ಲೋಕಸಭಾ ಚುನಾವಣೆ; 2ನೇ ಹಂತದ ನಾಮಪತ್ರ ಸಲ್ಲಿಕೆ ಶುರು, 89 ಕ್ಷೇತ್ರಗಳ ಮತದಾನ ವೇಳಾಪಟ್ಟಿಯ ವಿವರ ಇಲ್ಲಿದೆ
ಲೋಕಸಭೆ ಚುನಾವಣೆ 2024ರ ಎರಡನೇ ಹಂತದಲ್ಲಿ 89 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಇಂದು ಶುರುವಾಗುತ್ತಿದ್ದು, ಏಪ್ರಿಲ್ 26ಕ್ಕೆ ಮತದಾನ ನಡೆಯಲಿದೆ. ಯಾವ್ಯಾವ ರಾಜ್ಯಗಳ ಎಷ್ಟು ಲೋಕಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 2ನೇ ಹಂತದ ಲೋಕಸಭಾ ಚುನಾವಣೆಯ ವೇಳಾಪಟ್ಟಿ (Lok Sabha Elections 2024 2nd Phase Schedule) ಮತ್ತು ಇತರೆ ವಿವರ ಇಲ್ಲಿದೆ.
ಬೆಂಗಳೂರು/ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಎರಡನೇ ಹಂತದಲ್ಲಿ 89 ಕ್ಷೇತ್ರಗಳಲ್ಲಿ ಇಂದಿನಿಂದ ನಾಮಪತ್ರ ಸಲ್ಲಿಕೆ ಶುರುವಾಗುತ್ತಿದೆ. ಭಾರತದ ಚುನಾವಣಾ ಆಯೋಗ ಈಗಾಗಲೇ ಪ್ರಕಟಿಸಿರುವ ವೇಳಾಪಟ್ಟಿ (Lok Sabha Elections 2024 Schedule) ಪ್ರಕಾರ, ಅಧಿಸೂಚನೆ ಪ್ರಕಟವಾಗಿದ್ದು, ನಾಮಪತ್ರ ಸಲ್ಲಿಕೆ ಶುರುವಾಗಲಿದೆ.
ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 4 ಆಗಿರುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಏಪ್ರಿಲ್ 6 ರಂದು ಮತ್ತು ಏಪ್ರಿಲ್ 5 ರಂದು ಇತರ ಎಲ್ಲಾ ರಾಜ್ಯಗಳಲ್ಲಿ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಏಪ್ರಿಲ್ 8 ಕೊನೆಯ ದಿನವಾಗಿದೆ. ಏಪ್ರಿಲ್ 26 ರಂದು ಮತದಾನ ನಡೆಯಲಿದೆ.
ಎರಡನೇ ಹಂತದಲ್ಲಿ 12 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೆಂದರೆ ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ತ್ರಿಪುರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳ ಒಟ್ಟು 89 (88 + ಮಣಿಪುರ ಲೋಕಸಭಾ ಕ್ಷೇತ್ರದ ಒಂದು ಭಾಗ) ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತದೆ.
