Kannada News  /  Nation And-world  /  Am Mandir 70% Complete, To Be Opened For Public In Jan 2024: Temple Trust
ರಾಮ ಮಂದಿರ ನಿರ್ಮಾಣ ಶೇಕಡ 70ರಷ್ಟು ಪೂರ್ಣ, 2024ರ ಜನವರಿಯಿಂದ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ  (File Photo)
ರಾಮ ಮಂದಿರ ನಿರ್ಮಾಣ ಶೇಕಡ 70ರಷ್ಟು ಪೂರ್ಣ, 2024ರ ಜನವರಿಯಿಂದ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ (File Photo) (HT_PRINT)

Ram Mandir: ರಾಮ ಮಂದಿರ ನಿರ್ಮಾಣ ಶೇಕಡ 70ರಷ್ಟು ಪೂರ್ಣ, 2024ರ ಜನವರಿಯಿಂದ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ

17 March 2023, 14:56 ISTHT Kannada Desk
17 March 2023, 14:56 IST

ರಾಮ ಮಂದಿರದ ಶೇಕಡ 70ರಷ್ಟು ಕೆಲಸ ಕಾರ್ಯಗಳು ಪೂರ್ಣಗೊಂಡಿದ್ದು, ರಾಮ ಲಲ್ಲಾನ ಮೂರ್ತಿಯನ್ನು 2024ರ ಜನವರಿ ತಿಂಗಳ ಮೂರನೇ ವಾರದಲ್ಲಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ

ಅಯೋಧ್ಯೆ: ರಾಮ ಮಂದಿರದ ಶೇಕಡ 70ರಷ್ಟು ಕೆಲಸ ಕಾರ್ಯಗಳು ಪೂರ್ಣಗೊಂಡಿದ್ದು, ರಾಮ ಲಲ್ಲಾನ ಮೂರ್ತಿಯನ್ನು 2024ರ ಜನವರಿ ತಿಂಗಳ ಮೂರನೇ ವಾರದಲ್ಲಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ತಿಳಿಸಿದೆ.

ಜನವರಿ 14-15, 2024ರ ಮಕರ ಸಂಕ್ರಮಣದ ಸಮಯದಲ್ಲಿ ದೇಗುಲದ ಬಾಗಿಲು ಭಕ್ತರ ಪ್ರವೇಶಕ್ಕೆ ಮುಕ್ತವಾಗಲಿದೆ ಎಂದು ತೀರ್ಥಕ್ಷೇತ್ರ ಟ್ರಸ್ಟ್‌ನ ಸದಸ್ಯರಾದ ಶ್ರೀ ಮಣಿರಾಮ್‌ ದಾಸ್‌ ಚವಣಿ ಹೇಳಿದ್ದಾರೆ.

ರಾಮಮಂದಿರದ ಬಾಗಿಲು ತೆರೆಯುವ ದಿನಕ್ಕಾಗಿ ಭಕ್ತರು ಕಾಯುತ್ತಿದ್ದು, ಶೀಘ್ರದಲ್ಲಿ ದೇಗುಲ ಭಕ್ತರ ಪ್ರವೇಶಕ್ಕೆ ತೆರೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ಪ್ರಾದೇಶಿಕ ವಕ್ತಾರರಾದ ಶರದ್‌ ಶರ್ಮಾ ಹೇಳಿದ್ದಾರೆ.

ಮುಂದಿನ ವರ್ಷ ಮೂರನೇ ವಾರದಂದು ಅಯೋಧ್ಯೆಯ ರಾಮಮಂದಿರದ ಬಾಗಿಲು ಭಕ್ತರಿಗೆ ತೆರೆಯಲಿದೆ ಎಂದು ಇತ್ತೀಚೆಗೆ ಟ್ರಸ್ಟ್‌ನ ಖಚಾಂಚಿ ಸ್ವಾಮಿ ಗೋವಿಂದ ದೇವ್‌ ಗಿರಿ ಹೇಳಿದ್ದಾರೆ.

