ಕನ್ನಡ ಸುದ್ದಿ  /  ಜೀವನಶೈಲಿ  /  Relationship: ಸಂಬಂಧದಲ್ಲಿ ಬಿರುಕು ಮೂಡಿದ್ಯಾ, ಸಂಗಾತಿಯೊಂದಿಗಿನ ಮನಸ್ತಾಪ ದೂರಾಗಿ, ಅನುಬಂಧ ಮರಳಲು ಈ ಸಲಹೆಗಳನ್ನು ಪಾಲಿಸಿ

Relationship: ಸಂಬಂಧದಲ್ಲಿ ಬಿರುಕು ಮೂಡಿದ್ಯಾ, ಸಂಗಾತಿಯೊಂದಿಗಿನ ಮನಸ್ತಾಪ ದೂರಾಗಿ, ಅನುಬಂಧ ಮರಳಲು ಈ ಸಲಹೆಗಳನ್ನು ಪಾಲಿಸಿ

ಸಂಗಾತಿಯೊಂದಿಗಿನ ಮುನಿಸು, ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗಿದ್ಯಾ? ಚಿಂತಿಸಬೇಡಿ. ಈ ಕೆಲವು ಸಲಹೆಗಳನ್ನು ಪಾಲಿಸುವ ಮೂಲಕ ಸಂಗಾತಿಯೊಂದಿಗಿನ ಮುನಿಸು, ಮನಸ್ತಾಪಗಳೆಲ್ಲವೂ ಕಳೆದು, ಹೊಸ ಜೀವನ ಪ್ರಾರಂಭಿಸಬಹುದು.

ಸಂಗಾತಿಯೊಂದಿಗಿನ ಮನಸ್ತಾಪ ದೂರಾಗಿ, ಅನುಬಂಧ ಮರಳಲು ಈ ಸಲಹೆಗಳನ್ನು ಪಾಲಿಸಿ
ಸಂಗಾತಿಯೊಂದಿಗಿನ ಮನಸ್ತಾಪ ದೂರಾಗಿ, ಅನುಬಂಧ ಮರಳಲು ಈ ಸಲಹೆಗಳನ್ನು ಪಾಲಿಸಿ

ಪ್ರತಿಯೊಂದು ಸಂಬಂಧಗಳಲ್ಲೂ ಸಂಘರ್ಷಗಳು ಸಹಜ. ಅದರಲ್ಲೂ ಸಂಗಾತಿಯೊಂದಿಗೆ ಮುನಿಸು, ಜಗಳ, ಕೋಪ ಸರ್ವೇ ಸಾಮಾನ್ಯ. ಈ ರೀತಿ ಜಗಳಗಳಾಗುವುದು ಖಂಡಿತ ಕೆಟ್ಟದ್ದಲ್ಲ. ಯಾಕೆಂದರೆ ಇದರಿಂದ ಸಂಗಾತಿಯ ಬಗ್ಗೆ ಇನ್ನಷ್ಟು ಮತ್ತಷ್ಟು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಆದರೂ ಇಂತಹ ಮುನಿಸುಗಳನ್ನು ಆರೋಗ್ಯಕರವಾಗಿಯೇ ಪರಿಹರಿಸಿಕೊಳ್ಳುವುದು ಉತ್ತಮ. ಒಂದು ವೇಳೆ ಇಂತಹ ಸಂಘರ್ಷಗಳನ್ನು ದೀರ್ಘಕಾಲದವರೆಗೆ ಪರಿಹರಿಸಲು ಸಾಧ್ಯವಾಗದೇ ಹೋದರೆ, ಅದು ಸಂಬಂಧಗಳಲ್ಲಿ ಹತಾಶೆ, ಅಸಮಾಧಾನ ಮಾತ್ರವಲ್ಲದೆ ಬಿರುಕಿಗೂ ಕಾರಣವಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ರಿಲೇಷನ್‌ಶಿಪ್‌ ಗೈಡ್‌ ಲುಸಿಲ್ಲೆ ಶಾಕಲ್ಟನ್ ಅವರ ಪ್ರಕಾರ, ʼಸಂಬಂಧಗಳನ್ನು ಸರಿಪಡಿಸಿಕೊಳ್ಳುವುದೆಂದರೆ, ಸಂಘರ್ಷಗಳನ್ನು ಪರಿಹರಿಸುವ ಪ್ರಕ್ರಿಯೆ ಮಾತ್ರ ತಪ್ಪುಗ್ರಹಿಕೆಯನ್ನು ಪರಿಹರಿಸುವುದೂ ಆಗಿದೆ. ಭಿನ್ನಾಭಿಪ್ರಾಯ ಅಥವಾ ನೋವುಂಟು ಮಾಡುವ ಘಟನೆಗಳ ನಂತರವೂ ಸಂಗಾತಿಯೊಂದಿಗಿನ ವಿಶ್ವಾಸವನ್ನು ಮರುಗಳಿಸುವುದಾಗಿದೆ. ಸಂಘರ್ಷಗಳು ಸಾಮಾನ್ಯ. ಆದರೆ ಅದನ್ನು ಹೇಗೆ ಸರಿಪಡಿಸುವುದು ಎಂದು ಕಲಿಯುವುದು ಅತಿ ಮುಖ್ಯ" ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಮುರಿದ ಸಂಬಂಧಗಳನ್ನು ಮತ್ತೆ ಸರಿಪಡಿಸಿಕೊಳ್ಳುವುದು ಹೇಗೆ?

