Reward on Dawood Ibrahim: ದಾವೂದ್ ಇಬ್ರಾಹಿಂ ತಲೆಗೆ 25 ಲಕ್ಷ ರೂ. ಇನಾಮು!
ಭೂಗತ ಪಾತಕಿ ದಾವೂದ್ ಇಬ್ರಾಹಿಂ ತಲೆಗೆ 25 ಲಕ್ಷ ರೂಪಾಯಿ ಇನಾಮನ್ನು (Reward on Dawood Ibrahim) ನ್ಯಾಷನಲ್ ಇನ್‌ವೆಸ್ಟಿಗೇಶನ್ ಏಜೆನ್ಸಿ (NIA) ಘೋಷಿದೆ. ಇದೇ ವೇಳೆ, ಛೋಟಾ ಶಕೀಲ್ ತಲೆಗೆ 20 ಲಕ್ಷ ರೂಪಾಯಿ, ಅನೀಸ್ ಚಿಕ್ನಾ ಮತ್ತು ಮೆಮೋನ್ ತಲೆಗೆ ತಲಾ 15 ಲಕ್ಷ ರೂಪಾಯಿ ಇನಾಮು ಕೂಡ ಘೋಷಣೆ ಮಾಡಿದೆ.
ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ತಲೆಗೆ 25 ಲಕ್ಷ ರೂಪಾಯಿ ನಗದು ಬಹುಮಾನ (Reward on Dawood Ibrahim) ನೀಡುವುದಾಗಿ ನ್ಯಾಷನಲ್ ಇನ್‌ವೆಸ್ಟಿಗೇಶನ್ ಏಜೆನ್ಸಿ (NIA) ಘೋಷಿಸಿದೆ.
ಭಾರತದಲ್ಲಿ ಶಸ್ತ್ರಾಸ್ತ್ರಗಳು, ಸ್ಫೋಟಕಗಳು, ಡ್ರಗ್ಸ್ ಮತ್ತು ಭಾರತೀಯ ಕರೆನ್ಸಿ ನಕಲಿ ನೋಟುಗಳ(ಎಫ್‌ಐಸಿಎನ್) ಕಳ್ಳಸಾಗಣೆ ಜಾಲ ಸ್ಥಾಪಿಸಿದ್ದಕ್ಕೆ ಸಂಬಂಧಿಸಿದ ತನಿಖೆ ಪ್ರಗತಿಯಲ್ಲಿದ್ದು, ‘ಡಿ’ ಕಂಪನಿ - ದಾವೂದ್ ಇಬ್ರಾಹಿಂ ಗ್ಯಾಂಗ್‌ಗೆ ಸಂಬಂಧಿಸಿದ ತನಿಖೆಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಇತರರ ತಲೆಗೆ ಎನ್‌ಐಎ ಇನಾಮು ಘೋಷಿಸಿದೆ.
