ಕನ್ನಡ ಸುದ್ದಿ  /  ಕರ್ನಾಟಕ  /  Puttur Politics: ಬಿಜೆಪಿ ಸಿದ್ಧಾಂತಕ್ಕೆ ಮತ ಹಾಕಿ ಎಂದ ಪುತ್ತಿಲ; ಮಾತಿನ ʻಮರ್ಮʼ ಇದುವೇನಾ…

Puttur Politics: ಬಿಜೆಪಿ ಸಿದ್ಧಾಂತಕ್ಕೆ ಮತ ಹಾಕಿ ಎಂದ ಪುತ್ತಿಲ; ಮಾತಿನ ʻಮರ್ಮʼ ಇದುವೇನಾ…

Puttur Politics: ನಾನು ಬಿಜೆಪಿ ಸಿದ್ಧಾಂತ ಬೆಂಬಲಿಸುವ ಪಕ್ಷೇತರ ಅಭ್ಯರ್ಥಿ. ಬಿಜೆಪಿ ಸಿದ್ಧಾಂತಕ್ಕೆ ಮತ ಹಾಕಿ ಎಂದ ಅರುಣ್‌ ಕುಮಾರ್‌ ಪುತ್ತಿಲ. ಏನು ಈ ಮಾತಿನ ಮರ್ಮ? ಕಾರ್ಯಕರ್ತರ ನಡುವೆ ಹರಿದಾಡುತ್ತಿದೆ ಇದಕ್ಕೆ ಸಂಬಂಧಿಸಿದ ಹಲವು ವಿಚಾರಗಳು. ʻಅಡ್ಜಸ್ಟ್‌ಮೆಂಟ್‌ ರಾಜಕೀಯʼಕ್ಕೆ ಇಳಿದಿರುವ ʻಪಕ್ಷದ ಪ್ರಮುಖರುʼ ಯಾರು?- ಈ ವಿದ್ಯಮಾನದ ಅವಲೋಕನ ಇಲ್ಲಿದೆ.

ಅರುಣ್‌ ಕುಮಾರ್‌ ಪುತ್ತಿಲ (ಮಧ್ಯದಲ್ಲಿ ಕೇಸರಿ ಶಾಲು ಹೆಗಲ ಮೇಲೆ ಹಾಕಿಕೊಂಡವರು)
ಅರುಣ್‌ ಕುಮಾರ್‌ ಪುತ್ತಿಲ (ಮಧ್ಯದಲ್ಲಿ ಕೇಸರಿ ಶಾಲು ಹೆಗಲ ಮೇಲೆ ಹಾಕಿಕೊಂಡವರು) (File Photo - Puttila4Puttur)

ದಕ್ಷಿಣ ಜಿಲ್ಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಒಂದು ತೂಕ ಹೆಚ್ಚಿನ ಮಹತ್ವ ಇದೆ. ಸಂಘ ಪರಿವಾರದ ಬಹುದೊಡ್ಡ ನೆಲೆ ಹೊಂದಿರುವ ಕ್ಷೇತ್ರ ಇದು. ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಈ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಎಡವಿತು ಎಂಬ ಮಾತು ಕಾರ್ಯಕರ್ತರ ವಲಯದಲ್ಲಿ, ಹಿಂದು ಸಂಘಟನೆಗಳ ಕಾರ್ಯಕರ್ತರ ನಡುವೆ ವ್ಯಾಪಕವಾಗಿ ಕೇಳುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಬಿಜೆಪಿ ಮತ್ತು ಹಿಂದು ಸಂಘಟನೆಗಳ ಕಾರ್ಯಕರ್ತರು ಎಂದಿಗೂ ಹಣದ ಹಿಂದೆ ಹೋದವರಲ್ಲ. ಸಂಘ ಸಂಸ್ಕಾರದಲ್ಲಿ ಬೆಳೆದ ಕಾರಣ ನಿಸ್ವಾರ್ಥ ಭಾವದಿಂದ ʻದೇಶ ಸೇವೆʼ ಎಂದು ಪಕ್ಷಕ್ಕಾಗಿ, ರಾಜಕೀಯ ಏಳಿಗೆಗಾಗಿ ದುಡಿಯುವಂಥವರು. ಅವರ ಭಾವನೆಗಳಿಗೆ ಕಳೆದ ಚುನಾವಣೆಯಲ್ಲೂ ಬೆಲೆ ಸಿಕ್ಕಿರಲಿಲ್ಲ. ಆಗ ಪ್ರತಿಕ್ರಿಯೆ ತೋರಿ, ಸುಮ್ಮನಾಗಿದ್ದರು. ಅದು ಈ ಸಲವೂ ಇತಿಹಾಸ ಪುನರಾವರ್ತನೆ ಆಗಿದೆ.

