ಕನ್ನಡ ಸುದ್ದಿ  /  Nation And-world  /  Technology News Bengaluru Water Crisis Kerala Writes To Top It Firms In Bangalore And Offers Office Space Explained Uks

ಬೆಂಗಳೂರಲ್ಲಿ ನೀರಿನ ಸಮಸ್ಯೆಯೇ, ನಮ್ಮಲ್ಲಿಗೆ ಬನ್ನಿ; ಐಟಿ ಕಂಪನಿಗಳಿಗೆ ಕೇರಳ ಸರ್ಕಾರದ ಆಹ್ವಾನ, ಹೀಗಿದೆ ನೋಡಿ ಅಲ್ಲಿ ಸೌಲಭ್ಯ

ಬೆಂಗಳೂರು ನೀರಿನ ಸಮಸ್ಯೆ ನಡುವೆ ಬಳಲುತ್ತಿದ್ದು, ಕರ್ನಾಟಕ ಸರ್ಕಾರದ ಬ್ರ್ಯಾಂಡ್ ಬೆಂಗಳೂರಿಗೆ ತಣ್ಣೀರು ಎರಚುವಂತಹ ವಿದ್ಯಮಾನ ಇದು. ಬೆಂಗಳೂರಿನಲ್ಲಿರುವ ಐಟಿ ಕಂಪನಿಗಳನ್ನು ತನ್ನೆಡೆಗೆ ಸೆಳೆಯಲು ಕೇರಳ ಪ್ರಯತ್ನ ನಡೆಸುತ್ತಿದ್ದು, ಕೇರಳದ ತಯಾರಿ ಕಡೆಗೆ ಬೆಳಕು ಚೆಲ್ಲುವ ವರದಿ ಇಲ್ಲಿದೆ.

ಬೆಂಗಳೂರಿನ ಐಟಿ ಕಂಪನಿಗಳ ಸಾಂಕೇತಿಕ ಚಿತ್ರ (ಎಡ ಚಿತ್ರ); ಕೇರಳದ ಕೈಗಾರಿಕೆ ಮತ್ತು ಕಾನೂನು ಸಚಿವ ಪಿ. ರಾಜೀವ್ (ಬಲ ಚಿತ್ರ).ಬೆಂಗಳೂರಲ್ಲಿ ನೀರಿನ ಸಮಸ್ಯೆಯೇ, ನಮ್ಮಲ್ಲಿಗೆ ಬನ್ನಿ ಎಂದು ಐಟಿ ಕಂಪನಿಗಳಿಗೆ ಕೇರಳ ಸರ್ಕಾರ ಆಹ್ವಾನ ನೀಡಿದೆ.
ಬೆಂಗಳೂರಿನ ಐಟಿ ಕಂಪನಿಗಳ ಸಾಂಕೇತಿಕ ಚಿತ್ರ (ಎಡ ಚಿತ್ರ); ಕೇರಳದ ಕೈಗಾರಿಕೆ ಮತ್ತು ಕಾನೂನು ಸಚಿವ ಪಿ. ರಾಜೀವ್ (ಬಲ ಚಿತ್ರ).ಬೆಂಗಳೂರಲ್ಲಿ ನೀರಿನ ಸಮಸ್ಯೆಯೇ, ನಮ್ಮಲ್ಲಿಗೆ ಬನ್ನಿ ಎಂದು ಐಟಿ ಕಂಪನಿಗಳಿಗೆ ಕೇರಳ ಸರ್ಕಾರ ಆಹ್ವಾನ ನೀಡಿದೆ.

ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು (Brand Bengaluru) ಅಭಿವೃದ್ದಿ ಪಡಿಸಲು ಕರ್ನಾಟಕ ಸರ್ಕಾರ ಪ್ರಯತ್ನಿಸುತ್ತಿರುವಾಗಲೇ ಬೆಂಗಳೂರು ನೀರಿನ ಸಮಸ್ಯೆ (Bengaluru Water Crisis) ಬಹುವಾಗಿ ಕಾಡತೊಡಗಿದೆ. ಕರ್ನಾಟಕದ ಇಂತಹ ಅಸಹಾಯಕ ಸನ್ನಿವೇಶದಲ್ಲಿ ನಡೆದಿರುವ ಮಹತ್ವದ ಬೆಳವಣಿಗೆಯೊಂದರಲ್ಲಿ ಕೇರಳ ಸರ್ಕಾರ ಬೆಂಗಳೂರಿನಲ್ಲಿರುವ ಐಟಿ ಕಂಪನಿಗಳನ್ನು ತನ್ನೆಡೆ ಸೆಳೆಯಲು ಪ್ರಯತ್ನಿಸಿದೆ.

