ಕನ್ನಡ ಸುದ್ದಿ  /  ಜೀವನಶೈಲಿ  /  Sleeping Problem: ಪ್ರತಿದಿನ ಮಧ್ಯರಾತ್ರಿ ನಂತರ ಮಲಗುವುದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ನೋಡಿ

Sleeping Problem: ಪ್ರತಿದಿನ ಮಧ್ಯರಾತ್ರಿ ನಂತರ ಮಲಗುವುದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ನೋಡಿ

ಇತ್ತೀಚಿನ ದಿನಗಳಲ್ಲಿ ಮಧ್ಯರಾತ್ರಿಯ ನಂತರ ಮಲಗುವವರ ಸಂಖ್ಯೆಯೇ ಹೆಚ್ಚು. ಕಚೇರಿ, ಕೆಲಸ ಅಂತಿಲ್ಲ ಅಂದ್ರು ಮೊಬೈಲ್‌ ನೋಡುತ್ತಾ, ಫೋನ್‌ನಲ್ಲಿ ಮಾತನಾಡುತ್ತಾ ಮಧ್ಯರಾತ್ರಿ ಕಳೆದ ಮೇಲೆಯೇ ಮಲಗುತ್ತಾರೆ. ಪ್ರತಿದಿನ ಮಧ್ಯರಾತ್ರಿ ನಂತರ ಮಲಗುವುದರಿಂದ ದೇಹದಲ್ಲಿ ಏನೆಲ್ಲಾ ಬದಲಾಗುತ್ತವೆ ನೋಡಿ.

ಪ್ರತಿದಿನ ಮಧ್ಯರಾತ್ರಿ ನಂತರ ಮಲಗುವುದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ನೋಡಿ
ಪ್ರತಿದಿನ ಮಧ್ಯರಾತ್ರಿ ನಂತರ ಮಲಗುವುದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ನೋಡಿ

ಇಂದಿನ ಒತ್ತಡದ ಬದುಕಿನಲ್ಲಿ ನಿದ್ದೆ ಎಂಬುದು ಮರೀಚಿಕೆಯಾಗಿರುವುದು ಸುಳ್ಳಲ್ಲ. ಮಧ್ಯರಾತ್ರಿಯ ಮೇಲೆ ಜನರಿಗೆ ಒಲವು ಹೆಚ್ಚಿದೆ. ಬೇಗ ಮಲಗಿದ್ರೂ ನಿದ್ದೆ ಬರೊಲ್ಲ ಏನ್‌ ಮಾಡೋದು? ಅಂತ ಪ್ರಶ್ನೆ ಮಾಡೋರಾ ಸಂಖ್ಯೆಯೇ ಅಧಿಕ. ಮಧ್ಯರಾತ್ರಿಯ ನಿಶಬ್ಧದ ಮೇಲೆ ಅದೇನೋ ಪ್ರೀತಿ. ಬಹುತೇಕರು 12 ಗಂಟೆಯ ನಂತರವೇ ಮಲಗುತ್ತಾರೆ. ಕಚೇರಿ, ಕೆಲಸ ಅಂತಿದ್ರೆ ಕೇಳೋದೆ ಬೇಡ ಬಿಡಿ. ಆದರೆ ಪ್ರತಿದಿನ ಮಧ್ಯರಾತ್ರಿಯ ನಂತರ ಮಲಗುವ ಅಭ್ಯಾಸ ನಿಮ್ಮದಾಗಿದ್ರೆ ನೀವು ಖಂಡಿತ ತೊಂದರೆ ಅನುಭವಿಸುತ್ತೀರಿ. ಇದು ನಿಮ್ಮ ದೀರ್ಘಕಾಲದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಟ್ರೆಂಡಿಂಗ್​ ಸುದ್ದಿ

ಹೈದರಾಬಾದ್‌ನ ಯಶೋದ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ದಿಲೀಪ್‌ ಗುಡೆ ಅವರ ಪ್ರಕಾರ ʼಪ್ರತಿದಿನ ತಡವಾಗಿ ಮಲಗುವುದರಿಂದ ಒತ್ತಡ ಹಾಗೂ ಚಯಾಪಚಯ ಸಮಸ್ಯೆಗಳಾದ ಕ್ಯಾಸ್ಕೇಡ್‌ಗೆ ಕಾರಣವಾಗಬಹುದು. ಜೊತೆಗೆ ಇದು ಹೆಚ್ಚಿದ ಆತಂಕ, ಖಿನ್ನತೆ ಮತ್ತು ಬೈಪೋಲಾರ್‌ ಡಿಸಾರ್ಡರ್‌ಗಳಂತಹ ವಿವಿಧ ಮಾನಸಿಕ ಆರೋಗ್ಯ ಸಮಸ್ಯೆಗಳನ್ನೂ ಉಂಟು ಮಾಡಬಹುದು. ತಡವಾಗಿ ಮಲಗುವುದು ನಿದ್ದೆಯ ನೈಸರ್ಗಿಕ ಚಕ್ರಕ್ಕೆ ಅಡ್ಡಿಯಾಗುತ್ತದೆ. ದೀರ್ಘಕಾಲದ ನಿದ್ರಾಹೀನತೆ ಅಥವಾ ಮಧ್ಯರಾತ್ರಿ ನಂತರ ಮಲಗುವವರಲ್ಲಿ ಜೀವಿತಾವಧಿ ಕುಂಠಿತವಾಗುತ್ತದೆʼ ಎಂದು ಅವರು ಹೇಳುತ್ತಾರೆ.

