ನಿನ್ನೆ ಮಾಡಿದ ಚಪಾತಿ ಹೆಚ್ಚಿಗೆ ಉಳಿದಿದ್ಯಾ? ಸಲಾಡ್, ಪಿಜ್ಜಾ ಸೇರಿದಂತೆ ಉಳಿದ ಚಪಾತಿಯಿಂದ ಎಷ್ಟೆಲ್ಲಾ ಸ್ನಾಕ್ಸ್ ತಯಾರಿಸಬಹುದು ನೋಡಿ
Snacks Recipes: ಮಧ್ಯಾಹ್ನ ಅಥವಾ ರಾತ್ರಿ ಊಟದ ವೇಳೆ ಚಪಾತಿ ಇಲ್ಲದಿದ್ದರೆ ಹೇಗೆ? ಬಹುತೇಕರಿಗೆ ಅನ್ನ ಸೇವಿಸುವ ಮುನ್ನ ಚಪಾತಿ ಬೇಕೆ ಬೇಕು. ಹೀಗೆ ಮಾಡಿರುವ ಚಪಾತಿ ಬಹುತೇಕ ಸಮಯಗಳಲ್ಲಿ ಹಾಗೆ ಉಳಿದುಬಿಡುತ್ತದೆ. ಕೆಲವರು ಇದನ್ನು ಬಿಸಾಡುತ್ತಾರೆ. ಆದರೆ, ಇದನ್ನು ವ್ಯರ್ಥ ಮಾಡುವ ಬದಲು ಟೇಸ್ಟಿಯಾದ ಖಾದ್ಯಗಳನ್ನು ತಯಾರಿಸಬಹುದು. ಇಲ್ಲಿದೆ ಈ ಬಗ್ಗೆ ಮಾಹಿತಿ.
Snacks Recipes: ಬಹುತೇಕರಿಗೆ ರೊಟ್ಟಿ ಅಥವಾ ಚಪಾತಿ ಇಲ್ಲದೆ ಊಟ ಪೂರ್ಣಗೊಳ್ಳುವುದೇ ಇಲ್ಲ. ಪ್ರತಿದಿನ ಮಧ್ಯಾಹ್ನ ಅಥವಾ ರಾತ್ರಿ ಅನ್ನದ ಸೇವಿಸುವ ಮುನ್ನ ಚಪಾತಿ ಬೇಕೇ ಬೇಕು. ಪ್ರತಿದಿನ ಈ ಪೌಷ್ಠಿಕಾಂಶದ ಊಟವನ್ನು ಸೇವಿಸಿದರೆ, ಬಹಳ ಹೊತ್ತು ಹೊಟ್ಟೆ ತುಂಬಿರುತ್ತದೆ. ಈ ರೀತಿ ಊಟಕ್ಕೆ ಮಾಡಿದ ಚಪಾತಿಯು ಕೆಲವೊಮ್ಮೆ ಉಳಿದಿರುತ್ತದೆ. ಆದರೆ ಇದನ್ನು ಬಿಸಾಡದೆ ರುಚಿಕರವಾದ ಖಾದ್ಯವನ್ನು ತಯಾರಿಸಬಹುದು. ಮಕ್ಕಳ ಲಂಚ್ ಬಾಕ್ಸ್ ಗೆ ಏನಪ್ಪಾ ಹಾಕಿ ಕಳುಹಿಸುವುದು ಅನ್ನೋ ಚಿಂತೆ ಇರುವವರು, ಚಪಾತಿಯಿಂದ ವಿವಿಧ ಭಕ್ಷ್ಯಗಳನ್ನು ತಯಾರಿಸಿ ಕಳುಹಿಸಬಹುದು.
ಚಪಾತಿಯಲ್ಲಿ ಕಾರ್ಬೋಹೈಡ್ರೇಟ್, ಫೈಬರ್ ಮತ್ತು ಬಿ ವಿಟಮಿನ್‌ಗಳ ಉತ್ತಮ ಪೋಷಕಾಂಶಗಳಿವೆ. ಹಾಗಿದ್ದರೆ ಉಳಿದ ಚಪಾತಿಯನ್ನು ಬಿಸಾಡದೆ ಮನೆಯಲ್ಲೇ ಯಾವೆಲ್ಲಾ ಖಾದ್ಯಗಳನ್ನು ತಯಾರಿಸಬಹುದು ಇಲ್ಲಿ ನೋಡಿ.
