ಲೋಕಸಭಾ ಚುನಾವಣೆ; ಕೊರಟಗೆರೆ ತಾಲೂಕಲ್ಲಿ ಅಲೆಮಾರಿ ಕಾರ್ಮಿಕರಿಂದ ಮತದಾನ ಬಹಿಷ್ಕಾರ, ಸೌಲಭ್ಯ ನೀಡಿದರೆ ಓಟು ಎಂಬ ಬೋರ್ಡ್ ಪ್ರದರ್ಶನ
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿ ಅಲೆಮಾರಿ ಕಾರ್ಮಿಕರಿಂದ ಮತದಾನ ಬಹಿಷ್ಕಾರ ಘೋಷಣೆಯಾಗಿದೆ. ತಮ್ಮ ಮನೆಗಳ ಬಾಗಿಲಿಗೆ, ಮೂಲ ಸೌಲಭ್ಯ ನೀಡದಿದ್ದರೆ ನಮ್ಮ ಓಟು ನೀಡೆವು ಎಂಬ ಬೋರ್ಡ್ ಹಾಕಿಕೊಂಡಿದ್ದಾರೆ. ಈ ವಿದ್ಯಮಾನದ ಕಡೆಗೆ ಬೆಳಕು ಚೆಲ್ಲುವ ವರದಿ ಇಲ್ಲಿದೆ. (ವರದಿ- ಈಶ್ವರ್, ತುಮಕೂರು)
ತುಮಕೂರು: ಜನ ನಾಯಕರೇ, ಅಧಿಕಾರಿಗಳೇ ನಮ್ಮ ಓಟು ಮಾತ್ರ ನಿಮಗೆ ಸಾಕಾ, ನಮಗೆ ಸೌಲಭ್ಯ ಬೇಡವೇ? ನಮ್ಮ ಕುಟುಂಬಕ್ಕೆ ಮೂಲ ಸೌಕರ್ಯ ನೀಡದಿದ್ದರೆ ನಮ್ಮ ಓಟು ನಿಮಗೆ ನೀಡೆವು, ಪ್ರತಿ ಗುಡಿಸಲುಗಳ ಬಾಗಿಲು ಮುಂದೆ ನಾಮಫಲಕ ಅಳವಡಿಕೆಯಾಗಿದೆ. ಈ ದೃಶ್ಯ ಕಂಡು ಬಂದಿದ್ದು ಕೊರಟಗೆರೆ ತಾಲೂಕು ನೀಲಗೊಂಡನಹಳ್ಳಿ ಐ.ಕೆ.ಕಾಲೋನಿಯಲ್ಲಿ..
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಐ.ಕೆ.ಕಾಲೋನಿಯಲ್ಲಿ ಕಳೆದ 25 ವರ್ಷದಿಂದ ವಾಸವಿರುವ 20ಕ್ಕೂ ಅಧಿಕ ಅಲೆಮಾರಿ ಕೂಲಿ ಕಾರ್ಮಿಕ ಕುಟುಂಬಗಳಿಗೆ ಮೂಲ ಸೌಲಭ್ಯವೇ ಮರೀಚಿಕೆಯಾಗಿ ಕುಡಿಯುವ ನೀರು ಮತ್ತು ಹಗಲಿನಲ್ಲಿ ಶೌಚಾಲಯಕ್ಕೆ ಸಮಸ್ಯೆ, ರಾತ್ರಿ ವೇಳೆ ಬೆಳಕಿಲ್ಲದೆ ಕಾಡು ಪ್ರಾಣಿಗಳಿಂದ ಭಯದ ವಾತಾವರಣ ಸೃಷ್ಟಿಯಾಗಿದೆ.
ಐ.ಕೆ.ಕಾಲೋನಿಯ ಪಿಡ್ಲ್ಯೂಡಿ ಕಚೇರಿ ಆವರಣದಲ್ಲೇ 25 ವರ್ಷದಿಂದ ಅಲೆಮಾರಿ ಕಾರ್ಮಿಕರು ವಾಸವಿದೆ. ಆದರೆ 4 ತಿಂಗಳ ಹಿಂದೆ ಪಿಡ್ಲ್ಯೂಡಿ ಅಧಿಕಾರಿ ವರ್ಗ ಮತ್ತು ಸ್ಥಳೀಯ ಗ್ರಾಪಂ ಸದಸ್ಯರ ತಂಡ 20 ಕುಟುಂಬಗಳ ಮನವೊಲಿಸಿ ಬೆಟ್ಟದಲ್ಲಿ ನಿವೇಶನ ಮಂಜೂರಾಗಿದೆ ಎಂದು ನಂಬಿಸಿ ಅಲ್ಲೇ ಸೌಲಭ್ಯ ಬರುತ್ತೆ ಅಂತ ಹೇಳಿ ರಾತ್ರೋರಾತ್ರಿ ಜಾಗ ಖಾಲಿ ಮಾಡಿಸಿದ್ದಾರೆ. ಆದರೆ, ಈಗ ಇಲ್ಲಿಂದ ಮತ್ತೆ ಜಾಗ ಖಾಲಿ ಮಾಡಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದಾಗಿ ದಿಕ್ಕೇತೋಚದಂತಾಗಿದೆ ಎಂಬುದು ಅಲೆಮಾರಿ ಕಾರ್ಮಿಕರ ನೋವಿನ ಮಾತು.