ಮಧ್ಯರಾತ್ರಿ ಮಲಗುವುದರಿಂದ ಎದುರಾಗುವ ದೀರ್ಘಕಾಲದ ಸಮಸ್ಯೆಗಳು

ಸಿರ್ಕಾಡಿಯನ್‌ ರಿದಂನಲ್ಲಿನ ವ್ಯತ್ಯಾಸ: ಪ್ರತಿದಿನ ಮಧ್ಯರಾತ್ರಿ ನಂತರ ಮಲಗುವುದರಿಂದ ದೇಹದ ನೈಸರ್ಗಿಕ ಸಿರ್ಕಾಡಿಯನ್‌ ಲಯದ ವ್ಯತ್ಯಾಸಕ್ಕೆ ಕಾರಣವಾಗುತ್ತದೆ. ಇದು ಹಾರ್ಮೋನ್‌ ಬಿಡುಗಡೆ, ಚಯಾಪಚಯ ಹಾಗೂ ದೇಹದ ಉಷ್ಣತೆಯಂತಹ ಅಗತ್ಯ ಕಾರ್ಯಗಳ ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತದೆ.

ಅರಿವಿನ ಸಾಮರ್ಥ್ಯದ ಮೇಲೆ ಪ್ರಭಾವ: ಇದರಿಂದ ಅರಿವಿನ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಗಮನ ಶಕ್ತಿ ಕುಂಠಿತವಾಗುವುದು, ನೆನಪಿನ ಶಕ್ತಿಯ ಕೊರತೆ ಸೇರಿದಂತೆ ಒಟ್ಟಾರೆ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಒತ್ತಡ ಹಾರ್ಮೋನ್‌ ಬಿಡುಗಡೆಯನ್ನು ಹೆಚ್ಚಿಸುತ್ತದೆ: ಮಧ್ಯರಾತ್ರಿ ನಂತರ ಮಲಗುವುದರಿಂದ ಕಾರ್ಟಿಸೋಲ್‌ನಂತಹ ಒತ್ತಡ ಹಾರ್ಮೋನುಗಳ ಬಿಡುಗಡೆಯ ಪ್ರಮಾಣ ಹೆಚ್ಚುತ್ತದೆ. ಇದರಿಂದ ಒತ್ತಡ, ಆಂತಕ ಹಾಗೂ ತೂಕ ಹೆಚ್ಚಳವಾಗುತ್ತದೆ.

ಪ್ರತಿರಕ್ಷಣ ಕಾರ್ಯ ದುರ್ಬಲವಾಗುತ್ತದೆ: ದೀರ್ಘಕಾಲದ ನಿದ್ದೆಯ ಅಭಾವದ ಕಾರಣದಿಂದ ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ. ಇದರಿಂದ ಅನಾರೋಗ್ಯ ಹಾಗೂ ದೇಹದಲ್ಲಿ ಸೋಂಕಿನ ಪ್ರಭಾವ ಹೆಚ್ಚಬಹುದು.

ಚಯಾಪಚಯ ಪರಿಣಾಮ: ಮಧ್ಯರಾತ್ರಿಯ ನಂತರ ನಿದ್ರಿಸುವುದರಿಂದ ದೇಹದಲ್ಲಿ ಚಯಾಪಚಯ ಕ್ರಿಯೆಗೆ ಅಡ್ಡಿಯಾಗುತ್ತದೆ. ಇದು ತೂಕ ಹೆಚ್ಚಳವಾಗುವುದು, ಇನ್ಸುಲಿನ್‌ ಪ್ರತಿರೋಧದಂತಹ ಸಮಸ್ಯೆಗಳನ್ನು ಹೆಚ್ಚಿಸಬಹುದು.

ರಾತ್ರಿ ತಡವಾಗಿ ಮಲಗುವುದರಿಂದ ಬೆಳಿಗ್ಗೆ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವ ಪ್ರಮಾಣ ಕಡಿಮೆಯಾಗುತ್ತದೆ. ಇದು ಒಟ್ಟಾರೆ ಮಾನಸಿಕ ಹಾಗೂ ದೈಹಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕೊಲೆಸ್ಟ್ರಾಲ್‌, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳೂ ಹೆಚ್ಚಬಹುದು.

ಮಧ್ಯರಾತ್ರಿ ನಂತರ ಮಲಗುವ ಅಭ್ಯಾಸಕ್ಕೆ ಬ್ರೇಕ್‌ ಹಾಕುವುದು ಹೇಗೆ?