ಚಪಾತಿ ಸ್ಯಾಂಡ್ ವಿಚ್
ಚಪಾತಿಯನ್ನು ನಾಲ್ಕು ಭಾಗಗಳಾಗಿ ಕತ್ತರಿಸಿ ಸಾಸ್ ಹಚ್ಚಿ ಅದಕ್ಕೆ ಕತ್ತರಿಸಿದ ಈರುಳ್ಳಿ, ಟೊಮ್ಯಾಟೋ, ಸೌತೆಕಾಯಿಯನ್ನು ತುಂಬಿರಿ. ಅದರ ಮೇಲೆ ಚೀಸ್ ಹಾಕಿ. ಒಂದರ ಮೇಲೆ ಒಂದರಂತೆ ಈ ರೀತಿ ಹಾಕಿ, ಸ್ಟೌವ್ ಅನ್ನು ಕಡಿಮೆ ಉರಿಯಲ್ಲಿಟ್ಟು ಸ್ವಲ್ಪ ಬೇಯಿಸಿ. ಚೀಸ್ ಕರಗಿದರೆ ಸಾಕು ರುಚಿಯಾದ ಸ್ಯಾಂಡ್ ವಿಚ್ ಸವಿಯಲು ಸಿದ್ಧ.
ಚಪಾತಿ ರೋಲ್
ಮಕ್ಕಳಿಗೆ ಚಪಾತಿ ರೋಲ್ ಮಾಡಿಕೊಟ್ಟರೆ ಬಹಳ ಇಷ್ಟಪಟ್ಟು ಸವಿಯುತ್ತಾರೆ. ಸಂಜೆ ಮಾತ್ರವಲ್ಲ ಬೆಳಗಿನ ಉಪಹಾರಕ್ಕೂ ಇದನ್ನು ಕೊಡಬಹುದು. ಇದನ್ನು ತಯಾರಿಸುವುದು ತುಂಬಾನೇ ಸಿಂಪಲ್. ಬಾಣಲೆಯಲ್ಲಿ ಒಗ್ಗರಣೆಗೆ ಜೀರಿಗೆ ಹಾಕಿ, ನಂತರ ಈರುಳ್ಳಿ, ಟೊಮ್ಯಾಟೋ, ತುರಿದ ಕ್ಯಾರೆಟ್, ಕ್ಯಾಪ್ಸಿಕಂ, ಉಪ್ಪು ಹಾಕಿ ಬೇಯಿಸಿಕೊಳ್ಳಿ. ನಂತರ ಚಪಾತಿಗೆ ಸಾಸ್ ಸವರಿ ಮಧ್ಯಕ್ಕೆ ತರಕಾರಿ ಪಲ್ಯ ಹಾಕಿ ರೋಲ್ ಮಾಡಿದರೆ ಸಾಕು ಚಪಾತಿ ರೋಲ್ ಸವಿಯಲು ಸಿದ್ಧ.
ಚಪಾತಿ ಪಿಜ್ಜಾ
ಚಪಾತಿಗೆ ಪಿಜ್ಜಾ ಸಾಸ್ ಸವರಿ ಅದರ ಮೇಲೆ ಕ್ಯಾಪ್ಸಿಕಮ್, ಈರುಳ್ಳಿ, ಪನ್ನೀರ್ ಹಾಕಿ. ನಂತರ ತುರಿದ ಚೀಸ್, ಚಿಲ್ಲಿ ಫ್ಲೇಕ್ಸ್ ಹಾಕಿ 3 ನಿಮಿಷಗಳ ಕಾಲ ಮುಚ್ಚಿಡಿ. ಸ್ಟೌವ್ ಅನ್ನು ಸಿಮ್‌ನಲ್ಲಿಟ್ಟು ಬೇಯಿಸಿ. ಚೀಸ್ ಕರಗಿದ ನಂತರ ಚಪಾತಿಯನ್ನು ಪಿಜ್ಜಾದಂತೆ ಕತ್ತರಿಸಿ ಸವಿಯಿರಿ.
ಚಪಾತಿ ಕ್ವೆಸಡಿಲ್ಲಾ
ಕುರುಕಲು ತಿಂಡಿಗಳು, ಮೈದಾದಿಂದ ಮಾಡಿದ ತಿಂಡಿಗಳು ತಿನ್ನಲು ಯೋಗ್ಯವಲ್ಲ. ಮನೆಯಲ್ಲೇ ಆರೋಗ್ಯಕರವಾಗಿ ತಯಾರಿಸುವ ತಿನಿಸುಗಳೇ ಯಾವತ್ತೂ ಉತ್ತಮ. ಚಪಾತಿಯ ಮಧ್ಯಕ್ಕೆ ಬೇಯಿಸಿದ ಪಾಲಾಕ್ ಮತ್ತು ಈರುಳ್ಳಿಯ ಮಿಶ್ರಣವನ್ನು ಹಾಕಬೇಕು. ಅದರ ಮೇಲೆ ಸ್ವಲ್ಪ ಚೀಸ್ ಅನ್ನು ತುರಿದು ಹಾಕಿ, ಬಳಿಕ ಚಪಾತಿಯನ್ನು ಮಡಚಿ 10ರಿಂದ 15 ಸೆಕೆಂಡ್ ಬೇಯಿಸಬೇಕು. ನಂತರ ಚಪಾತಿಯನ್ನು ಕತ್ತರಿಸಿ, ಸಾಸ್ ಜೊತೆ ಸವಿಯಬಹುದು.