ಪುತ್ತೂರಿಗೆ ಪುತ್ತಿಲ, ದೆಹಲಿಗೆ ಮೋದಿ ಘೋಷಣೆ ಬಲವಾಗಿದೆ. ಹಿಂದು ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರ ಬೆಂಬಲದೊಂದಿಗೆ ಇಂದು ಅರುಣ್ ಕುಮಾರ್‌ ಪುತ್ತಿಲ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಹಣದ ಆಸೆಗೋಸ್ಕರ ಅಥವಾ ಅಧಿಕಾರದ ಆಸೆಗೋಸ್ಕರ ನಾನು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಾ ಇಲ್ಲ. ಈ ಚುನಾವಣೆಯನ್ನು ಗೆದ್ದು ಒಂದು ಒಳ್ಳೆಯ ಸಂದೇಶವನ್ನು ರಾಜ್ಯಕ್ಕೆ ಕೇಂದ್ರಕ್ಕೆ ಕೊಡಬೇಕು ಎನ್ನುವಂಥ ಕಾರ್ಯಕರ್ತರ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರ, ಸಂಘಟನೆಯ ಕಾರ್ಯಕರ್ತರು, ಯಾರು ರಕ್ತವನ್ನು ಬೆವರು ಮಾಡಿ ಈ ಪಕ್ಷವನ್ನು ಅಧಿಕಾರ ತಂದಿರುವಂಥ ದೇವ ದುರ್ಲಭ ಕಾರ್ಯಕರ್ತರ ಭಾವನೆಗಳ ಪ್ರತೀಕವಾಗಿ ಈ ಬಾರಿ ಚುನಾವಣೆಯಲ್ಲಿ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಅರುಣ್‌ ಕುಮಾರ್‌ ಪುತ್ತಿಲ ಹೇಳಿ ಮಾತು ನಿಲ್ಲಿಸಿದರು.

ಕೂಡಲೇ ದೇಶಕ್ಕೆ ಮೋದಿ, ಪುತ್ತೂರಿಗೆ ಪುತ್ತಿಲ ಎಂಬ ಘೋಷಣೆ ಮುಗಿಲುಮುಟ್ಟಿತು.

ಹೌದು.. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರಾಡಿದ ಮಾತುಗಳನ್ನು ಒಮ್ಮೆ ಆಲಿಸುವುದು ಒಳಿತು.

ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಬೇಕಾಯಿತು?

ಸಾಮಾಜಿಕ ಬದ್ಧತೆಯಲ್ಲಿ ಬದುಕುತ್ತಿರುವವರು ನಾವು. ಹಿಂದು ಸಮಾಜಕ್ಕೆ ನೋವು, ಅಪಮಾನಗಳಾದಂತಹ ಸಂದರ್ಭಗಳಲ್ಲಿ ಇಡೀ ಸಮಾಜಕ್ಕೆ ಶಕ್ತಿಯನ್ನು ತುಂಬತಕ್ಕಂತಹ ಜವಾಬ್ದಾರಿ ನಮ್ಮ ಮೇಲಿದೆ. ಈಗ ಪಕ್ಷೇತರನಾಗಿ ಸ್ಪರ್ಧಿಸುವ ಅನಿವಾರ್ಯತೆಯನ್ನು ಬಿಜೆಪಿಯ ಕೆಲವು ನಾಯಕರು, ಸಂಘದ ಕೆಲವು ನಾಯಕರು ತಂದಿಟ್ಟಿದ್ದಾರೆ. ಅವರು ನನ್ನ ತೇಜೋವಧೆಯನ್ನು ಮಾಡಲಾರಂಭಿಸಿದ್ದಾರೆ. ನನಗೆ ಅಪಮಾನವನ್ನು ಮಾಡಲಾರಂಭಿಸಿದ್ದಾರೆ ಎಂದು ನೋವಿನಿಂದ ಈ ಸಂದರ್ಭದಲ್ಲಿ ಹೇಳಬೇಕಾಗುತ್ತದೆ ಎಂದು ಅರುಣ್‌ ಕುಮಾರ್‌ ಪುತ್ತಿಲ ಹೇಳಿದರು.

ಈಗ ನಾನು ಪಕ್ಷೇತರನಾಗಿ ಸ್ಪರ್ಧಿಸಿ ಚುನಾವಣೆಯಲ್ಲಿ ಗೆದ್ದರೂ ನನ್ನ ಬೆಂಬಲ ಬಿಜೆಪಿಗೆ. ಕೇಂದ್ರದಲ್ಲೂ ನನ್ನ ಬೆಂಬಲ ಮೋದಿ ಸರ್ಕಾರಕ್ಕೆ. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು, ಹಿಂದು ಸಂಘಟನೆಗಳ ಕಾರ್ಯಕರ್ತರು, ಸ್ವಯಂಸೇವಕರು ನನ್ನ ಮೇಲೆ ಇಟ್ಟಿರುವ ಭರವಸೆ, ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುವೆ ಎಂಬ ಮಾತನ್ನು ಇಲ್ಲಿ ಕೊಡುತ್ತೇನೆ ಎಂದು ಪುತ್ತಿಲ ಘೋಷಿಸಿದರು.

