Ramadan 2024: ಶೀರ್ ಖುರ್ಮಾದಿಂದ ರಾಗಿಮಣ್ಣಿವರೆಗೆ; ಇಲ್ಲಿದೆ ರಂಜಾನ್ ವಿಶೇಷ ಖಾದ್ಯಗಳ ರೆಸಿಪಿ; ನೀವೂ ಮನೆಯಲ್ಲಿ ಟ್ರೈ ಮಾಡಿ
ಮುಸ್ಲಿಮರ ಪವಿತ್ರ ಮಾಸ ರಂಜಾನ್‌ನಲ್ಲಿ ರೋಜಾ, ತರಾವೀಹ ನಮಾಜ್, ಜಕಾತ್‌ನಂತಹ ಆಚರಣೆಯ ಜೊತೆಗೆ ರೋಜಾ ಮುಗಿಸಿದ ನಂತರ ವಿಶೇಷ ಖಾದ್ಯಗಳನ್ನು ತಯಾರಿಸಿ ತಿನ್ನುವುದು ವಾಡಿಕೆ. ಶೀರ್ ಖುರ್ಮಾ, ಎಗ್ ಪಫ್, ರಾಗಿ ಮಣ್ಣಿಯಂತಹ ಸಾಂಪ್ರದಾಯಿಕ ಶೈಲಿಗಳ ಖಾದ್ಯಗಳನ್ನ ತಯರಿಸುವ ವಿಧಾನ ಇಲ್ಲಿದೆ.

ರಂಜಾನ್ ಮಾಸ ಎಂದರೆ ರೋಜಾದ ಜೊತೆಗೆ ಥರಹೇವಾರಿ ಖಾದ್ಯಗಳು ಕಣ್ಣ ಮುಂದೆ ಬರುತ್ತವೆ. ರಂಜಾನ್‌ನಲ್ಲಿ ಬಗೆ ಬಗೆಯ ಅಡುಗೆ ಮಾಡಿ ತಿನ್ನುವುದು ವಾಡಿಕೆ. ಒಂದೊಂದು ಕಡೆ ಒಂದೊಂದು ರೀತಿಯ ವಿಶೇಷ ಖಾದ್ಯಗಳನ್ನು ತಯಾರಿಸುತ್ತಾರೆ. ಬಿರಿಯಾನಿ ತುಂಬಾನೇ ಫೇಮಸ್ ಆದ್ರೂ ಕೂಡ ಈ ಕೆಲವು ರೆಸಿಪಿಗಳು ರಂಜಾನ್ ಸಂಭ್ರಮ ಹೆಚ್ಚಿಸುವುದು ಸುಳ್ಳಲ್ಲ. ರಂಜಾನ್ ಮಾಸದಲ್ಲಿ ತಯಾರಿಸುವ ಅಂತಹ ಕೆಲವು ವಿಶೇಷ ಖಾದ್ಯಗಳ ರೆಸಿಪಿ ಇಲ್ಲಿದೆ.