ಚಪಾತಿ ರ್ಯಾಪ್
ಈ ತಿಂಡಿಯನ್ನು ಸಹ ಮಕ್ಕಳಿಗೆ ಸಂಜೆಯ ಸ್ನಾಕ್ಸ್ ಆಗಿ ಕೊಡಬಹುದು. ಪನ್ನೀರ್ ಅಥವಾ ಆಲೂಗಡ್ಡೆ ಪಲ್ಯ ಮಾಡಿ. ಬಳಿಕ ಚಪಾತಿಯನ್ನು ನಾಲ್ಕು ಭಾಗಗಳಂತೆ ಮಾಡಿ, ಒಂದು ಭಾಗಕ್ಕೆ ಸಾಸ್, ಇನ್ನೊಂದು ಭಾಗಕ್ಕೆ ಪನ್ನೀರ್ ಪಲ್ಯ, ಮತ್ತೊಂದು ಭಾಗಕ್ಕೆ ಕೊತ್ತಂಬರಿ, ಪುದೀನಾ ಸೊಪ್ಪು, ಹಸಿಮೆಣಸಿನಕಾಯಿ, ಶುಂಠಿಯಿಂದ ಮಾಡಿದ ಹಸಿರು ಚಟ್ನಿಯನ್ನು ಹಾಕಿ. ಇನ್ನೊಂದು ಭಾಗಕ್ಕೆ, ಈರುಳ್ಳಿ, ಟೊಮೆಟೋ, ಮೊಟ್ಟೆಯನ್ನು ಹಾಕಿ ಒಂದರ ಮೇಲೆ ಒಂದರಂತೆ ಮಡಚಿ ಬೇಯಿಸಿದರೆ, ರುಚಿಕರವಾದ ಸ್ನಾಕ್ಸ್ ರೆಡಿ.
ಚಪಾತಿ ಸಲಾಡ್
ಚಪಾತಿಗಳನ್ನು ಸಣ್ಣ-ಸಣ್ಣ ತುಂಡುಗಳಾಗಿ ಹರಿದು ಹಾಕಿ, ಅದಕ್ಕೆ ತರಕಾರಿ, ಕಡಲೆಬೀಜ, ಸಿಹಿ ಜೋಳವನ್ನು ಹಾಕಿ ಮಿಕ್ಸ್ ಮಾಡಿ, ಸಲಾಡ್ ರೀತಿ ಸವಿಯಿರಿ.
ಮಸಾಲಾ ಚಪಾತಿ
ಉಳಿದ ಚಪಾತಿಯನ್ನು ತ್ರಿಕೋನದಂತೆ ಕತ್ತರಿಸಿ ಗರಿಗರಿಯಾಗುವಂತೆ ಹುರಿಯಿರಿ. ಇದಕ್ಕೆ ಹುರಿದ ತರಕಾರಿಗಳು, ಶೇಂಗಾ ಮತ್ತು ಕರಗಿದ ಚೀಸ್ ಹಾಕಿ ಮಿಕ್ಸ್ ಮಾಡಿ ಸವಿಯಿರಿ.
ಹೀಗೆ ಉಳಿದಿರುವ ಚಪಾತಿಯನ್ನು ವ್ಯರ್ಥ ಮಾಡದೆ ಬಗೆ-ಬಗೆಯ ಸ್ನಾಕ್ಸ್ ತಯಾರಿಸಿ ನಿಮ್ಮ ಮಕ್ಕಳ ಲಂಚ್ ಬಾಕ್ಸ್‌ಗೆ ಅಥವಾ ಸಂಜೆ ತಿನ್ನಲು ಕೊಟ್ಟರೆ ಮಕ್ಕಳು ಇಷ್ಟಪಟ್ಟು ಸವಿಯೋದ್ರಲ್ಲಿ ಎರಡು ಮಾತಿಲ್ಲ.
ವಿಭಾಗ