ಕನ್ನಡ ಸುದ್ದಿ  /  Karnataka  /  Official Invitation To Pramodadevi Wodeyar For Mysuru Dasara

Mysuru Dasara 2022: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ಗೆ ಸಚಿವರಿಂದ ಅಧಿಕೃತ ಆಹ್ವಾನ

ದಸರಾ ಉತ್ಸವಕ್ಕೆ ವ್ಯವಸ್ಥಿತವಾಗಿ ಸಿದ್ಧತೆಗಳು ನಡೆಯುತ್ತಿದೆ. ದಸರಾ ಉತ್ಸವಕ್ಕೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಅವರನ್ನು ಆಹ್ವಾನಿಸಲಾಯಿತು. ದಸರಾಗೆ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ಹೇಳಿದ್ದಾರೆ ಎಂದು ಸಚಿವ ಸೋಮಶೇಖರ್‌ ತಿಳಿಸಿದರು.

ರಾಜವಂಶಸ್ಥೆಗೆ ಸಚಿವರಿಂದ ಅಧಿಕೃತ ಆಹ್ವಾನ
ರಾಜವಂಶಸ್ಥೆಗೆ ಸಚಿವರಿಂದ ಅಧಿಕೃತ ಆಹ್ವಾನ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಹಿನ್ನೆಲೆಯಲ್ಲಿ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಟಿ ಸೋಮಶೇಖರ್ ಅವರು ಮೈಸೂರು ಒಡೆಯರ್ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರಿಗೆ ಆಹ್ವಾನ ನೀಡಿದರು. ಶನಿವಾರ ಮೈಸೂರು ಅರಮನೆಯ ಖಾಸಗಿ ನಿವಾಸದಲ್ಲಿ ಭೇಟಿಯಾಗಿ ಸಾಂಪ್ರದಾಯಿಕವಾಗಿ ಫಲಪುಷ್ಪ ಹಾಗೂ ತಾಂಬೂಲ ನೀಡಿ ದಸರಾ ಉತ್ಸವಕ್ಕೆ ಸಾಂಪ್ರದಾಯಿಕವಾಗಿ ಆಹ್ವಾನ ನೀಡಿದರು.

ಸಂಸದರಾದ ಪ್ರತಾಪ್ ಸಿಂಹ, ವಿಧಾನಪರಿಷತ್ ಸದಸ್ಯರಾದ ಮಂಜೇಗೌಡ, ಮೇಯರ್ ಶಿವಕುಮಾರ್, ಉಪಮೇಯರ್ ಜಿ ರೂಪಾ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸೇರಿದಂತೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರಮೋದಾದೇವಿ ಒಡೆಯರ್‌ ಅವರಿಗೆ ಸನ್ಮಾನ ಮಾಡಿ,ಸರ್ಕಾರದಿಂದ ಪ್ರತಿವರ್ಷ ನೀಡಲಾಗುವ ಗೌರವಧನ ನೀಡಿದರು.

ಈ ವೇಳೆ ಮಾತನಾಡಿದ ಸಚಿವರು, ದಸರಾ ಉತ್ಸವಕ್ಕೆ ವ್ಯವಸ್ಥಿತವಾಗಿ ಸಿದ್ಧತೆಗಳು ನಡೆಯುತ್ತಿದೆ. ದಸರಾ ಉತ್ಸವಕ್ಕೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಅವರನ್ನು ಆಹ್ವಾನಿಸಲಾಯಿತು. ದಸರಾಗೆ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ಹೇಳಿದ್ದಾರೆ ಎಂದು ತಿಳಿಸಿದರು.

