ಕನ್ನಡ ಸುದ್ದಿ  /  Nation And-world  /  Earths Rotation Day January 8, 2023: History And Interesting Facts, What Will Happen Earth Stop Rotating?

Earth's Rotation Day: ಇಂದು ಭೂಮಿ ತಿರುಗುವ ದಿನ, ಭೂಮಿ ತನ್ನ ಕಕ್ಷೆಯಲ್ಲಿ ತಿರುಗುವುದನ್ನು ನಿಲ್ಲಿಸಿದರೆ ಏನಾಗಬಹುದು?

Earth's Rotation Day: ಎಲ್ಲಾದರೂ ಭೂಮಿ ತಿರುಗುವುದನ್ನು ನಿಲ್ಲಿಸಿದರೆ ಮನುಷ್ಯರು, ಪ್ರಾಣಿಗಳು, ಮನೆ, ಮರಗಿಡಗಳು ಸೇರಿದಂತೆ ವಸ್ತುಗಳು ಪೂರ್ವಕ್ಕೆ ಗಂಟೆಗೆ ಸಾವಿರ ಕಿ.ಮೀ. ವೇಗದಲ್ಲಿ ಹಾರಬಹುದು.

ಇಂದು ಭೂಮಿ ತಿರುಗುವ ದಿನ, ಭೂಮಿ ತನ್ನ ಕಕ್ಷೆಯಲ್ಲಿ ತಿರುಗುವುದನ್ನು ನಿಲ್ಲಿಸಿದರೆ ಏನಾಗಬಹುದು?
ಇಂದು ಭೂಮಿ ತಿರುಗುವ ದಿನ, ಭೂಮಿ ತನ್ನ ಕಕ್ಷೆಯಲ್ಲಿ ತಿರುಗುವುದನ್ನು ನಿಲ್ಲಿಸಿದರೆ ಏನಾಗಬಹುದು?

ಇಂದು ಭೂಮಿಯ ತಿರುಗುವಿಕೆ ದಿನ (Earth's Rotation Day). ಪ್ರತಿವರ್ಷ ಜನವರಿ 8ರಂದು ಜಗತ್ತಿನಾದ್ಯಂತ ಭೂಮಿಯ ಚಲನೆ ದಿನ, ಭೂಮಿಯ ತಿರುಗುವಿಕೆ ದಿನವಾಗಿ ಆಚರಿಸಲಾಗುತ್ತದೆ. ಪ್ರತಿದಿನದಂತೆ ಈ ದಿನವೂ ತನ್ನ ಕಕ್ಷೆಯಲ್ಲಿ ಭೂಮಿ ಸಹಜವಾಗಿ ತಿರುಗುತ್ತಿದೆ. ಹೀಗಿದ್ದರೂ, ಈ ದಿನವನ್ನು ಏಕೆ ಭೂಮಿಯ ಚಲನೆ ದಿನವಾಗ ಆಚರಿಸಲಾಗುತ್ತದೆ? ಎಂಬ ಮಾಹಿತಿಯೊಂದಿಗೆ ಭೂಮಿ ತನ್ನ ಕಕ್ಷೆಯಲ್ಲಿ ಸುತ್ತುವುದನ್ನು ನಿಲ್ಲಿಸಿದರೆ ಏನಾಗಬಹುದು ಎಂಬ ಮಾಹಿತಿಯೂ ಇಲ್ಲಿದೆ.

ಭೂಮಿಯ ತಿರುಗುವಿಕೆ ಎಂದರೇನು?

