ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಮ್ಮನ ಹಾಸ್ಯಕ್ಕೂಇದೆ ಅದೆಷ್ಟು ಶಕ್ತಿ, 5 ವರ್ಷದಿಂದ ಕೋಮಾದಲ್ಲಿದ್ದ ಮಗಳು ಎಚ್ಚರಗೊಂಡಳು !

ಅಮ್ಮನ ಹಾಸ್ಯಕ್ಕೂಇದೆ ಅದೆಷ್ಟು ಶಕ್ತಿ, 5 ವರ್ಷದಿಂದ ಕೋಮಾದಲ್ಲಿದ್ದ ಮಗಳು ಎಚ್ಚರಗೊಂಡಳು !

ಅಪಘಾತಕ್ಕೆ ಒಳಗಾಗಿ ಮಗಳು ಕೋಮಾಕ್ಕೆ ಜಾರಿ ಐದು ವರ್ಷವೇ ಜಾರಿದ್ದಳು. ಅಮ್ಮ ಹಾಸ್ಯ ಮಾಡುತ್ತಿದ್ದ ಹಾಗೆ ಮಗಳಿಗೆ ಪ್ರಜ್ಞೆ ಬಂದಿತು. ನಕ್ಕಳು ಕೂಡ. ಈ ಘಟನೆ ನಡೆದಿರುವುದು ಅಮೆರಿಕಾದ ಮಿಚಿಗನ್‌ನಲ್ಲಿ.

ಅಮ್ಮನ ಹಾಸ್ಯಕ್ಕೆ ಸ್ಪಂದಿಸಿದ ಕೋಮಾದಲ್ಲಿದ್ದ ಮಗಳು.
ಅಮ್ಮನ ಹಾಸ್ಯಕ್ಕೆ ಸ್ಪಂದಿಸಿದ ಕೋಮಾದಲ್ಲಿದ್ದ ಮಗಳು.

ಮಿಚಿಗನ್‌: ಅಮ್ಮನ ಪ್ರೀತಿಗೆ ಬೆಲೆ ಕಟ್ಟಲಾಗದು. ಅಮ್ಮನ ಮಾತಿಗೂ ಕೂಡ. ಅಂತಹ ಶಕ್ತಿ ಆಕೆಯ ಮಾತೃತ್ವದಲ್ಲಿದೆ. ಅದೂ ಅಮ್ಮ ಹಾಸ್ಯ ಮಾಡಿದರೆ ಅದು ಎಂಥವರಿಗೆಲ್ಲಾ ಪ್ರೇರಣೆ ನೀಡಬಲ್ಲದು ಎನ್ನುವದಕ್ಕೆ ಈ ಘಟನೆಯನ್ನೊಮ್ಮೆ ಓದಿ. ಸತತ 5 ವರ್ಷದಿಂದ ಕೋಮಾದಲ್ಲಿಯೇ ಇದ್ದ ಮಗಳು ಅಮ್ಮನ ಹಾಸ್ಯದ ಮಾತಿಗೆ ಎಚ್ಚರಗೊಂಡಳು. ಈಗ ಆಕೆ ಚೇತರಿಸಿಕೊಂಡು ನಿಧಾನವಾಗಿ ಸಹಜ ಜೀವನಕ್ಕೆ ಮರಳುತ್ತಿದ್ಧಾಳೆ.

ಟ್ರೆಂಡಿಂಗ್​ ಸುದ್ದಿ

ಇದು ನಡೆದಿರುವುದು ಅಮೆರಿಕಾದ ಮಿಚಿಗನ್‌ನಲ್ಲಿ. ಆಕೆಯ ಹೆಸರು ಜೆನ್ನಿಫರ್‌ ಫ್ಲೆವೆಲ್ಲೆನ್‌. ಕಾರು ಓಡಿಸಿಕೊಂಡು ಹೋಗುವಾಗ ಅಪಘಾತಕ್ಕೆ ಈಡಾದಳು. 2017 ರ ಸೆಪ್ಟಂಬರ್‌ನಲ್ಲಿ ನಡೆದ ಅಪಘಾತದಿಂದ ಕೋಮಾಕ್ಕೆ ಹೋದಳು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಉಪಯೋಗವಾಗಲಿಲ್ಲ. ಕೆಲ ದಿನಗಳ ನಂತರ ಮನೆಗೆ ಕರೆ ತಂದರು. ಸತತ ಐದು ವರ್ಷ ಜೆನ್ನಿಫರ್‌ ಕೋಮಾದಲ್ಲಿಯೇ ಇದ್ದಳು. ಅಮ್ಮನ ಆರೈಕೆ ಮುಂದುವರಿತ್ತು. ಪತಿ, ಮಗ ಕೂಡ ಸಹಕಾರ ನೀಡುತ್ತಲೇ ಇದ್ದರು. ಇಡೀ ಕುಟುಂಬ ಆಕೆ ಎಚ್ಚರಗೊಳ್ಳಬಹುದು ಎಂದು ನಿರೀಕ್ಷೆ ಇಟ್ಟುಕೊಂಡೇ ಆಕೆಗೆ ಆರೈಕೆ ಮಾಡುತ್ತಿದ್ದರು. ಇದು ಒಂದು ದಿನವೂ ನಿಂತಿರಲಿಲ್ಲ. ಪತಿ ನೋಡಿಕೊಂಡು ಕಚೇರಿಗೆ ಹೋಗಿ ಬರುತ್ತಿದ್ದರು. ಮಗ ಶಾಲೆಗೆ ಹೋಗಿ ಬರುವುದು, ಫುಟ್‌ ಬಾಲ್‌ ಪಂದ್ಯಾವಳಿಗೆ ಹೋಗುವುದು ನಡೆದಿತ್ತು. ತನ್ನ ಆಟ ನೋಡಲು ಬಾರದ ಅಮ್ಮನ ನೆನಪು ಕಾಡುತ್ತಲೇ ಇತ್ತು.

