Imran Khan: ಇಸ್ಲಾಮಾಬಾದ್‌ಗೆ ತೆರಳುತ್ತಿದ್ದಾಗ ಇಮ್ರಾನ್ ಖಾನ್ ಬೆಂಗಾವಲು ಪಡೆಯ ಕಾರು ಅಪಘಾತ
ತೋಷಖಾನಾ ಪ್ರಕರಣದ ವಿಚಾರಣೆಗೆ ಇಸ್ಲಾಮಾಬಾದ್‌ಗೆ ತೆರಳುತ್ತಿದ್ದ ವೇಳೆ ಇಮ್ರಾನ್ ಖಾನ್ ಬೆಂಗಾವಲು ಪಡೆಯ ವಾಹನ ಅಪಘಾತ ಸಂಭವಿಸಿದೆ.
ನವದೆಹಲಿ: ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರ ಬೆಂಗಾವಲು ಪಡೆಯ ವಾಹನವು ಇಂದು ಅಪಘಾತಗೊಂಡಿದೆ. ತೋಷಖಾನಾ ಪ್ರಕರಣದ ವಿಚಾರಣೆಗೆ ಇಸ್ಲಾಮಾಬಾದ್‌ಗೆ ತೆರಳುತ್ತಿದ್ದ ವೇಳೆ ಇಮ್ರಾನ್ ಖಾನ್ ಬೆಂಗಾವಲು ಪಡೆಯ ವಾಹನ ಅಪಘಾತ ಸಂಭವಿಸಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.
"ಎಲ್ಲಾ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದರೂ ಪಿಡಿಎಂ ಸರಕಾರ ನನ್ನನ್ನು ಬಂಧಿಸಲು ಉದ್ದೇಶಿಸಿದೆ ಎನ್ನುವುದು ಸ್ಪಷ್ಟವಾಗಿದೆ. ಇವರ ದುಷ್ಕೃತ್ಯ ತಿಳಿದಿದ್ದರೂ ನಾನು ಇಸ್ಲಾಮಾಬಾದ್‌ಗೆ, ಕೋರ್ಟ್‌ಗೆ ಹೋಗುತ್ತಿದ್ದೇನೆ. ಕಾನೂನಿನ ನಿಯಮಗಳನ್ನು ನಂಬುತ್ತೇನೆ. ಈ ವಂಚಕರ ಕೆಟ್ಟ ಉದ್ದೇಶ ಎಲ್ಲರಿಗೂ ಸ್ಪಷ್ಟವಾಗಿದೆ" ಎಂದು ಇಮ್ರಾನ್ ಖಾನ್ ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದರು.
"ನಮ್ಮ ಚುನಾವಣಾ ಪ್ರಚಾರವನ್ನು ಹತ್ತಿಕ್ಕುವ ಪ್ರಯತ್ನವಾಗಿ ಸರಕಾರವು ನನ್ನನ್ನು ಬಂಧಿಸಲು ಪ್ರಯತ್ನಿಸುತ್ತಿದೆ" ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಎರಡು ದಿನದ ಹಿಂದೆ ಇಮ್ರಾನ್ ಖಾನ್ ಅವರನ್ನು ಬಂಧಿಸಲು ಸಾಧ್ಯವಾಗದೆ ಪೊಲೀಸರು ವಾಪಸ್ ತೆರಳಿದ್ದರು. ಇಮ್ರಾನ್ ಖಾನ್ ಬೆಂಬಲಿಗರು ಭಾರೀ ಪ್ರತಿಭಟನೆ ನಡೆಸಿದ ಕಾರಣ ಪೊಲೀಸರು ಕಾರ್ಯಾಚರಣೆ ನಡೆಸಿ ವಾಪಸ್ ಆಗಿದ್ದರು. ಇದೇ ಸಮಯದಲ್ಲಿ ಇಮ್ರಾನ್ ಖಾನ್ ಅವರನ್ನು ಗುರುವಾರದವರೆಗೆ ಬಂಧಿಸದಂತೆ ಲಾಹೋರ್ ಹೈಕೋರ್ಟ್ ಕೂಡ ಆದೇಶ ನೀಡಿದೆ.
ಪೊಲೀಸರು ಇಮ್ರಾನ್ ಖಾನ್ ಬಂಧನ ಹಿಂತೆಗೆದುಕೊಳ್ಳುತ್ತಿದ್ದಂತೆ ಮಾಜಿ ಪ್ರಧಾನಿಯು ಗ್ಯಾಸ್ ಮಾಸ್ಕ್ ಧರಿಸಿ ಮನೆಯಿಂದ ಹೊರಕ್ಕೆ ಬಂದಿದ್ದರು. ಬಳಿಕ ಅವರು ತಮ್ಮ ಬೆಂಬಲಿಗರ ಜತೆ ಗ್ಯಾಸ್ ಮಾಸ್ಕ್ ಧರಿಸಿಯೇ ಮಾತನಾಡಿದ್ದರು.