ನಾವು ತಿರುಗುತ್ತಿರುವ ಭೂಮಿಯ ಮೇಲೆ ವಾಸಿಸುತ್ತಿದ್ದೇವೆ ಎಂಬ ಮಾಹಿತಿ ಎಲ್ಲರಿಗೂ ತಿಳಿದಿರಬಹುದು. ಭೂಗ್ರಹವು ತನ್ನ ಸ್ವಂತ ಅಕ್ಷದಲ್ಲಿ ಸುತ್ತುತ್ತದೆ. ಪ್ರೊಗಾರ್ಡ್‌ ಚಲನೆಯಲ್ಲಿ ಭೂಮಿಯು ಪೂರ್ವಕ್ಕೆ ತಿರುಗುತ್ತದೆ. ಉತ್ತರ ಧ್ರುವ ಸ್ಟಾರ್‌ ಪೋಲಾರಿಸ್‌ನಿಂದ ನೋಡಿದರೆ ಭೂಮಿಯು ಅಪ್ರದಕ್ಷಿಣವಾಗಿ ಸುತ್ತುತ್ತದೆ. ಭೂಮಿಯು ತನ್ನ ಅಕ್ಷದ ಮೇಲೆ ಪಶ್ಚಿಮದಿಂದ ಪೂರ್ವಕ್ಕೆ ಮೇಲ್ಭಾಗದಂತೆ ಸುತ್ತುತ್ತದೆ. ಈ ಚಲನೆಯನ್ನು ಭೂಮಿಯ ತಿರುಗುವಿಕೆ ಎಂದು ಕರೆಯಲಾಗುತ್ತದೆ. ತನ್ನ ಅಕ್ಷದ ಮೇಲೆ ತಿರುಗುತ್ತಿರುವಾಗ, ಭೂಮಿಯು ಅಂಡಾಕಾರದ ಪಥದಲ್ಲಿ ಸೂರ್ಯನನ್ನು ಸುತ್ತುತ್ತದೆ ಮತ್ತು 365 ದಿನಗಳು ಮತ್ತು 6 ಗಂಟೆಗಳಲ್ಲಿ ಒಂದು ಸುತ್ತನ್ನು ಪೂರ್ಣಗೊಳಿಸುತ್ತದೆ. ಭೂಮಿಯಿಂದ ಗುರುತಿಸಲ್ಪಟ್ಟ ದೀರ್ಘವೃತ್ತದ ಮಾರ್ಗವನ್ನು ಅದರ ಕಕ್ಷೆ ಎಂದು ಕರೆಯಲಾಗುತ್ತದೆ. ಭೂಮಿಯ ಈ ಚಲನೆಯನ್ನು ಕ್ರಾಂತಿ ಎಂದು ಕರೆಯಲಾಗುತ್ತದೆ.

ಭೂಮಿಯು ತನ್ನ ಅಕ್ಷದಲ್ಲಿ ತಿರುಗಲು ಭರ್ತಿ 24 ಗಂಟೆ ತೆಗೆದುಕೊಳ್ಳುವುದಿಲ್ಲ. 23 ಗಂಟೆಗಳು, 56 ನಿಮಿಷಗಳು ಮತ್ತು 4 ಸೆಕೆಂಡಿನಲ್ಲಿ ತನ್ನ ಅಕ್ಷದಲ್ಲಿ ಒಂದು ಸುತ್ತು ಬರುತ್ತದೆ.

ಏಕೆ ಈ ದಿನ?

ಪ್ರತಿದಿನ ಸಹಜವಾಗಿ ಭೂಮಿ ಸುತ್ತುತ್ತದೆ. ಆದರೆ, ಜನವರಿ 8ರಂದು ವಿಶ್ವ ಭೂ ತಿರುಗುವಿಕೆ ದಿನವಾಗಿ ಆಯ್ಕೆ ಮಾಡಲು ಕಾರಣವಿದೆ. ಫ್ರೆಂಚ್ ಭೌತಶಾಸ್ತ್ರಜ್ಞ ಲಿಯಾನ್ ಫೌಕಾಲ್ಟ್ ಅವರು ಭೂಮಿಯ ತಿರುಗುವಿಕೆ ಕುರಿತು ಪ್ರಾತ್ಯಕ್ಷಿತೆ ಪರಿಚಯಿಸಿದ ನೆನಪಿಗೆ ಈ ದಿನವನ್ನು ವಿಶ್ವ ಭೂತಿರುಗುವಿಕೆ ದಿನವಾಗಿ ಆಚರಿಸಲಾಗುತ್ತದೆ. 1851 ರಲ್ಲಿ ಈ ದಿನದಂದು ಇವರು ಪ್ಯಾರಿಸ್‌ನ ಪ್ಯಾಂಥಿಯಾನ್‌ನ ಮೇಲ್ಭಾಗದಿಂದ ಸೀಸ ತುಂಬಿದ ಹಿತ್ತಾಳೆಯ ಚೆಂಡಿನ ಮೂಲಕ ಭೂಮಿಯ ಚಲನೆಯನ್ನು ಜಗತ್ತಿಗೆ ಅರ್ಥ ಮಾಡಿಸಿದರು. ಫೌಕಾಲ್ಟ್ ಪೆಂಡುಲಮ್ (foucault pendulum) ಎಂದು ಕರೆಯಲ್ಪಡುವ ಈ ಸಾಧನವು ಭೂಮಿಯ ತಿರುಗುವಿಕೆ ಕುರಿತು ಸ್ಪಷ್ಟ ಚಿತ್ರಣ ನೀಡುತ್ತದೆ. ಈಗ ಜಗತ್ತಿನ ಬಹುತೇಕ ವಸ್ತು ಸಂಗ್ರಹಾಲಯಗಳಲ್ಲಿ foucault pendulum ಇದೆ.

ಭೂಮಿ ವೇಗವಾಗಿ ಸುತ್ತುತ್ತಿದೆ...

