ಕನ್ನಡ ಸುದ್ದಿ  /  ಜೀವನಶೈಲಿ  /  Fish Cleaning: ಫಿಶ್ ಕರಿ ತಯಾರಿಗೂ ಮುನ್ನ, ಮೀನನ್ನು ಸರಿಯಾಗಿ ಕಟ್‌ ಮಾಡೋದು, ಕ್ಲೀನ್ ಮಾಡೋದು ಹೇಗೆ? ಇಲ್ಲಿದೆ ಹಂತ ಹಂತದ ವಿವರ

Fish Cleaning: ಫಿಶ್ ಕರಿ ತಯಾರಿಗೂ ಮುನ್ನ, ಮೀನನ್ನು ಸರಿಯಾಗಿ ಕಟ್‌ ಮಾಡೋದು, ಕ್ಲೀನ್ ಮಾಡೋದು ಹೇಗೆ? ಇಲ್ಲಿದೆ ಹಂತ ಹಂತದ ವಿವರ

ಮನೆಯಲ್ಲಿ ಮೀನಿನ ಸಾರು, ಫ್ರೈ ಮಾಡಬೇಕೆಂಬ ಆಸೆ ಹಲವರಿಗಿದ್ದರೂ ಮೀನನ್ನು ಸ್ವಚ್ಛ ಮಾಡುವುದು ಹೇಗೆ ಎಂದು ತಿಳಿಯದೇ ಮೀನು ಖಾದ್ಯಗಳನ್ನು ತಯಾರಿಸಲು ಹಿಂದೇಟು ಹಾಕುತ್ತಾರೆ. ಆದರೆ ನಿಮಗಾಗಿ ಇಲ್ಲಿ ಮೀನನ್ನು ಸುಲಭ ವಿಧಾನದಲ್ಲಿ ಕತ್ತರಿಸುವುದು ಹಾಗೂ ಸ್ವಚ್ಛ ಮಾಡುವುದು ಹೇಗೆ ಎಂಬುದನ್ನು ವಿವರಿಸಲಾಗಿದೆ. (ಬರಹ: ಪ್ರಿಯಾಂಕ ಗೌಡ)

ಫಿಶ್‌ ಕರಿ ತಯಾರಿಗೂ ಮುನ್ನ ಮೀನನ್ನು ಸ್ವಚ್ಛಗೊಳಿಸುವುದು ಹೇಗೆ?
ಫಿಶ್‌ ಕರಿ ತಯಾರಿಗೂ ಮುನ್ನ ಮೀನನ್ನು ಸ್ವಚ್ಛಗೊಳಿಸುವುದು ಹೇಗೆ?

ಮಾಂಸಾಹಾರ ಭೋಜನ ಪ್ರಿಯರಿಗೆ ಚಿಕನ್ ಸಾರು, ಮಟನ್ ಕೈಮಾ, ಚಿಲ್ಲಿ ಚಿಕನ್ ಜೊತೆ ಸವಿಯಲು ಮೀನು ಫ್ರೈ ಇದ್ದರೆ ಸ್ವರ್ಗಕ್ಕೆ ಮೂರೇ ಗೇಣು. ಮೀನು ಅಂದಾಕ್ಷಣ ನೆನಪಾಗುವುದು ದೇಶದ ಕರಾವಳಿ ಭಾಗಗಳು. ಉತ್ತರದಿಂದ ದಕ್ಷಿಣದವರೆಗೆ ನಾನಾ ಶೈಲಿಯ ಮೀನು ರೆಸಿಪಿಗಳ ಬಗ್ಗೆ ನೀವು ಕೇಳಿರಬಹುದು. ರಾಜ್ಯದ ಕರಾವಳಿ ಭಾಗದ ಬೂತಾಯಿ/ಬಂಗುಡೆ ಪುಳಿಮುಂಚಿ, ಗೋವಾದ ಮೀನು ಸಾರು, ಚೆಟ್ಟಿನಾಡ್ ಫಿಶ್ ಕರಿ, ಅಮೃತಸರಿ ಮೀನು ಪದಾರ್ಥ ಸೇರಿದಂತೆ ಹಲವಾರು ಬಗೆಯ ಖಾದ್ಯಗಳಿವೆ. ಸಮುದ್ರದ ಮೀನುಗಳು ತಿನ್ನಲು ಬಹಳ ರುಚಿಕರ. ಹೀಗಾಗಿ ಬಹುತೇಕರು ಮೀನಿನ ವಿವಿಧ ಬಗೆಯ ಖಾದ್ಯಗಳನ್ನು ಇಷ್ಟಪಟ್ಟು ಸವಿಯುತ್ತಾರೆ.