ಸ್ಥಿರವಾದ ವೇಳಾಪಟ್ಟಿ ರಚಿಸಿ: ನಿಮ್ಮ ದೇಹದ ಆಂತರಿಕ ಗಡಿಯಾರವನ್ನು ನಿಯಂತ್ರಿಸಲು ವಾರಾಂತ್ಯದಲ್ಲೂ ಕೂಡ ಪ್ರತಿದಿನ ಒಂದೇ ಸಮಯದಲ್ಲಿ ಮಲಗುವ ಹಾಗೂ ಏಳುವ ಅಭ್ಯಾಸ ರೂಢಿಸಿಕೊಳ್ಳಿ. ಒಂದೇ ದಿನಕ್ಕೆ ನೀವು ಈ ಅಭ್ಯಾಸಕ್ಕೆ ಹೊಂದಿಕೊಳ್ಳಲು ಆಗುವುದಿಲ್ಲ, ಆದರೆ ದಿನ ಕಳೆದಂತೆ ಬೇಗ ಮಲಗುವುದಕ್ಕೆ ದೇಹ ಹಾಗೂ ಮನಸ್ಸು ಹೊಂದಿಕೊಳ್ಳುತ್ತದೆ.

ಬೆಡ್‌ಟೈಮ್‌ ಹವ್ಯಾಸಗಳು: ರಾತ್ರಿ ಮಲಗುವ ಮುನ್ನ ಮನಸ್ಸನ್ನು ಶಾಂತಗೊಳಿಸುವ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಓದುವುದು, ಧ್ಯಾನ ಮಾಡುವುದು, ಸಂಗೀತ ಕೇಳುವುದು ಇಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.

ಸ್ಕ್ರೀನ್‌ ಟೈಮ್‌ಗೆ ಮಿತಿ ಹೇರಿ: ರಾತ್ರಿ ಮಲಗಲು ಕನಿಷ್ಠ 1 ಗಂಟೆ ಇರುವಾಗ ಮೊಬೈಲ್‌, ಟಿವಿಯಂತಹ ಎಲೆಕ್ಟ್ರಾನಿಕ್‌ ಪರದೆಗಳಿಂದ ದೂರ ಸರಿಯಿರಿ. ಸ್ಕ್ರೀನ್‌ನ ನೀಲಿ ಬೆಳಕು ಮೆಲಟೋನಿನ್‌ ಉತ್ಪಾದನೆಗೆ ಅಡ್ಡಿಪಡಿಸುತ್ತದೆ.

ಮೈಂಡ್‌ಫುಲ್‌ ನ್ಯೂಟ್ರಿಷನ್‌: ತಡರಾತ್ರಿ ನೀವು ಸೇವಿಸುವ ಆಹಾರಗಳ ಬಗ್ಗೆಯೂ ಗಮನ ಹರಿಸಬೇಕು. ಲಘು ಆಹಾರಗಳನ್ನು ಸೇವಿಸಿ. ಜೀರ್ಣಕ್ರಿಯೆಗೆ ಉತ್ತಮ ಎನ್ನಿಸುವ ಆಹಾರಗಳಷ್ಟೇ ನಿಮ್ಮ ಪಟ್ಟಿಯಲ್ಲಿರಲಿ. ಉತ್ತಮ ನಿದ್ದೆ ಬರಬೇಕು ಅಂದ್ರೆ ಮಲಗುವ ಮುನ್ನ ಹೊಟ್ಟೆ ಭಾರ ಎನ್ನಿಸುವಷ್ಟು ತಿನ್ನಬೇಡಿ.

ಗುಣಮಟ್ಟದ ನಿದ್ದೆ: ಆರಾಮದಾಯಕ ಹಾಸಿಗೆ, ದಿಂಬುಗಳು ನಿಮ್ಮ ಉತ್ತಮ ನಿದ್ದೆಗೆ ಸಹಕಾರ ನೀಡುತ್ತವೆ. ಕತ್ತಲು ಇರುವ ಸ್ತಬ್ಧ ವಾತಾವರಣದಲ್ಲಿ ಮಲಗಲು ಪ್ರಯತ್ನಿಸಿ. ನಿಮ್ಮ ನಿದ್ದೆಗೆ ಯಾವುದೇ ಅಡಚಣೆಗಳು ಇಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಿ.

ಈ ಅಭ್ಯಾಸಗಳನ್ನು ರೂಡಿಸಿಕೊಳ್ಳುವ ಮೂಲಕ ಪ್ರತಿದಿನ ಮಧ್ಯರಾತ್ರಿ ನಂತರ ನಿದ್ದೆ ಮಾಡುವ ಅಭ್ಯಾಸಕ್ಕೆ ಕಡಿವಾಣ ಹಾಕಬಹುದು, ಮಾತ್ರವಲ್ಲ ಇದರಿಂದ ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವೂ ವೃದ್ಧಿಯಾಗುತ್ತದೆ.

(This copy first appeared in Hindustan Times Kannada website. To read more like this please logon to kannada.hindustantimes.com )