ಇವರೆಲ್ಲ ಎಲ್ಲಿದ್ದರು? ಪಕ್ಷೇತರ ಅಭ್ಯರ್ಥಿ ಬೆಂಬಲಕ್ಕೆ ಇಷ್ಟೊಂದು ಜನ…

ಪುತ್ತೂರು ವಿಧಾನಸಭಾ ಕ್ಷೇತ್ರದ ಬೆಳವಣಿಗೆಯನ್ನು ಕಂಡು ಹಿರಿಯ ಪತ್ರಕರ್ತ ಮಹೇಶ ಪುಚ್ಚಪ್ಪಾಡಿ ತಮ್ಮ ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿಕೊಂಡಿರುವ ಪೋಸ್ಟ್‌ ಇದು..

"ಇವರೆಲ್ಲಾ ಎಲ್ಲಿದ್ದರು...‌!? ಬಹುದೊಡ್ಡ ಪ್ರಶ್ನೆ. ಪುತ್ತೂರಿನಲ್ಲಿ... ಪಕ್ಷೇತರ ಅಭ್ಯರ್ಥಿಗೆ ಇಷ್ಟು ಜನ ಸೇರುತ್ತಾರಾ...!?

ಒಂದು ನೆನಪು 2018...! . ಅಂದೂ ಅರುಣ್‌ ಕುಮಾರ್‌ ಪುತ್ತಿಲ ಅವರು ಸ್ಫರ್ಧೆಗೆ ಆಸಕ್ತರಿರಲಿಲ್ಲ.‌ ಅವರನ್ನು ಅವರದೇ ಪಕ್ಷದ ಕಾರ್ಯಕರ್ತರು ಸೂಚಿಸಿದರು, ಕೊನೆಯ ಕ್ಷಣದಲ್ಲಿ ಟಿಕೆಟ್ ಸಿಗಲಿಲ್ಲ. ಸ್ಫರ್ಧೆಗೆ ಹೇಳಿದ್ದರು. ಆದರೆ ಅವರು ಪಕ್ಷ ಹೇಳಿತು, ಆರ್ ಎಸ್ ಎಸ್ ಹಿರಿಯರು ಮನೆಗೆ ಬಂದು ಹೇಳಿದರು.ಸಂಘಟನೆ, ಪಕ್ಷದ ಕೆಲಸ ಮಾಡಬೇಕು, ಚುನಾವಣೆಯ ನಂತರ ಎಂದರು.ಅದನ್ನೇ ಕಾರ್ಯಕರ್ತರಿಗೆ ಹೇಳಿ ಸಮಾಧಾನಪಡಿಸಿದರು.

ಆ ಬಳಿಕ ನಿರ್ಲಕ್ಷ್ಯ ಮಾಡಿದರು, ಕೇರ್ ಮಾಡಲಿಲ್ಲ.‌ಇದನ್ನು ಸದ್ದಿಲ್ಲದೆ ಕಾರ್ಯಕರ್ತರು ಗಮನಿಸಿದರು. ಈ ಬಾರಿ ಸಹನೆ ಕಟ್ಟೆ ಒಡೆದಿದೆ.

ಈ ಬಾರಿಯೂ ಹೆಸರು ಬಂದಿತ್ತು. ಅಣಬೆ ಎಂದೂ ಕೇಳಿದಾಗ ಮತ್ತಷ್ಟು ಉಗ್ರ ಸ್ವರೂಪ ಪಡೆಯಿತು ಆಕ್ರೋಶ.

ಆದರೂ ಹೇಳುತ್ತಾರೆ ಪಕ್ಷಕ್ಕೆ ಗೊತ್ತಿದೆ, ಹಿರಿಯರಿಗೆ ಗೊತ್ತುದೆ ಎಂದು ಸಮರ್ಥನೆ..‌!. ಹೇಳಿರುವ ಮಾತಿನ ಬಗ್ಗೆ ಯಾವ ಸಮರ್ಥನೆ ಇದೆ? ಈಗ ಆ ಕಾಲ ಬದಲಾಗಿದೆ. ಈಗ ಅಲ್ಪಸಂಖ್ಯಾತ ಮುಖಂಡ ಪ್ರಾಂಕ್ಲಿನ್ ಕೂಡಾ ಜೊತೆಯಾಗಿದ್ದಾರೆ,‌ ಅದೇ ಅ಼ಚ್ಚರಿ..! ಅದೇ ಅಲ್ಲವೇ ಹಿಂದುತ್ವ.

