ಕನ್ನಡ ಸುದ್ದಿ  /  Sports  /  Cricket News Bcci Announces Team India Squad For Wtc Final Vs Australia Rahane Return World Test Championship Jra

WTC final: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ತಂಡ ಪ್ರಕಟ; ರಹಾನೆ ಕಂಬ್ಯಾಕ್, ಕನ್ನಡಿಗನಿಗೆ ಸ್ಥಾನ

ಇಂಗ್ಲೆಂಡ್‌ ಪಿಚ್‌ಗಳಲ್ಲಿ ಚೆಂಡು ಸ್ವಿಂಗ್ ಆಗುವ ನಿರೀಕ್ಷೆಯಿದೆ. ಹೀಗಾಗಿ ಟೀಮ್ ಮ್ಯಾನೇಜ್‌ಮೆಂಟ್ ರಾಹುಲ್ ಮತ್ತು ರಹಾನೆ ಅನುಭವಕ್ಕೆ ಸಲಾಮ್‌ ಹೊಡೆದಿದೆ.

ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ
ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ

ಜೂನ್ 7ರಿಂದ ಇಂಗ್ಲೆಂಡ್‌ನ ಓವಲ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (World Test Championship) ಫೈನಲ್‌ ಪಂದ್ಯಕ್ಕೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಐಪಿಎಲ್‌ನ 2023ರ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಅಜಿಂಕ್ಯ ರಹಾನೆ 15 ಮಂದಿಯ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮತ್ತೊಂದೆಡೆ ಆಸ್ಟ್ರೇಲಿಯಾ ಸರಣಿಯ ಕೊನೆಯ ಎರಡು ಟೆಸ್ಟ್‌ಗಳಿಂದ ಕೈಬಿಡಲಾಗಿದ್ದ ಕನ್ನಡಿಗ ಕೆಎಲ್ ರಾಹುಲ್, ಟೆಸ್ಟ್‌ ತಂಡಕ್ಕೆ ಮರಳಿದ್ದಾರೆ.

ಬರೋಬ್ಬರಿ 15 ತಿಂಗಳ ನಂತರ ರಹಾನೆ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅವರು 2022ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಐಪಿಎಲ್‌ನ ಪ್ರಸಕ್ತ ಆವೃತ್ತಿಯಲ್ಲಿ ಸಿಎಸ್‌ಕೆ ಪರ ರಹಾನೆ ಅವರ ಫಾರ್ಮ್ ಈ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗಿದೆ. ಆಟದ ಸ್ವರೂಪ ಸಂಪೂರ್ಣ ವಿಭಿನ್ನವಾಗಿದ್ದರೂ, ಅವರ ಪುನರಾಗಮನದ ಹಿಂದಿನ ಬಲವಾದ ಕಾರಣ ಇದುವೇ ಎಂದು ನಂಬಲಾಗಿದೆ. ಮತ್ತೊಂದೆಡೆ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಮತ್ತು ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಅವರ ಅನುಪಸ್ಥಿತಿಯೂ ರಹಾನೆ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಅಯ್ಯರ್ ಇತ್ತೀಚೆಗಷ್ಟೇ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಮತ್ತೊಂದೆಡೆ, ಪಂತ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಕಾರು ಅಪಘಾತಕ್ಕೊಳಗಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ರಹಾನೆ ಅಮೋಘ ಫಾರ್ಮ್‌ನಲ್ಲಿದ್ದಾರೆ. ಅವರು ಸಿಎಸ್‌ಕೆ ಪರ ಆಡಿದ ಕೇವಲ ಐದು ಇನ್ನಿಂಗ್ಸ್‌ಗಳಲ್ಲಿ 199.05ರ ಸ್ಟ್ರೈಕ್ ರೇಟ್‌ನಲ್ಲಿ 209 ರನ್ ಗಳಿಸಿದ್ದಾರೆ. ಮತ್ತೊಂದೆಡೆ ಕಳೆದ ರಣಜಿ ಟ್ರೋಫಿಯಲ್ಲಿ ಆಡಿದ 7 ಪಂದ್ಯಗಳಲ್ಲಿ 57ರ ಸರಾಸರಿಯಲ್ಲಿ 634 ರನ್ ಗಳಿಸಿದ್ದಾರೆ.