ಕಳೆದ 50 ವರ್ಷಕ್ಕೆ ಹೋಲಿಸಿದರೆ ಈಗ ಭೂಮಿಯ ತಿರುಗುವ ವೇಗ ಹೆಚ್ಚಾಗಿದೆ. ಸಾಮಾನ್ಯವಾಗಿ ಭೂಮಿಯು ಒಂದು ಪೂರ್ಣಸುತ್ತಿಗೆ 24 ಗಂಟೆ ತೆಗೆದುಕೊಳ್ಳುತ್ತದೆ. 2020ರ ಬಳಿಕ ಈ ಸಮಯವು 0.5 ಸೆಕೆಂಡ್‌ನಷ್ಟು ಕಡಿಮೆಯಾಗಿದೆ. 1960ರಲ್ಲಿ ಭೂಮಿಯ ಸುತ್ತುವಿಕೆ ಸಮಯವು 1.4602 ಮಿ.ಸೆಕೆಂಡ್‌ನಷ್ಟು ಕಡಿಮೆಯಾಗಿತ್ತು. ಕೆಲವು ಮಿಲಿ ಸೆಕೆಂಡ್‌ಗಳಷ್ಟು ಕಾಲ ಭೂಮಿ ವೇಗವಾಗಿ ತಿರುಗಿದರೆ ಅಥವಾ ನಿಧಾನವಾಗಿ ಚಲಿಸಿದರೆ ನಮ್ಮ ಅರಿವಿಗೆ ಬಾರದೆ ಇರಬಹುದು. ಆದರೆ, ಭೂಮಿಯ ಜನಜೀವನದ ಮೇಲೆ ಇದರ ಪರಿಣಾಮ ಬೀರುತ್ತದೆ. ಈ ಭೂಮಿಯಲ್ಲಿ ಕಂಪ್ಯೂಟರ್‌ ಮತ್ತು ಇತರೆ ತಂತ್ರಜ್ಞಾನ ಜಗತ್ತಿನ ಮೇಲೆ ಪರಿಣಾಮ ಬೀರುತ್ತದೆ. ಒಂದು ವೇಳೆ ಭೂಮಿ ಕೆಲವು ಮಿಲಿ ಸೆಕೆಂಡ್‌ ವೇಗವಾಗಿ ಅಥವಾ ನಿಧಾನವಾಗಿ ತಿರುಗಿದರೆ ಸ್ವಾಯತ್ತವಾಗಿ ಕಾರ್ಯ ನಿರ್ವಹಿಸುವ ಕೆಲವು ಕಂಪ್ಯೂಟರ್ ಪ್ರೋಗ್ರಾಂಗಳು ಕ್ರಾಷ್ ಆಗಬಹುದು.

ಭೂಮಿ ತಿರುಗುವುದನ್ನು ನಿಲ್ಲಿಸಿದರೆ ಏನಾಗಬಹುದು?

ಎಲ್ಲಾದರೂ ಭೂಮಿ ತಿರುಗುವುದನ್ನು ನಿಲ್ಲಿಸಿದರೆ ಈ ಮುಂದಿನ ಘಟನೆಗಳು ನಡೆಯಬಹುದು...

- ಮನುಷ್ಯರು, ಪ್ರಾಣಿಗಳು, ಮನೆ, ಮರಗಿಡಗಳು ಸೇರಿದಂತೆ ವಸ್ತುಗಳು ಪೂರ್ವಕ್ಕೆ ಗಂಟೆಗೆ ಸಾವಿರ ಕಿ.ಮೀ. ವೇಗದಲ್ಲಿ ಹಾರಬಹುದು.

- ಭಾರೀ ಅಲೆಗಳು ಉಂಟಾಗಬಹುದು, ಸುನಾಮಿಯಿಂದ ನಗರಗಳು ಕೊಚ್ಚಿ ಹೋಗಬಹುದು. ನೆಲ ಮತ್ತು ಸಮುದ್ರ ಒಂದಾಗಬಹುದು.

- ಭಾರೀ ಗಾಳಿ ಬೀಸಬಹುದು. ಭೂಮಿಯಲ್ಲಿರುವುದೆಲ್ಲವೂ ದಿಕ್ಕುದಿಸೆಯಿಲ್ಲದೆ ಚೆಲ್ಲಾಪಿಲ್ಲಿಯಾಗಿ ಹಾರುತ್ತಿರಬಹುದು.

- ಸಮುದ್ರದ ನೀರೆಲ್ಲ ಭೂಮಿಯ ಎರಡು ಧ್ರುವದಲ್ಲಿ ಸಂಗ್ರಹವಾಗಿ ಹೊಸ ಖಂಡವೇ ರಚನೆಯಾಗಬಹುದು.

- ಅಂಡಾಕಾರದ ಭೂಮಿಯ ರೂಪ ಬದಲಾಗಬಹುದು.

