ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸ್ಯಾಮ್ ಪಿತ್ರೋಡಾ ಪ್ರಸ್ತಾಪಿಸಿದ ಪಿತ್ರಾರ್ಜಿತ ಕಾನೂನು ಎಂದರೇನು? ಭಾರತದಲ್ಲಿ ಏಕಿಷ್ಟು ವಿರೋಧ? ನೀವು ತಿಳಿಯಬೇಕಾದ 10 ಅಂಶಗಳಿವು

ಸ್ಯಾಮ್ ಪಿತ್ರೋಡಾ ಪ್ರಸ್ತಾಪಿಸಿದ ಪಿತ್ರಾರ್ಜಿತ ಕಾನೂನು ಎಂದರೇನು? ಭಾರತದಲ್ಲಿ ಏಕಿಷ್ಟು ವಿರೋಧ? ನೀವು ತಿಳಿಯಬೇಕಾದ 10 ಅಂಶಗಳಿವು

ಲೋಕಸಭಾ ಚುನಾವಣೆ ನಡೆಯುವ ಹೊತ್ತಿನಲ್ಲಿ ಕಾಂಗ್ರೆಸ್ ಪಕ್ಷದ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಪ್ರಸ್ತಾಪಿಸಿದ ಪಿತ್ರಾರ್ಜಿತ ಕಾನೂನು ವ್ಯಾಪಕ ಟೀಕೆ, ಚರ್ಚೆಗೆ ಒಳಗಾಗಿದೆ. ಭಾರತದಲ್ಲಿ ಏಕಿಷ್ಟು ವಿರೋಧ? ನೀವು ತಿಳಿಯಬೇಕಾದ 10 ಅಂಶಗಳು ಹೀಗಿವೆ.

ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಪಿತ್ರಾರ್ಜಿತ ಕಾನೂನು ವಿಚಾರ ಪ್ರಸ್ತಾಪಿಸಿದ್ದು, ವ್ಯಾಪಕ ಚರ್ಚೆಗೆ ಒಳಗಾಗಿದೆ.
ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಪಿತ್ರಾರ್ಜಿತ ಕಾನೂನು ವಿಚಾರ ಪ್ರಸ್ತಾಪಿಸಿದ್ದು, ವ್ಯಾಪಕ ಚರ್ಚೆಗೆ ಒಳಗಾಗಿದೆ.

ಕಾಂಗ್ರೆಸ್ ಪಕ್ಷದ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಭಾರತದಲ್ಲಿ “ಪಿತ್ರಾರ್ಜಿತ ಆಸ್ತಿ ತೆರಿಗೆ” ಕುರಿತು ಹೇಳಿದ ಮಾತುಗಳು ವ್ಯಾಪಕ ಟೀಕೆ ಮತ್ತು ಚರ್ಚೆಗೆ ಒಳಗಾಗಿದೆ. ಅಮೆರಿಕದಲ್ಲಿ ಜಾರಿಯಲ್ಲಿರುವ ಪಿತ್ರಾರ್ಜಿತ ಆಸ್ತಿ ತೆರಿಗೆ ಅಥವಾ ಯಥಾ ರೂಪದಲ್ಲಿ ಹೇಳುವುದಾದರೆ ಅನುವಂಶೀಯ ತೆರಿಗೆ (Inheritance Taxes in US) ಯನ್ನು ಭಾರತದಲ್ಲಿ ಪರಿಚಯಿಸುವ ಕುರಿತು ಅವರು ಇತ್ತೀಚೆಗೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಟ್ರೆಂಡಿಂಗ್​ ಸುದ್ದಿ