ಅಯೋಧ್ಯೆ ರಾಮಮಂದಿರ ತೆರೆಯುವ ಪೂರ್ವಭಾವಿಯಾಗಿ 2023ರ ಡಿಸೆಂಬರ್‌ನಿಂದಲೇ ಸಂಭ್ರಮದ ಕಾರ್ಯಕ್ರಮಗಳು ಜರುಗಲಿವೆ. 2020ರ ಆಗಸ್ಟ್‌ ತಿಂಗಳಲ್ಲಿ ರಾಮ ಮಂದಿರದ ನಿರ್ಮಾಣ ಕಾರ್ಯಕ್ರಮ ಆರಂಭವಾಗಿತ್ತು. ನಗರದಲ್ಲಿ ರಾಮನವಮಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲು ಸರಕಾರ ಮತ್ತು ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ ಯೋಜಿಸಿವೆ.

ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಮುಂದಿನ ವರ್ಷ ಜನವರಿ 1ರಂದು ರಾಮ ಮಂದಿರ ಸಿದ್ಧವಾಗಲಿದೆ ಎಂಧು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇತ್ತೀಚೆಗೆ ಹೇಳಿದ್ದರು. ತ್ರಿಪುರಾದಲ್ಲಿ ಜನ ವಿಶ್ವಾಸ ಯಾತ್ರೆಯ ಭಾಷಣದಲ್ಲಿ ಅಮಿತ್‌ ಶಾ ಈ ಮಾಹಿತಿ ನೀಡಿದ್ದಾರೆ. ಆದಿತ್ಯನಾಥ್‌ ಯೋಗಿ ಮತ್ತು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ರಾಮಮಂದಿರ ನಿರ್ಮಾಣ ಮಾಡುತ್ತಿದ್ದು, ಮುಂದಿನ ವರ್ಷ ಆರಂಭದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ ಎಂದು ಅವರು ಹೇಳಿದ್ದರು.

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌, 2024ರ ಜನವರಿಯಲ್ಲಿ ಗರ್ಭಗುಡಿಯಲ್ಲಿ ಪ್ರಭು ಶ್ರೀರಾಮನನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದರು.

'ಸಿಂಗ್‌ ದ್ವಾರ್'‌ ಎಂದು ಕರೆಯಲ್ಪಡುವ ರಾಮ ಮಂದಿರದ ಮುಖ್ಯ ದ್ವಾರ ಬಹುತೇಕ ಪೂರ್ಣಗೊಂಡಿದ್ದು, ಮಂದಿರದ 2.77 ಎಕರೆ ಪ್ರದೇಶದಲ್ಲಿ ಗ್ರ್ಯಾನೈಟ್ ಕಲ್ಲಿನಿಂದ ನಿರ್ಮಿಸಿದ ಒಟ್ಟು 392 ಕಂಬಗಳು ತಲೆಎತ್ತಲಿವೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಮಾಹಿತಿ ನೀಡಿತ್ತು.

ಮಂದಿರಕ್ಕೆ ಒಟ್ಟು 12 ಪ್ರವೇಶ ದ್ವಾರಗಳಿದ್ದು, ಎಲ್ಲಾ ಪ್ರವೇಶ ದ್ವಾರಗಳನ್ನು ತೇಗದ ಮರದಲ್ಲಿ ಮಾಡಲಾಗಿದೆ. ಅಲ್ಲದೇ ಸಂಪೂರ್ಣ ಮಂದಿರ ಭೂಕಂಪನ ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಗರ್ಭಗುಡಿಯಲ್ಲಿ 160 ಮತ್ತು ಮೊದಲ ಮಹಡಿಯಲ್ಲಿ 132 ಬೃಹತ್‌ ಕಂಬಗಳು ಇರಲಿವೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಮಾಹಿತಿ ನೀಡಿತ್ತು.

ಮಂದಿರದ ಒಳಾಂಗಣದಲ್ಲಿ ಒಟ್ಟು ಐದು ಮಂದಿರಗಳನ್ನು ನಿರ್ಮಿಸಲಾಗುತ್ತಿದ್ದು, ಪಂಚದೇವ, ಸೂರ್ಯದೇವ ಹಾಗೂ ವಿಷ್ಣುದೇವ ಮಂದಿರಗಳನ್ನೂ ನಿರ್ಮಾಣ ಮಾಡಲಾಗುತ್ತಿದೆ.