ಡಿ ಕಂಪನಿಗೆ ಪಾಕಿಸ್ತಾನಿ ಏಜೆನ್ಸಿಮತ್ತು ಭಯೋತ್ಪಾದಕ ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಮತ್ತು ಸಹಯೋಗ ಇದೆ. ಇದು ಭಾರತದಲ್ಲಿ ಉಗ್ರ ದಾಳಿ ಸಂಯೋಜಿಸುವ ಮತ್ತು ಅಂತಹ ಚಟುವಟಿಕೆಗಳಿಗೆ ನೆರವು ನೀಡುವ ಕೆಲಸ ಮಾಡುತ್ತದೆ ಎಂದು ಹಿರಿಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಹೆಸರಿಸಲು ಇಚ್ಛಿಸದ ಒಬ್ಬ ಅಧಿಕಾರಿ ನೀಡಿರುವ ಮಾಹಿತಿ ಪ್ರಕಾರ, ಇಬ್ರಾಹಿಂನ ಸಹೋದರ ಅನೀಸ್ ಇಬ್ರಾಹಿಂ ಅಲಿಯಾಸ್ ಹಾಜಿ ಅನೀಸ್, ಆಪ್ತಸಹಾಯಕರಾದ ಜಾವೇದ್ ಪಟೇಲ್ ಅಲಿಯಾಸ್ ಜಾವೇದ್ ಚಿಕ್ನಾ; ಶಕೀಲ್ ಶೇಖ್ ಅಲಿಯಾಸ್ ಛೋಟಾ ಶಕೀಲ್; ಮತ್ತು ಇಬ್ರಾಹಿಂ ಮುಷ್ತಾಕ್ ಅಬ್ದುಲ್ ರಜಾಕ್ ಮೆಮನ್ ಅಲಿಯಾಸ್ ಟೈಗರ್ ಮೆಮನ್ ತಲೆಗಳಿಗೂ ಎನ್‌ಐಎ ಇನಾಮು ಘೋಷಿಸಿದೆ
ಇಬ್ರಾಹಿಂ ತಲೆಗೆ 25 ಲಕ್ಷ ರೂಪಾಯಿ ಬಹುಮಾನ ಮೊತ್ತವಾಗಿದ್ದರೆ, ಛೋಟಾ ಶಕೀಲ್ ತಲೆಗೆ 20 ಲಕ್ಷ ರೂ. ಮತ್ತು ಅನೀಸ್, ಚಿಕ್ನಾ ಮತ್ತು ಮೆಮನ್ ತಲೆಗಳಿಗೆ ತಲಾ 15 ಲಕ್ಷ ರೂಪಾಯಿಯನ್ನು ಎನ್‌ಐಎ ಘೋಷಿಸಿದೆ.
ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿರುವ ಮತ್ತು 1993ರ ಮುಂಬೈ ಸರಣಿ ಸ್ಫೋಟ ಸೇರಿ ಭಾರತದಲ್ಲಿನ ಅನೇಕ ಉಗ್ರ ಕೃತ್ಯಗಳ ಕೇಸ್‌ನಲ್ಲಿ ಬೇಕಾಗಿರುವ ಇಬ್ರಾಹಿಂ ತಲೆಗೆ ಈಗಾಗಲೇ 2003ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 25 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿತ್ತು. ಭಾರತದ ಮೋಸ್ಟ್ ವಾಂಟೆಡ್ ವ್ಯಕ್ತಿಗಳಲ್ಲಿ ದಾವೂದ್ ಒಬ್ಬ. ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಮುಖ್ಯಸ್ಥ ಹಫೀಜ್ ಸಯೀದ್, ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮೌಲಾನಾ ಮಸೂದ್ ಅಜರ್, ಹಿಜ್ಬುಲ್ ಮುಜಾಹಿದೀನ್ ಸಂಸ್ಥಾಪಕ ಸೈಯದ್ ಸಲಾಹುದ್ದೀನ್ ಮತ್ತು ಅವರ ಆಪ್ತ ಸಹಾಯಕ ಅಬ್ದುಲ್ ರೌಫ್ ಅಸ್ಗರ್ ಕೂಡ ಮೋಸ್ಟ್ ವಾಂಟೆಂಡ್ ವ್ಯಕ್ತಿಗಳ ಪಟ್ಟಿಯಲ್ಲಿದ್ದಾರೆ.
