Chicken Recipes: ಭಾನುವಾರದ ಸ್ಪೆಷಲ್; ಬಾಯಿ ಚಪ್ಪರಿಸುವಂಥ ರುಚಿಯಿರುವ ಕಾಶ್ಮೀರಿ ಚಿಕನ್ ಮಸಾಲಾ ತಯಾರಿಸುವ ಸಿಂಪಲ್ ವಿಧಾನ ಇಲ್ಲಿದೆ
Kashmiri Chicken Masala: ಹೋಟೆಲ್‌ಗಳಲ್ಲಿ ನೀವು ಕಾಶ್ಮೀರಿ ಚಿಕನ್ ಮಸಾಲಾ ಸವಿದಿರುತ್ತೀರಿ. ಆದರೆ ಇದನ್ನು ನೀವು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಕೆಲವೇ ಕೆಲವು ಪದಾರ್ಥಗಳನ್ನು ಬಳಸಿಕೊಂಡು ರುಚಿಕರವಾದ ಕಾಶ್ಮೀರಿ ಚಿಕನ್ ಮಸಾಲ ತಯಾರಿಸುವ ಸುಲಭ ವಿಧಾನ ಇಲ್ಲಿದೆ ನೋಡಿ.
Kashmiri Chicken Masala Recipe: ಕಾಶ್ಮೀರ ತನ್ನ ಭೌಗೋಳಿಕ ಸೌಂದರ್ಯದಿಂದಾಗಿ ಭೂಲೋಕದ ಸ್ವರ್ಗ ಎಂಬ ಹೆಸರನ್ನು ಪಡೆದುಕೊಂಡಿದೆ. ಆದರೆ ಇದೊಂದು ಪ್ರವಾಸಿ ತಾಣವಾಗಿ ಮಾತ್ರವಲ್ಲ ಅತ್ಯುತ್ತಮ ತಿನಿಸುಗಳ ನೆಲೆಗಾಗಿ ಕೂಡ ಜನಪ್ರಿಯತೆಯನ್ನು ಹೊಂದಿದೆ. ಮಾಂಸಾಹಾರಿಗಳು ಕಾಶ್ಮೀರದ ವಿಶೇಷ ಭಕ್ಷ್ಯಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಅಷ್ಟೊಂದು ಸೊಗಸಾದ ಅಡುಗೆ ಶೈಲಿಯನ್ನು ಕಣಿವೆ ರಾಜ್ಯ ಹೊಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಕಾಶ್ಮೀರದ ಅತ್ಯಂತ ಜನಪ್ರಿಯ ಭಕ್ಷ್ಯಗಳ ಪೈಕಿ ಒಂದಾದ ಕಾಶ್ಮೀರಿ ಶೈಲಿಯ ಚಿಕನ್ ರೆಸಿಪಿಯನ್ನು ನೀವೂ ಕಲಿಯಬಹುದು. ಇದನ್ನು ಕಾಶ್ಮೀರಿ ಚಿಕನ್ ಮಸಾಲಾ ಎಂದು ಕರೆಯಲಾಗುತ್ತದೆ. ಇದನ್ನು ನೀವು ರೆಸ್ಟೋರೆಂಟ್‌ಗಳಿಗೆ ಹೋಗಿ ಸವಿಯಬೇಕು ಎಂದೇನಿಲ್ಲ. ಮನೆಯಲ್ಲೇ ಇದನ್ನು ತಯಾರಿಸಬಹುದಾಗಿದೆ. ಹಾಗಾದರೆ ರುಚಿಕರವಾದ ಕಾಶ್ಮೀರಿ ಚಿಕನ್ ಮಸಾಲಾ ತಯಾರಿಸುವುದು ಹೇಗೆ ನೋಡೋಣ.
ಬೇಕಾಗುವ ಸಾಮಗ್ರಿಗಳು
- ಗೋಡಂಬಿ 100 ಗ್ರಾಂ
- ಒಣ ದ್ರಾಕ್ಷಿ 50 ಗ್ರಾಂ
- ಅರಿಶಿಣ ಸ್ವಲ್ಪ
- ಜೀರಿಗೆ ಪುಡಿ 1/2 ಚಮಚ
- ಕೊತ್ತಂಬರಿ ಪುಡಿ 1 ಚಮಚ
- ಗರಂ ಮಸಾಲಾ 1/2 ಚಮಚ
- ಕಾಶ್ಮೀರಿ ಮೆಣಸಿನ ಪುಡಿ 1 ಚಮಚ
- ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ
- ಚಿಕನ್ 1/2 ಕೆಜಿ
- ನೀರು 1ಕಪ್
- ತುಪ್ಪ 2 ಟೇಬಲ್ ಚಮಚ
- ಟೊಮ್ಯಾಟೋ 1
- ಉಪ್ಪು ರುಚಿಗೆ ತಕ್ಕಷ್ಟು
ಇದನ್ನೂ ಓದಿ: ಮನೆಯಲ್ಲೇ ಕ್ರಿಸ್ಪಿ ಚಿಕನ್ ತಯಾರಿಸಿ ರೆಸ್ಟೋರೆಂಟ್ ದಾರಿ ಮರೆಯಿರಿ; ಸಂಪೂರ್ಣ ಸರಳ ರೆಸಿಪಿ ಇಲ್ಲಿದೆ, ಟ್ರೈ ಮಾಡಿ
ತಯಾರಿಸುವ ವಿಧಾನ
ಕಾಶ್ಮೀರಿ ಚಿಕನ್ ಮಸಾಲಾ ತಯಾರಿಸಲು ನೀವು ಮೊದಲು ಗೋಡಂಬಿ ಹಾಗೂ ಒಣದ್ರಾಕ್ಷಿಯಿಂದ ಪ್ರತ್ಯೇಕವಾಗಿ ಪೇಸ್ಟ್ ತಯಾರಿಸಿಕೊಳ್ಳಿ.
