ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Union Budget: ಅಮೃತ ಕಾಲ ಅಲ್ಲ, 'ಮಿತ್ರ ಕಾಲದ ಬಜೆಟ್' ಎಂದ ರಾಹುಲ್​.. 'ಇದು ಬಜೆಟ್ಟಾ ಅಥವಾ ದಿನಸಿ ಅಂಗಡಿ ರಸೀದಿಯಾ?' ಎಂದ ಬಿಜೆಪಿ ನಾಯಕ

Union Budget: ಅಮೃತ ಕಾಲ ಅಲ್ಲ, 'ಮಿತ್ರ ಕಾಲದ ಬಜೆಟ್' ಎಂದ ರಾಹುಲ್​.. 'ಇದು ಬಜೆಟ್ಟಾ ಅಥವಾ ದಿನಸಿ ಅಂಗಡಿ ರಸೀದಿಯಾ?' ಎಂದ ಬಿಜೆಪಿ ನಾಯಕ

ಕೇಂದ್ರ ಬಜೆಟ್​​ ಬಗ್ಗೆ ಕಿಡಿಕಾರಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅಮೃತ ಕಾಲ ಅಲ್ಲ, 'ಮಿತ್ರ ಕಾಲದ ಬಜೆಟ್' ಎಂದು ಟೀಕಿಸಿದ್ದಾರೆ. ವಿರೋಧ ಪಕ್ಷಗಳು ಬಜೆಟ್​ ಅನ್ನು ಟೀಕಿಸುವುದು ಸಾಮಾನ್ಯ. ಆದರೆ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರೇ ತಮ್ಮ ಪಕ್ಷದ ನೇತೃತ್ವದ ಸರ್ಕಾರದ ಬಜೆಟ್​ ಕುರಿತು "ಇದು ಬಜೆಟ್ಟಾ ಅಥವಾ ದಿನಸಿ ಅಂಗಡಿ ರಸೀದಿಯಾ?" ಎಂದು ವ್ಯಂಗ್ಯವಾಡಿದ್ದಾರೆ.

ರಾಹುಲ್​ ಗಾಂಧಿ - ಸುಬ್ರಮಣಿಯನ್ ಸ್ವಾಮಿ
ರಾಹುಲ್​ ಗಾಂಧಿ - ಸುಬ್ರಮಣಿಯನ್ ಸ್ವಾಮಿ

ನವದೆಹಲಿ: 2023-24ನೇ ಸಾಲಿನ ಕೇಂದ್ರ ಬಜೆಟ್​​ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ್ದಾರೆ. ಈ ಬಾರಿಯ ಬಜೆಟ್​ ಅನ್ನು ಕೇಂದ್ರ ಸರ್ಕಾರ ಅಮೃತ ಕಾಲದ ಬಜೆಟ್​ ಎಂದು ಕರೆದಿದೆ. "ಅಮೃತ ಕಾಲದ ಮೊದಲ ಬಜೆಟ್ ಇದು. ಈ ಬಜೆಟ್ ಹಿಂದಿನ ಬಜೆಟ್‌ನಲ್ಲಿ ಹಾಕಿದ ಅಡಿಪಾಯ ಮತ್ತು ಭಾರತ@100ಕ್ಕೆ ಹಾಕಲಾದ ನೀಲನಕ್ಷೆಯನ್ನು ನಿರ್ಮಿಸುವ ಆಶಯವನ್ನು ಈ ಬಜೆಟ್‌ ಹೊಂದಿದೆ" ಎಂದು ನಿರ್ಮಲಾ ಸೀತಾರಾಮನ್ ಬಜೆಟ್‌ ಭಾಷಣದಲ್ಲಿ ಹೇಳಿದ್ದರು.

ಟ್ರೆಂಡಿಂಗ್​ ಸುದ್ದಿ

ಆದರೆ, ಕೇಂದ್ರ ಬಜೆಟ್​​ ಬಗ್ಗೆ ಕಿಡಿಕಾರಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅಮೃತ ಕಾಲ ಅಲ್ಲ, 'ಮಿತ್ರ ಕಾಲದ ಬಜೆಟ್' ಎಂದು ಟೀಕಿಸಿದ್ದಾರೆ. ರಾಹುಲ್ ಗಾಂಧಿ ಪ್ರಕಾರ 'ಮಿತ್ರ ಕಾಲದ' ಬಜೆಟ್ ಎಂದರೆ ಪ್ರಧಾನಿ ನರೇಂದ್ರ ಮೋದಿಯ ಮಿತ್ರರ (ಶ್ರೀಮಂತರ) ಪರವಾದ ಬಜೆಟ್​. ಬಡವರಿಗೆ ಮತ್ತು ದೇಶದ ನಿರುದ್ಯೋಗಿಗಳಿಗೆ ಏನೂ ಪ್ರಯೋಜನವಾಗದೆ ಶ್ರೀಮಂತರಿಗೆ ಮಾತ್ರ ಪ್ರಯೋಜನವನ್ನು ನೀಡುತ್ತದೆ ಎಂದರ್ಥ.