ಪ್ರಮುಖ ರಾಜಕೀಯ ನಾಯಕರನ್ನು ಗುರಿಯಾಗಿಸಲು 'ಡಿ' ಕಂಪನಿಯು ಉಗ್ರ ಗುಂಪುಗಳು ಮತ್ತು ಪಾಕಿಸ್ತಾನಿ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಸಹಾಯದಿಂದ ಭಾರತದಲ್ಲಿ ವಿಶೇಷ ಘಟಕವನ್ನು ಸ್ಥಾಪಿಸಿದೆ ಎಂಬ ಗುಪ್ತಚರ ಮಾಹಿತಿ ಲಭ್ಯವಾಗಿತ್ತು. ಇದಾದ ಬಳಿಕ, ಇಬ್ರಾಹಿಂ ಮತ್ತು ಅವರ ಸಹಾಯಕರ ವಿರುದ್ಧ ಹೊಸ ಪ್ರಕರಣವನ್ನು ಎನ್‌ಐಎ ದಾಖಲಿಸಿದೆ. ಉದ್ಯಮಿಗಳು, ಹಾಗೆಯೇ ಭಾರತೀಯ ನಗರಗಳಲ್ಲಿ ದಾಳಿಗಳನ್ನು ನಡೆಸಲು ಎಲ್ಇಟಿ, ಜೆಎಂ ಮತ್ತು ಅಲ್-ಖೈದಾ (ಎಕ್ಯೂ) ನ ಭಯೋತ್ಪಾದನೆ ಮತ್ತು ಸ್ಲೀಪರ್ ಸೆಲ್‌ಗಳಿಗೆ ನೆರವು ನೀಡುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನಿಖೆಯ ಭಾಗವಾಗಿ, ಹಾಜಿ ಅಲಿ ದರ್ಗಾ ಮತ್ತು ಮಾಹಿಮ್ ದರ್ಗಾದ ಟ್ರಸ್ಟಿ ಸುಹೇಲ್ ಖಾಂಡ್ವಾನಿಯವರೊಂದಿಗೆ ಸಂಪರ್ಕ ಹೊಂದಿದ 29 ಸ್ಥಳಗಳ ಮೇಲೆ ಈ ವರ್ಷ ಮೇ ತಿಂಗಳಲ್ಲಿ NIA ದಾಳಿ ನಡೆಸಿತು. ಸಮೀರ್ ಹಿಂಗೋರಾ, 1993 ರ ಮುಂಬೈ ಸ್ಫೋಟದ ಅಪರಾಧಿ; ಸಲೀಂ ಖುರೇಷಿ ಅಲಿಯಾಸ್ ಸಲೀಂ ಫ್ರುಟ್ , ಛೋಟಾ ಶಕೀಲ್‌ನ ಸೋದರ ಮಾವ; ಇಬ್ರಾಹಿಂ ಅವರ ಸಹೋದರ ಇಕ್ಬಾಲ್ ಕಸ್ಕರ್ ಅವರ ಸಂಬಂಧಿ ಗುಡ್ಡು ಪಠಾಣ್; ಮತ್ತು ಭಿವಾಂಡಿ ನಿವಾಸಿ ಖಯ್ಯೂಮ್ ಶೇಖ್ ಅವರ ಜತೆಗೆ ಸಂಪರ್ಕ ಹೊಂದಿದವರ ಮೇಲೂ ದಾಳಿ ಆಗಿದೆ.
ಎನ್‌ಐಎ ಪ್ರಕರಣವನ್ನು ಆಧರಿಸಿ, ಜಾರಿ ನಿರ್ದೇಶನಾಲಯ (ಇಡಿ) ಈ ವಿಷಯದಲ್ಲಿ ಅಕ್ರಮ ಹಣ ವರ್ಗಾವಣೆಯ ತನಿಖೆಯನ್ನು ಪ್ರಾರಂಭಿಸಿತು. ದಾವೂದ್ ಇಬ್ರಾಹಿಂ ಅವರ ದಿವಂಗತ ಸಹೋದರಿ ಹಸೀನಾ ಪರ್ಕರ್ ಅವರ ನೆರವು ಪಡೆದು ಕುರ್ಲಾದಲ್ಲಿ 300 ಕೋಟಿ ರೂಪಾಯಿ ಮೌಲ್ಯದ ಜಮೀನನ್ನು ಸ್ಥಳೀಯ ನಿವಾಸಿಯಿಂದ ಕಬಳಿಸಿದ ಆರೋಪದ ಮೇಲೆ ಫೆಬ್ರವರಿ 23 ರಂದು ಎನ್‌ಐಎ ಮಹಾರಾಷ್ಟ್ರದ ಮಾಜಿ ಅಲ್ಪಸಂಖ್ಯಾತ ಅಭಿವೃದ್ಧಿ ಸಚಿವ ನವಾಬ್ ಮಲಿಕ್ ಅವರನ್ನು ಬಂಧಿಸಿತು.