ಲೋಕಸಭೆ ಚುನಾವಣೆ 2024; 2ನೇ ಹಂತದ ಚುನಾವಣೆ ವೇಳಾಪಟ್ಟಿ ಹೀಗಿದೆ
ಅಧಿಸೂಚನೆ - ಮಾರ್ಚ್ 28 (ಇಂದು) ಪ್ರಕಟ
ನಾಮಪತ್ರ ಸಲ್ಲಿಕೆಗೆ ಕೊನೇ ದಿನ - ಏಪ್ರಿಲ್ 4 (ಗುರುವಾರ)
ನಾಮಪತ್ರ ಪರಿಶೀಲನೆ - ಏಪ್ರಿಲ್ 5 (ಶುಕ್ರವಾರ) (ಜಮ್ಮು -ಕಾಶ್ಮೀರದಲ್ಲಿ ಏಪ್ರಿಲ್ 6)
ನಾಮಪತ್ರ ಹಿಂಪಡೆಯಲು ಕೊನೆದಿನ - ಏಪ್ರಿಲ್ 8 (ಸೋಮವಾರ)
ಮತದಾನ ದಿನಾಂಕ - ಏಪ್ರಿಲ್ 26 (ಶುಕ್ರವಾರ)
ಮತ ಎಣಿಕೆ ದಿನ/ ಫಲಿತಾಂಶ - ಜೂನ್ 4 (ಮಂಗಳವಾರ)
ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ - ಜೂನ್ 6 (ಗುರುವಾರ)
ಮತದಾನ ನಡೆಯುವ ಕ್ಷೇತ್ರಗಳ ಸಂಖ್ಯೆ - 89
ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ -13
ಮತದಾನ ಕ್ಷೇತ್ರಗಳ ಪೈಕಿ ಮಣಿಪುರ ಕ್ಷೇತ್ರದ ಚುನಾವಣೆಯ ಅಧಿಸೂಚನೆಯನ್ನು ಹಂತ 1ರ ಗೆಜೆಟ್ ಅಧಿಸೂಚನೆಯಲ್ಲಿ ಸೇರಿಸಲಾಗಿದೆ. ಈ ಕ್ಷೇತ್ರದ ಹದಿನೈದು ವಿಧಾನಸಭಾ ಕ್ಷೇತ್ರಗಳಿಗೆ (ACs) ಹಂತ 1 ಮತ್ತು 13 ರಲ್ಲಿ 2 ನೇ ಹಂತದಲ್ಲಿ ಮತದಾನ ನಡೆಯಲಿದೆ. ಅದೇ ರೀತಿ ಲೋಕಸಭಾ ಕ್ಷೇತ್ರದ ಒಂದು ಭಾಗಕ್ಕೆ ಎರಡನೇ ಹಂತದಲ್ಲಿ ಮತದಾನ ನಡೆಯುತ್ತದೆ. ಹೀಗಾಗಿ 89 ಲೋಕಸಭಾ ಕ್ಷೇತ್ರಗಳು ಎಂದು ಆಯೋಗ ಪರಿಗಣಿಸಿದೆ.
ಲೋಕಸಭಾ ಚುನಾವಣೆ; ಪ್ರಗತಿಯಲ್ಲಿದೆ ಮೊದಲ ಹಂತ
ಮೊದಲ ಹಂತದ ಚುನಾವಣೆ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಚುನಾವಣಾ ಆಯೋಗವು ಮಾರ್ಚ್ 16 ರಂದು 2024 ರ ಲೋಕಸಭಾ ಚುನಾವಣೆಯ ಮೊದಲ ಹಂತದ ವೇಳಾಪಟ್ಟಿಯನ್ನು ಪ್ರಕಟಿಸಿತು.
ಈ ಹಂತದಲ್ಲಿ 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102 ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8 ಮತ್ತು ಮಧ್ಯಪ್ರದೇಶದಲ್ಲಿ 6 ಸ್ಥಾನಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಮಾರ್ಚ್ 27 ಕೊನೆಯ ದಿನಾಂಕವಾಗಿತ್ತು. ಇಂದು (ಮಾರ್ಚ್ 28 ರಂದು) ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮೊದಲ ಹಂತದ ನಾಮಪತ್ರ ಹಿಂಪಡೆಯಲು ಮಾರ್ಚ್ 30 ರವರೆಗೆ ಗಡುವು ನೀಡಲಾಗಿದೆ.
ಅವುಗಳ ಜೊತೆಗೆ ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ಐದು ಸ್ಥಾನಗಳು, ಬಿಹಾರದಲ್ಲಿ ನಾಲ್ಕು ಸ್ಥಾನಗಳು, ಪಶ್ಚಿಮ ಬಂಗಾಳದಲ್ಲಿ ಮೂರು, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯದಲ್ಲಿ ಎರಡು ಮತ್ತು ಛತ್ತೀಸ್‌ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಒಂದು ಸ್ಥಾನ, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಗಳ ಸ್ಥಾನಗಳಿಗೂ ಏಪ್ರಿಲ್ 19 ರಂದು ಮತದಾನ ನಡೆಯಲಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