ಈ ರೀತಿ ತೆರಿಗೆ ವಿಧಿಸುವುದರಿಂದ ನ್ಯಾಯಯುತಿ ಸಂಪತ್ತಿನ ಮರುವಿತರಣೆಗೆ ಅವಕಾಶವಾಗಬಹುದು ಎಂಬುದು ಅಮೆರಿಕದ ನೀತಿಯ ಉದ್ದೇಶ. ಆದರೆ ಭಾರತದಲ್ಲಿ ಪಿತ್ರಾರ್ಜಿತ ಆಸ್ತಿ ತೆರಿಗೆಯನ್ನು ಜಾರಿಗೊಳಿಸುವುದು ಸಮರ್ಥನೀಯವಲ್ಲ ಎಂದು ಕೆಲವರು ವಾದಿಸುತ್ತಾರೆ. ಕುಟುಂಬದ ವ್ಯವಹಾರಗಳ ಮೇಲೆ ಅದರ ಸಂಭಾವ್ಯ ಪ್ರಭಾವ ಮತ್ತು ಡಬಲ್ ತೆರಿಗೆಯ ಬಗ್ಗೆ ಕಾಳಜಿಯಂತಹ ವಿವಿಧ ಆರ್ಥಿಕ ಮತ್ತು ಸಾಮಾಜಿಕ ಅಂಶಗಳನ್ನು ಉಲ್ಲೇಖಿಸುತ್ತಾರೆ ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದರು.

ಇದು ಲೋಕಸಭಾ ಚುನಾವಣೆಯ ಹೊತ್ತಾದ ಕಾರಣ ಸ್ಯಾಮ್ ಪಿತ್ರೋಡಾ ಅವರ ಮಾತುಗಳು ರಾಜಕೀಯ ಸಂಚಲನವನ್ನು ಮೂಡಿಸಿದೆ. ಲೋಕಸಭಾ ಚುನಾವಣೆ 7 ಹಂತಗಳ ಮತದಾನವನ್ನು ಒಳಗೊಂಡಿದ್ದು, ಎರಡನೇ ಹಂತದ ಮತದಾನ ಏಪ್ರಿಲ್ 26ರಂದು ನಡೆಯಲಿದೆ. ಅದಕ್ಕೆ ಎರಡು ದಿನ ಮೊದಲು ಸ್ಯಾಮ್ ಪಿತ್ರೋಡಾ ಹೇಳಿಕೆ, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ರಾಹುಲ್ ಗಾಂಧಿ ಮತ್ತು ಅವರ ರಾಜಕೀಯ ಸಲಹೆಗಾರರ ​​ವಿರುದ್ಧ ತನ್ನ ರಾಜಕೀಯ ನಿರೂಪಣೆಯನ್ನು ಬಲಪಡಿಸಲು ಬಿಜೆಪಿ ಇದನ್ನು ಮೇವಿನಂತೆ ಬಳಸಿಕೊಂಡಿದೆ. ಇನ್ನೊಂದೆಡೆ, ಕಾಂಗ್ರೆಸ್ ಪಕ್ಷದ ನಾಯಕರು ಸ್ಯಾಮ್ ಪಿತ್ರೋಡಾ ಮಾತು ವೈಯಕ್ತಿಕ ಎಂದು ಸ್ಪಷ್ಟೀಕರಣ ನೀಡಿದೆ. ಸ್ಯಾಮ್ ಪಿತ್ರೋಡಾ ಅವರು ನೆಹರು-ಗಾಂಧಿ ಕುಟುಂಬದ ಆಪ್ತವಲಯದವರು ಎಂಬುದು ರಾಜಕೀಯ ಎದುರಾಳಿಗಳ ಪ್ರಚಾರ ಅಸ್ತ್ರಕ್ಕೆ ಬಲತುಂಬಿದೆ.

ರಾಜಕೀಯ ಕೆಸರೆರಚಾಟ ಏನೇ ಇರಲಿ. ಇಷ್ಟಕ್ಕೂ ಸ್ಯಾಮ್ ಪಿತ್ರೋಡಾ ಅವರು ಉಲ್ಲೇಖಿಸಿದ ಅಮೆರಿಕದ ಪಿತ್ರಾರ್ಜಿತ ಆಸ್ತಿ ತೆರಿಗೆ ಎಂದರೇನು?, ಇದು ಕುತೂಹಲ ಕೆರಳಿಸಿರುವ ವಿಚಾರ.

