ಕನ್ನಡ ಸುದ್ದಿ  /  Lifestyle  /  Food Storage Tips How To Store Watermelon For Long Lasting Freshness Summer Tips In Kannada Rsa

Food Storage Tips: ಕಲ್ಲಂಗಡಿ ಹಣ್ಣುಗಳ ತಾಜಾತನ ಕೆಡದಂತೆ ಸಂರಕ್ಷಿಸುವ ಸರಿಯಾದ ಮಾರ್ಗ ಯಾವುದು? ಇಲ್ಲಿದೆ ಮಾಹಿತಿ

Food Storage Tips: ಕಲ್ಲಂಗಡಿ ಹಣ್ಣು ಎಂದರೆ ಬಹುತೇಕರಿಗೆ ಇಷ್ಟ. ಬೇಸಿಗೆಕಾಲದಲ್ಲಂತೂ ಕಲ್ಲಂಗಡಿ ಹಣ್ಣುಗಳು ಎಲ್ಲರಿಗೂ ಬೇಕೇ ಬೇಕು. ಆದರೆ ಈ ಹಣ್ಣುಗಳು ತಮ್ಮ ತಾಜಾತನವನ್ನು ಕಳೆದುಕೊಳ್ಳದಂತೆ ಸಂರಕ್ಷಿಸುವುದು ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಕಲ್ಲಂಗಡಿ ತಾಜಾತನ ಕೆಡದಂತೆ ಸಂರಕ್ಷಿಸುವ ವಿಧಾನ
ಕಲ್ಲಂಗಡಿ ತಾಜಾತನ ಕೆಡದಂತೆ ಸಂರಕ್ಷಿಸುವ ವಿಧಾನ (PC: unsplash)

Food Storage Tips: ಈ ಬಾರಿ ಸೆಖೆ ಯಾವ ಮಟ್ಟಿಗೆ ಇದೆ ಎಂದರೆ ಜನರಿಗೆ ತಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸೆಖೆಯಿಂದ ಪಾರಾಗಲು ಜನರು ತಾಜಾ ಹಣ್ಣುಗಳು ಹಾಗೂ ಜ್ಯೂಸ್‌ಗಳ ಮೊರೆ ಹೋಗ್ತಿದ್ದಾರೆ. ಬೇಸಿಗೆಕಾಲ ಎಂದ ಕೂಡಲೇ ಅನೇಕರು ಕಲ್ಲಂಗಡಿ ಹಣ್ಣುಗಳನ್ನು ಹೆಚ್ಚೆಚ್ಚು ಸೇವಿಸಲು ಇಚ್ಛಿಸುತ್ತಾರೆ. ಆದರೆ ಕಲ್ಲಂಗಡಿ ಹಣ್ಣನ್ನು ಒಬ್ಬರಿಗೆ ಒಂದೇ ದಿನದಲ್ಲಿ ತಿಂದು ಮುಗಿಸುವುದು ಕಷ್ಟ ಸಾಧ್ಯ. ಹೀಗಾಗಿ ಮಾರುಕಟ್ಟೆಯಿಂದ ಖರೀದಿಸಿ ತಂದ ಕಲ್ಲಂಗಡಿ ಹಣ್ಣುಗಳು ತನ್ನ ತಾಜಾತನ ಉಳಿಸಿಕೊಳ್ಳುವಂತೆ ಕಾಪಾಡಿಕೊಳ್ಳುವುದು ಹೇಗೆ ಎಂಬ ಚಿಂತೆಯೇ ಅನೇಕರನ್ನು ಕಾಡುತ್ತದೆ.

ಕಲ್ಲಂಗಡಿ ಹಣ್ಣಿನ ಆಯ್ಕೆ ಹೀಗಿರಲಿ

ಕಲ್ಲಂಗಡಿ ಹಣ್ಣುಗಳ ತಾಜಾತನ ಕೆಡಬಾರದು, ರುಚಿ ಹಾಳಾಗಬಾರದು ಎಂದು ಯೋಚಿಸುವ ಮೊದಲು ನೀವು ಮಾರುಕಟ್ಟೆಯಿಂದ ಸರಿಯಾದ ಕಲ್ಲಂಗಡಿ ಹಣ್ಣುಗಳನ್ನು ಆಯ್ಕೆ ಮಾಡಿ ತರುವುದು ಬಹುಮುಖ್ಯವಾಗಿದೆ. ಹೀಗಾಗಿ ನೀವು ಕಲ್ಲಂಗಡಿ ಹಣ್ಣನ್ನು ಖರೀದಿಸುವ ಸಂದರ್ಭದಲ್ಲಿ ಅದಕ್ಕೆ ಎಲ್ಲಿಯಾದರೂ ಪೆಟ್ಟಾಗಿದೆಯೇ..? ಅಥವಾ ಎಲ್ಲಾದರೂ ಮೆದುವಾಗಿದೆಯೇ ಎಂಬುದನ್ನು ಸರಿಯಾಗಿ ಪರಿಶೀಲನೆ ಮಾಡಿಕೊಳ್ಳಿ. ನೀವು ಕಲ್ಲಂಗಡಿ ಹಣ್ಣಿನ ಮೇಲೆ ಬಡಿದಾಗ ಟೊಳ್ ಟೊಳ್ ಎಂಬಂಥಾ ಸದ್ದು ಬರುವಂತಿರಬೇಕು. ಆಗ ಮಾತ್ರ ಅದು ಬಲಿತಿದೆ ಎಂದು ಅರ್ಥ.