ಟ್ರೆಂಡಿಂಗ್​ ಸುದ್ದಿ

ನೀವು ಮೀನನ್ನು ಖರೀದಿಸಿ ತಂದಿರಬಹುದು ಅಥವಾ ಗಾಳ ಹಾಕಿ ಮೀನು ಹಿಡಿದಿರಬಹುದು. ಆದರೆ, ಅದರ ಖಾದ್ಯ ತಯಾರಿಸುವ ಮುನ್ನ ಸರಿಯಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ನೀವು ಮೀನನ್ನು ಎಷ್ಟು ರುಚಿಕರವಾಗಿ ತಯಾರಿಸುತ್ತಿರೋ ಅದಕ್ಕಿಂತ ಮುಖ್ಯವಾಗಿ ಅವುಗಳನ್ನು ಸ್ವಚ್ಫಗೊಳಿಸಬೇಕು. ಇಲ್ಲದಿದ್ದರೆ ಮೀನಿನ ಪದಾರ್ಥ ಕಹಿಯಾಗಿ ಬದಲಾಗಬಹುದು. ಇದರಿಂದ ನಿಮ್ಮ ಸಮಯ, ದುಡ್ಡು, ಮೀನು ಸಾಂಬಾರ್ ಎಲ್ಲಾ ವ್ಯರ್ಥವಾಗಿ ಹೋಗುತ್ತದೆ. ಅಲ್ಲದೆ, ಮೀನು ಸರಿಯಾಗಿ ಸ್ವಚ್ಛಗೊಂಡಿರದಿದ್ದರೆ ಅನಾರೋಗ್ಯಕ್ಕೂ ಕಾರಣವಾಗಬಹುದು. ಹೀಗಾಗಿ ಮೀನನ್ನು ಸ್ವಚ್ಛಗೊಳಿಸಿದ ನಂತರವೇ ತಯಾರಿಸಿ ತಿಂದರೆ ನಿಮ್ಮ ಆರೋಗ್ಯಕ್ಕೆ ಉತ್ತಮ.

ಮೀನನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಮತ್ತು ಕತ್ತರಿಸುವುದು ಹೇಗೆ ಎಂಬುದು ಬಹುತೇಕರಿಗೆ ತಿಳಿದಿರುವುದಿಲ್ಲ. ಕೆಲವರು ಸರಿಯಾಗಿ ಕತ್ತರಿಸಿದೇ, ತೊಳೆಯದೇ ಮೀನು ಖಾದ್ಯ ತಯಾರಿಸಿ ಅದನ್ನು ತಿನ್ನಲಾಗದೆ ವ್ಯರ್ಥ ಮಾಡುತ್ತಾರೆ. ಈ ರೀತಿಯ ಪ್ರಮಾದಗಳು ಸಂಭವಿಸಲು ನಿಜವಾದ ಕಾರಣ ಮೀನನ್ನು ಹೇಗೆ ಸ್ವಚ್ಛಗೊಳಿಸಲಾಗಿದೆ ಮತ್ತು ಕತ್ತರಿಸಲಾಗಿದೆ ಎಂಬುದರ ಆಧಾರದ ಮೇಲೆ ನಿಂತಿರುತ್ತದೆ. ಹೀಗಾಗಿ ಈ ಪ್ರಕ್ರಿಯೆಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಮನೆಯಲ್ಲಿ ಮೀನುಗಳನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಮತ್ತು ಕತ್ತರಿಸುವುದು ಹೇಗೆ ಎಂಬ ಬಗ್ಗೆ ಹಂತ ಹಂತದ ಮಾಹಿತಿ ಇಲ್ಲಿದೆ.

