ಕನ್ನಡ ಸುದ್ದಿ  /  ಕರ್ನಾಟಕ  /  Upsc Resuts2024:ವಿಜಯಪುರ ಜಿಲ್ಲೆಯ ಇಬ್ಬರು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣ, ಆಯ್ಕೆಗೆ ಅವರು ಹೇಳೋದೇನು

UPSC Resuts2024:ವಿಜಯಪುರ ಜಿಲ್ಲೆಯ ಇಬ್ಬರು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣ, ಆಯ್ಕೆಗೆ ಅವರು ಹೇಳೋದೇನು

ಯುಪಿಎಸ್ಸಿ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಇಬ್ಬರು ತೇರ್ಗಡೆಯಾಗಿ ಹೆಮ್ಮೆ ತಂದಿದ್ದಾರೆ.ವರದಿ: ಸಮೀವುಲ್ಲಾ ಉಸ್ತಾದ್‌, ವಿಜಯಪುರ

ಯುಪಿಎಸ್ಸಿಯಲ್ಲಿ ಉತ್ತೀರ್ಣರಾದ ವಿಜಯಪುರ ಮೂಲದ ವಿಜೇತಾ ಹಾಗೂ ಸಂತೋಷ್‌
ಯುಪಿಎಸ್ಸಿಯಲ್ಲಿ ಉತ್ತೀರ್ಣರಾದ ವಿಜಯಪುರ ಮೂಲದ ವಿಜೇತಾ ಹಾಗೂ ಸಂತೋಷ್‌

ವಿಜಯಪುರ: ರಾಷ್ಟ್ರಮಟ್ಟದ ಆಡಳಿತ ಸೇವಾ ಪರೀಕ್ಷೆಯಲ್ಲಿ ಪ್ರತಿ ಬಾರಿಯೂ ವಿಜಯಪುರ‌ ಪ್ರತಿಭಾನ್ವಿತರು ಅಗ್ರ ಸಾಧನೆ ಮಾಡುವ ಪರಂಪರೆ ಈ ವರ್ಷವೂ ಮುಂದುವರೆದಿದೆ. ವಿಜಯಪುರ ಮೂಲದ ಯುವತಿ ವಿಜೇತಾ ಹೊಸಮನಿ ಯುಪಿಎಸ್ ಸಿ ಪರೀಕ್ಷೆಯಲ್ಲಿ 100 ನೇ ರ‍್ಯಾಂಕ್ ಪಡೆದು ಸಾಧನೆ ತೋರಿ ಪ್ರತಿಭೆ ಪ್ರಭೆ ಬೆಳಗಿದರೆ ಇನ್ನೋರ್ವ ಸಾಧಕ ಸಂತೋಷ 641 ನೇರ‍್ಯಾಂಕ್ ಪಡೆಯುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಈ ಹಿಂದೆಯೂ ಸಹ ವಿಜಯಪುರ ಅನೇಕ ಸಾಧಕರು ಯುಪಿಎಸ್ ಸಿ ಪರೀಕ್ಷೆಯಲ್ಲಿ ಸಾಧನೆ ತೋರಿ ಇಂದು ಪಂಜಾಬ್, ನವದೆಹಲಿ, ಝಾರ್ಖಂಡ್ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಈಗ ಈ ಸಾಲಿಗೆ ಇನ್ನಿಬ್ಬರು ಸಾಧಕರು ಸೇರ್ಪಡೆಯಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಿಜಯದ ನಗೆ ಬೀರಿದ ವಿಜೇತಾ

ವಿಜಯಪುರ ಮೂಲದವರಾದರೂ ಹುಬ್ಬಳ್ಳಿಯಲ್ಲಿ ನೆಲೆಸಿರುವ ವಿಜೇತಾ ಭೀಮಸೇನಾ ಹೊಸಮನಿಗೆ 100ನೇ ರ‍್ಯಾಂಕ್ ಲಭಿಸಿದೆ. ಯುವತಿಯ ಪೋಷಕರು‌ ಈಗ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಮಗಳ ಸಾಧನೆ ಪೋಷಕರ ಸಂತಸಕ್ಕೆ ಕಾರಣವಾಗಿದೆ.

ತಂದೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಉದ್ಯೋಗಿಯಾಗಿರುವ ಭೀಮಸೇನ ಹೊಸಮನಿ ವಿಜಯಪುರದಲ್ಲಿಯೇ ಇದ್ದುದರಿಂದ ಮಗಳು ವಿಜೇತಾ ಎಲ್. ಕೆ. ಜಿ ಯಿಂದ 5ನೇ ತರಗತಿವರೆಗೆ ವಿಜಯಪುರ ನಗರದ ಸೈನಿಕ ಶಾಲೆಯ ಶಿಶುನಿಕೇತನ ಸ್ಕೂಲ್ ನಲ್ಲಿ ಓದಿದ್ದಾರೆ. 6 ರಿಂದ 10ನೇ ತರಗತಿವರೆಗೆ ಬಾಗಲಕೋಟೆಯ ಬಸವೇಶ್ವರ ಇಂಟರ್‌ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಪಿಯುಸಿ ಪ್ರಥಮ ವರ್ಷ ವಿಜಯಪುರ ನಗರದ ತುಂಗಳ ಕಾಲೇಜಿನಲ್ಲಿ ಹಾಗೂ ಪಿಯುಸಿ ದ್ವಿತೀಯ ದರಬಾರ ಪಿಯು ಕಾಲೇಜಿನಲ್ಲಿ ಮುಗಿಸಿದ್ದಾರೆ.

ನಂತರ ಕ್ಲ್ಯಾಟ್ ಎಕ್ಸಾಂ ಉತ್ತೀರ್ಣವಾಗಿ ಗುಜರಾತಿನ ನ್ಯಾಷನಲ್ ಲಾ ಯುನಿವರ್ಸಿಟಿಯಲ್ಲಿ ಬಿ.ಎ ಎಲ್.ಎಲ್.ಬಿ ಕ್ರಿಮಿನಲ್ ಲಾ ಪದವಿಯನ್ನು ಗೋಲ್ಡ್ ಮೆಡಲ್ ನೊಂದಿಗೆ ಪೂರ್ಣಗೊಳಿಸಿದ ಶ್ರೇಯಸ್ಸು ಅವರದ್ದು. 2020 ರಿಂದ ಮೂರು ಬಾರಿ ಯು.ಪಿ.ಎಸ್.ಸಿ ಪರೀಕ್ಷೆ ಬರೆದಿದ್ದಾರೆ. 2023ರ ಪ್ರಿಲನ್ಮರಿ ಎಕ್ಸಾಂ, ಮೇನ್ ಎಕ್ಸಾಂ ಪಾಸ್ ಆಗಿ ಸಂದರ್ಶನ ಪಾಸ್ ಮಾಡಿ ಈಗ ಉತ್ತೀರ್ಣರಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ 100ನೇ ಸ್ಥಾನ ಪಡೆದಿದ್ದಾರೆ.

