ಕನ್ನಡ ಸುದ್ದಿ  /  Karnataka  /  Lord Ram Idol: Huge Rock From Karkala In Karnataka Sent To Ayodhya, 10 Points

Lord Ram idol: ಅಯೋಧ್ಯೆ ಶ್ರೀ ರಾಮಮಂದಿರದಲ್ಲಿ ರಾಮಲಲ್ಲಾನ ಮೂರ್ತಿ ನಿರ್ಮಾಣಕ್ಕೆ ಕಾರ್ಕಳದ ಕೃಷ್ಣಶಿಲೆ | 10 ಅಂಶಗಳು

ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾನ ಮೂರ್ತಿ ನಿರ್ಮಿಸಲು ವಿವಿಧ ಶಿಲೆಗಳನ್ನು ಆಯ್ಕೆ ಮಾಡಲಾಗಿದ್ದು, ಅವುಗಳಲ್ಲಿ ಕಾರ್ಕಳದ ನೆಲ್ಲಿಕಾರು ಮಾದರಿಯ ಕೃಷ್ಣಶಿಲೆಯೂ ಒಂದಾಗಿದೆ.

Lord Ram idol:ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾನ ಮೂರ್ತಿ ನಿರ್ಮಾಣಕ್ಕೆ ಕಾರ್ಕಳದ ಶಿಲೆ
Lord Ram idol:ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾನ ಮೂರ್ತಿ ನಿರ್ಮಾಣಕ್ಕೆ ಕಾರ್ಕಳದ ಶಿಲೆ (twitter)

ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಿರುವ ಶ್ರೀ ರಾಮಲಲ್ಲಾನ ಮೂರ್ತಿಗೆ ಕರ್ನಾಟಕದ ಕಾರ್ಕಳದ ಕೃಷ್ಣಶಿಲೆ ಆಯ್ಕೆಯಾಗಿದ್ದು, ಅಯೋಧ್ಯೆಗೆ ನಿನ್ನೆ ರವಾನೆ ಮಾಡಲಾಗಿದೆ. ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾನ ಮೂರ್ತಿ ನಿರ್ಮಿಸಲು ವಿವಿಧ ಶಿಲೆಗಳನ್ನು ಆಯ್ಕೆ ಮಾಡಲಾಗಿದ್ದು, ಅವುಗಳಲ್ಲಿ ಕಾರ್ಕಳದ ನೆಲ್ಲಿಕಾರು ಮಾದರಿಯ ಕೃಷ್ಣಶಿಲೆಯೂ ಒಂದಾಗಿದೆ. ನಿನ್ನೆ ಬೃಹತ್‌ ಲಾರಿ ಮೂಲಕ ಈ ಕೃಷ್ಣಶಿಲೆಯನ್ನು ಅಯೋಧ್ಯೆಗೆ ಕೊಂಡೊಯ್ಯಲಾಗಿದೆ.