ಚಿಕನ್ ಕಟ್ಲೆಟ್
ಬೇಕಾಗುವ ಸಾಮಗ್ರಿಗಳು: ಆಲೂಗೆಡ್ಡೆ - 1, ಚಿಕನ್ - 250 ಗ್ರಾಂ, ಈರುಳ್ಳಿ - 1 ಮಧ್ಯಮ ಗಾತ್ರದ್ದು, ಟೊಮೆಟೊ - 1, ಗರಂ ಮಸಾಲೆ - 1 ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1/2 ಚಮಚ, ಚಿಕನ್ ಮಸಾಲ - ಸ್ವಲ್ಪ, ಉಪ್ಪು - ರುಚಿಗೆ, ಅರಿಸಿನ ಪುಡಿ - ಚಿಟಿಕೆ, ಮೊಟ್ಟೆ - 1, ಬ್ರೆಡ್ ಪುಡಿ - ಸ್ವಲ್ಪ
ತಯಾರಿಸುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಹೆಚ್ಚಿಟ್ಟುಕೊಂಡ ಈರುಳ್ಳಿ ಸೇರಿಸಿ, ಕೆಂಬಣ್ಣ ಬರುವವರೆಗೂ ಹುರಿಯಿರಿ. ನಂತರ ಟೊಮೆಟೊ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಸಿನ ಪುಡಿ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಈ ಎಲ್ಲವನ್ನೂ ಮಿಶ್ರಣ ಮಾಡಿ ಮಸಾಲೆ ತಯಾರಿಸಿಕೊಳ್ಳಿ. ಮೊದಲೇ ಬೇಯಿಸಿಕೊಂಡ ಚಿಕನ್ ಮಾಂಸ ಹಾಗೂ ಆಲೂಗೆಡ್ಡೆಯನ್ನು ಸ್ಮ್ಯಾಶ್ ಮಾಡಿ ಮಸಾಲೆಗೆ ಸೇರಿಸಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿದ ನಂತರ ಅಂಗೈ ಮೇಲೆ ಇರಿಸಿ ಅಂಗೈ ಅಗಲಕ್ಕೆ ದಪ್ಪಗೆ ತಟ್ಟಿ. ಒಂದು ಬೌಲ್‌ನಲ್ಲಿ ಮೊಟ್ಟೆ ಹಾಕಿ. ಅದಕ್ಕೆ ಉಪ್ಪು ಹಾಗೂ ಅರಿಸಿನ ಪುಡಿ ಸೇರಿಸಿ ಮಿಶ್ರಣ ಮಾಡಿ. ಮೊದಲೇ ತಯಾರಿಸಿಟ್ಟುಕೊಂಡ ಕಟ್ಲೆಟ್ ಅನ್ನು ಮೊಟ್ಟೆಯಲ್ಲಿ ಅದ್ದಿ, ನಂತರ ಬ್ರೆಡ್ ಪುಡಿಯಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯಿರಿ. ಈಗ ನಿಮ್ಮ ಮುಂದೆ ಗರಿಗರಿಯಾದ ಚಿಕನ್ ಕಟ್ಲೆಟ್ ತಿನ್ನಲು ಸಿದ್ಧ.
ರಾಗಿಮಣ್ಣಿ
ಬೇಕಾಗುವ ಸಾಮಗ್ರಿಗಳು: ರಾಗಿ, ತೆಂಗಿನಕಾಯಿ, ಏಲಕ್ಕಿ, ಬೆಲ್ಲ
ತಯಾರಿಸುವ ವಿಧಾನ: ರಾಗಿ ಹಾಗೂ ತೆಂಗಿನತುರಿಯನ್ನು ನುಣ್ಣಗೆ ರುಬ್ಬಿಕೊಂಡು, ಇದನ್ನು ತೆಳ್ಳನೆಯ ಬಟ್ಟೆಯ ಮೇಲೆ ಹರಡಿ, ಅದರಿಂದ ಹಾಲು ಬೇರ್ಪಡಿಸಿ. ನಂತರ ದಪ್ಪದ ತಳದ ಪಾತ್ರೆಯನ್ನು ಒಲೆಯ ಮೇಲಿರಿಸಿ ಅದಕ್ಕೆ ರಾಗಿ ಹಾಗೂ ತೆಂಗಿನಕಾಯಿ ಹಾಲಿದಿಂದ ತಯಾರಿಸಿಕೊಂಡ ಹಾಲನ್ನು ಹಾಕಿ. ಅದರೊಂದಿಗೆ ಬೆಲ್ಲದ ಪುಡಿ ಹಾಗೂ ಏಲಕ್ಕಿ ಪುಡಿ ಸೇರಿಸಿ ಗಟ್ಟಿಯಾಗುವವರೆಗೂ ಕೈಯಾಡಿಸುತ್ತಿರಿ. ಇದು ಸೌಟಿಗೆ ಅಂಟಿಕೊಳ್ಳಬಾರದು. ಅದನ್ನು ಬಟ್ಟಲಿಗೆ ಸುರಿಯಿರಿ. ಸ್ವಲ್ಪ ಹೊತ್ತು ಗಟ್ಟಿಯಾಗಲು ಬಿಡಿ. ನಂತರ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು ತಿನ್ನಿ.