ಹಿಂದುಸ್ತಾನ್ ಟೈಮ್ಸ್‌ಗೆ ನೋಡುವುದಕ್ಕೆ ಲಭ್ಯವಾಗಿದ್ದ ಭಾರತೀಯ ಗುಪ್ತಚರ ಸಂಸ್ಥೆಗಳು 2015 ರಲ್ಲಿ ಸಿದ್ಧಪಡಿಸಿದ ದಸ್ತಾವೇಜಿನ ಪ್ರಕಾರ, ಇಬ್ರಾಹಿಂ ಕರಾಚಿಯ ಕ್ಲಿಫ್ಟನ್‌ನಲ್ಲಿರುವ ವೈಟ್ ಹೌಸ್ ಸೇರಿ ಪಾಕಿಸ್ತಾನದಲ್ಲಿ ಒಂಬತ್ತು ವಿಳಾಸಗಳನ್ನು ಹೊಂದಿದ್ದಾನೆ; ಮೂರು ಪಾಕಿಸ್ತಾನಿ ಪಾಸ್‌ಪೋರ್ಟ್‌ಗಳು - ಮೊದಲನೆಯದನ್ನು ರಾವಲ್ಪಿಂಡಿಯಲ್ಲಿ(ನಂ.ಜಿ-866537), ಎರಡು ಕರಾಚಿಯಲ್ಲಿ (ಸಂಖ್ಯೆ. ಸಿ-267185) ಮತ್ತು (ಸಂಖ್ಯೆ ಕೆಸಿ-285901) ನೀಡಲಾಗಿದೆ.
ಅವರು ದಾವೂದ್ ಇಬ್ರಾಹಿಂ, ಶೇಖ್ ದಾವೂದ್ ಹಸನ್, ಅಬ್ದುಲ್ ಹಮೀದ್ ಅಬ್ದುಲ್ ಅಜೀಜ್, ಅಜೀಜ್ ದಿಲೀಪ್, ದೌದ್ ಹಸನ್ ಶೇಖ್ ಇಬ್ರಾಹಿಂ ಕಸ್ಕರ್, ದಾವೂದ್ ಸಾಬ್ರಿ, ಶೇಖ್ ಇಸ್ಮಾಯಿಲ್ ಅಬ್ದುಲ್ ಮತ್ತು ಹಿಜ್ರತ್ ಸೇರಿ ಹಲವು ಅಲಿಯಾಸ್ ಹೆಸರುಗಳನ್ನು ವರ್ಷಗಳಿಂದ ಬಳಸಿದ್ದಾರೆ.
ಇಬ್ರಾಹಿಂಗೆ ಸಂಬಂಧಿಸಿದ ವಿಶ್ವಸಂಸ್ಥೆ ಭದ್ರತಾ ಸಮಿತಿಯ ಲಿಸ್ಟಿಂಗ್, ಭೂಗತ ಲೋಕದ ಡಾನ್ ದಾವೂದ್ ಇಬ್ರಾಹಿಂನ ಕ್ರಿಮಿನಲ್ ಸಿಂಡಿಕೇಟ್ ದೊಡ್ಡ ಪ್ರಮಾಣದ ಮಾದಕವಸ್ತುಗಳ ಸಾಗಣೆಯಲ್ಲಿ ತೊಡಗಿಸಿಕೊಂಡಿದೆ ಮತ್ತು ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಿಂದ ತನ್ನ ಕಳ್ಳಸಾಗಣೆ ಮಾರ್ಗಗಳನ್ನು ಉಸಾಮಾ ಬಿನ್ ಲಾಡೆನ್‌ನೊಂದಿಗೆ ಹಂಚಿಕೊಂಡಿದೆ ಎಂದು ಉಲ್ಲೇಖಿಸಿದೆ.