ಸ್ಯಾಮ್ ಪಿತ್ರೋಡಾ ಪ್ರಸ್ತಾಪಿಸಿದ ಪಿತ್ರಾರ್ಜಿತ ತೆರಿಗೆ ಎಂದರೇನು?, ಇಲ್ಲಿದೆ 10 ಅಂಶಗಳ ವಿವರಣೆ

1) ಅಮೆರಿಕದ ಪಿತ್ರಾರ್ಜಿತ ತೆರಿಗೆ ಎಂದರೇನು? -

ಪಿತ್ರಾರ್ಜಿತ ಆಸ್ತಿ ತೆರಿಗೆ ಎಂದೂ ಕರೆಯಲ್ಪಡುವ ಈ ಪಿತ್ರಾರ್ಜಿತ ತೆರಿಗೆಯು ಮೃತ ವ್ಯಕ್ತಿಯ ಹಣ ಮತ್ತು ಆಸ್ತಿಯ ಒಟ್ಟು ಮೌಲ್ಯವನ್ನು ಅವರ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಹಂಚಿಕೆ ಮಾಡುವ ಮೊದಲು ವಿಧಿಸುವ ತೆರಿಗೆಯಾಗಿದೆ. ಯಾವುದೇ ವಿನಾಯಿತಿಗಳು ಅಥವಾ ಕಡಿತಗಳ ನಂತರ ಉಳಿದಿರುವ ಸ್ವತ್ತುಗಳ ಮೌಲ್ಯವನ್ನು ಆಧರಿಸಿ ತೆರಿಗೆಯನ್ನು ಸಾಮಾನ್ಯವಾಗಿ ಲೆಕ್ಕಹಾಕಲಾಗುತ್ತದೆ. ಸಾಮಾನ್ಯವಾಗಿ ಸರ್ಕಾರದ ಆದಾಯ ಗಳಿಕೆ ಮತ್ತು ಸಂಪತ್ತನ್ನು ಮರುಹಂಚಿಕೆ ಮಾಡುವುದು ಅಮೆರಿಕದ ಪಿತ್ರಾರ್ಜಿತ ತೆರಿಗೆಯ ಉದ್ದೇಶವಾಗಿದೆ.

2) ಅಮೆರಿಕದ ಫೆಡರಲ್ ಸರ್ಕಾರ ಪಿತ್ರಾರ್ಜಿತ ತೆರಿಗೆ ವಿಧಿಸಿದೆಯೇ?

ಪ್ರಸ್ತುತ ಅಮೆರಿಕದಲ್ಲಿ ಎಲ್ಲ ರಾಜ್ಯಗಳಲ್ಲೂ ಈ ತೆರಿಗೆ ಚಾಲ್ತಿಯಲ್ಲಿಲ್ಲ. ಸರಳವಾಗಿ ಹೇಳಬೇಕು ಎಂದರೆ ಅಮೆರಿಕದ ಫೆಡರಲ್ ಸರ್ಕಾರ ಈ ಪಿತ್ರಾರ್ಜಿತ ತೆರಿಗೆ ವಿಧಿಸಿಲ್ಲ. ತೆರಿಗೆ ದರ ಮತ್ತು ವಿನಾಯಿತಿ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿವೆ. ಕೆಲವು ರಾಜ್ಯಗಳು ಕೆಲವು ವರ್ಗದ ವಾರಸುದಾರರಿಗೆ ವಿನಾಯಿತಿ ನೀಡುತ್ತವೆ ಅಥವಾ ನಿಕಟ ಕುಟುಂಬ ಸದಸ್ಯರಿಗೆ ವರ್ಗಾವಣೆಗಳ ಮೇಲೆ ಕಡಿಮೆ ತೆರಿಗೆ ದರಗಳನ್ನು ವಿಧಿಸುತ್ತವೆ.

3) ಅಮೆರಿಕದ ಯಾವೆಲ್ಲ ರಾಜ್ಯಗಳಲ್ಲಿ ಈ ಪಿತ್ರಾರ್ಜಿತ ತೆರಿಗೆ -

ಅಮೆರಿಕದ ಅಯೋವಾ, ಕೆಂಟುಕಿ, ಮೇರಿಲ್ಯಾಂಡ್, ನೆಬ್ರಸ್ಕಾ, ನ್ಯೂಜೆರ್ಸಿ ಮತ್ತು ಪೆನ್ಸಿಲ್ವೇನಿಯಾ ಎಂಬ 6 ರಾಜ್ಯಗಳು ಮಾತ್ರವೇ ಈ ಪಿತ್ರಾರ್ಜಿತ ತೆರಿಗೆ ಜಾರಿಗೊಳಿಸಿವೆ.

