Dakshina Kannada News: ಮಲಿನಗೊಳ್ಳುತ್ತಿರುವ ನದಿಯಲ್ಲಿ ಮೀನು ಸಂತತಿ ಉಳಿಸಲು, ಮೀನುಮರಿ ಬಿತ್ತನೆ
ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ, ಫಲ್ಗುಣಿ ಹಾಗೂ ಶಾಂಭವಿ ನದಿ ಹಿನ್ನೀರಿನಲ್ಲಿ ಸೀಬಾಸ್ ತಳಿಯ ಮೀನು ಮರಿಗಳನ್ನು ಬಿತ್ತನೆ ಮಾಡಲಾಗಿದೆ. ಮೀನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕಾರ್ಯ ಆಗುತ್ತಿದೆ.

ಮಂಗಳೂರು: ನೇರವಾಗಿ ಅಥವಾ ಪರೋಕ್ಷವಾಗಿ ಒಂದಿಲ್ಲೊಂದು ರೀತಿಯಲ್ಲಿ ಮಂಗಳೂರು ಹೊರವಲಯದಲ್ಲಿ ತ್ಯಾಜ್ಯ ನೀರು ನದಿಗೆ ಸೇರುತ್ತಿದ್ದು, ಇದು ಮೀನುಗಾರರ ಆತಂಕಕ್ಕೆ ಕಾರಣವಾಗಿದೆ. ಈ ವೇಳೆ ತ್ಯಾಜ್ಯ ನೀರು ನದಿಗೆ ಸೇರುತ್ತಿರುವ ಹಿನ್ನೆಲೆಯಲ್ಲಿ ನದಿ ನೀರನ್ನು ಶುದ್ಧಗೊಳಿಸುವ ಉದ್ದೇಶ ಹಾಗೂ ಮೀನು ಸಂತತಿ ಬೆಳೆಸುವ ಉದ್ದೇಶದಿಂದ ಇಲ್ಲಿ ಮೀನು ಮರಿ ಬಿತ್ತನೆಗೆ ಮೀನುಗಾರಿಕಾ ಇಲಾಖೆ ಮುಂದಾಗಿದೆ
ಟ್ರೆಂಡಿಂಗ್ ಸುದ್ದಿ
ಇದು ನದಿಯ ಹಿನ್ನೀರಿನಲ್ಲಿ ಮೀನುಮರಿ ಬಿತ್ತನೆ ಮಾಡುವ ಪ್ರಕ್ರಿಯೆ. ಮೀನು ಸಂತತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ, ಫಲ್ಗುಣಿ ಹಾಗೂ ಶಾಂಭವಿ ನದಿ ಹಿನ್ನೀರಿನಲ್ಲಿ ಸೀಬಾಸ್ ತಳಿಯ ಮೀನು ಮರಿಗಳನ್ನು ಬಿತ್ತನೆ ಮಾಡಲಾಗಿದೆ. ಮೀನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕಾರ್ಯ ಆಗುತ್ತಿದೆ.
ಏನಿದು ಸೀಬಾಸ್ ಅಥವಾ ಕುರುಡಿ ಮೀನು?
ಸೀಬಾಸ್ ಅಥವಾ ಕುರುಡಿ ಮೀನು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ. ಅತಿ ಬೇಡಿಕೆ ಹಾಗೂ ಬೆಲೆ ಇದಕ್ಕಿದೆ. ಹೆಚ್ಚು ಇಳುವರಿ, ಶೀಘ್ರ ಬೆಳವಣಿಗೆ, ಸ್ಥಳೀಯ ಆಹಾರಕ್ಕೆ ಇದು ಹೊಂದಿಕೆ ಆಗುತ್ತದೆ 0-40 ಪಿಪಿಟಿವರೆಗೂ ಉಪ್ಪಿನಾಂಶವನ್ನು ತಡೆದುಕೊಳ್ಳುವ ಸಾಮರ್ಥ್ಯ ಇದಕ್ಕಿದೆ. ಸಿಹಿ ನೀರಲ್ಲೂ ಇದನ್ನು ಸಾಕಬಹುದು. ಸಮುದ್ರ ಸೇರುವ ಒಂದೆರಡು ಕಿ.ಮೀ. ದೂರದ ನದಿ ನೀರಿನ ಹಿನ್ನೀರಲ್ಲಿ ಮೀನು ಬಿತ್ತನೆ ಮಾಡಿರುವುದರಿಂದ ಈ ಮೀನುಗಳು ನದಿ ಅಥವಾ ಸಮುದ್ರದಲ್ಲೂ ಬದುಕಬಲ್ಲದು.