ಪೊಲೀಸರು ಮತ್ತು ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಕಾರ್ಯಕರ್ತರ ನಡುವೆ ನಡೆದ ಸಂಘರ್ಷದಲ್ಲಿ ಹಲವು ಜನರು ಗಾಯಗೊಂಡಿದ್ದರು. ಪ್ರತಿಭಟನೆಯ ಕಿಡಿ ಪಾಕಿಸ್ತಾನದಾದ್ಯಂತ ಹಬ್ಬಿತ್ತು.
ನನ್ನ ಹತ್ಯೆ ಮಾಡುವುದು ಪೊಲೀಸರ ಉದ್ದೇಶ: ಇಮ್ರಾನ್ ಖಾನ್
ತನ್ನನ್ನು ಬಂಧಿಸುವುದು ಕೇವಲ ನಾಟಕವಾಗಿದೆ. ಅಪಹರಿಸಿ ಹತ್ಯೆ ಮಾಡುವ ಉದ್ದೇಶವನ್ನು ಇವರು ಹೊಂದಿದ್ದಾರೆ ಎಂದು ಸರಕಾರದ ವಿರುದ್ಧದ ಇಮ್ರಾನ್ ಖಾನ್ ದೂರಿದ್ದಾರೆ. ಕಳೆದ ವರ್ಷ ಇಮ್ರಾನ್ ಖಾನ್ ಅವರನ್ನು ಅವಿಶ್ವಾಸ ಮತದ ಮೂಲಕ ಪದಚ್ಯುತಿಗೊಳಿಸಲಾಗಿತ್ತು. ಮತ್ತೆ ಚುನಾವಣೆ ಗೆದ್ದು ಪ್ರಧಾನಿಯಾಗುವ ಸಾಧ್ಯತೆ ಇರುವುದರಿಂದ ನನ್ನನ್ನು ಕಾನೂನು ಪ್ರಕರಣಗಳಲ್ಲಿ ಸಿಲುಕಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಅವರು ದೂರಿದ್ದಾರೆ.
ಸರಕಾರವು ನನ್ನನ್ನು ಹತ್ಯೆ ಮಾಡಲು ಯೋಜಿಸಿದೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದಾರೆ. ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದಾಗ ಸ್ವೀಕರಿಸಿದ ಉಡುಗೊರೆಗಳನ್ನು, ಅವುಗಳ ಮಾರಾಟದಿಂದ ಪಡೆದ ಲಾಭವನ್ನು ಘೋಷಿಸದ ಆರೋಪ ಇವರ ಮೇಲಿದೆ.
ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದ ಇಮ್ರಾನ್ ಖಾನ್ ಅವರನ್ನು ಬಂಧಿಸಲು ಇತ್ತೀಚೆಗೆ ಪೊಲೀಸ್ ತಂಡವು ಪ್ರಯತ್ನಿಸಿತ್ತು. ಆದರೆ, ಇಮ್ರಾನ್ ಖಾನ್ ನಿವಾಸಕ್ಕೆ ಪೊಲೀಸರು ಆಗಮಿಸಿದಾಗ ಮನೆಯ ಹೊರಗೆ ಪಿಟಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಆ ಸಮಯದಲ್ಲಿ ಇಮ್ರಾನ್ ಖಾನ್ ತನ್ನ ಮನೆಯಿಂದ ಎಸ್ಕೇಪ್ ಆಗಿದ್ದರು.
ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸ್ವೀಕರಿಸಿದ ದುಬಾರಿ ಗ್ರಾಫ್ ಕೈಗಡಿಯಾರ ಒಳಗೊಂಡಂತೆ ಪಡೆದ ಗಿಫ್ಟ್‌ಗಳ ಕುರಿತಾದ ಪ್ರಕರಣ ಇದಾಗಿದೆ. ಈ ಉಡುಗೊರೆಗಳನ್ನು ರಾಜ್ಯ ಠೇವಣಿ (ತೋಷಖಾನಾ) ದಿಂದ ರಿಯಾಯಿತಿ ದರದಲ್ಲಿ ಮಾರಾಟ ಮಾಡಿದ್ದರು.
ಪಿಟಿಐ ಮುಖ್ಯಸ್ಥರಾದ ಇಮ್ರಾನ್ ಖಾನ್ ಮೂರನೇ ಬಾರಿಗೆ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ನಂತರ ಈ ತಿಂಗಳ ಆರಂಭದಲ್ಲಿ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಲಾಗಿತ್ತು.