ತಪ್ಪುಗಳನ್ನು ಸಂಕೋಚವಿಲ್ಲದೆ ಒಪ್ಪಿಕೊಳ್ಳಿ: ಸಂಘರ್ಷವನ್ನು ಪರಿಹರಿಸುವ ಮತ್ತು ಸರಿಪಡಿಕೊಳ್ಳುವ ಮೊದಲ ಹೆಜ್ಜೆಯೆಂದರೆ ಸಂಬಂಧದಲ್ಲಿ ಅಸಮಾಧಾನಗಳಿವೆ ಎಂಬುದನ್ನು ಒಪ್ಪಿಕೊಳ್ಳುವುದು. ಅಸಮಾಧಾನವನ್ನು ನಾವೇ ಗುರುತಿಸಿದಾಗ, ಅದರ ಕಾರಣವನ್ನು ತಿಳಿಯುವ ಯತ್ನ ಮಾಡುತ್ತೇವೆ ಹಾಗೂ ಅದನ್ನು ಹೇಗೆ ಪರಿಹರಿಸಲು ಸಾಧ್ಯ ಎಂಬ ಬಗ್ಗೆ ಚಿಂತನೆ ನಡೆಸುತ್ತೇವೆ.

ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ: ಸಂಗಾತಿಯೊಂದಿಗೆ ಜಗಳ, ಭಿನ್ನಾಭಿಪ್ರಾಯಗಳು ಉಂಟಾದಾಗ ಮತ್ತಷ್ಟು ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕೇ ವಿನಃ ಸಣ್ಣ ವಿಚಾರಗಳನ್ನು ದೊಡ್ಡದು ಮಾಡಿ, ಬಿರುಕನ್ನು ಇನ್ನಷ್ಟು ಹಿರಿದಾಗಿಸುವುದಲ್ಲ. ಇನ್ನಷ್ಟು ಅರ್ಥಮಾಡಿಕೊಳ್ಳುವ ಯತ್ನದಲ್ಲಿ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ಹಾದಿ ಸುಗಮವಾಗುತ್ತದೆ.

ತಪ್ಪುಗಳಿದ್ದರೂ, ಇಲ್ಲವಾದರೂ ಕ್ಷಮೆಯಾಚಿಸಿ: ಕ್ಷಮೆ ಯಾಚಿಸುವುದರಿಂದ ನಮ್ಮತನ ಕಳೆದು ಹೋಗುವುದಿಲ್ಲ. ನಾವೇನೂ ಚಿಕ್ಕವರಾಗೋದೂ ಇಲ್ಲ. ಅದರಲ್ಲೂ ಪ್ರೀತಿಯ ಉಳಿವಿಗಾಗಿ ಕ್ಷಮೆ ಯಾಚಿಸಿದರೆ, ನಿಮ್ಮ ಹೃದಯವಂತಿಕೆ ಇನ್ನಷ್ಟು ಹೆಚ್ಚಲಿದೆ. ನಾವು ಕ್ಷಮೆಯಾಚಿಸಿದಾಗ ಸಂಗಾತಿಗೆ ನಮ್ಮಿಂದಾದ ನೋವೇನು ಎಂಬುದನ್ನು ನಮಗೆ ತಿಳಿಯಲು ಸಾಧ್ಯವಾಗುತ್ತದೆ.