ಕಲ್ಲಂಗಡಿ ಹಣ್ಣನ್ನು ಸಂಗ್ರಹಿಸಿ ಇಡುವುದು ಹೇಗೆ.?

ಅಂಗಡಿಯಿಂದ ಖರೀದಿಸಿ ತಂದ ಕಲ್ಲಂಗಡಿ ಹಣ್ಣುಗಳನ್ನು ಈಗಲೇ ತಿನ್ನುವ ಮನಸ್ಸು ನಿಮಗೆ ಇರದೇ ಇದ್ದರೆ ಅವುಗಳನ್ನು ಸೂರ್ಯನ ಬೆಳಕು ಬೀಳುವ ಜಾಗದಲ್ಲಿ ಇರಿಸಬೇಡಿ. ಆದರೆ ನೀವು ಸಾಮಾನ್ಯ ಕೋಣೆಯ ಉಷ್ಣಾಂಶದಲ್ಲಿ ಕಲ್ಲಂಗಡಿ ಹಣ್ಣುಗಳನ್ನು ಇಡಬಹುದಾಗಿದೆ. ಫ್ರಿಡ್ಜ್‌ಲ್ಲಿಟ್ಟರೆ ಒಂದರಿಂದ ಎರಡು ವಾರಗಳ ಕಾಲ ಕಲ್ಲಂಗಡಿ ಹಣ್ಣುಗಳು ತಮ್ಮ ತಾಜಾತನವನ್ನು ಉಳಿಸಿಕೊಳ್ಳುತ್ತವೆ . ರಾಷ್ಟ್ರೀಯ ಕಲ್ಲಂಗಡಿ ಪ್ರಚಾರ ಮಂಡಳಿ ನೀಡಿರುವ ಮಾಹಿತಿಯ ಪ್ರಕಾರ ಕಲ್ಲಂಗಡಿ ಹಣ್ಣುಗಳನ್ನು ಶೇಖರಿಸಿ ಇಡಲು , 55 ° F ಸೂಕ್ತವಾದ ತಾಪಮಾನವಾಗಿದೆ.

ಈಗಾಗಲೇ ಕತ್ತರಿಸಿದ ಕಲ್ಲಂಗಡಿ ಹಣ್ಣುಗಳನ್ನು ಸಂಗ್ರಹಿಸಿ ಇಡುವುದು ಹೇಗೆ..?

ಕಲ್ಲಂಗಡಿ ಹಣ್ಣುಗಳನ್ನು ಕತ್ತರಿಸಿದ ಬಳಿಕ ನಿಮಗೆ ತಿನ್ನಲು ಸಾಧ್ಯವಾಗಿಲ್ಲವಾದರೆ ಏನು ಮಾಡುವುದು ಎಂಬ ಪ್ರಶ್ನೆ ಕಾಡುತ್ತದೆ. ನೀವು ಕತ್ತರಿಸಿದ ಬಳಿಕವೂ ಕಲ್ಲಂಗಡಿ ಹಣ್ಣಿನ ತಾಜಾತನ ಹಾಗೆಯೇ ಇರಬೇಕು ಎಂದು ಬಯಸಿದರೆ ಮೊದಲು ಕಲ್ಲಂಗಡಿ ಹಣ್ಣಿನಿಂದ ಸಿಪ್ಪೆಯನ್ನು ಕತ್ತರಿಸಿ ಹಾಕಿ. ಬಳಿಕ ಇವುಗಳನ್ನು ಘನ ಆಕಾರದಲ್ಲಿ ಕತ್ತರಿಸಿಕೊಳ್ಳಿ. ಒಂದು ಗಂಟೆಗಳ ಕಾಲ ಕಲ್ಲಂಗಡಿ ಹಣ್ಣಿನ ತುಂಡುಗಳನ್ನು ಫ್ರೀಜರ್‌ನಲ್ಲಿ ಇಡಿ. ಬಳಿಕ ಎಲ್ಲಾ ಫ್ರೀಜ್ ಆದ ಹಣ್ಣಿನ ತುಂಡುಗಳನ್ನು ಏರ್‌ ಟೈಟ್‌ ಬ್ಯಾಗ್‌ಗಳಲ್ಲಿ ಇಡುವ ಮೂಲಕ ನೀವು ಕಲ್ಲಂಗಡಿ ಹಣ್ಣಿನ ರುಚಿ ಕೆಡದಂತೆ ನೋಡಿಕೊಳ್ಳಬಹುದಾಗಿದೆ.

ಕಲ್ಲಂಗಡಿ ಹಣ್ಣಿನ ಜ್ಯೂಸ್‌ ಶೇಖರಿಸಿ ಇಡುವ ಸರಿಯಾದ ಮಾರ್ಗ ಯಾವುದು..?

