India-China border dispute: ಚೀನಾದ್ದು ಆಕ್ರಮಣ ಮತ್ತು ಇದಕ್ಕೆ ಯುದ್ಧವೇ ಪರಿಹಾರ!- ಸುಬ್ರಮಣಿಯನ್ ಸ್ವಾಮಿ ಟ್ವೀಟ್!
India-China border dispute: ಬಾಲಿಯಲ್ಲ ಜಿ20 ಶೃಂಗದ ಸಂದರ್ಭದಲ್ಲಿ ಉಕ್ರೇನ್-ರಷ್ಯಾ ಯುದ್ಧದ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿತ್ತು. ಇದೇ ಸಂದರ್ಭದಲ್ಲಿ ಉಕ್ರೇನ್ -ರಷ್ಯಾ ಯುದ್ಧದ ವಿಚಾರವನ್ನು ಸಾರ್ವತ್ರೀಕರಣಗೊಳಿಸಲಾಗದು ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ. ವಿವರ ವರದಿ ಇಲ್ಲಿದೆ.
ನವದೆಹಲಿ: ಭಾರತ ಜಿ20ಯ ಅಧ್ಯಕ್ಷತೆ ವಹಿಸುವುದಕ್ಕೆ ಬಾಲಿಯಲ್ಲಿ ನಡೆದ ಶೃಂಗದಲ್ಲಿ, ಪ್ರಧಾನಿ ನರೇಂದ್ರ ಮೋದಿ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಉಲ್ಲೇಖಿಸಿದ್ದರು. ಇದು ಯುದ್ಧದ ಯುಗವಲ್ಲ. ಮಾತುಕತೆ ಮೂಲಕ ಬಿಕ್ಕಟ್ಟು ಬಗೆಹರಿಸಿಕೊಂಡು ಪ್ರಗತಿಪಥದಲ್ಲಿ ಮುನ್ನಡೆಯಬೇಕು ಎಂದು ಹೇಳಿದ್ದರು.
ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ. ಉಕ್ರೇನ್-ರಷ್ಯಾ ಯುದ್ಧದ ಬಗ್ಗೆ ಭಾರತದ ಕಾಳಜಿಯನ್ನು ಉಲ್ಲೇಖಿಸಿದ ಸುಬ್ರಮಣಿಯನ್ ಸ್ವಾಮಿ (ಸುಬ್ರಮಣಿಯನ್ ಸ್ವಾಮಿ) ಟ್ವೀಟ್‌ನಲ್ಲಿ ಬರೆದಿರುವುದು ಹೀಗೆ - ಪ್ರತಿ ಸಮಸ್ಯೆಯನ್ನು ಪರಿಹರಿಸಲು ಅದನ್ನು ಒಂದು ತತ್ತ್ವವನ್ನಾಗಿ ಮಾಡಲು ಸಾಧ್ಯವಿಲ್ಲ. 1996ರ ಒಪ್ಪಂದದ ನಂತರವೂ ಚೀನಾ 2020ರಲ್ಲಿ ಲಡಾಖ್ ಪ್ರದೇಶದಲ್ಲಿ ಎಲ್ಒಸಿ ದಾಟಿ ಭೌಗೋಳಿಕ ಪ್ರದೇಶ ಆಕ್ರಮಿಸಿಕೊಂಡಿದೆ. ಇದು ಆಕ್ರಮಣಕಾರಿ ನಡೆ ಮತ್ತು ಇದಕ್ಕೆ ಯುದ್ಧವೊಂದೇ ಪರಿಹಾರ.
ಬಾಲಿಯಲ್ಲಿ ರಷ್ಯಾ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಸಲಹೆ
ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ-20 ರಾಷ್ಟ್ರಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ, ಇದು ಯುದ್ಧದ ಯುಗವಲ್ಲ ಎಂದು ಹೇಳಿದ್ದರು.