ಆದಷ್ಟೂ ತಾಳ್ಮೆಯಿಂದಿರಿ: ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟರೆ ಅನಾಹುತಕ್ಕೆ ದಾರಿಯಾಗುತ್ತದೆ. ಆದ್ದರಿಂದ ಸಂಬಂಧಗಳನ್ನು ಉಳಿಸಿಕೊಳ್ಳಬೇಕಾದರೆ ಘರ್ಷಣೆಗಳು ಉಂಟಾದಾಗ, ಜಗಳವಾದಾಗ ತಾಳ್ಮೆಯಿಂದ ಮುನ್ನಡೆಯುವುದು ಮುಖ್ಯ. ಇಬ್ಬರಲ್ಲಿ ಒಬ್ಬರಾದರೂ ತಾಳ್ಮೆಯಿಂದ ಇದ್ದರೆ, ಕಲಹ ನಿಂತೇಹೋಗುತ್ತದೆ. ಸಂಬಂಧಗಳು ಮತ್ತೆ ಬೆಸೆದುಕೊಳ್ಳುತ್ತದೆ.

ಭಾವನಾತ್ಮಕವಾಗಿ ಬೆರೆಯಲು ಯತ್ನಿಸಿ: ನಿಮ್ಮ ಬಿಡುವಿನ ಹೆಚ್ಚಿನ ಸಮಯವನ್ನು ಸಂಗಾತಿಯೊಂದಿಗೆ ಕಳೆಯಲು ಪ್ರಯತ್ನಿಸಿ. ಇದರಿಂದಾಗಿ ಹೊಸ ನೆನಪುಗಳನ್ನು ಸೃಷ್ಟಿಸಿಕೊಳ್ಳಲು ನೆರವಾಗುತ್ತದೆ. ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ನೀವು ಮತ್ತು ನಿಮ್ಮ ಸಂಗಾತಿ ಹೊಂದಿಕೊಳ್ಳಲು, ಮತ್ತೊಮ್ಮೆ ಬೆಸೆದುಕೊಳ್ಳಲು ಕಾರಣವಾಗುತ್ತದೆ. ಭಾವನಾತ್ಮವಾಗಿ ನಿಮ್ಮ ಸಂಗಾತಿಯೊಂದಿಗೆ ಬೆರೆಯುವುದರಿಂದ ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿತನವನ್ನು ಪಡೆದುಕೊಳ್ಳುತ್ತದೆ. ಬಿಡಿಸಲಾರದ ಬಂಧ ನಿಮ್ಮದಾಗುತ್ತದೆ.

ನಿಮ್ಮೊಲವಿನ ಸಂಗಾತಿಗಾಗಿ ಜೀವನದಲ್ಲಿ ನೀವೂ ಒಂದಷ್ಟು ಹೊಂದಾಣಿಕೆ ಮಾಡಿಕೊಳ್ಳಿ. ಇದರಿಂದ ಸಂಬಂಧಗಳು ಹಸನಾಗಿರುತ್ತವೆ. ಮನಸ್ತಾಪಗಳು ಹುಟ್ಟಿಕೊಳ್ಳುವುದೇ ಮುಕ್ತವಾಗಿ ಮಾತನಾಡದೆ ಇರುವ ಕಾರಣಕ್ಕೆ. ಆದ್ದರಿಂದ ಸಂಗಾತಿಯೊಂದಿಗೆ ಸಮಯವನ್ನು ಕಳೆಯುವ ಮೂಲಕ ಮುಕ್ತವಾಗಿ ಮಾತನಾಡಿಕೊಳ್ಳಿ. ಅದಾಗ್ಯೂ ಅಲ್ಪಸ್ವಲ್ಪ ಜಗಳ, ಮುನಿಸು ಇಲ್ಲದೇ ಹೋದರೆ ಅದು ಜೀವನ ಅನ್ನಿಸೋದು ಹೇಗೆ ಹೇಳಿ.

ಬರಹ: ಭಾಗ್ಯ ದಿವಾಣ 

ವಿಭಾಗ