ಎಗ್ ಪಫ್
ಬೇಕಾಗುವ ಸಾಮಗ್ರಿಗಳು: ಈರುಳ್ಳಿ - 1, ಕ್ಯಾರೆಟ್ - 1, ಆಲೂಗೆಡ್ಡೆ - 1, ಕ್ಯಾಬೆಜ್ - ಚಿಕ್ಕದು (ಅರ್ಧ), ಹಸಿಮೆಣಸು - 3 ರಿಂದ 4, ಅರಿಸಿನ - ಚಿಟಿಕೆ, ಚಿಕನ್ ಮಸಾಲ - ಚಿಟಿಕೆ, ಗರಂ ಮಸಾಲ - ಅರ್ಧ ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕರಿಬೇವು, ಮೈದಾಹಿಟ್ಟು - 1/2 ಕೆಜಿ, ಮೊಟ್ಟೆ - 5 ರಿಂದ 6, ಕೊತ್ತಂಬರಿ ಸೊಪ್ಪು - ಸ್ವಲ್ಪ
ತಯಾರಿಸುವ ವಿಧಾನ: ಬಾಣಲಿಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಹೆಚ್ಚಿಕೊಂಡ ಈರುಳ್ಳಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ನಂತರ ಕರಿಬೇವು, ಚಿಕ್ಕದಾಗಿ ಹೆಚ್ಚಿಕೊಂಡ ಕ್ಯಾರೆಟ್, ಕ್ಯಾಬೇಜ್, ಆಲೂಗೆಡ್ಡೆ ಸೇರಿಸಿ ಎಲ್ಲವನ್ನೂ ಮಿಶ್ರಣ ಬೇಯಿಸಿಕೊಳ್ಳಿ. ಅದಕ್ಕೆ ಅರಿಸಿನ, ಗರಂ ಮಸಾಲೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಪುನಃ ಮಿಶ್ರಣ ಮಾಡಿ ಬೇಯಿಸಿಕೊಳ್ಳಿ. ಮೈದಾಹಿಟ್ಟಿಗೆ ಉಪ್ಪು ಬೆರೆಸಿ, ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಂಡು ಸಮೋಸ ಆಕಾರಕ್ಕೆ ಮಡಿಸಿ. ಮೂರು ತುದಿ ಮಡಿಸಿ, ಒಂದು ಕಡೆ ಮಸಾಲೆಯನ್ನು ಸೇರಿಸಿ, ಅದರ ಮೇಲೆ ಬೇಯಿಸಿಟ್ಟುಕೊಂಡ ಮೊಟ್ಟೆ ಇಡಿ, ನಂತರ ಆ ತುದಿಯನ್ನು ನೀಟಾಗಿ ಮುಚ್ಚಿ. ಇದನ್ನ ಎಣ್ಣೆಯಲ್ಲಿ ಕರಿದರೆ ರುಚಿ ರುಚಿಯಾದ ಬೇಕರಿ ಶೈಲಿಯ ಎಗ್ ಪಫ್ ತಿನ್ನಲು ಸಿದ್ಧ.