"ದೇಶದ ಶೇಕಡಾ 1 ರಷ್ಟು ಶ್ರೀಮಂತರು 40% ಸಂಪತ್ತನ್ನು ಹೊಂದಿದ್ದಾರೆ, ಶೇ.50ರಷ್ಟು ಬಡವರು ಶೇ. 64 ರಷ್ಟುಜಿಎಸ್​​ಟಿ ಪಾವತಿಸುತ್ತಾರೆ, 42% ಯುವಕರು ನಿರುದ್ಯೋಗಿಗಳಾಗಿದ್ದಾರೆ - ಆದರೂ, ಪ್ರಧಾನಿ ಕಾಳಜಿ ವಹಿಸುವುದಿಲ್ಲ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಈ ಮಿತ್ರ ಕಾಲದ ಬಜೆಟ್​​ನಲ್ಲಿ ಉದ್ಯೋಗ ಸೃಷ್ಟಿಸುವ, ಹಣದುಬ್ಬರ ಇಳಿಸುವ, ಅಸಮಾನತೆ ತೊಡೆದು ಹಾಕುವ ಯಾವುದೇ ಯೋಜನೆ ಇಲ್ಲ. ಭಾರತದ ಭವಿಷ್ಯವನ್ನು ನಿರ್ಮಿಸಲು ಸರ್ಕಾರವು ಯಾವುದೇ ಮಾರ್ಗಸೂಚಿಯನ್ನು ಹೊಂದಿಲ್ಲ ಎಂಬುದನ್ನು ಈ ಬಜೆಟ್ ಸಾಬೀತುಪಡಿಸುತ್ತದೆ ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ.

ಇದು ಬಜೆಟ್ಟಾ ಅಥವಾ ದಿನಸಿ ಅಂಗಡಿ ರಸೀದಿಯಾ? - ಸುಬ್ರಮಣಿಯನ್ ಸ್ವಾಮಿ

ವಿರೋಧ ಪಕ್ಷಗಳು ಬಜೆಟ್​ ಅನ್ನು ಟೀಕಿಸುವುದು ಸಾಮಾನ್ಯ. ಆದರೆ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರೇ ತಮ್ಮ ಪಕ್ಷದ ನೇತೃತ್ವದ ಸರ್ಕಾರದ ಬಜೆಟ್​ ಕುರಿತು "ಇದು ಬಜೆಟ್ಟಾ ಅಥವಾ ದಿನಸಿ ಅಂಗಡಿ ರಸೀದಿಯಾ?" ಎಂದು ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಸುಬ್ರಮಣಿಯನ್ ಸ್ವಾಮಿ, "ಇದು ಬಜೆಟ್ಟಾ ಅಥವಾ ದಿನಸಿ ಅಂಗಡಿ ಮಾಲೀಕ ನೀಡುವ ರಸೀದಿಯಾ?" ಯೋಗ್ಯವಾದ ಬಜೆಟ್ ಉದ್ದೇಶಗಳೇನು ಎಂಬುದನ್ನು ಬಹಿರಂಗಪಡಿಸಬೇಕು. ಇದು ಜಿಡಿಪಿ ಬೆಳವಣಿಗೆಯ ದರವಾಗಿದ್ದರೆ ಹೂಡಿಕೆಯ ಮಟ್ಟ, ಆದಾಯದ ದರ, ಆದ್ಯತೆಗಳು, ಆರ್ಥಿಕ ಕಾರ್ಯತಂತ್ರ ಮತ್ತು ಸಂಪನ್ಮೂಲ ಕ್ರೋಢೀಕರಣವನ್ನು ಬಹಿರಂಗಪಡಿಸಿ" ಎಂದು ಹೇಳಿದ್ದಾರೆ.

'ಮೂಗಿನ ಬದಲು ಹಣೆಗೆ ತುಪ್ಪ ಸವರಿದ ಕೇಂದ್ರ ಬಜೆಟ್' - ಹೆಚ್.ಡಿ.ಕುಮಾರಸ್ವಾಮಿ

ಚುನಾವಣೆ ಹೊಸ್ತಿಲಲ್ಲಿ ಇರುವ ಕರ್ನಾಟಕಕ್ಕೆ ಚುನಾವಣೆ ನೆಪದಲ್ಲಾದರೂ ಏನಾದರೂ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ಮೂಗಿಗೆ ತುಪ್ಪ ಸವರುವ ಬದಲು ಹಣೆಗೆ ತುಪ್ಪ ಸವರುವ ಕೆಲಸವನ್ನು ಕೇಂದ್ರ ಬಜೆಟ್ ನಲ್ಲಿ ಮಾಡಲಾಗಿದೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಘೋಷಣೆ ಮಾಡಿದ್ದಾರೆ. ಅದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿ ಆದಷ್ಟು ಶೀಘ್ರ ಕಾರ್ಯಗತ ಮಾಡಬೇಕು. ಆದರೆ, ಯಾವಾಗ ಮುಗಿಸುತ್ತಿರಿ ಎನ್ನುವ ಬಗ್ಗೆ ಡಬಲ್ ಎಂಜಿನ್ ಸರಕಾರಕ್ಕೆ ಖಾತರಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಅವರು ಕುಟುಕಿದರು.

ಕರ್ನಾಟಕಕ್ಕೆ ಉಂಡೆ ನಾಮ ಹಾಕಿದ ಬಜೆಟ್‌- ಸಿದ್ದರಾಮಯ್ಯ

ಕೇಂದ್ರದ ಟ್ರಬಲ್ ಎಂಜಿನ್ ಸರ್ಕಾರ ಕಳೆದ ಎಂಟು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ‘ ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್ ( ಶ್ರೀಮಂತರ ಪೋಷಣೆ ಮತ್ತು ಬಡವರ ವಿನಾಶ) ಎಂಬ ಜನವಿರೋಧಿ ನೀತಿಯ ಮುಂದುವರಿದ ಭಾಗವಾಗಿ ಕೇಂದ್ರದ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ 2023-2024ನೇ ಸಾಲಿನ ಬಜೆಟ್​ ಅನ್ನು ಮಂಡಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

IPL_Entry_Point