Twitter Logo: ಬದಲಾಯ್ತು ಟ್ವಿಟರ್ ಲೋಗೊ; ನೀಲಿ ಹಕ್ಕಿಯ ಜಾಗಕ್ಕೆ ಬಂತು ಡಾಗಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Twitter Logo: ಬದಲಾಯ್ತು ಟ್ವಿಟರ್ ಲೋಗೊ; ನೀಲಿ ಹಕ್ಕಿಯ ಜಾಗಕ್ಕೆ ಬಂತು ಡಾಗಿ

Twitter Logo: ಬದಲಾಯ್ತು ಟ್ವಿಟರ್ ಲೋಗೊ; ನೀಲಿ ಹಕ್ಕಿಯ ಜಾಗಕ್ಕೆ ಬಂತು ಡಾಗಿ

ಟ್ವಿಟರ್‌ನ ಲೋಗೊ ಬದಲಾಗಿದೆ. ಇಷ್ಟು ದಿನ ಆ ಗೌರವ ಪಡೆದಿದ್ದ ನೀಲಿ ಹಕ್ಕಿಯ ಜಾಗಕ್ಕೆ ಇದೀಗ ಶಿಬಾ ಇನು ಡಾಗ್ ಬಂದಿದೆ.

ಉದ್ಯಮಿ ಎಲಾನ್ ಮಸ್ಕ್ ಮತ್ತು ಟ್ವಿಟರ್‌ನ ಲೋಗೊ
ಉದ್ಯಮಿ ಎಲಾನ್ ಮಸ್ಕ್ ಮತ್ತು ಟ್ವಿಟರ್‌ನ ಲೋಗೊ

ಜನಪ್ರಿಯ ಸಾಮಾಜಿಕ ಮಾಧ್ಯಮ (Social Media) ಟ್ವಿಟರ್‌ (Twitter) ಅನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡ ನಂತರ ಉದ್ಯಮಿ ಎಲಾನ್ ಮಸ್ಕ್‌ (Elon Musk) ಒಂದಾದ ಮೇಲೊಂದರಂತೆ ಅಚ್ಚರಿಯ ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಇದೀಗ ಟ್ವಿಟರ್‌ನ ಜನಜನಿತ ನೀಲಿ ಹಕ್ಕಿಯ ಚಿಹ್ನೆ ಬದಲಾಗಿದ್ದು, ಅದರ ಜಾಗದಲ್ಲಿ "ಶಿಬಾ ಇನು ಡಾಗ್" (Shiba Inu dog) ಮೀಮ್ ಖ್ಯಾತಿಯ ಕಂದು ನಾಯಿ ಕಾಣಿಸಿಕೊಂಡಿದೆ. ಬಳಕೆದಾರರೊಬ್ಬರೊಂದಿಗೆ ಸಂವಾದ ನಡೆಸುವಾಗ ಈ ವಿಚಾರವನ್ನು ಮಸ್ಕ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅವರ ಹೇಳಿಕೆಯೂ ಎಲ್ಲರ ಗಮನ ಸೆಳೆಯುತ್ತಿದೆ. ಕಳೆದ ವರ್ಷ 44 ಶತಕೋಟಿ ಡಾಲರ್ ಮೊತ್ತಕ್ಕೆ ಟ್ವಿಟರ್ ಕಂಪನಿಯನ್ನು ಎಲಾನ್ ಮಸ್ಕ್ ಖರೀದಿಸಿದ್ದರು.

ಪೊಲೀಸ್ ಅಧಿಕಾರಿಯೊಬ್ಬರು ದಾಖಲೆಯೊಂದನ್ನು ಪರಿಶೀಲಿಸುತ್ತಿರುವ ಚಿತ್ರವನ್ನು ಮಸ್ಕ್ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಪೊಲೀಸ್ ಅಧಿಕಾರಿಯ ಕೈಲಿರುವ ಟ್ಯಾಬ್‌ನಲ್ಲಿ ನೀಲಿ ಹಕ್ಕಿಯ ಟ್ವಿಟರ್ ಲೋಗೊ ಇದೆ. ಅದನ್ನು ನೋಡದಿದ್ದರೂ ಕಾರ್‌ನಲ್ಲಿರುವ ಚಿಟ್ಟೆ ರೆಕ್ಕೆಯ ಡಾಗಿ 'ಅದು ಹಳೆಯ ಫೋಟೊ' ಎಂದು ಕೂಗಿ ಹೇಳುತ್ತಿದೆ.