ಮತ್ತೊಂದೆಡೆ, ಕನ್ನಡಿಗ ಕೆಎಲ್ ರಾಹುಲ್ ಕೂಡಾ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಎರಡು ಟೆಸ್ಟ್‌ಗಳಿಂದ ಅವರನ್ನು ಹೊರಗಿಡಲಾಗಿತ್ತು. ಅಲ್ಲದೆ ಉಪನಾಯಕನ ಸ್ಥಾನದಿಂದಲೂ ಕೆಳಗಿಳಿಸಲಾಗಿತ್ತು. ಟೆಸ್ಟ್‌ ಚಾಂಪಿಯನ್‌ಶಿಪಿಗೂ ಅವರನ್ನು ಆರಂಭಿಕರಾಗಿ ಪರಿಗಣಿಸುವ ಸಾಧ್ಯತೆ ಕಡಿಮೆ. ಬದಲಿಗೆ, ಅವರು ಮಧ್ಯಮ ಕ್ರಮಾಂಕದಲ್ಲಿ ವಿಕೆಟ್‌ ಕೀಪಿಂಗ್‌ ಹಾಗೂ ಬ್ಯಾಟಿಂಗ್ ಮಾಡಬಹುದು. ಮತ್ತೋರ್ವ ಕೀಪರ್ ಕೆಎಸ್ ಭರತ್ ಸ್ಥಾನ ಪಡೆದಿದ್ದರೂ, ಬ್ಯಾಟ್‌ನಲ್ಲಿ ಅವರ ದುರ್ಬಲ ಪ್ರದರ್ಶನದಿಂದಾಗಿ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ.

ಇಂಗ್ಲೆಂಡ್‌ ಪಿಚ್‌ಗಳಲ್ಲಿ ಚೆಂಡು ಸ್ವಿಂಗ್ ಆಗುವ ನಿರೀಕ್ಷೆಯಿದೆ. ಹೀಗಾಗಿ ಟೀಮ್ ಮ್ಯಾನೇಜ್‌ಮೆಂಟ್ ರಾಹುಲ್ ಮತ್ತು ರಹಾನೆ ಅನುಭವಕ್ಕೆ ಸಲಾಮ್‌ ಹೊಡೆದಿದೆ.

ಸ್ಪಿನ್ ಬೌಲಿಂಗ್ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆದರೆ, ಈ ಮೂವರು ಒಟ್ಟಿಗೆ ಆಡುವ ಸಾಧ್ಯತೆ ಕಡಿಮೆ. ವಾಸ್ತವವಾಗಿ, ಸೀಮರ್‌ಗಳಿಗೆ ಇಂಗ್ಲೆಂಡ್‌ ಪರಿಸ್ಥಿತಿಗಳು ಅನುಕೂಲಕರವಾಗಿದೆ. ಹೀಗಾಗಿ ಮ್ಯಾನೇಜ್‌ಮೆಂಟ್ ಶಾರ್ದೂಲ್ ಠಾಕೂರ್ ಅವರನ್ನು ನಾಲ್ಕನೇ ವೇಗಿಯಾಗಿ ಆರಿಸಿಕೊಳ್ಳಬಹುದು. ಅಂದರೆ ಅಶ್ವಿನ್, ಜಡೇಜಾ ಅಥವಾ ಅಕ್ಷರ್‌ ಈ ಮೂವರಲ್ಲಿ ಒಬ್ಬರು ಮಾತ್ರ ಸ್ಪಿನ್ನರ್ ಆಗಿ ಆಡುವ ಸಾಧ್ಯತೆ ಇದೆ.

ಬೆನ್ನುನೋವಿನಿಂದ ಹೊರಗುಳಿದಿರುವ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ, ವೇಗದ ದಾಳಿಯನ್ನು ಮುನ್ನಡೆಸುವ ಜವಾಬ್ದಾರಿ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಮೇಲೆ ಬೀಳಲಿದೆ. ಮೂರನೇ ಸೀಮರ್‌ಗಾಗಿ ಅನುಭವಿಗಳಾದ ಜಯದೇವ್ ಉನದ್ಕತ್ ಮತ್ತು ಉಮೇಶ್ ಯಾದವ್ ನಡುವೆ ಪೈಪೋಟಿ ನಡೆಯಲಿದೆ. ಇಬ್ಬರು ಕೂಡಾ ಸಮಾನ ಅರ್ಹತೆ ಪಡೆದಿರುವುದರಿಂದ ಯಾರಿಗೆ ಆಡುವ ಬಳಗದಲ್ಲಿ ಸ್ಥಾನ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರಿಗೆ ನಿರೀಕ್ಷಿತ ಸ್ಥಾನ ಸಿಕ್ಕಿಲ್ಲ. ರಣಜಿಯಲ್ಲಿ ಸರ್ಫರಾಜ್ ಖಾನ್ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಈ ಐಪಿಎಲ್‌ನಲ್ಲಿ ಮತ್ತೆ ವಿಫಲರಾಗಿರುವ ಕಾರಣ ಅವರು ಆಯ್ಕೆಯಾಗಿಲ್ಲ.

ಭಾರತದ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಲ್ ರಾಹುಲ್, ಕೆಎಸ್ ಭರತ್ (ವಿಕೆಟ್‌ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ , ಉಮೇಶ್ ಯಾದವ್, ಜಯದೇವ್ ಉನದ್ಕತ್.