1,44,28,099 ಪುರುಷ, 1,43,88,176 ಮಹಿಳಾ ಮತ್ತು 3,067 ತೃತೀಯ ಲಿಂಗಿ ಮತದಾರರಿದ್ದಾರೆ. ಈ ಕ್ಷೇತ್ರಗಳಲ್ಲಿ ಒಟ್ಟು 30,602 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1.40 ಲಕ್ಷ ಮತಗಟ್ಟೆ ಅಧಿಕಾರಿಗಳು, 5 ಸಾವಿರ ಮೈಕ್ರೋ ವೀಕ್ಷಕರು, 50 ಸಾವಿರ ಪೊಲೀಸರು, 65 ಸಿ ಆರ್ ಪಿ ಎಫ್ ತೂಕಡಿಗಳು ವಿವಿಧ ರಾಜ್ಯಗಳ ಮೀಸಲು ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಕ್ಷೇತ್ರಗಳಿಗೆ ಅರೆಸೇನಾಪಡೆಯೂ ಕೆಲಸ ಮಾಡಲಿವೆ. ಈಗಾಗಲೇ ಭದ್ರತಾ ಸಿಬ್ಬಂದಿಗಳು ಮತಗಟ್ಟೆ ಕೇಂದ್ರಗಳಲ್ಲಿ ಬೀಡುಬಿಟ್ಟಿದ್ದಾರೆ.

ಈ ಬಾರಿ ಭಾರೀ ಬಿಸಿಲು ಹಾಗೂ ಬಿಸಿಲಿನ ಗಾಳಿಗೆ ಹೆದರಿ ಮತದಾನ ಕಡಿಮೆಯಾಗುವುದನ್ನು ತಪ್ಪಿಸಲು ಆಯೋಗ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಮತಗಟ್ಟೆಗಳಲ್ಲಿ ನೆರಳಿಗಾಗಿ ಶಾಮಿಯಾನ, ಕುರ್ಚಿಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಮತಗಟ್ಟೆಗಳಲ್ಲಿ ಆಶಾ ಕಾರ್ಯಕರ್ತೆಯರನ್ನು ಕೂಡ ನಿಯೋಜಿಸಲಾಗಿದೆ. ತಾಪಮಾನ ಹೆಚ್ಚಳ ಹಿನ್ನೆಲೆಯಲ್ಲಿ ನಿರ್ಜಲೀಕರಣ ಹಾಗೂ ಸನ್ ಸ್ಟ್ರೋಕ್ ಸಂಬಂಧ ವೈದ್ಯಕೀಯ ಕಿಟ್ ಗಳನ್ನು ಎಲ್ಲಾ ಮತಗಟ್ಟೆಗಳಿಗೆ ಈಗಾಗಲೇ ನೀಡಲಾಗಿದೆ.

ಮತದಾನಕ್ಕೆ ಮನವಿ

ಮತದಾನಕ್ಕೆ ಪೂರ್ಣಪ್ರಮಾಣದಲ್ಲಿ ಸಿದ್ದರಿದ್ದು, ಮತದಾರರ ಪಟ್ಟಿಯಲ್ಲಿ ನೊಂದಾಯಿಸಿರುವ ಎಲ್ಲಾ ಮತದಾರರು ತಪ್ಪದೇ 26 ನೇ ಏಪ್ರಿಲ್ 2024 ರ ಶುಕ್ರವಾರದಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ನಡೆಯುವ ಪ್ರಜಾಪ್ರಭುತ್ವದ ದೊಡ್ಡ ಹಬ್ಬವಾದ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಪ್ಪದೇ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿ ಸದೃಢ ದೇಶ ನಿರ್ಮಾಣ ಮಾಡಲು ಆಯಾ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಲು ಮನವಿ ಮಾಡಲಾಗಿದೆ.

ಇಲ್ಲಿ ಕರೆ ಮಾಡಿ

ಏನಾದರೂ ಗೊಂದಲಗಳಿದ್ದರೆ 1950 / 180042551950 ಸಂಖ್ಯೆಗೆ ಕರೆ ಮಾಡುವಂತೆ ಚುನಾವಣಾ ಆಯೋಗ ಕೋರಿದೆ. ಅಲ್ಲದೇ ಚುನಾವಣೆಗೆ ಸಂಬಂಧಿಸಿದಂತ ಸಮಗ್ರ ಮಾಹಿತಿ ಪಡೆಯಲು https://ceo.karnataka.gov.in/ ವೆಬ್‌ಸೈಟ್‌ ಗೂ ಸಂಪರ್ಕ ಮಾಡಬಹುದು.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point