4) ಪಿತ್ರಾರ್ಜಿತ ತೆರಿಗೆ ದರ ಲೆಕ್ಕಾಚಾರ -

ಅಮೆರಿಕದ ಆರು ರಾಜ್ಯಗಳಲ್ಲಿ ಉತ್ತರಾಧಿಕಾರ ತೆರಿಗೆ ದರ ಕನಿಷ್ಠ ಶೇ 1 ರಿಂದ ಗರಿಷ್ಠ 20 ರ ತನಕ ವಿಧಿಸಲಾಗುತ್ತದೆ. ಆದಾಗ್ಯೂ, ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಆಸ್ತಿಯ ಮೊತ್ತದ ಮೇಲೆ ತೆರಿಗೆಯನ್ನು ಲೆಕ್ಕಹಾಕಲಾಗುತ್ತದೆ. ಆದ್ದರಿಂದ, ಉದಾಹರಣೆಗೆ, 10 ಲಕ್ಷ ಡಾಲರ್‌ಗಿಂತಲೂ ಹೆಚ್ಚಿನ ಪಿತ್ರಾರ್ಜಿತ ಆಸ್ತಿಗಳ ಮೇಲೆ ನಿರ್ದಿಷ್ಟ ಶೇಕಡಾವಾರು ತೆರಿಗೆಯನ್ನು ವಿಧಿಸಲಾಗುತ್ತದೆ. ಮತ್ತು ಒಬ್ಬ ವ್ಯಕ್ತಿಯು 30 ಲಕ್ಷ ಡಾಲರ್‌ ಮೌಲ್ಯದ ಆಸ್ತಿಯನ್ನು ಆನುವಂಶಿಕವಾಗಿ ಪಡೆಯುತ್ತಾನೆ ಎಂದಾದರೆ, ಇದರಲ್ಲಿ 10 ಲಕ್ಷ ಡಾಲರ್‌ ಮೌಲ್ಯದ ಆಸ್ತಿ ಬಿಟ್ಟು ಉಳಿದ 20 ಲಕ್ಷ ಡಾಲರ್ ಮೌಲ್ಯದ ಆಸ್ತಿ ಮಾತ್ರ ತೆರಿಗೆ ವಿಧಿಸಲಾಗುತ್ತದೆ.

5) ಪ್ರಪಂಚದಾದ್ಯಂತ ಪಿತ್ರಾರ್ಜಿತ ತೆರಿಗೆ

ಜಪಾನ್‌ನಲ್ಲಿ, ಪಿತ್ರಾರ್ಜಿತ ತೆರಿಗೆ ದರವು ಶೇಕಡಾ 55 ರಷ್ಟಿದೆ. ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ. ದಕ್ಷಿಣ ಕೊರಿಯಾವು 50 ಶೇಕಡಾ ದರದೊಂದಿಗೆ ನಂತರದ ಸ್ಥಾನದಲ್ಲಿದೆ. ಫ್ರಾನ್ಸ್ 45 ಪ್ರತಿಶತದಷ್ಟು ಪಿತ್ರಾರ್ಜಿತ ತೆರಿಗೆ ದರವನ್ನು ವಿಧಿಸುತ್ತದೆ. ಆದರೆ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಎರಡೂ ಶೇಕಡ 40 ರ ದರಗಳನ್ನು ಹೊಂದಿವೆ.

