ಕನ್ನಡ ಸುದ್ದಿ  /  ಕರ್ನಾಟಕ  /  V Somanna Profile: ವರುಣಾದಲ್ಲಿ ಮಾಜಿ Cm ಸಿದ್ದರಾಮಯ್ಯಗೆ ಪ್ರಬಲ ಎದುರಾಳಿ ಬಿಜೆಪಿಯ ವಿ.ಸೋಮಣ್ಣ; ಪ್ರಭಾವಿ ಲಿಂಗಾಯತ ನಾಯಕನ ಪರಿಚಯ ಹೀಗಿದೆ

V Somanna Profile: ವರುಣಾದಲ್ಲಿ ಮಾಜಿ CM ಸಿದ್ದರಾಮಯ್ಯಗೆ ಪ್ರಬಲ ಎದುರಾಳಿ ಬಿಜೆಪಿಯ ವಿ.ಸೋಮಣ್ಣ; ಪ್ರಭಾವಿ ಲಿಂಗಾಯತ ನಾಯಕನ ಪರಿಚಯ ಹೀಗಿದೆ

V Somanna Profile: ಕಾಂಗ್ರೆಸ್‌ ಪಕ್ಷದ ಪ್ರಭಾವಿ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಲ ಸೇಫ್‌ ಆಗಿ ಗೆದ್ದು ಬರಲು ವರುಣಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಅವರಿಗೆ ಅದನ್ನು ಸುಲಭ ತುತ್ತಾಗಲು ಬಿಡಬಾರದೆಂಬ ಎಂಬ ಬಿಜೆಪಿ ನಾಯಕರ ತಂತ್ರಗಾರಿಕೆಗೆ ಹೆಗಲು ಕೊಟ್ಟವರು ವಸತಿ ಸಚಿವ ವಿ.ಸೋಮಣ್ಣ. ಅವರ ಕಿರುಪರಿಚಯ ಇಲ್ಲಿದೆ.

ವಿ. ಸೋಮಣ್ಣ (ಸಂಗ್ರಹ ಚಿತ್ರ)
ವಿ. ಸೋಮಣ್ಣ (ಸಂಗ್ರಹ ಚಿತ್ರ) (Verified Facebook)

ನಿವೃತ್ತಿ ಬಯಸಿದ್ದೆ. ಆದರೆ ಪಕ್ಷ ವಹಿಸಿದ ಹೊಣೆಗಾರಿಕೆ ಬೇಡ ಎನ್ನಲಾಗಲಿಲ್ಲ. ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿಯೊಂದಿಗೆ ವರುಣಾ ಮತ್ತು ಚಾಮರಾಜನಗರದಲ್ಲಿ ಸ್ಪರ್ಧಿಸುತ್ತಿದ್ದೇನೆ ಎನ್ನುತ್ತ ಚುನಾವಣಾ ಕಣದಲ್ಲಿದ್ದಾರೆ ಸಚಿವ ವಿ.ಸೋಮಣ್ಣ. ಅವರು ಬೆಂಗಳೂರು ಭಾಗದ ಪ್ರಭಾವಿ ಲಿಂಗಾಯತ ನಾಯಕ. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಬಿ.ಎಸ್‌.ಯಡಿಯೂರಪ್ಪ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರು. ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದ ಶಾಸಕರು. ಈ ಸಲ ಅವರ ಮಗನಿಗೆ ಟಿಕೆಟ್‌ ನಿರೀಕ್ಷಿಸಿದ್ದರಾದರೂ ಅದು ಈಡೇರಲಿಲ್ಲ.