ಭಾರತದ ಟೆಕ್ ಹಬ್‌ ಎಂದೇ ಹೆಸರುವಾಸಿಯಾಗಿರುವ ಬೆಂಗಳೂರಲ್ಲಿ ನೀರಿನ ಸಮಸ್ಯೆಯ ವರದಿಗಳು ಒಂದೇ ಸಮನೆ ಪ್ರಕಟವಾಗುತ್ತಿರುವ ಕಾರಣ, ಕರಾವಳಿ ರಾಜ್ಯವನ್ನು ಐಟಿ ಕಂಪನಿಗಳ ವಹಿವಾಟು ವಿಸ್ತರಣೆಗೆ ಪರಿಗಣಿಸುವಂತೆ ಕೇರಳ ಸರ್ಕಾರವು ಬೆಂಗಳೂರಿನ ಉನ್ನತ ಶ್ರೇಣಿಯ ತಂತ್ರಜ್ಞಾನ ಕಂಪನಿಗಳನ್ನು ಸಂಪರ್ಕಿಸಿದೆ.

ಭಾರತದ ಟೆಕ್‌ ಹಬ್‌ ಬೆಂಗಳೂರಿನಲ್ಲಿ ಐಟಿ ಇಂಡಸ್ಟ್ರಿಯ ವಾರ್ಷಿಕ ಆದಾಯ 254 ಶತಕೋಟಿ ಡಾಲರ್ ಇದೆ. ಹೀಗಿರುವ ಮಹತ್ವದ ಕೈಗಾರಿಕಾ ವಲಯಕ್ಕೆ ಸದ್ಯ ಬೇಸಿಗೆ ಬೇಗೆ ತಟ್ಟಿದೆ. ನಿತ್ಯ ಬಳಕೆಗೆ 500 ದಶಲಕ್ಷ ಲೀಟರ್‌ ನೀರು ಕೊರತೆಯಾಗಿದೆ.

ಕೇರಳದಲ್ಲಿ 44 ನದಿಗಳಿವೆ, ನೀರಿಗೆ ಸಮಸ್ಯೆ ಇಲ್ಲ ಎಂದ ಸಚಿವ

ಕೇರಳದ ಕೈಗಾರಿಕೆ ಮತ್ತು ಕಾನೂನು ಸಚಿವ ಪಿ ರಾಜೀವ್‌, “ಬೆಂಗಳೂರಿನ ನೀರಿನ ಬಿಕ್ಕಟ್ಟಿನ ವರದಿಗಳನ್ನು ಓದಿದ ನಂತರ, ನಾವು ಅಲ್ಲಿನ ಐಟಿ ಕಂಪನಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಮತ್ತು ಸಾಕಷ್ಟು ನೀರನ್ನು ನೀಡುವುದಾಗಿ ಪತ್ರ ಬರೆದಿದ್ದೇವೆ. ನಮ್ಮ ರಾಜ್ಯದಲ್ಲಿ ದೊಡ್ಡ ಮತ್ತು ಸಣ್ಣದ ಸೇರಿ 44 ನದಿಗಳಿವೆ. ಆದ್ದರಿಂದ ನೀರಿನ ಸಮಸ್ಯೆಯೇ ಇಲ್ಲ” ಎಂದು ಹೇಳಿದ್ದಾಗಿ ಎಕನಾಮಿಕ್ ಟೈಮ್ಸ್ ಮಂಗಳವಾರ (ಮಾರ್ಚ್ 26) ವರದಿ ಮಾಡಿದೆ.

ಹೂಡಿಕೆಗಾಗಿ ರಾಜ್ಯದ ಕೋರಿಕೆಯನ್ನು ಮುಂದುವರಿಸಲು ಸರ್ಕಾರವು ಮೀಸಲಾದ ತಂಡವನ್ನು ರಚಿಸಿದೆ ಎಂದ ಸಚಿವ ರಾಜೀವ್, ಕೇರಳದ ಅಧಿಕಾರಿಗಳು ಸಂಪರ್ಕಿಸಿದ ಕಂಪನಿಗಳ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದರು. "ನಾವು ಅವರಲ್ಲಿ ಕೆಲವರೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ನಾವು ನಮ್ಮ ಇಡೀ ರಾಜ್ಯವನ್ನು ಸಿಲಿಕಾನ್ ವ್ಯಾಲಿಯ ರೀತಿಯಲ್ಲಿ ಅಭಿವೃದ್ಧಿಪಡಿಸಲು ಬಯಸುತ್ತೇವೆ. ತಂತ್ರಜ್ಞಾನ ಪದವೀಧರರ ಅಪಾರ ಪ್ರತಿಭೆಯನ್ನು ಒಳಗೊಂಡಂತೆ ಟೆಕ್ ವಲಯವನ್ನು ನಮ್ಮಲ್ಲಿ ನೆಲೆ ನಿಲ್ಲುವಂತೆ ಮಾಡಲು ಹಲವಾರು ಅನುಕೂಲಗಳಿವೆ ಎಂದು ಸಚಿವ ರಾಜೀವ್ ಹೇಳಿದರು.