6) ಪಿತ್ರಾರ್ಜಿತ ತೆರಿಗೆ ವಿಧಿಸುವ ಉದ್ದೇಶ

ಸರ್ಕಾರ ತನ್ನ ಆದಾಯ ಗಳಿಕೆಗೆ ತೆರಿಗೆ ವಿಧಿಸುವುದು ಮೊದಲ ಉದ್ದೇಶ. ಇನ್ನೊಂದು, ಸಂಪತ್ತಿನ ಮರುಹಂಚಿಕೆ. ಜಗತ್ತಿನ ನಾನಾ ದೇಶಗಳಲ್ಲಿ ಚಾಲ್ತಿಯಲ್ಲಿರುವ ಪಿತ್ರಾರ್ಜಿತ ತೆರಿಗೆ ದರಗಳು ಸಂಪತ್ತಿನ ವಿತರಣೆ ಮತ್ತು ತೆರಿಗೆಯನ್ನು ಪರಿಹರಿಸಲು ದೇಶಗಳು ತೆಗೆದುಕೊಳ್ಳುವ ವಿವಿಧ ವಿಧಾನಗಳನ್ನು ಪ್ರತಿಬಿಂಬಿಸುತ್ತವೆ. ಆರ್ಥಿಕ ನೀತಿಗಳು ಮತ್ತು ಸಾಮಾಜಿಕ ಕಲ್ಯಾಣ ವ್ಯವಸ್ಥೆಗಳನ್ನು ರೂಪಿಸುವಲ್ಲಿ, ಸಂಪತ್ತಿನ ವರ್ಗಾವಣೆ ಮತ್ತು ತಲೆಮಾರುಗಳೊಳಗೆ ಪಾಲು ಹಂಚಿಕೆಯ ಮೇಲಿನ ನಿರ್ಧಾರಗಳ ಮೇಲೆ ಪ್ರಭಾವ ಬೀರುವಲ್ಲಿ ಪಿತ್ರಾರ್ಜಿತ ತೆರಿಗೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ.

7) ಭಾರತದಲ್ಲಿ ಪಿತ್ರಾರ್ಜಿತ ತೆರಿಗೆ ಜಾರಿಯಲ್ಲಿತ್ತಾ?

ಭಾರತದಲ್ಲಿ, ಪ್ರಸ್ತುತ ಯಾವುದೇ ಪಿತ್ರಾರ್ಜಿತ ತೆರಿಗೆ ಇಲ್ಲ. ಉತ್ತರಾಧಿಕಾರ ಅಥವಾ ಪಿತ್ರಾರ್ಜಿತ ಅಥವಾ ಎಸ್ಟೇಟ್ ತೆರಿಗೆಯನ್ನು 1985 ರಲ್ಲಿ ರದ್ದುಗೊಳಿಸಲಾಯಿತು. ಎಸ್ಟೇಟ್ ಡ್ಯೂಟಿ ಆಕ್ಟ್ 1953 (Estate Duty Act, 1953) ಎಂಬ ಹೆಸರಿನಲ್ಲಿ ಇದು ಚಾಲ್ತಿಯಲ್ಲಿತ್ತು. ಆಸ್ತಿಯ ಪಿತ್ರಾರ್ಜಿತ ಭಾಗದ ಒಟ್ಟು ಮೌಲ್ಯವು ವಿನಾಯಿತಿ ಮಿತಿಯನ್ನು ಅಂದರೆ ಶೇಕಡ 85 ಮೀರಿದರೆ ಮಾತ್ರ ತೆರಿಗೆ ಪಾವತಿಸಬೇಕಾಗಿತ್ತು. ಅದು 1.5 ಲಕ್ಷ ರೂಪಾಯಿ ಮೌಲ್ಯದ ಆಸ್ತಿಗೆ ಶೇಕಡ 7.5 ತೆರಿಗೆ ವಿಧಿಸಲಾಗಿತ್ತು. ಆದಾಯದ ಅಸಮಾನತೆಯನ್ನು ಕಡಿಮೆ ಮಾಡುವುದು ಈ ತೆರಿಗೆಯ ಉದ್ದೇಶವಾಗಿತ್ತು. ಆದರೆ 1985 ರಲ್ಲಿ ಅದನ್ನು ರದ್ದುಗೊಳಿಸಲಾಯಿತು.