ಎಲ್ಲ ಪಕ್ಷಗಳ ನಾಯಕರ ಜತೆಗೆ ಸೌಹಾರ್ದಯುತ ಸಂಬಂಧ ಹೊಂದಿರುವ ವಿ.ಸೋಮಣ್ಣ ಅವರಿಗೆ ಗೋವಿಂದರಾಜನಗರದಲ್ಲಿ ಕಾಂಗ್ರೆಸ್‌ ಪಕ್ಷದ ಎಂ.ಕೃಷ್ಣಪ್ಪ ಮತ್ತು ಅವರ ಮಗ ಪ್ರಿಯಕೃಷ್ಣ ಪ್ರಬಲ ಎದುರಾಳಿಗಳಾಗಿದ್ದರು. ಈ ಬಾರಿ ಗೋವಿಂದರಾಜನಗರದಿಂದ ವಿ.ಸೋಮಣ್ಣ ಅವರ ಶಿಷ್ಯ ಉಮೇಶ್‌ ಶೆಟ್ಟಿ ಕಣಕ್ಕೆ ಇಳಿದಿದ್ದಾರೆ. ವಿ.ಸೋಮಣ್ಣ ತಮ್ಮದಲ್ಲದ ಎರಡು ಕ್ಷೇತ್ರಗಳಲ್ಲಿ ರಾಜಕೀಯ ಭವಿಷ್ಯವನ್ನು ಪಣಕ್ಕೆ ಒಡ್ಡಿದ್ದಾರೆ.

ಐದು ಬಾರಿ ಶಾಸಕರಾಗಿ, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾದ ವಿ. ಸೋಮಣ್ಣ ಉತ್ತಮ ರಾಜಕೀಯ ಅನುಭವ ಹೊಂದಿದ್ದಾರೆ. ಬೆಂಗಳೂರು ನಗರ ರಾಜಕೀಯದ ಮೇಲೆ ಭಾರೀ ಹಿಡಿತ ಹೊಂದಿರುವ ಅವರು 1980ರ ದಶಕದಲ್ಲಿ ರಾಜಕೀಯ ರಂಗ ಪ್ರವೇಶಿಸಿದರು. ಕಾಲೇಜು ದಿನಗಳಲ್ಲಿಯೇ ವಿದ್ಯಾರ್ಥಿ ಸಂಘಟನೆಗಳ ನಾಯಕರಾಗಿದ್ದ ವಿ. ಸೋಮಣ್ಣ 1983ರಲ್ಲಿ ಬೆಂಗಳೂರಿನ ವಿಜಯನಗರದಿಂದ ಮಹಾನಗರ ಪಾಲಿಕೆ ಸದಸ್ಯರಾಗಿ, ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರಾಗಿ, ಅಧ್ಯಕ್ಷರಾಗಿ ಕೆಲಸ ಮಾಡಿದವರು.

ರಾಜಕೀಯದ ಮುಖ್ಯವಾಹಿನಿಗೆ ಬಂದ ಅವರು 1994ರಲ್ಲಿ ಜನತಾದಳ ಟಿಕೆಟ್‌ ಪಡೆದು ಬಿನ್ನಿಪೇಟೆ ಶಾಸಕರಾಗಿ ಮೊದಲ ಸಲ ವಿಧಾನಸಭೆ ಪ್ರವೇಶಿಸಿದರು. 1996ರಿಂದ 1999ರ ತನಕ ಬಂಧೀಖಾನೆ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದವರು. 1999ರಲ್ಲಿ ಬಿನ್ನಿಪೇಟೆಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿ ಗೆದ್ದು ಶಾಸನ ಸಭೆ ಪ್ರವೇಶಿಸಿದರು. 2004ರ ವೇಳೆಗೆ ಕಾಂಗ್ರೆಸ್‌ ಪಕ್ಷದ ಸೇರಿದ್ದ ಅವರು ಅದರ ಟಿಕೆಟ್‌ ಪಡೆದು ಮೂರನೇ ಸಲ ಚುನಾವಣೆ ಎದುರಿಸಿ ಗೆಲುವು ಕಂಡರು. ಮುಂದೆ 2008ರಲ್ಲಿ ಗೋವಿಂದರಾಜ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಡೆದು ಶಾಸಕರಾದರು. ಮಾರನೇ ವರ್ಷವೇ ಅವರು ಬಿಜೆಪಿ ಸೇರಿದರು. ಉಪಚುನಾವಣೆಯಲ್ಲಿ ಸೋಲು ಕಂಡರು. 2010ರಿಂದ 2018ರ ತನಕ ವಿಧಾನ ಪರಿಷತ್‌ ಸದಸ್ಯರಾಗಿದ್ದರು. ವಸತಿ ಮತ್ತು ಮುಜರಾಯಿ ಸಚಿವರಾಗಿ ಕೆಲಸ ಮಾಡಿದ್ದರು. ಅದಾಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾಗಿ, 2010 ರಿಂದ 2013ರ ತನಕ ವಸತಿ ಸಚಿವರಾಗಿ ಕಾರ್ಯ ನಿರ್ವಹಿಸಿದರು.