ಜಿ-20 ದೇಶಗಳು ಉಕ್ರೇನ್ ಮೇಲಿನ ರಷ್ಯಾದ ದಾಳಿಯ ಹೇಳಿಕೆಯ ಬಗ್ಗೆ ಚರ್ಚಿಸುತ್ತಿದ್ದವು. ಪಾಶ್ಚಿಮಾತ್ಯ ದೇಶಗಳು ಮತ್ತು ರಷ್ಯಾದ ನಡುವೆ ಒಮ್ಮತ ತಲುಪಲು ಸಾಧ್ಯವಾಗಲಿಲ್ಲ. ಈ ವೇಳೆ ಪ್ರಧಾನಿ ಮೋದಿ ಮಾತನಾಡಿ, ಸಮಸ್ಯೆಗೆ ಯುದ್ಧವೇ ಪರಿಹಾರವಾಗದು. ಮೊದಲಿನಿಂದಲೂ ರಷ್ಯಾ-ಉಕ್ರೇನ್ ವಿಷಯದಲ್ಲಿ ಭಾರತದ ನಿಲುವು ಇದೇ ಆಗಿದೆ ಎಂದು ಪ್ರತಿಪಾದಿಸಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಇದೇ ಹೇಳಿಕೆಯನ್ನು ಆಧರಿಸಿ ಸುಬ್ರಮಣಿಯನ್ ಸ್ವಾಮಿ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತ-ಚೀನಾ ಗಡಿ ವಿಚಾರ ಸುಬ್ರಮಣಿಯನ್ ಸ್ವಾಮಿ ಹೇಳಿಕೆ
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಭಾರತ - ಚೀನಾ ಗಡಿ ವಿಚಾರವಾಗಿ ಮೊದಲ ಬಾರಿಗೆ ಈ ವಿಷಯದ ಬಗ್ಗೆ ಮಾತನಾಡಿರುವುದಲ್ಲ. ಭಾರತ-ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿ ಸುಬ್ರಮಣಿಯನ್ ಸ್ವಾಮಿ ನಿರಂತರ ಕಠಿಣ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಬಿಜೆಪಿಯ ಹಿರಿಯ ನಾಯಕರಾಗಿರುವ ಅವರು, ಈ ವಿಷಯದ ಬಗ್ಗೆ ತಮ್ಮದೇ ಪಕ್ಷದ ವಿರುದ್ಧ, ಪ್ರಧಾನಿ ಮೋದಿಯವರ ವಿರುದ್ಧವೂ ಕಟು ನಿಲುವಿನೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಉಭಯ ದೇಶಗಳು 1996 ರಲ್ಲಿ ಒಪ್ಪಂದದ ನಂತರವೂ ಚೀನಾ ಅದನ್ನು ಉಲ್ಲಂಘಿಸಿ 2020 ರಲ್ಲಿ ಎಲ್ಒಸಿ ರೇಖೆಯನ್ನು ದಾಟಿತು. ಈ ಬಗ್ಗೆ ಭಾರತ ಶಾಂತವಾಗಿರಬಾರದು ಆದರೆ ಯುದ್ಧದ ಮೂಲಕ ಈ ಸಮಸ್ಯೆಗೆ ಪರಿಹಾರವನ್ನು ನಾವು ನೋಡಬೇಕು ಎಂದು ಹೇಳಿದ್ದರು.
ಬಾಲಿಯಲ್ಲಿ ಕ್ಸಿ ಜಿನ್‌ಪಿಂಗ್ - ಮೋದಿ ಭೇಟಿ
ಇಂಡೋನೇಷ್ಯಾದ ಬಾಲಿಯಲ್ಲಿ ಮಂಗಳವಾರ ನಡೆದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿಯಾದರು. ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆ ಮತ್ತು ಚೀನಾ ಸೇನೆಯ ನಡುವಿನ ಸಂಘರ್ಷದ ನಂತರ ಈ ಸಭೆ ಹೆಚ್ಚು ಚರ್ಚೆಯಾಗಿದೆ. ಶೃಂಗಸಭೆಯ ಸಂದರ್ಭದಲ್ಲಿ ಆಯೋಜಿಸಲಾದ ಔತಣಕೂಟದಲ್ಲಿ ಈ ಸಭೆ ನಡೆಯಿತು.
ವಿಭಾಗ