ಕಲ್ಲಂಗಡಿ ಹಣ್ಣಿನ ಜ್ಯೂಸ್ ತಂಪಾಗಿ ಇದ್ದರೆ ಮಾತ್ರ ಕುಡಿಯಲು ಒಂದು ಮಜಾ. ಹೀಗಾಗಿ ಕಲ್ಲಂಗಡಿ ಹಣ್ಣಿನ ರಸವನ್ನು ನೀವು ನಾಲ್ಕು ದಿನಗಳವರೆಗೆ ಫ್ರಿಡ್ಜ್‌ನಲ್ಲಿಟ್ಟು ರಕ್ಷಿಸಿಕೊಳ್ಳಬಹುದಾಗಿದೆ. ಗಾಳಿಯಾಡದ ಕಂಟೇನರ್‌ನಲ್ಲಿ ಕಲ್ಲಂಗಡಿ ಹಣ್ಣಿನ ಜ್ಯೂಸ್ ಹಾಕಿ ಫ್ರಿಡ್ಜ್‌ನಲ್ಲಿ ಇಡಬೇಕು.

ಕಲ್ಲಂಗಡಿ ಹಣ್ಣುಗಳ ಸಿಪ್ಪೆಯಿಂದಲೂ ಇದೆ ಲಾಭ

ಸಾಮಾನ್ಯವಾಗಿ ಬಹುತೇಕರು ಕಲ್ಲಂಗಡಿ ಹಣ್ಣುಗಳನ್ನು ತಿಂದು ಅದರ ಸಿಪ್ಪೆಯನ್ನು ಎಸೆಯುತ್ತಾರೆ. ಆದರೆ ಇವುಗಳ ಸಿಪ್ಪೆಯಿಂದ ಉಪ್ಪಿನಕಾಯಿ ತಯಾರಿಸಬಹುದಾಗಿದೆ. ಅನೇಕರು ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಮೇಲ್ಭಾಗದಲ್ಲಿರುವ ಬಿಳಿ ಬಣ್ಣದ ತಿರುಳಿನಿಂದ ದೋಸೆ ಕೂಡ ತಯಾರಿಸುತ್ತಾರೆ. ಹೀಗಾಗಿ ಇನ್ಮುಂದೆ ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನು ಎಸೆಯುವ ಮುನ್ನ ಅದರಿಂದ ಅಷ್ಟೆಲ್ಲ ತಿನಿಸು ತಯಾರಿಸಬಹುದೆಂದು ಯೋಚಿಸುವುದು ಒಳ್ಳೆಯದು.

ಕಲ್ಲಂಗಡಿ ಹಣ್ಣುಗಳನ್ನು ಫ್ರೀಜ್ ಮಾಡಬಹುದೇ..?

ಹೌದು..! ಕಲ್ಲಂಗಡಿ ಹಣ್ಣುಗಳನ್ನು ನೀವು ಫ್ರೀಜ್ ಮಾಡಬಹುದಾಗಿದೆ. ಫ್ರೀಜ್ ಮಾಡಿಟ್ಟ ಕಲ್ಲಂಗಡಿ ಹಣ್ಣುಗಳು ಹೆಚ್ಚು ದಿನಗಳ ಕಾಲ ಬಾಳಿಕೆಗೆ ಬರಲಿದೆ. ಸರಿ ಸುಮಾರು ಒಂದು ವರ್ಷಗಳ ಕಾಲ ನೀವು ಫ್ರೀಜ್ ಮಾಡಿಟ್ಟ ಕಲ್ಲಂಗಡಿ ಹಣ್ಣುಗಳನ್ನು ಬಳಕೆ ಮಾಡಬಹುದಾಗಿದೆ. ಕಲ್ಲಂಗಡಿ ಹಣ್ಣುಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಅವುಗಳಲ್ಲಿ ಇರುವ ಬೀಜಗಳನ್ನು ತೆಗೆದು ಹಾಕಿ. ಎಲ್ಲಾ ತುಂಡುಗಳನ್ನು ಬೇಕಿಂಗ್ ಶೀಟ್‌ನಲ್ಲಿ ಇಡಿ. ಬಳಿಕ ಇವುಗಳನ್ನು ಕೆಲವು ಗಂಟೆಗಳ ಕಾಲ ಫ್ರೀಜರ್‌ನಲ್ಲಿ ಇಡಿ. ಬಳಿಕ ಅದನ್ನು ಏರ್‌ಟೈಟ್‌ ಬ್ಯಾಗ್‌ಗೆ ವರ್ಗಾಯಿಸಿ, ಫ್ರೀಜರ್‌ನಲ್ಲಿಟ್ಟ ಈ ಕಲ್ಲಂಗಡಿ ಹಣ್ಣಿನ ಹೋಳುಗಳನ್ನು ನೀವು ವರ್ಷಗಳ ಕಾಲ ಬಳಸಬಹುದಾಗಿದೆ.

ವಿಭಾಗ