ಕನ್ನಡ ಸುದ್ದಿ  /  Nation And-world  /  Aaditya Thackeray Joins Bharat Jodo Yatra Walks With Rahul Gandhi In Maharashtra

Aaditya Thackeray: 'ಭಾಯೀ ಆಗೇ ಬಡೋ': ಆದಿತ್ಯ-ರಾಹುಲ್‌ ದೋಸ್ತಿಗೆ ಸಾಕ್ಷಿಯಾಯ್ತು 'ಭಾರತ್‌ ಜೋಡೋ'..!

ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಆದಿತ್ಯ ಠಾಕ್ರೆ ಅವರು, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ 'ಭಾರತ್ ಜೋಡೋ ಯಾತ್ರೆ'ಯಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. ಮಹಾರಾಷ್ಟ್ರದ ಹಿಂಗೋಲಿಯ ಕಲಮ್ನೂರಿಯಲ್ಲಿ ಭಾರತ್‌ ಜೋಡೋ ಯಾತ್ರೆಯನ್ನು ಸೇರಿಕೊಂಡ ಆದಿತ್ಯ ಠಾಕ್ರೆ, ರಾಹುಲ್‌ ಗಾಂಧಿ ಅವರೊಂದಿಗೆ ಕೆಲಹೊತ್ತು ಹೆಜ್ಜೆ ಹಾಕಿದರು.

ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್-ಆದಿತ್ಯ
ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್-ಆದಿತ್ಯ (ANI)

ಮುಂಬೈ: ಒಂದು ಕಾಲದ ಬದ್ಧವೈರಿಗಳಾದ ಕಾಂಗ್ರೆಸ್‌ ಮತ್ತು ಶಿವಸೇನೆ(ಅವಿಭಜಿತ) ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪರಸ್ಪರ ಹತ್ತಿರವಾಗಿವೆ. ಮಹಾರಾಷ್ಟ್ರದಲ್ಲಿ ಎಡುವರೆ ವರ್ಷಗಳ ಕಾಲ ಎನ್‌ಸಿಪಿ ಸಹಯೋಗದೊಂದಿಗೆ 'ಮಹಾ ವಿಕಾಸ್‌ ಅಘಾಢಿ' ಮೈತ್ರಿಕೂಟ ಸರ್ಕಾರ ನಡೆಸಿದ ಈ ಎರಡೂ ಪಕ್ಷಗಳು, ದಿನಗಳೆದಂತೆ ಮತ್ತಷ್ಟು ಹತ್ತಿರವಾಗುತ್ತಿವೆ.

ಅದರಲ್ಲೂ ಎರಡೂ ಪಕ್ಷಗಳಲ್ಲಿರುವ ಹೊಸ ಪೀಳಿಗೆಯ ನಾಯಕತ್ವ, ತಮ್ಮ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಹೊರತಾಗಿಯೂ ಒಟ್ಟಾಗಿ ಹೆಜ್ಜೆ ಹಾಕುವ ಇರಾದೆ ಹೊಂದಿದೆ. ಇದಕ್ಕೆ ಪುಷ್ಠಿ ಎಂಬಂತೆ, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಆದಿತ್ಯ ಠಾಕ್ರೆ ಅವರು, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ 'ಭಾರತ್ ಜೋಡೋ ಯಾತ್ರೆ'ಯಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.

ಮಹಾರಾಷ್ಟ್ರದ ಹಿಂಗೋಲಿಯ ಕಲಮ್ನೂರಿಯಲ್ಲಿ ಭಾರತ್‌ ಜೋಡೋ ಯಾತ್ರೆಯನ್ನು ಸೇರಿಕೊಂಡ ಆದಿತ್ಯ ಠಾಕ್ರೆ, ರಾಹುಲ್‌ ಗಾಂಧಿ ಅವರೊಂದಿಗೆ ಕೆಲಹೊತ್ತು ಹೆಜ್ಜೆ ಹಾಕಿದರು. ಈ ವೇಳೆ ಇಬ್ಬರೂ ನಾಯಕರು ನೆರೆದಿದ್ದ ಜನರತ್ತ ಕೈಬೀಸಿ ಒಗ್ಗಟ್ಟು ಪ್ರದರ್ಶಿಸಿದರು. ಈ ವೇಳೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ‌, ಮಾಜಿ ಶಾಸಕ ಸಚಿನ್ ಅಹಿರ್ ಕೂಡ ಆದಿತ್ಯ ಠಾಕ್ರೆ ಅವರಿಗೆ ಸಾಥ್‌ ನೀಡಿದರು.

ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನೂ ಭಾರತ್‌ ಜೋಡೋ ಯಾತ್ರೆಗೆ ಕಾಂಗ್ರೆಸ್‌ ಆಹ್ವಾನಿಸಿದೆ. ಆದರೆ ಉದ್ಧವ್‌ ಠಾಕ್ರೆ ಯಾತ್ರೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಇನ್ನೂ ಯಾವುದೇ ಖಚಿತತೆ ಇಲ್ಲ. ದೇಶದಲ್ಲಿ ಕೋಮು ಸೌಹಾರ್ದತೆ ಬಯಸುವ ಯಾವುದೇ ವ್ಯಕ್ತಿ ಈ ಯಾತ್ರೆಯಲ್ಲಿ ಪಾಲ್ಗೊಳ್ಳಬಹುದು ಎಂದು ಕಾಂಗ್ರೆಸ್‌ ಘೋಷಿಸಿದೆ.

ಏಕನಾಥ ಶಿಂಧೆ ಬಣದ ಬಂಡಾಯ ಮತ್ತು ಶಿವಸೇನೆ ಪಕ್ಷ ವಿಭಜನೆ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿಂಧೆ ಬಣದ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದು ಭಾರೀ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಆದಿತ್ಯ ಠಾಕ್ರೆ ಅವರು ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗವಹಿಸಿರುವುದು ದೇಶದ ಗಮನ ಸೆಳೆದಿದೆ.

ಮಹಾರಾಷ್ಟ್ರದಲ್ಲಿ ಸದ್ಯದಲ್ಲೇ ಮುಂಬೈ ಮಹಾನಗರ ಪಾಲಿಕೆ (BMC) ಮತ್ತು ಇತರ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಳು ನಡೆಯಲಿವೆ. ಈ ಮಧ್ಯೆ ಆದಿತ್ಯ ಠಾಕ್ರೆ ಇದೀಗ ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗವಹಿಸಿರುವುದು, ಈ ಚುನಾವಣೆಗಳನ್ನು ಕಾಂಗ್ರೆಸ್‌ ಹಾಗೂ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಮೈತ್ರಿ ಮಾಡಿಕೊಂಡು ಸ್ಪರ್ಧಿಸಲಿವೆ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.

ಅಷ್ಟೇ ಅಲ್ಲದೇ ಆದಿತ್ಯ ಠಾಕ್ರೆ ಅವರು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ)ಯಲ್ಲಿ ಸೈದ್ಧಾಂತಿಕ ಬದಲಾವಣೆಯ ಸುಳಿವು ನೀಡಿದ್ದು,ಕಾಂಗ್ರೆಸ್ ಜೊತೆಗಿನ ತಮ್ಮ ಪಕ್ಷದ ಸಂಬಂಧವನ್ನು ಸಾರ್ವಜನಿಕವಾಗಿ ಪುನರುಚ್ಚರಿಸಿದ್ದಾರೆ ಎಂಬುದು ಗಮನಾರ್ಹವಾಗಿದೆ.

ಅವಿಭಜಿತ ಶಿವಸೇನೆಯ ಹಿಂದುತ್ವ ಸಿದ್ಧಾಂತವನ್ನು ಬಹುಮಟ್ಟಿಗೆ ಹಿನ್ನೆಲೆಗೆ ಸರಿಸಿ, ಹೊಸ ಉದಾರವಾದಿ ಶಿವಸೇನೆಯನ್ನು ಕಟ್ಟುವುದು ಆದಿತ್ಯ ಠಾಕ್ರೆ ಕನಸಾಗಿದೆ. ಇದೇ ಕಾರಣಕ್ಕೆ ಅವರು ಕಾಂಗ್ರೆಸ್‌ ಜೊತೆ ಬಹಿರಂಗ ಮೈತ್ರಿಗೆ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

ಆದರೆ ಶಿವಸೇನೆ ಮತ್ತು ಶಿವಸೈನಿಕರಿಂದ ಹಿಂದುತ್ವವನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದಿರುವ ಉದ್ಧವ್‌ ಠಾಕ್ರೆ, ಬಿಜೆಪಿಯಂತ ಸುಳ್ಳು ಹಿಂದುತ್ವವಾದಿಗಳ ವಿರುದ್ಧದ ಹೋರಾಟದಲ್ಲಿ ಮೈತ್ರಿ ಅನಿವಾರ್ಯ ಎಂದು ಹೇಳುವ ಮೂಲಕ, ಭವಿಷ್ಯದ ಚುನಾವಣೆಗಳಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿದ್ದಾರೆ.

ನಿನ್ನೆ(ನ.10- ಗುರುವಾರ) ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್‌ಸಿಪಿ)ದ ನಾಯಕರಾದ ಸುಪ್ರಿಯಾ ಸುಳೆ ಮತ್ತು ಜಿತೇಂದ್ರ ಅವ್ಹಾದ್ ಕೂಡ ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದರು. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲಾಗಿತ್ತಾದರೂ, ಅನಾರೋಗ್ಯದ ಕಾರಣ ಅವರು ಭಾಗವಹಿಸಲು ಸಾಧ್ಯವಾಗಲಿಲ್ಲ.

IPL_Entry_Point