ಪುತ್ತೂರು ಕುತೂಹಲ ಅದಕ್ಕೆ.…"

ಒಂದಂತೂ ಸತ್ಯ. ಕಿಡಿ ಇಲ್ಲದೆ ಹೊಗೆ ಆಡಲ್ಲ. ಬಿಜೆಪಿ ನಾಯಕರು ಪುತ್ತೂರಿನ ಬಿಜೆಪಿ ಕಾರ್ಯಕರ್ತರು, ಹಿಂದು ಸಂಘಟನೆಗಳ ಕಾರ್ಯಕರ್ತರ ಭಾವನೆಗಳ ಜತೆಗೆ ಆಡಿದ್ದಾರೆ. ವಿಶೇಷವಾಗಿ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಬಗ್ಗೆ ಅದೇ ರೀತಿ ಸಂಘದ ಕೆಲವು ನಾಯಕರ ಬಗ್ಗೆಯೂ ಅಸಮಾಧಾನ ಕಾರ್ಯಕರ್ತರನ್ನು ಮಾತನಾಡಿಸಿದಾಗ ವ್ಯಕ್ತವಾಗುತ್ತಿದೆ.

ಕಾಂಗ್ರೆಸ್‌ ಪಕ್ಷ ಅಶೋಕ್‌ ಕುಮಾರ್‌ ರೈ ಅವರಿಗೆ ಟಿಕೆಟ್‌ ಕೊಡುವುದು ಖಚಿತವಾದ ಕಾರಣ ಅವರ ಗೆಲುವು ಬಿಜೆಪಿಯ ʻಪ್ರಮುಖರುʼ ಎನಿಸಿಕೊಂಡವರಿಗೆ ಮುಖ್ಯವಾಗಿದೆ. ಅಶೋಕ್‌ ಕುಮಾರ್‌ ಅವರ ಜತೆಗೆ ʻವ್ಯಾಪಾರಿ ಸಂಬಂಧʼ ಇಟ್ಟುಕೊಂಡಿರುವ ನಾಯಕರು ಪುತ್ತೂರಿನಲ್ಲಿ ʻನಾಮ್‌ ಕೇ ವಾಸ್ತೆʼ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದಾರೆ. ಜಾಣ್ಮೆ ತೋರುವುದಕ್ಕಾಗಿ ʻಮಹಿಳೆʼಗೆ ಟಿಕೆಟ್‌ ನೀಡಿದ್ದೇವೆ ಎಂಬುದನ್ನು ಬಿಂಬಿಸಿದ್ದಾರೆ ಎಂಬ ನೋವಿನ ಮಾತುಗಳು ಕಾರ್ಯಕರ್ತರ ನಡುವೆ ಹರಿದಾಡುತ್ತಿದೆ.

ಇದೇ ಕಾರಣಕ್ಕೆ, ಕಾಂಗ್ರೆಸ್‌ ಪಕ್ಷದ ʻಅಶೋಕ್‌ ಕುಮಾರ್‌ ರೈʼ ಅವರ ʻಗೆಲುವುʼ ಬಿಜೆಪಿಯ ʻಪ್ರಮುಖʻರಿಗೆ ಮುಖ್ಯವೇ ಹೊರತು ಬಿಜೆಪಿಗೆ ಅಲ್ಲ. ಇಲ್ಲಿ ಬಿಜೆಪಿಯ ಅಭ್ಯರ್ಥಿಗಿಂತ ಬಿಜೆಪಿಯ ಸಿದ್ಧಾಂತವೇ ಮುಖ್ಯ. ಹೀಗಾಗಿ ಬಿಜೆಪಿಯ ಸಿದ್ಧಾಂತವನ್ನು ಬೆಂಬಲಿಸುವ ʻಅರುಣ್‌ ಕುಮಾರ್‌ ಪುತ್ತಿಲʼರನ್ನು ಗೆಲ್ಲಿಸುವ ಹೊಣೆ ನಮ್ಮದು ಎಂದು ಕಾರ್ಯಕರ್ತರು ಅನೇಕರು ಹೇಳುತ್ತಿದ್ದಾರೆ.

ಈ ವಿದ್ಯಮಾನವು ಬಿಜೆಪಿಯ ವರಿಷ್ಠರಲ್ಲಿ ಕಳವಳ ಮೂಡಿಸಿದ್ದು, ಪುತ್ತಿಲರನ್ನು ಹಿಮ್ಮೆಟ್ಟಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂಬ ಮಾತು ಕೇಳಿಬಂದಿದೆ. ಇದು ಚುನಾವಣಾ ಕಣದ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.

IPL_Entry_Point