ವಿ.ಸೋಮಣ್ಣ ಅವರು 2018ರಲ್ಲಿ ಎರಡನೇ ಸಲ ಬಿಜೆಪಿ ಟಿಕೆಟ್‌ನಲ್ಲಿ ಗೋವಿಂದರಾಜನಗರದಲ್ಲಿ ಸ್ಪರ್ಧಿಸಿ ಗೆದ್ದರು. 2019-20ರಲ್ಲಿ ತೋಟಗಾರಿಕೆ ಸಚಿವರಾಗಿದ್ದರು. 2021ರಿಂದೀಚೆಗೆ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದರು. ಈ ಚುನಾವಣೆಯಲ್ಲಿ ಪಕ್ಷ ಕೊಟ್ಟ ಹೊಣೆಗಾರಿಕೆ ಎಂದು ವರುಣಾ ಮತ್ತು ಚಾಮರಾಜನಗರಗಳಲ್ಲಿ ಸ್ಪರ್ಧೆ ನಡೆಸಿದ್ದಾರೆ.

ವರುಣಾ ಕ್ಷೇತ್ರವು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ. ಅಲ್ಲಿ ಪ್ರಬಲ ಪೈಪೋಟಿ ನೀಡುವುದಕ್ಕೆ ಕಣಕ್ಕೆ ಇಳಿದಿದ್ದಾರೆ ವಿ.ಸೋಮಣ್ಣ. ಅವರಿಗೆ ಸಾಥ್‌ ನೀಡಿದ್ದಾರೆ ಅಲ್ಲಿನ ಸಂಸದ ಪ್ರತಾಪ್‌ ಸಿಂಹ. ಚಾಮರಾಜನಗರದಲ್ಲಿ ಕೂಡ ವಿ.ಸೋಮಣ್ಣ ಸ್ಪರ್ಧಿಸುತ್ತಿದ್ದು, ಅಲ್ಲಿ ಅವರಿಗೆ ಎದುರಾಳಿ ಸಿದ್ದರಾಮಯ್ಯ ಅವರ ಶಿಷ್ಯ ಪುಟ್ಟರಂಗಶೆಟ್ಟಿ ಕಣದಲ್ಲಿದ್ದಾರೆ. ಎರಡು ಹೊಸ ಕ್ಷೇತ್ರಗಳಲ್ಲಿ ಗೆದ್ದು ಪಕ್ಷವನ್ನು ಗೆಲ್ಲಿಸುವ ಬೃಹತ್‌ ಸವಾಲನ್ನು ಅವರು ಈಗ ಎದುರಿಸುತ್ತಿದ್ದಾರೆ.

ವಿ ಸೋಮಣ್ಣ ವೈಯಕ್ತಿಕ ಪರಿಚಯ

ಪೂರ್ಣ ಹೆಸರು- ವೀರಣ್ಣ ಸೋಮಣ್ಣ

ಜನನ - 20.07.1950

ಹುಟ್ಟೂರು - ದೊಡ್ಡಮರಳವಾಡಿ

ತಂದೆ - ದಿವಂಗತ ವೀರಣ್ಣ

ತಾಯಿ- ಕೆಂಪಮ್ಮ

ಶಿಕ್ಷಣ - ಪದವಿ

ಪತ್ನಿ - ಶೈಲಜಾ

ಮಕ್ಕಳು - ಡಾ.ಅರುಣ್‌ ಸೋಮಣ್ಣ ಸೇರಿ ಮೂವರು ಮಕ್ಕಳು

IPL_Entry_Point