ಯುವ ದಸರಾಗೆ ನಟ ಕಿಚ್ಚ ಸುದೀಪ್ ಅವರು ಆಗಮಿಸುತ್ತಿಲ್ಲ. ಅನಿವಾರ್ಯ ಕಾರಣಗಳಿಂದ ಫಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಯುವ ದಸರಾಕ್ಕೆ ಸುದೀಪ್‌ ಬರಲಿದ್ದಾರೆ ಎಂಬ ಸುದ್ದಿಯು ಕಿಚ್ಚ ಅಭಿಮಾನಿಗಳ ಖುಷಿಗೆ ಕಿಚ್ಚು ಹೊತ್ತಿಸಿತ್ತು. ಆದರೆ, ಇದೀಗ ಅವರು ಬರುವುದಿಲ್ಲವೆಂಬ ಮಾಹಿತಿಯನ್ನು ಸೋಮಶೇಖರ್‌ ಖಚಿತಪಡಿಸಿದ್ದಾರೆ.

ದಸರಾ ಕಾರ್ಯಕ್ರಮಗಳಲ್ಲಿ ಶಾಸಕ ರಾಮದಾಸ್ ಅವರು ಪಾಲ್ಗೊಳ್ಳುತ್ತಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಮದಾಸ್ ಅವರು ಮೋದಿ ಯುಗ ಉತ್ಸವ ಮಾಡುತ್ತಿದ್ದಾರೆ. ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಹೇಳಿದರು. ದಸರಾ ಸಂಬಂಧ ಪ್ರಚಾರದ ಕೊರತೆ ಆಗಿಲ್ಲ. ಏನಾದರೂ ಸಮಸ್ಯೆ ಇದ್ದರೆ ಪರಿಹರಿಸಲಾಗುವುದು. ಇದಕ್ಕಾಗಿ ಪ್ರಚಾರ ಸಮಿತಿ ರಚನೆ ಮಾಡಿದ್ದು ಎಲ್ಲಾ ರೀತಿಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು.

ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ ಮಾಡಲಿದ್ದಾರೆ. ವೇದಿಕೆಯಲ್ಲಿ 13 ಆಸನಗಳಿರಲಿವೆ. ರಾಷ್ಟ್ರಪತಿ, ರಾಜ್ಯಪಾಲರು, ಮುಖ್ಯಮಂತ್ರಿ, ಆರು ಕೇಂದ್ರ ಸಚಿವರು, ನಾಲ್ವರು ರಾಜ್ಯ ಸಚಿವರು ವೇದಿಕೆಯಲ್ಲಿ ಇರಲಿದ್ದಾರೆ ಎಂದು ಹೇಳಿದರು.

ಮೈಸೂರು ಯುವ ದಸರಾ ಕಾರ್ಯಕ್ರಮವು ಇದೇ ಸೆಪ್ಟೆಂಬರ್‌ 27ರಿಂದ ಅಕ್ಟೋಬರ್‌ 3ರವರೆಗೆ ನಡೆಯಲಿದೆ. ಏಳು ದಿನಗಳ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರ ಜತೆ ಸ್ಯಾಂಡಲ್‌ವುಡ್‌, ಬಾಲಿವುಡ್‌ ಗಾಯಕರು, ತಾರೆಯರ ನೃತ್ಯ ಗಾಯನ, ಕವಿಗೋಷ್ಠಿ ಸೇರಿದಂತೆ ವೈವಿದ್ಯಮಯ ಕಾರ್ಯಕ್ರಮಗಳು ಇರುತ್ತವೆ.

ಈ ಬಾರಿಯ ಯುವ ದಸರಾದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಂದು ದಿನ ಪೂರ್ತಿಯನ್ನು 'ಅಪ್ಪು ನಮನ' ಕಾರ್ಯಕ್ರಮಕ್ಕೆ ಮೀಸಲಿಡಲಾಗುವುದು ಎಂದು ದಸರಾ ಉಪಸಮಿತಿ ವಿಶೇಷಾಧಿಕಾರಿ ಆರ್‌.ಚೇತನ್‌ ಮಾಹಿತಿ ನೀಡಿದ್ದರು.

IPL_Entry_Point