ಕರ್ನಾಟಕ ಅಲೆಮಾರಿ ಕಾರ್ಮಿಕ ಆಯೋಗ ಮತ್ತು ತುಮಕೂರು ಜಿಲ್ಲಾ ನ್ಯಾಯಾಧೀಶರು ಸ್ಥಳಕ್ಕೆ ಬಂದು 3 ವರ್ಷ ಕಳೆದರೂ ಕಾರ್ಮಿಕರ ಕತ್ತಲೆಯ ಬದುಕಿಗೆ ಇನ್ನೂ ಬೆಳಕು ಬಂದಿಲ್ಲ. ಅಕ್ಷರ ಜ್ಞಾನವಿಲ್ಲದ ಗುಡಿಸಲು ಕುಟುಂಬದಲ್ಲಿ 15ಕ್ಕೂ ಅಧಿಕ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಮುನ್ನಾ ಕೊರಟಗೆರೆ ತಹಶೀಲ್ದಾರ್, ತಾಪಂ ಇಓ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ತಕ್ಷಣ ಭೇಟಿ ನೀಡಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ನೀಡಬೇಕಾಗಿದೆ.
ಗ್ರಾಪಂ ಮತ್ತು ತಾಪಂ ಅಧಿಕಾರಿಗಳ ನಿರ್ಲಕ್ಷ್ಯ
ಅಲೆಮಾರಿ ಕಾರ್ಮಿಕರ ಬಳಿ ಆಧಾರ್ ಕಾರ್ಡ್, ರೇಷನ್‌ಕಾರ್ಡ್, ಗುರುತಿನ ಚೀಟಿ, ಪಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಎಲ್ಲವೂ ಇದೆ, ಆದರೆ ಇವರಿಗೆ ನಿವೇಶನ ನೀಡುವಲ್ಲಿ ಕಂದಾಯ ಇಲಾಖೆ ವಿಫಲವಾದರೆ, ಮೂಲಸೌಲಭ್ಯ ಕಲ್ಪಿಸುವಲ್ಲಿ ಸ್ಥಳೀಯ ಗ್ರಾಪಂ ನಿರ್ಲಕ್ಷ್ಯ ವಹಿಸಿದೆ. ಗ್ರಾಮ ಪಂಚಾಯಿತಿ ಪಿಡಿಓ ಮತ್ತು ತಾಪಂ ಇಓಗೆ ಇವರ ಸಮಸ್ಯೆಯ ಅರಿವಿದ್ದರೂ, ಅವರಿಗೆ ಅದನ್ನು ಮನದಟ್ಟು ಮಾಡುವಲ್ಲಿ ವಿಫಲರಾಗಿದ್ದಾರೆ. ಈ ಮುಗ್ದ ಜನರಿಗೆ ಉಡಾಫೆ ಉತ್ತರ ನೀಡೋದು ಸರ್ವೇ ಸಾಮಾನ್ಯವಾಗಿದೆ.
25 ವರ್ಷದಿಂದ ಸೌಲಭ್ಯವೇ ಮರೀಚಿಕೆ
ಐ.ಕೆ.ಕಾಲೋನಿಯ 20 ಕುಟುಂಬದ 75ಕ್ಕೂ ಅಧಿಕ ಅಲೆಮಾರಿ ಕಾರ್ಮಿಕರು ತಮ್ಮ ವಿಳಾಸದ ಗುರುತಿನ ಚೀಟಿ ಪಡೆದು 20 ವರ್ಷಗಳೇ ಕಳೆದಿವೆ, ಗ್ರಾಪಂ, ತಾಪಂ, ಜಿಪಂ, ವಿಧಾನಸಭೆ, ಲೋಕಸಭಾ ಚುನಾವಣೆಗಳ ವೇಳೆ ಮಾತ್ರ ರಾಜಕೀಯ ನಾಯಕರು ಬರುತ್ತಾರೆ. ಸರ್ಕಾರದ ಅಧಿಕಾರಿ ವರ್ಗದವರೂ ಕಾಟಚಾರಕ್ಕೆ ಭೇಟಿ ಕೊಡ್ತಾರೆ. ಅಹವಾಲು ಆಲಿಸಿದವರಂತೆ ನಟಿಸುತ್ತಾರೆ. ರಾಜಕೀಯ ನಾಯಕರಂತೆ ಭರವಸೆ ನೀಡುತ್ತಾರೆ. ಆದರೆ ಈ ಅಸಂಘಟಿತ ವಲಯದ ಕಾರ್ಮಿಕರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸುವುದರ ಕಡೆಗೆ ಪ್ರಾಮಾಣಿಕ ಪ್ರಯತ್ನ ಮಾಡದೆ ಇರುವುದೇ ವಿಷಾದನೀಯ.
(ವರದಿ- ಈಶ್ವರ್, ತುಮಕೂರು)
ಕರ್ನಾಟಕದ ಮತ್ತಷ್ಟುತಾಜಾ ಸುದ್ದಿ,ಕ್ರೈಮ್ ಸುದ್ದಿ,ಬೆಂಗಳೂರು ನಗರ ಸುದ್ದಿ,ರಾಜಕೀಯ ವಿಶ್ಲೇಷಣೆ ಓದಿ.