ಯಾವ ನದಿಗಳಲ್ಲಿ ಎಷ್ಟು ಮೀನು ಮರಿಗಳು ಬಿತ್ತನೆಯಾಗಿವೆ
ನೇತ್ರಾವತಿ ನದಿ ಹಿನ್ನೀರಿನಲ್ಲಿ 6,129, ಫಲ್ಗುಣಿ ನದಿಯ ಹಿನ್ನೀರಿನಲ್ಲಿ 5 ಸಾವಿರ, ಶಾಂಭವಿ ನದಿ ಹಿನ್ನೀರಲ್ಲಿ 5 ಸಾವಿರ ಸೀಬಾಸ್ (ಕುರುಡಿ ಮೀನು) ತಳಿಯ ಮೀನು ಮರಿಗಳನ್ನು ಬಿತ್ತನೆ ಮಾಡಲಾಗಿದೆ. ಮೀನು ಸಂತತಿ ಹೆಚ್ಚಿಸುವ ನಿಟ್ಟಿನಲ್ಲಿ ಈ ಪರ್ಯಾಯ ಕ್ರಮವನ್ನು ಕೈಗೊಳ್ಳಲಾಗುತ್ತಿದೆ.
ಬೈಕಂಪಾಡಿ ಕೈಗಾರಿಕಾ ಪ್ರದೇಶದ ಸಮೀಪದಿಂದ ತ್ಯಾಜ್ಯ ನೀರು ನದಿಯ ಮೂಲಕ ಸಮುದ್ರಕ್ಕೆ ಸೇರುತ್ತಿರುವ ಕಾರಣ ಈಗಾಗಲೇ ಮೀನು ಸಂತತಿ ನಶಿಸಿಹೋಗಿದೆ. ಬಲೆಗೆ ಮೀನುಗಳೂ ಸಿಗುತ್ತಿಲ್ಲ ಎಂಬುದು ಮೀನುಗಾರರ ಅಳಲು. ಈ ಹಿನ್ನೆಲೆಯಲ್ಲಿ ನದಿಯ ಹಿನ್ನೀರಲ್ಲೂ ದೋಣಿಗಳಲ್ಲಿ ಮೀನುಗಾರಿಕೆ ನಡೆಸುವವರಿಗೂ ಮೀನಿನ ಕೊರತೆ ಎದುರಾಗಿದೆ. ಭವಿಷ್ಯದ ಮೀನುಗಾರಿಕೆಗೆ ದೊಡ್ಡ ಸವಾಲಾಗಿ ಕಾಣಿಸುವ ಈ ಪ್ರಕ್ರಿಯೆಯಿಂದಾಗಿ ಮೀನು ಬಿತ್ತನೆಗೆ ಇಲಾಖೆ ಮುಂದಾಗಿದೆ. ಇದರಿಂದ ಮೀನು ಸಂತತಿ ಹೆಚ್ಚು ಮಾಡುವ ಜೊತೆಗೆ ನದಿಯ ಶುದ್ಧೀಕರಣವೂ ಸಾಧ್ಯವಾಗುತ್ತದೆ. ಈಗಾಗಲೇ ಸೀಬಾಸ್ ತಳಿಯ ಮೀನುಮರಿಗಳನ್ನು ಒಂದು ಬಾರಿ ಬಿತ್ತನೆ ಮಾಡಲಾಗಿದ್ದು, ಇದೀಗ ಎರಡನೇ ಬಾರಿ ಬಿತ್ತನೆಗೆ ಮುಂದಾಗಿದೆ.
(ವರದಿ: ಹರೀಶ್ ಮಾಂಬಾಡಿ)