1. ಮೀನನ್ನು ಚೆನ್ನಾಗಿ ತೊಳೆಯಿರಿ

ಮೀನುಗಳನ್ನು ತೊಳೆಯುವಾಗ, ತಾಜಾ ಮತ್ತು ತಣ್ಣನೆಯ ನೀರನ್ನು ಮಾತ್ರ ಬಳಸಬೇಕು. ಬಿಸಿ ಅಥವಾ ಉಗುರು ಬೆಚ್ಚಗಿನ ನೀರನ್ನು ಎಂದಿಗೂ ಬಳಸಬೇಡಿ. ಮೀನಿನ ಕೊಳಕು ಕಣಗಳನ್ನು ತೆಗೆದ ನಂತರ ನೀರು ಹಾಕುತ್ತಾ ಚೆನ್ನಾಗಿ ಉಜ್ಜಬೇಕು. ಚಾಕುವಿನ ಸಹಾಯದಿಂದಲೂ ಮೇಲಿನ ಪದರವನ್ನು ಉಜ್ಜಬಹುದು. ಅದರ ಬಾಲ, ಈಜು ರೆಕ್ಕೆಗಳನ್ನು ಕತ್ತರಿಸಬೇಕು. ಮೀನಿನ ಮೇಲಿನ ಪದರದಲ್ಲಿರುವ ಎಲ್ಲಾ ಕೊಳಕು ಕಣಗಳು ಮತ್ತು ಸೂಕ್ಷ್ಮಜೀವಿಗಳನ್ನು ತೆಗೆದುಹಾಕಲು ಈ ಹಂತ ಬಹಳ ಮುಖ್ಯ.

2. ಮೀನು ಕತ್ತರಿಸುವುದು

ಮೀನನ್ನು ಕತ್ತರಿಸುವಾಗ ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕಾದುದು ಏನೆಂದರೆ, ಚಾಕುವಿನ ತುದಿಯನ್ನು ಮಾತ್ರ ಬಳಸುವುದು. ಯಾವತ್ತೂ ಚಾಕುವಿನ ಮಧ್ಯಭಾಗವನ್ನು ಬಳಸಬೇಡಿ. ಚಾಕುವಿನ ತುದಿಯನ್ನು ಉಪಯೋಗಿಸುವುದರಿಂದ ಮೀನುಗಳನ್ನು ಹೆಚ್ಚು ಸ್ವಚ್ಛವಾಗಿ ಕತ್ತರಿಸಬಹುದು. ಮೀನನ್ನು ಚಾಪಿಂಗ್ ಬೋರ್ಡ್‌ನ ಮೇಲ್ಭಾಗದಲ್ಲಿ ನಿಧಾನವಾಗಿ ಇಡಬೇಕು. ನಂತರ ಚಾಕುವಿನ ಸಹಾಯದಿಂದ, ಮೀನಿನ ಹೊಟ್ಟೆಯನ್ನು ನಿಧಾನವಾಗಿ ಕತ್ತರಿಸಿ ಅದರ ತಲೆ ಭಾಗದವರೆಗೂ ಕತ್ತರಿಸಬೇಕು. ಕೆಳಭಾಗವನ್ನು ವಿ ಆಕಾರದಲ್ಲಿ ಕತ್ತರಿಸಬೇಕು.

3. ಒಳಭಾಗವನ್ನು ತೆಗೆದುಹಾಕುವುದು

ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ನೈರ್ಮಲ್ಯವನ್ನು ಅನುಸರಿಸಬೇಕು. ಮೊದಲು ತಮ್ಮ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ಲಾಸ್ಟಿಕ್ ಕೈಗವಸುಗಳನ್ನು ಸಹ ಧರಿಸಬಹುದು. ಮೀನಿನ ಒಳಭಾಗದಲ್ಲಿರುವ ಬೇಡದ ವಸ್ತುಗಳನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕು. ಕೈಯಲ್ಲಿ ತೆಗೆಯಲು ಬಯಸದಿದ್ದರೆ, ಬೇಡದ ಭಾಗಗಳನ್ನು ತೆಗೆಯಲು ಚಮಚವನ್ನು ಉಪಯೋಗಿಸಬಹುದು. ಇವುಗಳನ್ನು ತೆಗೆದ ನಂತರ ನೀರಿನಲ್ಲಿ ಚೆನ್ನಾಗಿ ಸ್ವಚ್ಛಗೊಳಿಸಬೇಕು. ಹೊಟ್ಟೆಯ ಭಾಗವನ್ನು ಕತ್ತರಿಸಿದ ನಂತರ ಇದನ್ನು ಸುಲಭವಾಗಿ ಹೊರತೆಗೆಯಬಹುದು.