ಕೇರಳದಲ್ಲಿವೆ 3 ಐಟಿ ಪಾರ್ಕ್‌ಗಳು

ನಾವು ಸಂಪರ್ಕ ಮತ್ತು ಇತರ ಮೂಲಸೌಕರ್ಯಗಳೊಂದಿಗೆ ಸಣ್ಣ ಐಟಿ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಹೇಳಿರುವ ಪಿ. ರಾಜೀವ್‌, ಕೇರಳದಲ್ಲಿ 3 ಐಟಿ ಪಾರ್ಕ್‌ಗಳಿವೆ ಎಂಬುದರ ಕಡೆಗೆ ಗಮನಸೆಳೆದರು.

ಇನ್ಫೋಪಾರ್ಕ್ (ಕೊಚ್ಚಿ), ಟೆಕ್ನೋಪಾರ್ಕ್ (ತಿರುವನಂತಪುರಂ) ಮತ್ತು ಸೈಬರ್ ಪಾರ್ಕ್ (ಕೋಝಿಕೋಡ್) ಎಂಬ ಮೂರು ಪೂರ್ಣ ಸೌಲಭ್ಯಗಳಿರುವ ಟೆಕ್ ಪಾರ್ಕ್‌ ನಿರ್ಮಾಣವಾಗುತ್ತಿವೆ. ಹೊಸ ಹೂಡಿಕೆಗಳನ್ನು ಬೆಂಬಲಿಸಲು ಉದ್ದೇಶಿತ ಕಾರಿಡಾರ್‌ಗಳಲ್ಲಿ ಸರ್ಕಾರವು ಸಣ್ಣ ಟೆಕ್ ಪಾರ್ಕ್‌ಗಳನ್ನು ಸ್ಥಾಪಿಸಲಿದೆ ಎಂದು ಸಚಿವರು ಹೇಳಿದರು.

ಪ್ರೆಸ್ಟೀಜ್ ಗ್ರೂಪ್ ಕೊಚ್ಚಿಯಲ್ಲಿ 8.5 ಲಕ್ಷ ಚದರ ಅಡಿ ವಿಸ್ತೀರ್ಣದ ಟೆಕ್ ಪಾರ್ಕ್ ಅನ್ನು ನಿರ್ಮಿಸಿದೆ. ಬ್ರಿಗೇಡ್ ಗ್ರೂಪ್ ಇದೇ ರೀತಿಯ ಟೆಕ್ ಪಾರ್ಕ್‌ ಅನ್ನು ತಿರುವನಂತಪುರಂನಲ್ಲಿ ನಿರ್ಮಿಸುತ್ತಿದೆ. ಕೊಚ್ಚಿಯಲ್ಲಿರುವ ಇನ್ಫೋಪಾರ್ಕ್ ತನ್ನದೇ ಆದ ಸೌಲಭ್ಯಗಳನ್ನು ಹೊಂದಿದೆ. ಖಾಸಗಿ ಡೆವಲಪರ್‌ಗಳಾದ ಬ್ರಿಗೇಡ್, ಕಾರ್ನಿವಲ್, ಲುಲು ಗ್ರೂಪ್ ಮತ್ತು ಏಷ್ಯಾ ಸೈಬರ್ ಪಾರ್ಕ್ ನಿರ್ಮಿಸಿದೆ. ರಾಜ್ಯವು ನಾಲ್ಕು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿದೆ. ಇದಲ್ಲದೆ ಉತ್ತಮ ರಸ್ತೆ, ರೈಲು ಮತ್ತು ಬಂದರು ಸಂಪರ್ಕವನ್ನು ಹೊಂದಿದೆ ಎಂದು ಸಚಿವರು ಹೇಳಿದರು.

ಕೇರಳದಲ್ಲಿ ಸದ್ಯ 2.5 ಲಕ್ಷ ಉದ್ಯೋಗಿಗಳು ಟೆಕ್‌ ಪಾರ್ಕ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಂದಿನ 5 ವರ್ಷದಲ್ಲಿ ಈ ಸಂಖ್ಯೆ 10 ಲಕ್ಷ ದಾಟಲಿದೆ. ರಾಜ್ಯದ ಸ್ಟಾರ್ಟ್‌ಅಪ್ ಮಿಷನ್‌ನಲ್ಲಿ ಸುಮಾರು 5,000 ಸ್ಟಾರ್ಟ್‌ಅಪ್‌ಗಳು ನೋಂದಣಿಯಾಗಿವೆ. ಅವು 10,000 ಉದ್ಯೋಗಗಳನ್ನು ಸೃಷ್ಟಿಸಲಿವೆ ಎಂದು ವರದಿ ಹೇಳಿದೆ.

IPL_Entry_Point