ಒಂದು ದಿನ ಜೆನ್ನಿಫರ್‌ ತಾಯಿ ಪೆಗ್ಗಿ ಮೀನ್ಸ್‌ ಅವರು ಆಕೆಯನ್ನು ಮಾತನಾಡಿಸುತ್ತಲೇ ಹಾಸ್ಯವನ್ನು ಮಾಡಿದರು. ಆ ಹಾಸ್ಯದ ಮಾತನ್ನು ಕೇಳಿ ಕೋಮಾದಲ್ಲಿದ್ದ ಜೆನ್ನಿಫರ್‌ಗೆ ಎಚ್ಚರವಾಯಿತು. ತಾಯಿಗೆ ಇನ್ನಿಲ್ಲದ ಆಶ್ಚರ್ಯ. ಆಕೆ ನಕ್ಕಳು. ಆ ಮುಖವನ್ನು ಕಂಡ ತಾಯಿಯ ಖುಷಿಗೆ ಪಾರವೇ ಇರಲಿಲ್ಲ. ಕುಟುಂಬದವರ ಮುಖದಲ್ಲಿ ಸಂತಸ ಅರಳಿತ್ತು.

ನಾವು ಎಲ್ಲವೂ ಮುಗಿದೇ ಹೋಗಿತ್ತು. ಮಗಳಿಗೆ ಹೀಗಾಯಿತಲ್ಲ ಎಂದು ಬೇಸರದಿಂದಲೇ ದಿನ ದೂಡುತ್ತಿದ್ದೆವು. ಪ್ರಯತ್ನ ಬಿಟ್ಟಿರಲಿಲ್ಲ. ಬಾಗಿಲು ಮುಚ್ಚಿತ್ತು ಎನ್ನುವ ಹೊತ್ತಿಗೆ ಮತ್ತೆ ಬಾಗಿಲು ತೆರೆದೇ ಬಿಟ್ಟಿತು ಎಂದು ತಾಯಿ ಖುಷಿಯಿಂದಲೇ ಪೀಪಲ್‌ ಎನ್ನುವ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಖುಷಿ ಹಂಚಿಕೊಂಡರು.

ಆಕೆಯ ವೈದ್ಯರಿಗೂ ಇದು ಅಚ್ಚರಿಯೇ. ಇದು ವಿಶೇಷ ಪ್ರಕರಣವೇ. ಇಷ್ಟು ವರ್ಷದ ನಂತರ ಮಗಳು ಎಚ್ಚರಗೊಂಡಿದ್ದು, ತಾಯಿಯ ಹಾಸ್ಯಕ್ಕೆ ಪ್ರತಿಕ್ರಿಯಿಸಿದ್ದು ಅಚ್ಚರಿ ಎನ್ನಿಸಿದೆ. ಆಕೆಯ ಆರೋಗ್ಯ ಹಾಗೂ ದೈಹಿಕ ಸ್ಥಿತಿಯಲ್ಲಿ ಸುಧಾರಣೆ ಕಾಣುತ್ತಿದೆ ಎಂದು ವೈದ್ಯ ಡಾ.ರಾಲ್ಫ್‌ ವಾಂಗ್‌ ಹೇಳುತ್ತಾರೆ.

ನಿಧಾನವಾಗಿ ಆಕೆಯನ್ನು ನಡೆಯುವಂತೆ ಮಾಡಲಾಗುತ್ತಿದೆ. ನಿಧಾನವಾಗಿ ಆಕೆ ಹೆಜ್ಜೆ ಹಾಕುತ್ತಿದ್ದಾಳೆ. ಅಷ್ಟೇ ಅಲ್ಲದೇ ಮಗನ ಫುಟ್‌ಬಾಲ್‌ ಪಂದ್ಯವನ್ನೂ ವೀಕ್ಷಿಸುತ್ತಿದ್ದಾಳೆ. ಮಗನಿಗೂ ಇದರಿಂದ ಖುಷಿಯೋ ಖುಷಿ. ಅಮ್ಮ ಐದಾರು ವರ್ಷದಿಂದ ನನ್ನ ಪಂದ್ಯ ನೋಡದ, ಉತ್ತೇಜಿಸದ ಬೇಸರವೂ ಇತ್ತು. ಈಗ ಅಮ್ಮ ಬರುವುದರಿಂದ ಸಂತಸವಾಗುತ್ತಿದೆ ಎನ್ನುವುದು ಮಗ ಜುಲಿಯನ್‌ ನುಡಿ.

ಅಂದಹಾಗೆ 2022ರ ಆಗಸ್ಟ್‌ನಲ್ಲಿ ಜೆನ್ನಿಫರ್‌ ಅಮ್ಮನ ಹಾಸ್ಯಕ್ಕೆ ಎಚ್ಚರಗೊಂಡಿದ್ದರು. ಅಲ್ಲಿಂದ ಹಲವರ ನೆರವು. ಮನೆಯವರ ಆರೈಕೆಯಿಂದ ಈಗ ಚೇತರಿಸಿಕೊಂಡಿದ್ದಾರೆ ಎಂದು ತಾಯಿ ಹೇಳುವಾಗ ಕಣ್ಣಂಚಲ್ಲಿ ನೀರು ಇಳಿಯುತ್ತಿತ್ತು.

IPL_Entry_Point