4. ಮೀನಿನ ಮೇಲ್ಭಾಗವನ್ನು ಕತ್ತರಿಸುವುದು

ಮೀನಿನ ತಲೆಯ ಭಾಗವನ್ನು ತೆಗೆಯಲು ಹರಿತವಾದ ಚಾಕುವಿನಿಂದ ಮೀನಿನ ಕುತ್ತಿಗೆಯನ್ನು ನಿಧಾನವಾಗಿ ಸೀಳಬೇಕು. ಬಹುತೇಕರು ಮೀನಿನ ತಲೆ, ಕಣ್ಣುಗಳನ್ನು ಇಷ್ಟಪಡುತ್ತಾರೆ. ಆದರೆ, ಈ ಭಾಗದಲ್ಲಿ ಬೇಡವಾದ ವಸ್ತುಗಳನ್ನು ನೀವು ತೆಗೆಯಬೇಕೆಂದರೆ ಅದನ್ನು ನೀವು ಕತ್ತರಿಸಲೇಬೇಕು. ಹೊರಗಿನಿಂದ ತಲೆಯ ಭಾಗವನ್ನು ಉಳಿಸಿಕೊಂಡು ಒಳಗಿನ ಬೇಡದ ಭಾಗಗಳನ್ನು ತೆಗೆಯಬಹುದು. ಅದರ ಬಾಯಿ ಮತ್ತು ಹರಿತವಾದ ಹಲ್ಲುಗಳನ್ನು ಚಾಕು ಉಪಯೋಗಿಸಿ ತೆಗೆಯಬಹುದು.

5. ಕೊನೆಯಲ್ಲಿ ಮತ್ತೆ ಮೀನನ್ನು ತೊಳೆಯಿರಿ

ಮೀನಿನ ಬೇಡದ ಭಾಗಗಳನ್ನು ತೆಗೆದು ಮೀನುಗಳನ್ನು ಒಂದೆಡೆ ಇಟ್ಟ ನಂತರ ಮತ್ತೆ ಒಂದೊಂದೇ ಮೀನುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಮೀನುಗಳನ್ನು ತೊಳೆಯಲು ಯಾವುದೇ ರೀತಿಯ ಸೋಪ್ ಅಥವಾ ಡಿಟರ್ಜೆಂಟ್‌ಗಳನ್ನು ಬಳಸಬಾರದು. ಸೋಪ್ ಅಥವಾ ಡಿಟರ್ಜೆಂಟ್‌ಗಳನ್ನು ಬಳಸುವುದರಿಂದ ಮಾಂಸದ ಗುಣಮಟ್ಟ ಮತ್ತು ರುಚಿಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಮೀನಿನ ಚರ್ಮದಿಂದ ಎಲ್ಲಾ ಬೇಡದ ವಸ್ತುಗಳನ್ನು ತೆಗೆದ ನಂತರ, ಚೆನ್ನಾಗಿ ನೀರಿನಲ್ಲಿ ತೊಳೆಯುವುದು ಮುಖ್ಯ. ಹಾಗೂ ಮೀನುಗಳನ್ನು ತಣ್ಣೀರಿನಲ್ಲಿಯೇ ಇಟ್ಟು ಒಂದೊಂದೇ ಮೀನುಗಳನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು.

ಮೀನು ಸಂಪೂರ್ಣವಾಗಿ ಸ್ವಚ್ಛವಾದ ನಂತರ ಖಾದ್ಯ ತಯಾರಿಸಲು ಸಿದ್ಧರಾಗಿ. ಈಗ ನೀವು ರುಚಿಕರವಾದ ಭಕ್ಷ್ಯ ತಯಾರಿಸಿ ಸವಿಯಬಹುದು. ಯಾವುದೇ ಮೀನನ್ನು ತೊಳೆಯುವಾಗ ಒಂದೆರಡು ಚಮಚ ಅರಿಸಿನ ಸೇರಿಸುವುದರಿಂದ ವಾಸನೆ ಹಾಗೂ ಸೂಕ್ಷ್ಮಜೀವಿಗಳ ನಾಶವಾಗುತ್ತದೆ.

ವಿಭಾಗ