ಯುಪಿಎಸ್‌ ಸಿ ಪರೀಕ್ಷೆಯಲ್ಲಿ ಉತ್ತೀರ್ಣಾಗಬೇಕು ಎನ್ನುವ ಯೋಜನೆ ಹಾಕಿಕೊಂಡಿದ್ದೆ. ಇದಕ್ಕಾಗಿ ನಿತ್ಯ ತಯಾರಿ ಮಾಡುತ್ತಿದ್ದೆ. ಅದರಂತೆಯೇ ಓದಿದೆ. ಹಿಂದೆ ಸ್ವಲ್ಪದರಲ್ಲಿ ಅವಕಾಶ ತಪ್ಪಿತ್ತು. ಈ ಬಾರಿ ಆಗಲೇಬೇಕು ಎಂದು ನಿರಂತರವಾಗಿ ಓದಿದೆ. ಅನುಭವಸ್ಥರ ಮಾರ್ಗದರ್ಶನ ಪಡೆದುಕೊಂಡೆ. ಇದು ಸಹಕಾರಿಯಾಯಿತು. ಆನ್ ಲೈನ್ ತರಬೇತಿ ಮತ್ತು ಮನೆಯಲ್ಲಿಯೇ ಹೆಚ್ಚಿನ ಅಭ್ಯಾಸ ಮಾಡಿದೆ ಎಂದು ವಿಜೇತಾ ಭೀಮಸೇನ ಹೊಸಮನಿ ಹೇಳುತ್ತಾರೆ. ವಿಜೇತಾ ಅವರಿಗೆ ಅವರಿಗೆ ಇಂಡಿಯನ್ ರೆವೆನ್ಯೂ ಸರ್ವೀಸ್ ನಲ್ಲಿ ಹುದ್ದೆ ಸಿಗುವ ನಿರೀಕ್ಷೆಗಳಿವೆ.

ಸಂತೋಷ ಸಾಧನೆ

ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ವಿಜಯಪುರದ ಸಂತೋಷ ಶ್ರೀಕಾಂತ ಶಿರಾಡೋಣ ದೇಶಕ್ಕೆ 641ನೇ ರ‍್ಯಾಂಕ್ ಪಡೆದಿದ್ದು, ಶಿರಾಡೋಣ ಕುಟುಂಬದಲ್ಲಿ ಸಂತಸ ಮೂಡಿಸಿದೆ.

ವಿಜಯಪುರ ನಗರದ ಸೈನಿಕ ಶಾಲೆಯ ಶಿಶುನಿಕೇತನ ಶಾಲೆಯಲ್ಲಿ ಒಂದರಿಂದ 5ನೇ ತರಗತಿ ವಿದ್ಯಾಭ್ಯಾಸ ಮಾಡಿರುವ ಯುವಕ, 6 ರಿಂದ 7ನೇ ತರಗತಿವರೆಗೆ ಗದಗ ತಾಲೂಕಿನ ಹುಲಕೋಟಿಯ ರಾಜರಾಜೇಶ್ವರಿ ಪ್ರೌಢ ಶಾಲೆಯಲ್ಲಿ ಮತ್ತು 8 ರಿಂದ 10ನೇ ತರಗತಿಯನ್ನು ವಿಜಯಪುರ ತಾಲೂಕಿನ‌ ಕಗ್ಗೋಡದ ಸಂಗನಬಸವ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ.

ಪಿಯುಸಿಯನ್ನು ಹೈದರಾಬಾದಿನ ವಿಚೇತನಾ ಕಾಲೇಜಿನಲ್ಲಿ ಹಾಗೂ ಬೆಂಗಳೂರಿನ ಆರ್ ವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ‌ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿರುವ ಶ್ರೀಕಾಂತ್‌, 2019ರಿಂದ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಪ್ರಯತ್ನ ಮಾಡುತ್ತಿದ್ದರು. ಸತತ ಪ್ರಯತ್ನದ ನಂತರ ಈ ಬಾರಿ ಉತ್ತೀರ್ಣರಾಗಿದ್ದಾರೆ.

ನನ್ನ ನಿರೀಕ್ಷೆಯಷ್ಟು ರ‍್ಯಾಂಕ್ ಬಂದಿಲ್ಲ. ಪ್ರಯತ್ನ ನಿಲ್ಲಿಸದೇ ಪರೀಕ್ಷೆಗಳನ್ನು ಬರೆದೆ. ಇನ್ನೂ ಉತ್ತಮ ರ‍್ಯಾಂಕ್ ಪಡೆಯುವ ಪ್ರಯತ್ನ ಮಾಡುವೆ ಎನ್ನುವುದು ಸಂತೋಷ್‌ ಅವರ ವಿವರಣೆ.

ವರದಿ: ಸಮೀವುಲ್ಲಾ ಉಸ್ತಾದ, ವಿಜಯಪುರ

 

IPL_Entry_Point