8) ಭಾರತದಲ್ಲಿ ಪಿತ್ರಾರ್ಜಿತ ತೆರಿಗೆ ರದ್ದು ಮಾಡಿದ್ದು ಯಾಕೆ

ಭಾರತದಲ್ಲಿ ಪಿತ್ರಾರ್ಜಿತ ತೆರಿಗೆಯನ್ನು ರಾಜೀವ್ ಗಾಂಧಿ ಸರ್ಕಾರ 1985ರಲ್ಲಿ ರದ್ದುಗೊಳಿಸಿತು. ಅಂದು ವಿಪಿ ಸಿಂಗ್ ಅವರು ಹಣಕಾಸು ಸಚಿವರಾಗಿದ್ದರು.ಈ ತೆರಿಗೆ ಸಮಾಜದಲ್ಲಿ ಆರ್ಥಿಕ ಅಸಮಾನತೆಯನ್ನು ತರಲು ಸಹಾಯ ಮಾಡಲಿಲ್ಲ ಅಥವಾ ಅದು ಗಮನಾರ್ಹವಾಗಿ ಕೊಡುಗೆ ನೀಡಲಿಲ್ಲ. 1984-85ರಲ್ಲಿ ಎಸ್ಟೇಟ್ ಡ್ಯೂಟಿ ಟ್ಯಾಕ್ಸ್ ಪ್ರಕಾರ ಸಂಗ್ರಹಿಸಿದ ತೆರಿಗೆ 20 ಕೋಟಿ ರೂಪಾಯಿ. ಇದು ದೊಡ್ಡ ಮೊತ್ತವಾದರೂ ಸಂಕೀರ್ಣ ತೆರಿಗೆ ಲೆಕ್ಕಾಚಾರದ ಕಾರಣ ಅನೇಕ ದಾವೆಗಳು ದಾಖಲಾಗಿವೆ. ಇವುಗಳ ಸಂಗ್ರಹಣೆ ಕೆಲಸವೇ ತ್ರಾಸದಾಯಕ ಎಂದು ತೆರಿಗೆಯನ್ನು ರದ್ದುಗೊಳಿಸಿದ ಸಂದರ್ಭದಲ್ಲಿ ವಿಪಿ ಸಿಂಗ್ ಹೇಳಿದ್ದರು ಎಂಬುದನ್ನು ಎಕನಾಮಿಕ್ ಟೈಮ್ಸ್‌ನ ವರದಿ ನೆನಪಿಸಿದೆ.

9) ಪಿತ್ರಾರ್ಜಿತ ಆಸ್ತಿಗಳು ಮತ್ತು ಅವುಗಳಿಂದ ಆದಾಯ ತೆರಿಗೆ ಪರಿಣಾಮ

ಪಿತ್ರಾರ್ಜಿತ ಆಸ್ತಿಗಳನ್ನು ಹೊಂದುವುದರ ಮೂಲಕ ವ್ಯಕ್ತಿಯು ಆದಾಯ ತೆರಿಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಒಬ್ಬ ವ್ಯಕ್ತಿ ಮೃತಪಟ್ಟಾಗ, ಆ ವ್ಯಕ್ತಿಯ ಆಸ್ತಿಗಳನ್ನು ಕಾನೂನು ಪ್ರಕಾರ ಉತ್ತರಾಧಿಕಾರಿಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಇದು ಸಾಮಾನ್ಯವಾಗಿ ಅವರ ಮಕ್ಕಳು, ಮೊಮ್ಮಕ್ಕಳು ಅಥವಾ ಸಂಬಂಧಪಟ್ಟವರು ಇರುತ್ತಾರೆ. ಇದನ್ನು ಹೊಂದುವ ವ್ಯಕ್ತಿಗಳು ಪಿತ್ರಾರ್ಜಿತ ಆಸ್ತಿಗಳಿಂದ ಬರುವ ಉತ್ಪನ್ನ, ಆದಾಯವನ್ನು ಇತರೆ ಆದಾಯವಾಗಿ ತೋರಿಸಬೇಕಾಗುತ್ತದೆ. ಅದಕ್ಕೆ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ.

10) ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಿದರೂ ತೆರಿಗೆ ಪಾವತಿಸಬೇಕು

ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಿದರೆ ಅದರಿಂದ ಬರುವ ಹಣವನ್ನು ಮತ್ತೊಂದು ಆಸ್ತಿ ಮೇಲೆ ಹೂಡಿಕೆ ಮಾಡಿದರೆ ತೆರಿಗೆ ವಿನಾಯಿತಿ ಇದೆ. ಆದಾಗ್ಯೂ, ಕ್ಯಾಪಿಟಲ್ ಗೇನ್ ಅಥವಾ ಬಂಡವಾಳ ಲಾಭದ ಮೇಲಿನ ತೆರಿಗೆಯನ್ನು ಪಿತ್ರಾರ್ಜಿತ ಆಸ್ತಿ ಹೊಂದಿದವರು ಕೂಡ ಮಾಡಬೇಕಾಗುತ್ತದೆ. ದೀರ್ಘಾವಧಿಯ ಬಂಡವಾಳ ಲಾಭ ಅಂದರೆ 24 ತಿಂಗಳಿಗಿಂತ ಹೆಚ್ಚು ಕಾಲ ಆಸ್ತಿ ಹೊಂದಿದ ಬಳಿಕ ಮಾರಾಟ ಮಾಡಿದರೆ, ಸೆಸ್ ಸೇರಿ ಶೇಕಡ 20.8 ತೆರಿಗೆ ಪಾವತಿಸಬೇಕಾಗುತ್ತದೆ ಎಂದು ತೆರಿಗೆ ಪರಿಣತರು ಹೇಳುವುದಾಗಿ HT ಕನ್ನಡದ ಸೋದರ ತಾಣ ದ ಲೈವ್ ಮಿಂಟ್ ವರದಿ ಮಾಡಿದೆ.

ಸ್ಯಾಮ್ ಪಿತ್ರೋಡಾ ಅವರು ಪಿತ್ರಾರ್ಜಿತ ತೆರಿಗೆ ಬಗ್ಗೆ ಹೇಳಿದ್ದೇನು?

ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್‌ನ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ “...ಅಮೆರಿಕದಲ್ಲಿ, ಪಿತ್ರಾರ್ಜಿತ ತೆರಿಗೆ ಇದೆ. ಒಬ್ಬನು 100 ದಶಲಕ್ಷ ಡಾಲರ್‌ ಮೌಲ್ಯದ ಸಂಪತ್ತನ್ನು ಹೊಂದಿದ್ದರೆ, ಆತನ ಮರಣಾನಂತರ ಬಹುಶಃ 45 ಪ್ರತಿಶತ ಸಂಪತ್ತು ಆತನ ಮಕ್ಕಳಿಗೆ ವರ್ಗಾವಣೆಯಾಗುತ್ತದೆ. ಶೇಕಡ 55 ಸರ್ಕಾರದ ಪಾಲಿಗೆ ಹೋಗುತ್ತದೆ. ಇದೊಂದು ಆಸಕ್ತಿದಾಯಕ ಕಾನೂನು. ನೀವು ಸಂಪತ್ತು ಗಳಿಸಿದ್ದೀರಿ. ನಿಮ್ಮ ಸಂಪತ್ತನ್ನು ಬಿಟ್ಟುಹೋಗುವಾಗ ಅದರ ಅರ್ಧದಷ್ಟು ಪಾಲನ್ನು ಸಾರ್ವಜನಿಕರಿಗೆ ನೀಡಬೇಕು ಎನ್ನುತ್ತದೆ ಈ ಕಾನೂನು. ನ್ಯಾಯಯುತವಾದುದು ಎಂದೆನಿಸುತ್ತದೆ. ಭಾರತದಲ್ಲಿ ಇದನ್ನೇ ಗಮನಿಸೋಣ. ಇಲ್ಲಿ ಯಾರಾದರೂ 100 ಕೋಟಿ ರೂಪಾಯಿ ಒಡೆಯನಾದರೆ, ಆತ ಮೃತಪಟ್ಟಾಗ ಅದು ಆತನ ಮಕ್ಕಳಿಗೆ ವರ್ಗಾವಣೆಯಾಗುತ್ತದೆ. ಸಾರ್ವಜನಿಕರಿಗೆ ಏನೂ ಸಿಗಲ್ಲ. ಈ ರೀತಿ ವಿಚಾರಗಳನ್ನು ಜನ ಚರ್ಚೆ ಮಾಡಬೇಕು. ಸಂಪತ್ತಿನ ಮರುಹಂಚಿಕೆ ಬಗ್ಗೆ ಮಾತನಾಡಬೇಕು. ಜನ ಹಿತದ ಕಾನೂನು, ನೀತಿ ನಿಯಮ ರೂಪಿಸುವ ವಿಚಾರವಾಗಬೇಕೇ ಹೊರತು ಅತಿಶ್ರೀಮಂತರ ಹಿತ ಕಾಪಾಡುವಂಥವಲ್ಲ…” ಎಂದು ಹೇಳಿದ್ದರು.

IPL_Entry_Point