- ಭೂಮಿಯ ಒಂದು ಕಡೆ ಹಗಲು ಮತ್ತು ಮತ್ತೊಂದು ಕಡೆ ರಾತ್ರಿ ಕಾಯಂ ಆಗಿ ಇರಬಹುದು.

- ಆಕಾಶದಿಂದ ಚಂದ್ರ ಉರುಳಿ ಭೂಮಿಗೆ ಅಪ್ಪಳಿಸಬಹುದು.

ಭೂಮಿಯ ಕುರಿತು ಈ ಮಾಹಿತಿ ನಿಮಗಿದು ಗೊತ್ತಿರಲಿ

- ಸೂರ್ಯನ ಹತ್ತಿರದ ಮೂರನೇ ಗ್ರಹ. ಬುಧ ಮತ್ತು ಶುಕ್ರ ಕ್ರಮವಾಗಿ ಹತ್ತಿರದ ಮೊದಲನೆ ಮತ್ತು ಎರಡನೇ ಗ್ರಹಗಳಾಗಿವೆ.

- ಗೊತ್ತಿರುವ ಗ್ರಹಗಳಲ್ಲಿ ಭೂಮಿಯಲ್ಲಿ ಮಾತ್ರ ನೀರು ದ್ರವ, ಘನ ಮತ್ತು ಅನಿಲ ರೂಪದಲ್ಲಿ ಇದೆ.

- ನಾವು ಸೂರ್ಯನ ಸುತ್ತ ಗಂಟೆಗೆ 1,07,182 ಕಿ.ಮೀ. ಕಿ.ಮೀ. ವೇಗದಲ್ಲಿ ಸಂಚರಿಸುತ್ತೇವೆ.

- ಭೂಮಿ ಸೌರಮಂಡಲದ 5ನೇ ದೊಡ್ಡಗ್ರಹ

- ಭೂಮಿಯ ಮೇಲೆ ನಾಲ್ಕನೇ ಮೂರರಷ್ಟು ಭಾಗ ನೀರಿನಿಂದ ಆವೃತವಾಗಿದೆ.

- ಬೆಳಕು ಸೂರ್ಯನಿಂದ ಭೂಮಿಗೆ ತಲುಪಲು ಎಂಟೂವರೆ ನಿಮಿಷ ಬೇಕಾಗುತ್ತದೆ.

- ಭೂಮಿಯ ವಾತಾವರಣದ ಮೊದಲ ಹಂತವು ತನ್ನ ಮೇಲ್ಮೈನಿಂದ ಸುಮಾರು 50 ಕಿ.ಮೀ.ವರೆಗೆ ಇದೆ. ಒಟ್ಟಾರೆ ಭೂಮಿಯ ವಾತಾವರಣವು ಅಂತರಿಕ್ಷದಲ್ಲಿ 10,000 ಕಿ.ಮೀ.ವರೆಗಿದೆ.

- ಭೂಮಿಯ ಒಂದು ವರ್ಷವೆಂದರೆ ನಾವು ಸಾಮಾನ್ಯವಾಗಿ 365 ದಿನಗಳು ಎನ್ನುತ್ತೇವೆ. ಆದರೆ, ಒಂದು ವರ್ಷವೆಂದರೆ 365.2564 ದಿನವಾಗಿದೆ. ಉಳಿದ .2564 ದಿನಗಳು ಸೇರಿ ನಾಲ್ಕು ವರ್ಷಗಳಿಗೊಮ್ಮೆ ಫೆಬ್ರವರಿಯಲ್ಲಿ ಲೀಪ್‌ ಇಯರ್‌ ಆಗುತ್ತದೆ.

- ಭೂಮಿಯ ತಿರುಗುವಿಕೆ ತುಂಬಾ ನಿಧಾನ. ಇದು 100 ವರ್ಷಕ್ಕೆ ಸುಮಾರು 17 ಮಿಲಿಸೆಕೆಂಡ್‌ನಷ್ಟು ರೊಟೇಷನ್‌ ಆಗುತ್ತದೆ. ಹೀಗಾಗಿ, ಈಗಿನ ದಿನದ 24 ಗಂಟೆಯು, 25 ಗಂಟೆಯ ಸ್ಥಿತಿಗೆ ತಲುಪಲು ಸುಮಾರು 140 ದಶಲಕ್ಷ ವರ್ಷ ಕಳೆಯಬೇಕು.

-ಭೂಮಿಯ ಶೇಕಡ 78ರಷ್ಟು ಭಾಗವು ನೈಟ್ರೋಜನ್‌ನಿಂದ ಆವೃತ್ತವಾಗಿದೆ. ಶೇಕಡ 21 ಆಮ್ಲಜನಕವಿದೆ.

IPL_Entry_Point