ಟ್ವಿಟರ್ ಖರೀದಿಗೆ ಮೊದಲು ಬಳಕೆದಾರರೊಬ್ಬರೊಂದಿಗೆ ಆಗಿದ್ದ ಮಾತುಕತೆಯ ವಿವರ ಇರುವ ಸ್ಕ್ರಿನ್‌ಶಾಟ್ ಒಂದನ್ನು ಮಸ್ಕ್ "ಭರವಸೆ ನೀಡಿದಂತೆ" (as promissed) ಎಂಬ ಒಕ್ಕಣೆಯೊಂದಿಗೆ ಹಂಚಿಕೊಂಡಿದ್ದಾರೆ. ಅದರಲ್ಲಿ ಚೇರ್‌ಮನ್ ಹೆಸರಿನ ಖಾತೆಯಿಂದ ಟ್ವೀಟ್ ಮಾಡಿದ್ದ ಒಬ್ಬರು, 'ಟ್ವಿಟರ್ ಕಂಪನಿಯನ್ನು ಮಸ್ಕ್ ಖರೀದಿಸಿ ನೀಲಿ ಹಕ್ಕಿಯ ಜಾಗಕ್ಕೆ ಡಾಗಿ ತರಬೇಕು' ಎಂದು ಸಲಹೆ ಮಾಡಿದ್ದರು.

ಟ್ವಿಟರ್‌ನ ಲೋಗೊ ಬದಲಾವಣೆಯು ಹಣಕಾಸು ಲೋಕದಲ್ಲಿಯೂ ಪರಿಣಾಮ ಬೀರಿದೆ. ಡಾಗಿ ಲೋಗೊ ಬಳಸುವ ಕ್ರಿಪ್ಟೊಕರೆನ್ಸಿ ಡಾಗಿಕಾಯಿನ್‌ನ ಮೌಲ್ಯವು ಶೇ 30ರಷ್ಟು ಹೆಚ್ಚಾಗಿದೆ.

ಕಳೆದ ಅಕ್ಟೋಬರ್‌ನಲ್ಲಿ ಟ್ವಿಟರ್‌ ಖರೀದಿಸಿದ ನಂತರ ಮಸ್ಕ್ ಹಲವು ಬದಲಾವಣೆಗಳನ್ನು ಮಾಡಿದ್ದಾರೆ. ಏಪ್ರಿಲ್ 1ರಿಂದ ಅಧಿಕೃತ ಖಾತೆಗಳಿಗೆ ನೀಲಿ ಗುರುತು ಕೊಡುವ (Blue tick for verified accounts) ಪದ್ಧತಿಯನ್ನು ಕೈಬಿಡುವುದಾಗಿ ಟ್ವಿಟರ್ ಘೋಷಿಸಿತ್ತು. ಮುಂದಿನ ದಿನಗಳಲ್ಲಿ ನೀಲಿ ಗುರುತು ಬೇಕಿದ್ದರೆ 8 ಡಾಲರ್ ಕೊಡಬೇಕು ಎಂದು ಘೋಷಿಸಿತ್ತು. ಟ್ವಿಟರ್‌ನ ಈ ನಿರ್ಧಾರದ ಬಗ್ಗೆ ಭಾರತ ಸೇರಿ ವಿಶ್ವದಾದ್ಯಂತ ಬೇಸರ ವ್ಯಕ್ತವಾಗಿತ್ತು. ಹಲವು ಪ್ರಭಾವಿಗಳು, 'ಬ್ಲೂ ಟಿಕ್ ಬಿಡ್ತೀವಿ, ಹಣ ಕೊಡಲ್ಲ' ಎಂದು ಜಿದ್ದಿಗೆ ಬಿದ್ದಿದ್ದರು. ಹಣ ಪಾವತಿಸದ ಕಾರಣಕ್ಕೆ ಜಾಗತಿಕ ಮಟ್ಟದ ಸುದ್ದಿಮಾಧ್ಯಮ 'ನ್ಯೂಯಾರ್ಕ್ ಟೈಮ್ಸ್‌' ಸಹ ಬ್ಲೂಟಿಕ್ ಕಳೆದುಕೊಂಡಿತ್ತು.

'ನಾನು ಏನಾಗಬೇಕು ಎಂದುಕೊಂಡಿದ್ದೇನೊ ಅದನ್ನು ಅವರೇ ಮಾಡಿಕೊಂಡರು' ಎಂದು 'ನ್ಯೂಯಾರ್ಕ್ ಟೈಮ್ಸ್‌' ಬೆಳವಣಿಗೆಯ ಬಗ್ಗೆ ಮಸ್ಕ್ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದ್ದರು.

.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.