ಶೀರ್ ಖುರ್ಮಾ
ಬೇಕಾಗುವ ಸಾಮಾಗ್ರಿಗಳು: ನೀರು - ಅರ್ಧ ಕಪ್, ಕಂಡೆನ್ಸ್ಡ್ ಹಾಲು - 1ಟಿನ್, ಕರ್ಜೂರ - ಬೀಜ ತೆಗೆದು, ಸಣ್ಣಗೆ ಹೆಚ್ಚಿದ್ದು, ಫ್ಯಾಟ್ ಹಾಲು - 1 ಲೀಟರ್, ಏಲಕ್ಕಿ - 3-4, ಸಕ್ಕರೆ - ಅರ್ಧ ಕಪ್, ತುಪ್ಪ- ಕಾಲು ಕಪ್, ಚಿರೋಂಜಿ - 2 ಚಮಚ, ಒಣದ್ರಾಕ್ಷಿ - ಕಾಲು ಕಪ್, ಪಿಸ್ತಾ - 7-8, ಬಾದಾಮಿ - 8-10, ಶಾವಿಗೆ - 1ಕಪ್, ಪುಡಿ ಮಾಡಿದ ಕೊಬ್ಬರಿ - ಕಾಲು ಕಪ್, ಅಲಂಕರಿಸಲು ಹೆಚ್ಚಿದ ಒಣಹಣ್ಣುಗಳು, ಕೇಸರಿ ದಳ.
ತಯಾರಿಸುವ ವಿಧಾನ: ಕುಕ್ಕರ್‌ಗೆ ನೀರು ಹಾಗೂ ಕಂಡೆನ್ಸ್ಡ್ ಹಾಲು ಹಾಕಿ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 2 ವಿಶಲ್ ಕೂಗಿಸಿ. ಇನ್ನೊಂದು ದಪ್ಪ ತಳದ ಪಾತ್ರೆಯಲ್ಲಿ ಹಾಲು ಕುದಿಸಿ, ಅದಕ್ಕೆ ಕರ್ಜೂರ ಸೇರಿಸಿ ಹಾಲಿನ ಬಣ್ಣ ಬದಲಾಗಿ, ಪ್ರಮಾಣ ಕಡಿಮೆಯಾಗುವವರೆಗೂ ಕುದಿಸಿ. ಇದಕ್ಕೆ ಏಲಕ್ಕಿ ಪುಡಿ ಸೇರಿಸಿ ಪುನಃ 3 ರಿಂದ 4 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ, ಅದಕ್ಕೆ ಸಕ್ಕರೆ ಸೇರಿಸಿ, ಕರಗುವವರೆಗೂ ಕುದಿಸಿ. ನಂತರ ಕುಕ್ಕರ್‌ನಲ್ಲಿ ಕುದಿಸಿದ ಕಂಡೆನ್ಸ್ಡ್ ಹಾಲನ್ನು ಸೇರಿಸಿ ಪುನಃ ಹಾಲು ದಪ್ಪ ಆಗುವವರೆಗೂ ಕುದಿಸಿ. ಇನ್ನೊಂದು ಪಾನ್‌ನಲ್ಲಿ 2 ಚಮಚ ತುಪ್ಪ ಬಿಸಿ ಮಾಡಿ ಅದಕ್ಕೆ ಚಿರೋಂಜಿ ಹಾಕಿ, ಪರಿಮಳ ಬರುವವರೆಗೂ ಕಾಯಿಸಿ. ಅದಕ್ಕೆ ಒಣದ್ರಾಕ್ಷಿ, ಪಿಸ್ತಾ, ಬಾದಾಮಿ ಹಾಗೂ ಗೋಡಂಬಿ ಸೇರಿಸಿ. ಬಣ್ಣ ಬದಲಾಗುವವರೆಗೂ ಕಾಯಿಸಿ. ಅದಕ್ಕೆ ಶಾವಿಗೆ ಸೇರಿಸಿ ಬಣ್ಣ ಬದಲಾಗವವರೆಗೂ ಹುರಿಯಿರಿ. ಅದಕ್ಕೆ ಕೊಬ್ಬರಿ ಪುಡಿ ಸೇರಿಸಿ, ಪರಿಮಳ ಬರುವವರೆಗೂ ಹುರಿಯಿರಿ. ಇದೆಲ್ಲವನ್ನೂ ಹಾಲಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಪುನಃ ಹಾಲು ದಪ್ಪವಾಗುವವರೆಗೂ ಕುದಿಸಿ. ನಂತರ ಒಣ ಹಣ್ಣುಗಳಿಂದ ಅಲಂಕರಿಸಿ.