ಹತ್ತು ಅಂಶಗಳು

  1. ಕಾರ್ಕಳದ ಕೃಷ್ಣಶಿಲೆಯಿಂದಲೇ ರಾಮಲಲ್ಲಾನ ಮೂರ್ತಿ ನಿರ್ಮಿಸುವ ಕುರಿತು ಸ್ಪಷ್ಟತೆಯಿಲ್ಲ. ಏಕೆಂದರೆ, ಈಗಾಗಲೇ ವಿವಿಧೆಡೆಯಿಂದ ವಿಶೇಷವಾದ ಶಿಲೆಗಳನ್ನು ಅಯೋಧ್ಯೆಗೆ ತರಿಸಲಾಗಿದೆ.ಕಾರ್ಕಳ, ನೇಪಾಳ ಸೇರಿದಂತೆ ವಿವಿಧೆಡೆಯಿಂದ ತರಿಸಲಾದ ಕಲ್ಲುಗಳಲ್ಲಿ ಸೂಕ್ತವಾದ ಶಿಲೆಯಲ್ಲಿ ರಾಮಲಲ್ಲಾನ ಮೂರ್ತಿ ಮೂಡಿಬರಲಿದೆ.
  2. ಕಳೆದ ತಿಂಗಳು ಶ್ರೀರಾಮ ಜನ್ಮ ಭೂಮಿಯಲ್ಲಿ ಶ್ರೀರಾಮ ಚಂದ್ರ ಮತ್ತು ಸೀತೆಯ ವಿಗ್ರಹ ಕೆತ್ತನೆಗಾಗಿ ನೇಪಾಳದಿಂದ ಅಯೋಧ್ಯೆಗೆ ಎರಡು ಬೃಹತ್‌ ಸಾಲಿಗ್ರಾಮ ಶಿಲೆಗಳನ್ನು ತರಲಾಗಿತ್ತು. ಸೀತಾ ಮಾತೆ ಜನಿಸಿದ ನಗರವಾದ ನೇಪಾಳದ ಜನಕಪುರದ ಕಾಳಿ ಗಂಡಕಿ ನದಿಯಲ್ಲಿ ಮಾತ್ರ ಸಿಗುವ ಈ ಸಾಲಿಗ್ರಾಮ ಶಿಲೆಗಳನ್ನು ಅಯೋಧ್ಯೆಗೆ ತರಲಾಗಿತ್ತು.
  3. ಕಾರ್ಕಳದ ಈದು ಗ್ರಾಮದ ತುಂಗ ಪೂಜಾರಿಯವರ ಭೂಮಿಯಲ್ಲಿದ್ದ ಶಿಲೆಯನ್ನು ಅಯೋಧ್ಯೆಗೆ ಸಾಗಿಸಲಾಗಿದೆ.
  4. ಕಾರ್ಕಳವು ಅತ್ಯುತ್ತಮ ಶಿಲೆಗಳಿಗೆ ಹೆಸರುವಾಸಿ. ಕಾರ್ಕಳದ ನೆಲ್ಲಿಕಾರಿನ ಶಿಲೆಗಳಿಗೆ ಕರಿಕಲ್ಲಿನ ನಗರಿ ಎಂದೇ ಕರೆಯಲಾಗುತ್ತದೆ. ರಾಷ್ಟ್ರಪತಿ ಭವನದಲ್ಲಿರುವ ಕಾರ್ಕಳ ಬಾಹುಬಲಿ, ಸೋಮನಾಥಪುರದ ದ್ವಾರ ಸೇರಿದಂತೆ ಹಲವು ಮೂರ್ತಿಗಳು, ವಿಗ್ರಹಗಳು, ದ್ವಾರಗಳು ಕಾರ್ಕಳದ ನೆಲ್ಲಿಕಾರಿನ ಶಿಲೆಗಳಿಂದಲೇ ನಿರ್ಮಾಣವಾಗಿವೆ.
  5. ಈಗಾಗಲೇ ರಾಮಮಂದಿರದ ಅಡಿಪಾಯ ನಿರ್ಮಾಣಕ್ಕಾಗಿ ಕರ್ನಾಟಕದ ಚಿಕ್ಕಬಳ್ಳಾಪುರದ ಕಲ್ಲುಗಳನ್ನು ಬಳಸಲಾಗಿದೆ. ಇಲ್ಲಿನ ಶಿಲೆಗಳು ಅತಿಕಡಿಮೆ ಮತ್ತು ಅತಿ ಹೆಚ್ಚಿನ ತಾಪಮಾನ ಸಹಿಸಿಕೊಳ್ಳುವ ಸಾಮರ್ಥ್ಯಕ್ಕಾಗಿ ಜನಪ್ರಿಯತೆ ಪಡೆದಿವೆ.
  6. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ನೇಪಾಳದಿಂದ ತರಲಾಗಿದ್ದ ಕಪ್ಪು ಶಿಲೆ ಬಳಸುವುದಾಗಿ ಈ ಹಿಂದೆ ಶ್ರೀರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ ತಿಳಿಸಿತ್ತು. ಇದೀಗ ಕಾರ್ಕಳದ ಶಿಲೆಯನ್ನು ಅಯೋಧ್ಯೆಗೆ ಕೊಂಡೊಯ್ಯಲಾಗಿದೆ. ಯಾವ ಶಿಲೆ ಯಾವುದಕ್ಕೆ ಬಳಕೆಯಾಗಲಿದೆ ಎನ್ನುವ ಕುರಿತು ಟ್ರಸ್ಟ್‌ ಮಾಹಿತಿ ನೀಡಿಲ್ಲ.