ಮತ್ತೊಂದು ಪಾತ್ರೆಯನ್ನು ತೆಗೆದುಕೊಂಡು ಇದಕ್ಕೆ ಸ್ವಲ್ಪ ಅರಿಶಿಣ, ಜೀರಿಗೆ ಪುಡಿ, ಗರಂ ಮಸಾಲಾ. ಕೊತ್ತಂಬರಿ ಪುಡಿ, ಕಾಶ್ಮೀರಿ ಮೆಣಸಿನ ಪುಡಿ ಹಾಗೂ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಳ್ಳಿ.
ಇದಕ್ಕೆ ಸ್ವಲ್ಪ ನೀರನ್ನು ಸೇರಿಸಿಕೊಂಡು ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಪೇಸ್ಟ್‌ಗೆ ಚಿಕನ್ ಸೇರಿಸಿ ಚೆನ್ನಾಗಿ ಮ್ಯಾರಿನೇಟ್ ಮಾಡಿ.
ಸುಮಾರು ಅರ್ಧ ಗಂಟೆಗಳ ಕಾಲ ಈ ಮಿಶ್ರಣ ಮ್ಯಾರಿನೇಟ್ ಆಗಲು ಬಿಡಿ.
ಒಂದು ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿದ ಬಳಿಕ ಮ್ಯಾರಿನೇಟ್ ಮಾಡಿಟ್ಟುಕೊಂಡ ಚಿಕನ್ ತುಂಡುಗಳನ್ನು ಹಾಕಿ ಅದನ್ನು ಸ್ವಲ್ಪ ಬೇಯಿಸಿಕೊಳ್ಳಿ. ಚಿಕನ್ ಬೆಂದ ಬಳಿಕ ಬಾಣಲೆಯಿಂದ ತೆಗೆದು ಬೇರೆಡೆ ಇಟ್ಟುಕೊಳ್ಳಿ.
ಈಗ ಇದೇ ಪಾತ್ರೆಗೆ ಕತ್ತರಿಸಿಟ್ಟುಕೊಂಡ ಟೊಮೆಟೋ ಹಾಕಿ ಟೊಮೆಟೋ ಮೆತ್ತಗಾಗುವವರೆಗೂ ಬೇಯಿಸಿ.
ಬಳಿಕ 1/2 ಕಪ್ ನೀರನ್ನು ಸೇರಿಸಿ ಸುಮಾರು 2-3 ನಿಮಿಷಗಳ ಕಾಲ ಕುದಿಸಿಕೊಳ್ಳಿ.
ಈಗ ನೀವು ಮೊದಲೇ ಮಾಡಿಟ್ಟುಕೊಂಡ ಗೋಡಂಬಿ ಹಾಗೂ ಒಣದ್ರಾಕ್ಷಿ ಪೇಸ್ಟ್ ಬೆರೆಸಿ.
ಈಗಾಗಲೇ ಬೇಯಿಸಿದ ಚಿಕನ್ ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಸುಮಾರು 10 ರಿಂದ 15 ನಿಮಿಷಗಳ ಕಾಲ ಪಾತ್ರೆಯನ್ನು ಮುಚ್ಚಿ ಬೇಯಲು ಬಿಡಿ.
ಈಗ ನಿಮ್ಮ ಕಾಶ್ಮೀರಿ ಚಿಕನ್ ಮಸಾಲಾ ರೆಡಿ.
ಇದನ್ನು ಕೊತ್ತಂಬರಿ ಸೊಪ್ಪುಗಳಿಂದ ಅಲಂಕರಿಸಿ ಪರೋಠಾ ಇಲ್ಲವೇ ಅನ್ನದ ಜೊತೆಯಲ್ಲಿ ಸವಿಯಲು ನೀಡಿ.