  7. ಆಮದು ಮಾಡಿದ ಕಲ್ಲುಗಳಿಂದಲೇ ವಿಗ್ರಹಗಳನ್ನು ತಯಾರಿಸುವ ಅಗತ್ಯವಿಲ್ಲ. ಮೂರ್ತಿ ಮಾಡಲು ಯಾವ ಕಲ್ಲನ್ನು ಬಳಸಬಹುದೆಂಬುದನ್ನು ಶಿಲ್ಪಕಲೆ ತಜ್ಞರು ಮಾತ್ರ ನಿರ್ಧರಿಸುತ್ತಾರೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹೇಳಿದ್ದಾರೆ.
  8. "ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ ಎನ್ನುವಂತೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭ್ಯವ ಪ್ರಭು ಶ್ರೀ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಪವಿತ್ರ ಶ್ರೀ ರಾಮರ ಮೂರ್ತಿಗೆ ಕರ್ನಾಟಕದ ಕಾರ್ಕಳದ ಈದು ಗ್ರಾಮದ ಕೃಷ್ಣಶಿಲೆ ಆಯ್ಕೆಯಾಗಿದೆ. ಶಿಲ್ಪಿಗಳ ತವರೂರು ಎಂದೇ ಖ್ಯಾತವಾಗಿರುವ ಕಾರ್ಕಳದ ಈದು ಗ್ರಾಮದ ತುಂಗ ಪೂಜಾರಿಯವರ ಭೂಮಿಯಲ್ಲಿದ್ದ ಶಿಲೆಯನ್ನು ಆಯ್ಕೆ ಮಾಡಲಾಗಿದೆ. ಸಂಪೂರ್ಣ ವಿಶ್ವವೇ ಈ ಶಿಲೆಯಿಂದ ರೂಪುಗೊಳ್ಳಲಿರುವ ಭಗವಾನ್ ಶ್ರೀ ರಾಮನ ದರ್ಶನ ಪಡೆಯಲಿದೆ ಎಂಬುದು ನಮ್ಮನ್ನು ಪುಳಕಿತರನ್ನಾಗಿ ಹಾಗೂ ಪುನೀತರನ್ನಾಗಿಸುವಂತಹದಾಗಿದೆ. ಈ ಸೇವೆ ಮಾಡುವ ಅವಕಾಶವನ್ನು ರಾಜ್ಯಕ್ಕೆ ನೀಡಿದ ಪ್ರಭು ಶ್ರೀ ರಾಮನಿಗೆ ಶಿರಸಾಷ್ಟಾಂಗ ನಮಸ್ಕಾರಗಳು" ಎಂದು ನಿನ್ನೆ ಕೇಂದ್ರ ಗಣಿ ಹಾಗೂ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಟ್ವೀಟ್‌ ಮಾಡಿದ್ದರು.
  9. ರಾಮಮಂದಿರದಲ್ಲಿ ಹಲವು ಮೂರ್ತಿಗಳು ಇರಲಿದ್ದು, ರವಾನೆಯಾದ ಎಲ್ಲಾ ಕಲ್ಲುಗಳು ಅಯೋಧ್ಯೆಯಲ್ಲಿ ಸುಂದರ ಮೂರ್ತಿಗಳಾಗಿ ಕಂಗೊಳಿಸುವ ನಿರೀಕ್ಷೆಯಿದೆ. ಶಿಲ್ಪ ತಜ್ಞರಿಂದ ಒಪ್ಪಿಗೆ ದೊರೆತ ನಂತರವೇ ರಾಮಲಲ್ಲ ಮೂರ್ತಿ ನಿರ್ಮಾಣ ಕಾರ್ಯ ಆರಂಭವಾಗಲಿದೆ.
  10. ರಾಮ ಮಂದಿರದ ಶೇಕಡ 70ರಷ್ಟು ಕೆಲಸ ಕಾರ್ಯಗಳು ಪೂರ್ಣಗೊಂಡಿದ್ದು, ರಾಮ ಲಲ್ಲಾನ ಮೂರ್ತಿಯನ್ನು 2024ರ ಜನವರಿ ತಿಂಗಳ ಮೂರನೇ ವಾರದಲ್ಲಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ತಿಳಿಸಿದೆ.